ಹಲ್ಲು ನಮ್ಮ ದೇಹದ ಅವಿಭಾಜ್ಯ ಅಂಗ. ದೇಹದ ಅಂದಕ್ಕೆ ಮತ್ತು ಜೀರ್ಣ ಪ್ರಕ್ರಿಯೆಗೆ ಹಲ್ಲು ಅತೀ ಅನಿವಾರ್ಯವಾದ ಸಾಧನ. ಪ್ರತಿ ಹೆತ್ತವರಿಗೂ ತನ್ನ ಕರುಳಕುಡಿಯ ಹಲ್ಲುಗಳ ಬಗ್ಗೆ ಅತಿಯಾದ ವ್ಯಾಮೋಹ, ಪ್ರೀತಿ, ಕಾಳಜಿ ಮತ್ತು ಆತಂಕ ಇರುವುದು ಸಹಜವೇ. ಕೆಲವು ಮಕ್ಕಳಲ್ಲಿ ಹುಟ್ಟುವಾಗಲೇ ಬಾಯಲ್ಲಿ ಒಂದೆರಡು ಹಲ್ಲುಗಳು ಇರುತ್ತದೆ. ಮತ್ತೆ ಕೆಲವು ಮಕ್ಕಳಲ್ಲಿ ಹುಟ್ಟಿ ಹತ್ತು ತಿಂಗಳಾದರೂ ಹಲ್ಲು ಮೂಡದೇ ಇರುವುದು ಇವೆಲ್ಲವೂ ಸರ್ವೇ ಸಾಮಾನ್ಯ. ಆದರೆ ಹೆತ್ತವರಿಗೆ ಮಾತ್ರ, ಈ ಹಾಲು ಹಲ್ಲುಗಳ ಬಗ್ಗೆ ಅದೇಕೋ ಬಹಳವಾದ ವ್ಯಾಮೋಹ ಕಾಳಜಿ, ಕೌತುಕ ಮತ್ತು ಕುತೂಹಲ.
ಜನ್ಮಜಾತ ಹಲ್ಲುಗಳು:
ಮಕ್ಕಳಲ್ಲಿ ಹಲ್ಲುಗಳು ಪ್ರಾಯಕ್ಕೆ ಅನುಗುಣವಾಗಿ, ನಿಗದಿತ ಕ್ರಮದಂತೆ ಬಾಯಲ್ಲಿ ಮೂಡುತ್ತದೆ. ಮಗು ಜನಿಸಿ ಆರು ತಿಂಗಳಿಂದ ಒಂದು ವರ್ಷದ ಒಳಗೆ ಮೊದಲ ಹಾಲು ಹಲ್ಲು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಮಗು ಹುಟ್ಟುವಾಗಲೇ ಬಾಯಲ್ಲಿ ಒಂದೆರಡು ಹಲ್ಲುಗಳು ಇರುವುದು ಆಶ್ಚರ್ಯವೇನಲ್ಲ. ಈ ಹಲ್ಲುಗಳೇ ಜನ್ಮಜಾತ ಹಲ್ಲುಗಳು. “ನೇಟಲ್‍ಟೂತ್” “ಭ್ರೂಣದ ಹಲ್ಲುಗಳು” “ಹುಟ್ಟು ಹಲ್ಲುಗಳು” ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಮಗು ಜನಿಸಿದ ಒಂದು ತಿಂಗಳೊಳಗೆ ಬಾಯಲ್ಲಿ ಹಲ್ಲುಗಳು ಮೂಡುವ ಸಾಧ್ಯತೆ ಇರುತ್ತದೆ. ಈ ಹಲ್ಲುಗಳಿಗೆ “ನವಜಾತ ಶಿಶು ಹಲ್ಲುಗಳು” “ನಿಯೋನೇಟಲ್ ಹಲ್ಲು” ಎಂದು ಕರೆಯುತ್ತಾರೆ.
ಸಾಮಾನ್ಯವಾಗಿ ನವಜಾತ ಶಿಶು ಹಲ್ಲಿಗಿಂತಲೂ ಜನ್ಮಜಾತ ಹಲ್ಲುಗಳು ಕಾಣಿಸಿಕೊಳ್ಳುವ ಸಾಧ್ಯತೆ ಮೂರು ಪಟ್ಟು ಜಾಸ್ತಿ ಇರುತ್ತದೆ. ಈ ರೀತಿಯ ಜನ್ಮಜಾತ ಹಲ್ಲುಗಳು ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಮತ್ತು ಕೆಳದವಡೆಯ ಬಾಚಿ ಹಲ್ಲುಗಳ ಜಾಗದಲ್ಲಿ ಈ ಹಲ್ಲುಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ತಾಯಿಯ ಗರ್ಭದಲ್ಲಿರುವಾಗಲೇ ಅಂದರೆ ಸುಮಾರು 5 ರಿಂದ 6 ವಾರದ ಭ್ರೂಣವಾಗಿರುವಾಗಲೇ ಹಲ್ಲಿನ ರಚನೆಯ ಅಡಿಪಾಯದ ಪ್ರಕ್ರಿಯೆ ಆರಂಭವಾಗಿರುತ್ತದೆ. ಕ್ರಮೇಣ ಹಂತ ಹಂತವಾಗಿ ಈ ಹಲ್ಲಿನ ಬೆಳವಣಿಗೆಯ ಪ್ರಕ್ರಿಯೆ ಪೂರ್ಣವಾಗುತ್ತದೆ. ಹಾಲು ಹಲ್ಲುಗಳು ಮೊದಲ ಬಾರಿ ಮಗುವಿನ ಬಾಯಿಯಲ್ಲಿ ಮೂಡಲು ಆರಂಭವಾಗುವುದು 6ರಿಂದ 9 ತಿಂಗಳಲ್ಲಿ. ಸಾಮಾನ್ಯವಾಗಿ ನವಜಾತ ಶಿಶುವಿನ ಬಾಯಲ್ಲಿ ಯಾವುದೇ ಹಲ್ಲಿಲ್ಲದೇ ಬೊಚ್ಚಾಗಿರುತ್ತದೆ. ಹಲ್ಲಿಲ್ಲದಿದ್ದರೂ, ಬೊಚ್ಚು ಬಾಯಲ್ಲಿ ಮಗು ನಕ್ಕಾಗ ಅದರ ಸೌಂದರ್ಯವನ್ನು ಆಸ್ವಾದಿಸಲು ನೂರು ಕಣ್ಣುಗಳಿದ್ದರೂ ಸಾಲದು ಎಂಬುದು ಸತ್ಯವಾದ ಮಾತು.
ಈ ಜನ್ಮಜಾತ ಹಲ್ಲುಗಳು ದವಡೆಯ ಹಿಂಭಾಗದಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಶೇಕಡಾ 90ರಷ್ಟು ಸಂದರ್ಭಗಳಲ್ಲಿ ಈ ಜನ್ಮಜಾತ ಹಲ್ಲುಗಳು ಮುಂಬರುವ ಹಾಲು ಹಲ್ಲುಗಳೇ ಆಗಿರುತ್ತದೆ. ಉಳಿದ ಶೇಕಡಾ 10ರಷ್ಟು ಹೆಚ್ಚುವರಿ ಹಲ್ಲಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಲು ಹಲ್ಲುಗಳಿದ್ದರೂ ನೋಡಲು ಸಣ್ಣದಾಗಿ ಶಂಖಾಕೃತಿಯಲ್ಲಿ ಇದ್ದು ಹಳದಿ, ಕೆಂಪು ಬಣ್ಣದ್ದಾಗಿರುತ್ತದೆ. ಕೆಲವೊಮ್ಮೆ ಈ ಜನ್ಮಜಾತ ಹಲ್ಲುಗಳು ಬೇರೆ ಬೇರೆ ಗಾತ್ರದಲ್ಲಿ ಅಂದರೆ ಸಣ್ಣದಾಗಿ ಮೊನಚಾಗಿ ಸಹಜ ಹಲ್ಲಿನ ರೂಪದಲ್ಲಿ ಇರುವ ಸಾಧ್ಯತೆ ಇದೆ. ವಿಕಸನದ ಪ್ರಮಾಣವನ್ನು ಅನುಸರಿಸಿಕೊಂಡು ಹಲ್ಲುಗಳ ಆಕಾರ ವ್ಯತ್ಯಾಸಕ್ಕೊಳಗಾಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಹಲ್ಲುಗಳು ಸಡಿಲವಾಗಿರುತ್ತದೆ, ಸಣ್ಣದಾಗಿರುತ್ತದೆ ಮತ್ತು ದೋಷ ಪೂರಿತ ರಚನೆಯುಳ್ಳದಾಗಿರುತ್ತದೆ. ಈ ಹಲ್ಲುಗಳು ಪೂರ್ತಿ ಬೆಳವಣಿಗೆಯನ್ನು ಹೊಂದಿರದ ಸಣ್ಣ ಬೇರಿನಂತಹ ರಚನೆಯನ್ನು ಹೊಂದಿರುತ್ತದೆ. ಹಲ್ಲಿನ ಮೇಲ್ಪದರ ಎನಾಮಲ್ ಸಂಪೂರ್ಣವಾಗಿ ಬೆಳೆಯದ ಕಾರಣದಿಂದಾಗಿ, ಈ ಹಲ್ಲುಗಳು ಕೆಂಪು, ಹಳದಿ, ಬಿಳಿ ಮತ್ತು ಅಪಾರ ದರ್ಶಕ ಬಣ್ಣದಿಂದ ಕೂಡಿರುತ್ತದೆ, ಅನೇಕ ಸಂದರ್ಭಗಳಲ್ಲಿ ಈ ಹಲ್ಲುಗಳ ಬೇರಿನ ಬೆಳವಣಿಗೆ ಅಪೂರ್ಣವಾಗಿರುತ್ತದೆ. ಅಥವಾ ನ್ಯೂನತೆಯುಳ್ಳದಾಗಿದ್ದು, ಅವು ಬಾಯಿಯ ಶ್ಲೇಷ್ಮ ಪದರಕ್ಕೆ ಅಂಟಿಕೊಂಡಿರುತ್ತದೆ. ಹಾಗಾಗಿ ಸಡಿಲವಾಗಿ ಅಲುಗಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಜನ್ಮಜಾತ ಹಲ್ಲುಗಳಿಗೆ ಕಾರಣಗಳು:-
ಹುಟ್ಟು ಹಲ್ಲುಗಳಿಗೆ ಇಂಥದೇ ನಿರ್ದಿಷ್ಠ ಕಾರಣ ಏನು ಎಂದು ತಿಳಿದಿಲ್ಲ, ಆದರೆ ವಂಶವಾಹಿನಿ ಕಾರಣಗಳು, ಹಾರ್ಮೊನ್ ಏರುಪೇರು, ರಸದೂತಗಳ ಸಮಸ್ಯೆ, ಗರ್ಭಿಣಿಯಾಗಿದ್ದಾಗ ತಾಯಿಗೆ ಸೋಂಕು ಬಂದಲ್ಲಿ ಅಥವಾ ಅಪೌಷ್ಠಿಕತೆ ಉಂಟಾದ್ದಲ್ಲಿ ಜನ್ಮಜಾತ ಹಲ್ಲುಗಳಿಗೆ ಮತ್ತು ನವಜಾತ ಹಲ್ಲುಗಳಿಗೆ ಕಾರಣವಾಗುತ್ತದೆ. ಅದೇ ರೀತಿ ಸೀಳುತುಟಿ, ಸೀಳಂಗಳ, ಪಿಟ್ಯುಟರಿ ಮತ್ತು ಥೈರಾಯಿಡ್ ಗ್ರಂಥಿಗಳ ಅಡಚಣೆಯಿಂದಾಗಿಯೂ ಜನ್ಮಜಾತ ಹಲ್ಲುಗಳಿಗೆ ಕಾರಣವಾಗಬಹುದು.
ಜನ್ಮಜಾತ ಹಲ್ಲುಗಳಿಂದಾಗುವ ತೊಂದರೆಗಳು:-
1. ಹಲ್ಲುಗಳ ಬದಿಗಳ ಮೊನಚಾದ ತುದಿಗಳಿಂದಾಗಿ ತಾಯಿಗೆ ಎದೆಹಾಲು ಕುಡಿಸಲು ತೊಂದರೆಯಾಗಬಹುದು.
2. ಜನ್ಮಜಾತ ಹಲ್ಲುಗಳು ಸಡಿಲವಾಗಿರುದರಿಂದ ಹಾಲೂಡಿಸುವಾಗ ಮಗು ಅದನ್ನು ನುಂಗಿ ಉಸಿರು ಕಟ್ಟುವ ಸಾಧ್ಯತೆ ಇದೆ.
3. ಮಗುವಿಗೆ ಹಾಲು ಕುಡಿಯಲು ತೊಂದರೆಯಾಗಬಹುದು.
4. ನಾಲಿಗೆಯ ತುದಿಯ ಕೆಲಭಾಗಕ್ಕೆ ಹಲ್ಲಿನ ಚೂಪಾದ ಭಾಗದಿಂದ ಗಾಯಗಳಾಗಬಹುದು ಮತ್ತು ಹುಣ್ಣಾಗಬಹುದು.
5. ಹಲ್ಲಿನ ಎನಾಮಲ್ ಪದರ ಪೂರ್ತಿಯಾಗದ ಕಾರಣ ದಂತಕ್ಷಯಕ್ಕೆ ತುತ್ತಾಗಿ ಹಲ್ಲು ನೋವು ಬರುವ ಸಾಧ್ಯತೆಯೂ ಇದೆ.
ಚಿಕಿತ್ಸೆ ಹೇಗೆ?
ದಂತ ವೈದ್ಯರು ಜನ್ಮಜಾತ ಹಲ್ಲನ್ನು ಕೂಲಂಕುಷವಾಗಿ ಪರೀಕ್ಷೆ ಮಾಡಿ ಗರ್ಭಾವಸ್ಥೆಯ ವಿವರಗಳನ್ನು ಪಡೆದು, ಹಲ್ಲಿನ ಕ್ಷಕಿರಣವನ್ನು ತೆಗೆದು ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ. ಜನ್ಮಜಾತ ಹಲ್ಲುಗಳು ಹೆಚ್ಚುವರಿ ಹಲ್ಲಾಗಿದ್ದಲ್ಲಿ ಅತ್ಯಂತ ಸಡಿಲವಾಗಿದ್ದಲ್ಲಿ ತಾಯಿಗೆ ಮೊಲೆಯೂಣಿಸಲು ತೊಂದರೆಯಾಗುತ್ತಿದ್ದಲ್ಲಿ ಸಾಮಾನ್ಯವಾಗಿ ಜನ್ಮಜಾತ ಹಲ್ಲುಗಳನ್ನು ಕೀಳಲಾಗುತ್ತದೆ. ಹೆಚ್ಚಾಗಿ ಹುಟ್ಟಿದ ಹತ್ತು ದಿನಗಳ ಬಳಿಕ ಕೀಳಲಾಗುತ್ತದೆ. ದಂತ ವೈದ್ಯರು, ಮಕ್ಕಳ ತಜ್ಞರು ಮತ್ತು ಅರಿವಳಿಕೆ ತಜ್ಞರು ಸೂಕ್ತ ಸಮಾಲೋಚನೆ ನಡೆಸಿ ಮಿಟಮಿನ್ ಕೆ ಔಷಧಿ ನೀಡಿ ಹಲ್ಲನ್ನು ಕೀಳಿಸಲಾಗುತ್ತದೆ. ಇನ್ನು ಜನ್ಮಜಾತ ಹಲ್ಲುಗಳು ಹಾಲು ಹಲ್ಲಾಗಿದ್ದು ಗಟ್ಟಿಯಾಗಿದ್ದಲ್ಲಿ ಹಲ್ಲನ್ನು ಉಳಿಸಲು ಪ್ರಯತ್ನಿಸಲಾಗುತ್ತದೆ. ಯಾಕೆಂದರೆ ಮುಂದೆ ಬರುವ ಹಲ್ಲುಗಳಿಗೆ ಜಾಗವನ್ನು ಉಳಿಸಿಕೊಳ್ಳಲು ಇವು ಅತೀ ಅವಶ್ಯಕ. ಆದರೆ ತಾಯಿ ಮಗುವಿಗೆ ಆಗುವ ಅನಾನುಕೂಲ ತಪ್ಪಿಸಲು ಹಲ್ಲಿನ ಚೂಪಾದ ತುದಿಯನ್ನು ನಯಗೊಳಿಸಲಾಗುತ್ತದೆ. ಅದೇ ರೀತಿ ಎದೆ ಹಾಲು ನೀಡಲು ಬೇರೆ ವಿಧಾನವನ್ನು ಬಳಸುವಂತೆ ಸೂಚಿಸಲಾಗುತ್ತದೆ.
ಕೊನೆ ಮಾತು
ಜನ್ಮಜಾತ ಹಲ್ಲುಗಳಿಗೂ ಮಗುವಿನ ಪ್ರವತ್ತಿಗೂ ಯಾವುದೇ ಸಂಬಂಧವಿಲ್ಲ. ಜನ್ಮಜಾತ ಹಲ್ಲಿರುವ ಮಕ್ಕಳು ರಾಕ್ಷಸ ಪ್ರವತ್ತಿಯವರು ಎಂಬುದು ಖಂಡಿತವಾಗಿಯೂ ಮೂಢನಂಬಿಕೆ. ಅಂತಹ ಮಗುವಿನಿಂದ ತಂದೆ ತಾಯಂದಿರಿಗೆ ಅಶುಭ ಲಕ್ಷಣವಾಗುತ್ತದೆ ಎನ್ನುವುದು ಕೂಡ ಅಸತ್ಯವಾದ ಮಾತು. ಜನ್ಮಜಾತ ಹಲ್ಲಿಗೂ ಮಗುವಿನ ಭವಿಷ್ಯಕ್ಕೂ, ತಂದೆತಾಯಂದಿರ ಕಾಲ್ಗುಣಕ್ಕೂ ಯಾವುದೇ ಸಂಬಂಧವಿಲ್ಲ. ಹುಟ್ಟು ಹಲ್ಲುಗಳ ಬಗ್ಗೆ ಯಾವುದೇ ಭಯದ ಅಗತ್ಯವಿಲ್ಲ. ಮೂಢನಂಬಿಕೆಗಳನ್ನು ನಂಬದೇ, ತಾಯಿ ಮತ್ತು ಮಗುವಿನ ಆರೈಕೆಯನ್ನು ಚೆನ್ನಾಗಿ ಮಾಡಿದಲ್ಲಿ ಮಗುವಿನ ದೈಹಿಕ ಮಾನಸಿಕ ಮತ್ತು ಸರ್ವತೋಮುಖ ಬೆಳವಣಿಗೆ ಉಂಟಾಗಿ ಸುಂದರ ಆರೋಗ್ಯವಂಥ ಪ್ರಜೆಯಾಗಿ ಹೊರಹೊಮ್ಮಬಹುದು. ಅದರಲ್ಲಿಯೇ ಮಗುವಿನ ಮತ್ತು ಹೆತ್ತವರ ಭವಿಷ್ಯ ಮತ್ತು ಜಾಣತನ ಅಡಗಿದೆ.
-ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷ ದಂತ ಚಿಕಿತ್ಸಾಲಯ
ಹೊಸಂಗಡಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ