ಅಬ್ಬಾ ಐದು ವರ್ಷದ ಹಾಸ್ಟೆಲ್ ಜೀವನ ಅನುಭವಿಸಿ ಎರಡು ವರ್ಷ ಪಿಯುಸಿ ಮನೆಯಿಂದ ಹೋಗಿ ವಾಪಸ್ಸು ಮೂರು ವರ್ಷಗಳ ಹಾಸ್ಟೆಲ್ ಜೀವನವನ್ನು ಅರಿಯುತ್ತಿದ್ದೇನೆ.
ಸಣ್ಣದಿಂದಲೇ ಒಂದರಿಂದ ಐದನೇ ತರಗತಿಯವರೆಗೆ ಮನೆ ಹತ್ತಿರದ ಶಾಲೆಯಲ್ಲಿ ಓದು ಮುಗಿಸಿ ನಂತರ ಆರನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದು ಮುಗಿಸಿದೆ. ಅಲ್ಲಿ ಐದು ವರ್ಷಗಳ ಕಾಲ ಹಾಸ್ಟೆಲ್ ಜೀವನ ಬಹಳ ಕಠೋರವಾಗಿತ್ತು. ಯಾವಾಗ ಈ ಬಂಧನದಿಂದ ಬಿಡುಗಡೆ ಎಂದು ಕಾಯುತ್ತ ಇದ್ದವಳು ಅಲ್ಲಿಯ ಪಯಣ ಹೇಗೋ ಮುಗಿಸಿದೆ. ಅಷ್ಟು ಕಠೋರವಾಗಿ ಅನಿಸಿದರು ಕೂಡ ಪಿಯುಸಿ ಹಾಸ್ಟೆಲ್ ಗೆ ಹೋಗುವ ಎಂದು ಅನಿಸಿತ್ತು. ಆದರೆ ಅಪ್ಪ ಅಮ್ಮ ಬೇಡ ಎರಡು ವರ್ಷ ಮನೆಯಿಂದ ಹೋಗಿ ಬಾ ಮನೆಯ ಕಷ್ಟ, ಲೋಕದ ಆಗುಹೋಗುಗಳು ನಿನಗೆ ಅರಿವಾಗಬೇಕೆಂದು ಹೇಳಿದರು. ಪ್ರಪಂಚದ ಜ್ಞಾನವಿಲ್ಲದ ನಾನು ಆ ಎರಡು ವರ್ಷಗಳಲ್ಲಿ ಸಾಕಷ್ಟು ಜೀವನದ ಪಾಠಗಳನ್ನು ಕಲಿತೆ.
ಅನಿವಾರ್ಯತೆಗೋ, ಕಷ್ಟಕ್ಕೋ, ಹಾಸ್ಟೆಲ್ ಲೈಫ್‌ನ ಫ್ರೀ ಬರ್ಡ್ ಅನ್ನೋ ಆಸೆಗೋ ವಾಪಸ್ಸು ಡಿಗ್ರಿ ಮುಗಿಸಲು ಬಿಸಿಎಂ ಹಾಸ್ಟೆಲ್ ಎಂಬ ಪ್ರಪಂಚಕ್ಕೆ ಕಾಲಿಟ್ಟೆ. ಆದ್ರೂ ಐದು ವರ್ಷ ಹಾಸ್ಟೆಲ್ ಜೀವನ ಅನುಭವವಿದ್ರೂ ಅಲ್ಲಿಗೆ ಬಂದ ಮೇಲೆನೆ ತಿಳಿಯಿತು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತ. ಬಿಡಿ ಆದ್ರೂ ಆವತ್ತಿಗಿಂತ ಇವಾಗ ಜ್ವಾಲಿ, ತಮಾಷೆ, ಖುಷಿ, ದುಃಖ ಎಲ್ಲವೂ ಅನುಭವಿಸುವ ತಾಣ ಹಾಸ್ಟೆಲ್ ಎಂದು ಹೇಳಬಹುದು.
ಯಾವುದೋ ಊರು, ಯಾವುದೋ ಭಾಷೆ, ಒಬ್ಬೊಬ್ಬರ ಒಂದೊಂದು ರೀತಿಯ ಜೀವನ ಶೈಲಿ, ಅವರ ನಡತೆಗಳು ಯಾವುದು ಮೊದಲು ತಿಳಿದಿರುವುದಿಲ್ಲ. ಎಲ್ಲೋ ಇದ್ದ ನಾವು ಒಂದೇ ರೂಂಮೇಟ್ಸ್, ಫ್ರೆಂಡ್ಸ್ ಆಗಿ ಬಿಡ್ತೀವಿ. ಒಬ್ಬೊಬ್ಬರ ಕಷ್ಟಕ್ಕೂ ಕೈ ಜೋಡಿಸಿ, ನೋವಲ್ಲೂ ಸಾಂತ್ವನ ನೀಡುವ ಅಮ್ಮನಾಗಿ, ಖುಷಿಯಲ್ಲಿಯೂ ಜೊತೆಯಾಗಿ, ಅತ್ತಾಗ ಕಣ್ಣೀರು ಒರೆಸುವ ಎರಡು ಕೈಗಳಾಗಿ, ಸೋತಾಗ ಸಮಾಧಾನಿಸಿ ಗೆದ್ದಾಗ ಶಹಬ್ಬಾಶ್ ಹೇಳಿ ಪ್ರೋತ್ಸಾಹ ನೀಡುವ ರುವಾರಿಗಳಾಗ್ತೀವಿ.
ಎಷ್ಟೇ ಮುನಿಸಿದ್ದರೂ ತಾಯಿ ಮಗುವಿನಂತ ಮನಸ್ಸಿದೆ ಅನ್ನೋದು ನಿಜ. ಜಗಳ, ರಾತ್ರಿಯ ಚಿಟ್ ಚಾಟ್ಗಳು, ಹನ್ನೆರಡು ಗಂಟೆಗೆ ಎದ್ದು ತಿಂಡಿಗೆ ಕಾದಾಟಗಳು ಇವೆಲ್ಲವೂ ನಮ್ಮ ಚೇಷ್ಟೆಗಳಾಗಿದ್ದವು. ಎಷ್ಟು ಕೋಪ ಇದ್ದರೂ ವಾಪಸ್ಸು ಒಂದೇ ಬಾಲ. ಯಾಕೆ ಗೊತ್ತಾ ನಾವೆಲ್ಲರೂ ಒಂದೆ ತಾಯಿಯ ಮಕ್ಕಳೆಂಬ ಭಾವನೆ ನಮ್ಮನ್ನು ಒಂದು ಮಾಡಿದೆ. ಬರ್ತ್ ಡೇ, ಫ್ರೆಂಡ್ಸ್ ಡೇ, ಹಾಸ್ಟೆಲ್ಡೇಗೆ ಕುಣಿದು ಕುಪ್ಪಳಿಸಿದ ದಿನಗಳನ್ನು ನೆನೆದರೆ ಕಾಲೇಜ್ ಫ್ರೆಂಡ್ಸ್‌ಗಿಂತ ಹಾಸ್ಟೆಲ್ ಫ್ರೆಂಡ್ಸ್ ಬೆಟರ್ ಅನಿಸುತ್ತೆ. ವಾರ್ಡನ್ ಜೊತೆ ಸುಳ್ಳು ಹೇಳಿ ಹೊರಗಡೆ ಸುತ್ತಾಡಲು ಹೋಗುವುದು ಇವೆಲ್ಲ ನಮ್ಮ ಜೀವನದಲ್ಲಿ ಖುಷಿಯ ಪಾತ್ರವಾಗಿತ್ತು.
ಹೀಗೆ ಹಾಸ್ಟೆಲ್ ಎನ್ನುವುದು ನಮ್ಮ ಜೀವನದ ಒಂದು ಭಾಗವಾಗಿತ್ತು. ಇಷ್ಟೆಲ್ಲ ಖುಷಿ ಪಟ್ಟ ನಾವು ಇನ್ನೂ ಒಂದೇ ವರುಷ ಎಂದಾಗ ಕಣ್ಣಲ್ಲಿ ನೀರು ಬರುತ್ತದೆ.ಮುಂದಿನ ಭವಿಷ್ಯದ ಕಡೆಗೆ ಹೆಜ್ಜೆ ಹಾಕಬೇಕಾದರೆ ಅಗಲುವುದು ಅನಿವಾರ್ಯ. ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇ ಬೇಕು.ಪ್ರತಿಯೊಂದು ನೋವು ನಲಿವಲ್ಲಿ ಮನೆಯವರಿಗಿಂತ ಹೆಚ್ಚಾಗಿ ಆಸರೆ ನೀಡಿದ, ಎಂದು ಮರೆಯಲಾಗದ ನಮ್ಮ ಸಂಬಂಧ ಪರಿಸರದಿಂದ ದೂರವಾದರೂ ಪರಿಚಯದಿಂದ ದೂರವಾಗದು ನಮ್ಮ ಈ ಅನುಬಂಧ...
-ನಿರೀಕ್ಷಾ.ಸಿ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ