ನಮ್ಮ ದೇಶಕ್ಕೆ ಸ್ವಾತಂತ್ರ ಲಭಿಸಿ 75 ವರ್ಷಗಳೇ ಕಳೆದಿವೆ. ಆಜಾದೀ ಕಾ ಅಮೃತ ಮಹೋತ್ಸವದ ಅಮೃತ ಘಳಿಗೆಯ ಸಂದಿಕಾಲದಲ್ಲಿ ನಾವಿದ್ದೇವೆ. ಈ ಎಪ್ಪತೈದು ವರುಷಗಳಲ್ಲಿ ನಾವೇನು ಸಾಧಿಸಿದ್ದೇವೆ ಎಂದು ಸಿಂಹಾವಲೋಕನ ಮಾಡಿಕೊಂಡಲ್ಲಿ ಗಳಿಸಿದ್ದಕ್ಕಿಂತ ಕಳೆದು ಕೊಂಡದ್ದೆ ಜಾಸ್ತಿ ಇರಬಹುದೇನೋ. ಹಾಗೆಂದ ಮಾತ್ರಕ್ಕೆ ಏನೂ ಸಾಧಿಸಿಲ್ಲ ಎಂದಲ್ಲ. ಜಗತ್ತೇ ತಿರುಗಿನೋಡುವಂತಹಾ ಚಾರಿತ್ರಿಕ ಸಾಧನೆಗಳು ಕಂಡುಬಂದಿಲ್ಲವೆಂಬ ಕೊರಗು ನಮಗೆಲ್ಲ ಇದ್ದೇ ಇದೆ. ಇಚ್ಛಾ ಶಕ್ತಿ, ಧೀ ಶಕ್ತಿ ಮತ್ತು ನಮ್ಮಲ್ಲಿರುವ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಂಡಿದ್ದಲ್ಲಿ ಈಗಾಗಲೇ ಭಾರತ ವಿಶ್ವದ ಹಿರಿಯಣ್ಣನಾಗಬಹುದಿತ್ತು. ಆದರೆ ಕಾಲವಿನ್ನೂ ಮಿಂಚಿಲ್ಲ ಈಗಲಾದರೂ ನಾವು ಎಚ್ಚೆತ್ತುಕೊಂಡು, ಮೈ ಕೊಡವಿಕೊಂಡು ಎದ್ದು ನಿಲ್ಲುವ ಕಾಲ ಸನ್ನಿಹಿತವಾಗಿದೆ. ಕಳೆದ ದಿನಗಳ, ವಿಚಾರಗಳ ಬಗ್ಗೆ ಚಿಂತಿಸಿ ಸಮಯ ವ್ಯರ್ಥ ಮಾಡುವುದು ಸಹ್ಯವಲ್ಲ. ಇನ್ನಾದರೂ ದಿಟ್ಟತನದಿಂದ ನಿಧಾನವಾಗಿಯಾದರೂ ಮುನ್ನುಡಿ ಇಡಲೇ ಬೇಕು.
ಕಳೆದೈದು ವರುಷಗಳಿಂದ ಬೆಳೆಸಿದ ಧನಾತ್ಮಕ ಚಿಂತನೆ, ತೆಗೆದುಕೊಂಡ ದಿಟ್ಟತನದ ನಿರ್ಧಾರಗಳು ಮತ್ತು ಮಾಡಿದ ಕ್ರಾಂತಿಕಾರಿ ಪ್ರಯೋಗಗಳು ನಮ್ಮ ಭಾರತವನ್ನು ವಿಶ್ವದ ಭೂಪಟದಲ್ಲಿ ಧ್ರುವತಾರೆಯಂತೆ ಬೆಳಗುವಂತೆ ಮಾಡಿದೆ. ಭಾರತ ಈಗ ವಿಶ್ವದ ಹಿರಿಯಣ್ಣನಾಗುವತ್ತ ದಾಪುಗಾಲು ಹಾಕುತ್ತಲಿದೆ. ಇಡೀ ವಿಶ್ವವೇ ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಲಿದೆ ಮತ್ತು ಭಾರತ ತಳೆದ ದಿಟ್ಟ ಕ್ರಾಂತಿಕಾರಿ ರಾಜ ತಾಂತ್ರಿಕ ನಿರ್ಧಾರಗಳನ್ನು ಇಡೀ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಹೊತ್ತು ನಮ್ಮ ಭಾರತ ತೆಗೆದುಕೊಳ್ಳುವ ನಿರ್ಧಾರಗಳು, ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಮತ್ತು ಅದರ ಪರಿಣಾಮಗಳು ಜಾಗತಿಕವಾಗಿ ಎದ್ದು ಕಾಣುತ್ತಿರುವುದು ಬಹಳ ಆಶಾದಾಯಕ ವಿಚಾರ. ಜಾಗತಿಕವಾಗಿ ಯಾವುದೇ ಪ್ರಮುಖ ವಿದ್ಯಮಾನಗಳೇ ಇರಲಿ, ನಿರ್ಧಾರಗಳೇ ಇರಲಿ, ಅದರ ಆಯ್ಕೆಯಲ್ಲಿ ಭಾರತ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ 2015 ರವರೆಗೆ ಇತ್ತು. ಕ್ರಿಕೆಟಿನಲ್ಲಿ 12ನೆಯ ಆಟಗಾರನಂತೆ, ದಣಿದ ಆಟಗಾರನಿಗೆ ನೀರು ಕೊಡುವ ಕೆಲಸ ಈ ಹಿಂದೆ ಭಾರತ ನಿರಂತರವಾಗಿ ಮಾಡುತ್ತಿತ್ತು. ಆದರೆ ಈಗ ಬದಲಾದ ಜಾಗತಿಕ ರಾಜಕೀಯ ಮತ್ತು ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಭಾರತ ‘ಚಾಲಕನ’ ಜಾಗದಲ್ಲಿ ವಿರಾಜಮಾನವಾಗಿದೆ. ಭಾರತವನ್ನು ಹೊರಗಿಟ್ಟು ವಿಶ್ವದ ಯಾವುದೇ ದೇಶ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಎಲ್ಲದಕ್ಕೂ ಭಾರತ ಸಹಮತ ಬೇಕೆ ಬೇಕು ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ.
ಪ್ರತಿ ಪ್ರಜೆಯೂ ಸೈನಿಕನೇ
ಬದಲಾದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ದೇಶ ಈಗ ಬಹಳ ಸಂಧಿಕಾಲದಲ್ಲಿ ಇದೆ. ನಮ್ಮ ಸುತ್ತ ಮುತ್ತಲೂ ನಡೆಯುತ್ತಿರುವ ವಿದ್ಯಾಮಾನಗಳೇ ಇದಕ್ಕೆ ಸಾಕ್ಷಿ. ಹಾಡು ಹಗಲೇ ಧರ್ಮದ ಹೆಸರಲ್ಲಿ ಮನುಷ್ಯರನ್ನು ಕೊಚ್ಚಿ ಭರ್ಬರವಾಗಿ ಕೊಲೆ ಮಾಡುವ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿದೆ. ದೇಶದಲ್ಲಿ ಸಹಿಷ್ಣುಗಳು ಬಹುಸಂಖ್ಯಾತರಾಗಿದ್ದರೂ, ಅಲ್ಪಸಂಖ್ಯಾತ ಅಸಹಿಷ್ಣುಗಳ ದಾಂದಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಸೈನಿಕನಾಗಬೇಕಾದ ಅನಿವಾರ್ಯತೆ ಇದೆ. ನಮ್ಮ ಸುತ್ತಲೂ ನಡೆಯುವ ವಿದ್ಯಮಾನಗಳನ್ನು ಕಣ್ತೆರೆದು ನೋಡಬೇಕಾದ ಕಾಲ ಕೂಡಿಬಂದಿದೆ. ಕಣ್ಣಿದ್ದು ಕುರುಡಾಗಿ ಬದುಕುವ ಕಾಲ ಖಂಡಿತವಾಗಿಯೂ ಇದಲ್ಲ. ಬರೇ ದೇಶದ ಗಡಿಕಾಯುವವನು ಸೈನಿಕನಲ್ಲ, ಯೋಧನಲ್ಲ ಎಂಬುದನ್ನು ನಾವು ಅರಿತುಕೊಳ್ಳಲೇ ಬೇಕು. ನಮ್ಮೊಳಗಿನ ಸೈನಿಕ ಪ್ರಜೆಯನ್ನು ನಾವು ಬಡಿದೆಬ್ಬಿಸಬೇಕಾಗಿದೆ.
ನಮ್ಮ ದೇಶ ಪ್ರೇಮವನ್ನು ಎದೆ ಬಗೆದು ತೋರಿಸಬೇಕಾಗಿದೆ. ದೇಶದೊಳಗಿನ ಪ್ರತಿ ಪ್ರಜೆಯೂ ಸೈನಿಕನೇ ಎಂಬ ಮನಸ್ಥಿತಿಗೆ ನಾವು ಬದ್ಧರಾಗಿ, ದೇಶದೊಳಗೆ ದೇಶದ ಆಸ್ತಿ ಪಾಸ್ತಿ ಮತ್ತು ಜೀವ ಕಾಯುವ ಕಾಯಕ ಮಾಡಲೇ ಬೇಕಾಗಿದೆ. ದೇಶದ ಹೊರಗಿನ ವೈರಿಗಿಂತ ದೇಶದೊಳಗಿನ ಬೆನ್ನಿಗೆ ಇರಿಯುವ ವೈರಿಯೇ ಬಹಳ ಅಪಾಯಕಾರಿ. ಬಗಲಲ್ಲಿ ಬೆಂಕಿ ಇಟ್ಟುಕೊಂಡು ಬಾವಿ ತೋಡುವ ವಿಚಾರಕ್ಕೆ ಇತಿಶ್ರೀ ಹಾಡಲೇ ಬೇಕು. ಬೆಂಕಿ ನಂದಿಸಿ, ದ್ವೇಷದ ಜ್ವಾಲೆಯನ್ನು ಕಿಡಿಯಲ್ಲಿಯೇ ನಿವಾಳಿಸಿ ಹಾಕಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನಲೆಯಲ್ಲಿ ದೇಶದ ಆಸ್ತಿ ಪಾಸ್ತಿ ರಕ್ಷಣೆ, ದೇಶದ ಸಂಪನ್ಮೂಲಗಳ ರಕ್ಷಣೆ, ದೇಶದ ಸ್ವಾತಂತ್ರ್ಯದ ರಕ್ಷಣೆ, ದೇಶದ ಐಕ್ಯತೆ ಮತ್ತು ಏಕತೆಯ ರಕ್ಷಣೆಗಾಗಿ ನಾವೆಲ್ಲ ಕಟಿಬದ್ಧರಾಗಬೇಕು. ನಾವು ಬದಲಾಗಬೇಕು. ನಮ್ಮ ಪ್ರತಿ ಮನೆ ಮನೆಯಲ್ಲಿ ಒಬ್ಬ ಸೈನಿಕ ಹುಟ್ಟಬೇಕು. ಮನೆ ಮನೆಗಳಲ್ಲಿ ವೈದ್ಯ, ವಕೀಲ, ಇಂಜಿನಿಯರ್ ಹುಟ್ಟಿದ್ದ್ದು ಸಾಕು. ನಮಗೆ ಈಗ ಬೇಕಾಗಿರುವುದು ದೇಶ ರಕ್ಷಿಸುವ ಸೈನಿಕ. ಇದಕ್ಕೆಲ್ಲ ಸೂಕ್ತ ಉತ್ತರ ಸಿಗಬೇಕಿದ್ದರೆ ನಾವೆಲ್ಲ ‘ಅಗ್ನಿಪಥ’ ಯೋಜನೆಯನ್ನು ಬೆಂಬಲಿಸಲೇ ಬೇಕು.
ಏನಿದು ಅಗ್ನಿಪಥ?
ಪ್ರತಿಯೊಬ್ಬ ಪ್ರಜೆಗೂ ದೇಶದ ಬಗ್ಗೆ ಅಭಿಮಾನ, ಪ್ರೇಮ, ಪ್ರೀತಿ ಮತ್ತು ಹೆಮ್ಮೆ ಇದೆ. ಆದರೆ ಎಲ್ಲರಿಗೂ ಅದನ್ನು ತೋರ್ಪಡಿಸಲು ಸೂಕ್ತ ವೇದಿಕೆ ಈವರೆಗೆ ಇಲ್ಲವಾಗಿತ್ತು. ಇದಕ್ಕೆಲ್ಲಾ ಪರಿಹಾರ ಎಂಬಂತೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಇದೀಗ ಜುಲೈ 2022 ರಿಂದ ‘ಅಗ್ನಿಪಥ’ ಎಂಬ ಹೆಸರಿನಿಂದ ಜಾರಿಗೆ ಬರಲಿದೆ. ಇನ್ನು ಮುಂದೆ ಭೂ ಸೇನೆ, ನೌಕಾಸೇನೆ, ವಾಯು ಸೇನೆಗೆ ಸೇರುವ ಎಲ್ಲರೂ ಅಗ್ನಿವೀರರಾಗಿ ಸೇರಿ ನಂತರ ದೇಶದ ರಕ್ಷಣಾ ವ್ಯವಸ್ಥೆಗೆ ಸೇರಿಕೊಳ್ಳುತ್ತಾರೆ. 17.5 ವರ್ಷದಿಂದ 21 ವರ್ಷದೊಳಗಿನ (2022 ರಲ್ಲಿ 23 ರವರೆಗೆ ಅವಕಾಶವಿದೆ). ಕನಿಷ್ಟ ಎಸ್.ಎಸ್.ಎಲ್.ಸಿ ಕಲಿತ ಯುವಕರು ಈ ಯೋಜನೆಗೆ ಅರ್ಹರು (ಎಸ್.ಎಸ್.ಎಲ್.ಸಿ ಕಲಿತವರಿಗೆ ಸಾಮಾನ್ಯ ಸೈನಿಕ ಕರ್ತವ್ಯ ಹಾಗೂ 10+2 ಕಲಿತವರಿಗೆ ಟೆಕ್ನಿಕಲ್ ಅಸಿಸ್ಟೆಂಟ್ ಸೈನಿಕನಾಗಿ ಅಥವಾ ತಾಂತ್ರಿಕ ಸಹಾಯಕ ಸೈನಿಕ ಕರ್ತವ್ಯಕ್ಕೆ ನೇಮಕ ಮಾಡಲಾಗುತ್ತದೆ) 4 ವರ್ಷಗಳ ಮಿಲಿಟರಿ ಸೇವೆಯಲ್ಲಿ ಮೊದಲ 6 ತಿಂಗಳು ಕಠಿಣ ತರಬೇತಿ ಇರುತ್ತದೆ.
ನಾಲ್ಕು ವರುಷ ತರಬೇತಿ ಬಳಿಕ ನಿವೃತ್ತಿ ವೇತನ ಇಲ್ಲದೆ ಅವರು ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ಇದರಲ್ಲಿ 25 ಶೇಕಡಾ ಮಂದಿ ಮುಂದೆ ಸೇವೆಗೆ ಆಯ್ಕೆಯಾಗುತ್ತಾರೆ ಮತ್ತು ಪುನಃ 15 ವರ್ಷಗಳ ಸೇನೆಯ ಸೇವೆಗೆ ಸೇರಿಕೊಳ್ಳುತ್ತಾರೆ. ಅವರಿಗೆ ಮಾತ್ರ ಈ ಮೊದಲ ಸೇವೆಗೆ ಸಿಗುತ್ತಿದ್ದ ಎಲ್ಲಾ ನಿವೃತ್ತಿ ವೇತನ ಹಾಗೂ ಇನ್ನಿತರ ಸೌಲಭ್ಯ ದೊರಕುತ್ತದೆ. ಆದರೆ ಮೊದಲ 4 ವರ್ಷಗಳ ಸೇವೆ ಗಣನೆಗೆ ಬರುವುದಿಲ್ಲ. ಈ ಅಗ್ನಿವೀರರಾಗಿ ನೋಂದಾವಣೆಗೊಳ್ಳುವವರಿಗೆ ಮೊದಲ ವರ್ಷ ಒಟ್ಟು 30,000 ಸಂಬಳ, ನಾಲ್ಕನೇ ವರ್ಷ 40,000 ಸಂಬಳ ಸಿಗುತ್ತದೆ. ಇದರ ಜೊತೆಗೆ ಎಲ್ಲಾ ಸೈನಿಕರಿಗೆ ಸಿಗುವ ಸೌಲಭ್ಯಗಳು ಉಚಿತ ಆಹಾರ, ಉಚಿತ ವಸತಿ, ಉಚಿತ ವಿದ್ಯುತ್, ನೀರು, ಬಟ್ಟೆ ಭತ್ಯೆ, ಪ್ರಯಾಣ ಭತ್ಯೆ ಹೀಗೆ ಎಲ್ಲವೂ ಸಿಗುತ್ತದೆ. ವರ್ಷಕ್ಕೆ 30 ದಿನಗಳ ರಜೆಯೂ ಸಿಗುತ್ತದೆ. ಅತೀ ಅನಿವಾರ್ಯವಾದಲ್ಲಿ ಸಿಕ್ ಲೀವ್ (ರೋಗದ ರಜೆ) ಸಿಗುತ್ತದೆ. ಈಗ ಅಗ್ನಿವೀರರಾಗಿ ನೋಂದಾವಣೆಯಾಗುವಂತ ಆಫೀಸರ್ಸ್ ರ್ಯಾಂಕ್‍ಗಿಂತ ಕೆಳಗಿನ ಹುದ್ದೆಗೆ ಮಾತ್ರ ಅರ್ಹರಾಗಿರುತ್ತಾರೆ. ಈ ವರ್ಷ 46,000 ತೆಗೆದುಕೊಳ್ಳುವ ಯೋಜನೆ ಇದೆ. ಮುಂದೆ 1.2 ಲಕ್ಷಕ್ಕೆ ಏರಿಸುವ ಯೋಜನೆ ಇದೆ. ತರಬೇತಿ ಸಮಯದಲ್ಲಿ ಅಪಘಾತ ಅಥವಾ ಇನ್ನಾವುದೇ ಕಾರಣದಿಂದ ಮೃತವಾದಲ್ಲಿ ಕುಟುಂಬಕ್ಕೆ 44 ರಿಂದ 48 ಲಕ್ಷ ದೊರಕುತ್ತದೆ. ತರಬೇತಿ ಮುಗಿದು 4 ವರ್ಷದ ಬಳಿಕ ಸಮಾಜದ ಮುಖ್ಯ ವಾಹಿಸಿಗೆ ಬರುವಾಗ ಸುಮಾರು 12 ಲಕ್ಷ ಹಣ ನಗದು ರೂಪದಲ್ಲಿ ಸಿಗುತ್ತದೆ ಮತ್ತು 10+2 ಅರ್ಹತಾ ಸರ್ಟಿಫಿಕೇಟ್ ದೊರಕುತ್ತದೆ. ಆತ ಮುಂದೆ ಸ್ವಂತ ಉದ್ಯೋಗ ಮಾಡಬಹುದು ಅಥವಾ ವಿದ್ಯಾಭ್ಯಾಸ ಮುಂದುವರಿಸಲೂ ಬಹುದು.
ನೀವು ನಾಲ್ಕು ವರ್ಷ ಪಡೆದ ಸಂಬಳದ ಹಣ ಹತ್ತಿರ ಹತ್ತಿರ 13 ಲಕ್ಷ ಮತ್ತು ನಗದು ಸಿಗುವ 12 ಲಕ್ಷ ಸೇರಿ ಒಟ್ಟು 25 ಲಕ್ಷ ನೀವು ಸೇನೆಯಿಂದ 4 ವರ್ಷಗಳ ಬಳಿಕ ಹೊರಬರುವಾಗ ನಿಮಗೆ ಸಿಗುತ್ತದೆ. ನೀವು 18 ವರ್ಷದಲ್ಲಿ ಅಗ್ನಿವೀರರಾಗಿ ಸೇವೆಗೆ ಸೇರಿ 22ರ ವಯಸ್ಸಲ್ಲಿ ನೀವು ಹೊರ ಬಂದಲ್ಲಿ ನಿಮ್ಮ ಬಳಿ ಕನಿಷ್ಟ 25 ಲಕ್ಷ ಹಣ ಇರುತ್ತದೆ. ಇದರ ಜೊತೆಗೆ ಅಗ್ನಿವೀರರಾಗಿ ನೀವು ಸೇರಿ, ಸೇನೆಯಿಂದ ಕಲಿತ ಶಿಸ್ತು, ಸಂಯಮ, ತರಬೇತಿ, ವೃತ್ತಿಪರತೆ, ಆತ್ಮವಿಶ್ವಾಸ, ದೇಶಪ್ರೇಮ ಮತ್ತು ದೃಢ ಸಂಕಲ್ಪ ನಿಮಗೆ ಉಚಿತವಾಗಿ ಸಿಗುತ್ತದೆ. 25 ಶೇಕಡಾ ಮಂದಿ ಅಗ್ನಿವೀರರು ಮುಂದೆ 15 ವರ್ಷದ ಸೇನೆಯ ಸೇವೆಗೆ ಆಯ್ಕೆಯಾಗಿ ದೇಶದ ರಕ್ಷಣೆಗೆ ಟೊಂಕಕಟ್ಟಿದರೆ ಉಳಿದ 75 ಶೇಕಡಾ ಮಂದಿಗೆ ನೂರು ಕಡೆ ಉದ್ಯೋಗದ ಅವಕಾಶಗಳು ತೆರೆದಿರುತ್ತದೆ. ಜೊತೆಗೆ 25 ಲಕ್ಷ ಹಣ ಹಾಗೂ ಪಡೆದ ತರಬೇತಿ ಮತ್ತು ಆತ್ಮ ವಿಶ್ವಾಸ ನಿಮ್ಮ ಬೆನ್ನಿಗಿರುತ್ತದೆ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ. ಎರಡೂ ಕೈಗಳಿಂದ ಬಾಚಿ ತಬ್ಬಿಕೊಂಡು ಕಣ್ಣುಮುಚ್ಚಿ ಸ್ವೀಕರಿಸಬಹುದಾದ ಅಧ್ಬುತ ಯೋಜನೆ ಇದಾಗಿದ್ದು, ಯುವಕರು ಯಾವುದೇ ಚಿಂತೆ ಮಾಡದೇ, ಗೊಂದಲ ಇಲ್ಲದೆ ಸ್ವೀಕರಿಸಬಹುದಾಗಿದೆ. ಆದರೆ ನಡೆಯುತ್ತಿರುವ ವಿದ್ಯಮಾನಗಳು ಜನರನ್ನು ಹಾದಿ ತಪ್ಪಿಸುತ್ತಿರುವುದು ಬಹಳ ಬೇಸರದ ವಿಚಾರ.
ಅಗ್ನಿಪಥ್ ಯೋಜನೆಯಿಂದ ಆಗುವ ಲಾಭಗಳು:
1) ಸಧ್ಯ ಸೇನೆಯ ಸೈನಿಕರ ಸರಾಸರಿ ವಯಸ್ಸು 32 ಆಗಿದೆ. 42,000 ಯುವ ಅಗ್ನಿವೀರರು ಸೇರಿಕೊಂಡಲ್ಲಿ ಸೈನಿಕರ ಸರಾಸರಿ ವಯಸ್ಸು 26 ಕ್ಕೆ ಇಳಿಯುತ್ತದೆ. ಸೈನ್ಯಕ್ಕೆ ಯುವ ಶಕ್ತಿಯ ಚೈತನ್ಯ ಸಿಕ್ಕಿ, ಆನೆ ಬಲ ಬರುತ್ತದೆ. ಹಿರಿಯರ ಅನುಭವ ಮತ್ತು ಕಿರಿಯರ ಕೌಶಲ್ಯ ಒಟ್ಟು ಸೇರಿ ಸೈನ್ಯಕ್ಕೆ ಹೊಸ ಚೈತನ್ಯ ಸಿಗುತ್ತದೆ.
2) ಈಗಿರುವ ಕಾಲಘಟ್ಟದಲ್ಲಿ ಕೌಶಲ್ಯ ತರಬೇತಿ ಮತ್ತು ತಂತ್ರಜ್ಞಾನದ ಸೂಕ್ತ ಅಳವಡಿಕೆ ಸೇವೆಗೆ ಅತಿ ಅಗತ್ಯ. ದೈಹಿಕ ದೃಢತೆ ಮತ್ತು ಆರೋಗ್ಯದ ಜೊತೆಗೆ ಬದಲಾಗುತ್ತಿರುವ ತಂತ್ರಜ್ಞಾನದ ಹಿನ್ನಲೆಯಲ್ಲಿ, ಸೇನೆಗೆ ತಂತ್ರಜ್ಞಾನದ ಅರಿವು ಇರುವ ಅಧಿಕ ಕೌಶಲ್ಯ ಇರುವ ಬಿಸಿ ರಕ್ತದ ಯುವಕರ ಅಗತ್ಯ ಅತಿಯಾಗಿದೆ. ಈ ಹಿನ್ನಲೆಯಲ್ಲಿ ಅಗ್ನಿ ವೀರರು ಈ ಸನ್ನಿವೇಶವನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯವಾಗಬಹುದು.
3) ಈಗಾಗಲೇ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕರಿಗೆ ಈ ಅಗ್ನಿಪಥ್ ಯೋಜನೆ ಆಶಾದಾಯಕವಾಗಿದೆ. ನಾಲ್ಕು ವರ್ಷಗಳ ಕಾಲ ಪಡೆದ ಕೌಶಲ್ಯ, ತರಬೇತಿ ಮತ್ತು ಆತ್ಮ ವಿಶ್ವಾಸದಿಂದ ನೂರಾರು ಕಡೆ ಕೆಲಸ ಸಿಗುವ ಸಾಧ್ಯತೆ ಹೆಚ್ಚುತ್ತದೆ. ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲೂ ಬಹುದು.
4) ಅಗ್ನಿವೀರರಾಗಿ ಸೇವೆಗೆ ಸೇರಿ 4 ವರ್ಷದ ತರಬೇತಿ ಪಡೆದು ಅವರು ಪುನ: ಸಮಾಜದ ಮುಖ್ಯವಾಹಿನಿಗೆ ಬರುವಾಗ ಶಿಸ್ತಿನ ಸಿಪಾಯಿಯಾಗಿ ಸಮಾಜಕ್ಕೆ ಆಸ್ತಿಯಾಗುತ್ತಾರೆ. ಸಮಾಜ್ಕಕೆ ಹೊರೆಯಾಗುವ ಸಾಧ್ಯತೆ ಅತಿ ವಿರಳ. ದೈಹಿಕ ಹಾಗೂ ಮಾನಸಿಕ ಕ್ಷಮತೆ ಇರುವ ಶಿಸ್ತಿನ ಮತ್ತು ಕೌಶಲ್ಯ ಭರಿತ ಉತ್ತೇಜಿತ ಯುವಕರು ಇತರರಿಗೆ ಸ್ಪೂರ್ತಿಯಾಗಿ, ಮಾದರಿಯಾಗಿ ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾರೆ.
5) ದೇಶದ ಎಲ್ಲಾ ಭಾಗದ, ಧರ್ಮದ ಮತ್ತು ಜಾತಿಯ ಯುವಕರು ಸೈನ್ಯಕ್ಕೆ ಅಗ್ನಿ ವೀರರಾಗಿ ಸೇರಿಕೊಂಡು ದೇಶದ ಭಾವೈಕ್ಯತೆ ಮತ್ತಷ್ಟು ಬಲಿಷ್ಟವಾಗುತ್ತದೆ.
ಕೊನೆ ಮಾತು:
ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತವಾಗದೇ, ಎಲ್ಲರಿಗೂ ಸಮಾನ ಅವಕಾಶ ಅಗ್ನಿಪಥ ಯೋಜನೆ ಹೊಂದಿದೆ. ನಮ್ಮೊಳಗಿನ ಭಾರತೀಯತೆಯನ್ನು ಬಡಿದೆಬ್ಬಿಸುವ ಸುವರ್ಣಾವಕಾಶ ನಮ್ಮ ಮುಂದೆ ಇದೆ. ನಮ್ಮೊಳಗೆ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತಕ್ಕೆ ಶಾಶ್ವತ ಪರಿಹಾರ ಈ ಯೋಜನೆ ನೀಡಲಿದೆ. ನಾವು ನಮ್ಮ ಹೊಟ್ಟೆಯೊಳಗೆ ದೇಶ ಪ್ರೇಮದ ಬೆಂಕಿಯನ್ನು ಹೊಂದಿಲ್ಲವಾದರೆ ವೀರರಾಗಲು ಸಾಧ್ಯವೇ ಇಲ್ಲ. ಅಗ್ನಿ ಇಲ್ಲದೆ ನೀವು ಅಗ್ನಿವೀರರಾಗಲು ಸಾಧ್ಯವೇ ಇಲ್ಲ. ಮನೆಯಲ್ಲೇ ಕುಳಿತು ಅಪ್ಪ ಅಮ್ಮ ಕಷ್ಟಪಟ್ಟು ದುಡಿದ ಹಣದಿಂದ ಸಾಲ ಮಾಡಿ ತೆಗೆದ ಆಂಡ್ರಾಯ್ಡ್ ಫೋನ್‍ನಲ್ಲಿ ಉಚಿತವಾಗಿ ಸಿಗುವ ಡಾಟಾ ಪ್ಯಾಕ್ ಹಾಕಿಸಿಕೊಂಡು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ನೋಡುತ್ತಾ, ಕಾಲಹರಣ ಮಾಡಿ ಜೀವನ ವ್ಯರ್ಥ ಮಾಡುವ ಬದಲು ಅಗ್ನಿವೀರರಾಗಿ ಸೇವೆಗೆ ಸೇರಿ, ಶಿಸ್ತಿನ ಸಿಪಾಯಿಗಳಾಗುವ ಸದಾವಕಾಶ ಇದೀಗ ನಮ್ಮ ಯುವಕರ ಮುಂದೆ ಇದೆ. ನಮಗೆ ದೇವರು ನೀಡಿದ ಆಯಸ್ಸು ನೂರಾಗಿದ್ದಲ್ಲಿ (36500 ದಿನಗಳು) ಸರಾಸರಿ ಭಾರತೀಯರ ವಯಸ್ಸು 70 ಆಗಿದ್ದಲ್ಲಿ (25,550 ದಿನಗಳು) ಅದರಲ್ಲಿ ಕೇವಲ ನಾಲ್ಕು ವರ್ಷಗಳು ಅಂದರೆ ಸುಮಾರು 1,460 ದಿನಗಳನ್ನು ದೇಶಕ್ಕಾಗಿ ನೀಡಿದ್ದಲ್ಲಿ ಯಾರಿಗೂ ಏನೂ ನಷ್ಟವಾಗಲು ಸಾಧ್ಯವೇ ಇಲ್ಲ.
ಅಷ್ಟಕ್ಕೂ ಇದೇನು ನಿಮ್ಮ ಕೈಕಾಲು ಕಟ್ಟಿ ಹಾಕಿ ಸೇನೆಗೆ ಸೇರಿಸುತ್ತಿಲ್ಲ. ನಿಮಗೆ ಸೇರಲು ಮುಕ್ತ ಅವಕಾಶವಿದೆ (ಅರ್ಹತೆ ಇದ್ದಲ್ಲಿ ಮಾತ್ರ) ಆ ಮೂಲಕ ನಿಮಗೆ ದೇಶಕ್ಕಾಗಿ ಸೇವೆ ಸಲ್ಲಿಸುವ ಸುವರ್ಣ ಅವಕಾಶ ದೊರಕುತ್ತದೆ. ಇದಲ್ಲದೆ ನೀವು ಯೊಧರಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವಾಗ ನಿಮಗೆ ಬೇರೆಲ್ಲೂ ಸಿಗದ ಗೌರವ ಮತ್ತು ಆದರ ಸಿಗುತ್ತದೆ. ನಿಮ್ಮನ್ನು ಸಮಾಜ ಯೋಧರಂತೆ ನೋಡುತ್ತಾರೆ ಮತ್ತು ದೇವರಂತೆ ಪೂಜಿಸುತ್ತಾರೆ. ನಿಮ್ಮನ್ನೆಲ್ಲಾ ‘ರೋಲ್‍ಮಾಡಲ್’ ಆಗಿ ಸ್ವೀಕರಿಸುವಷ್ಟರ ಮಟ್ಟಿಗೆ ಸೈನಿಕರಂತೆ ಗೌರವ ಸಿಗುತ್ತದೆ. ಸಮಾಜದಲ್ಲಿ ಒಬ್ಬ ವೈದ್ಯನಿಗೆ, ವಿಜ್ಞಾನಿಗೆ ಅಥವಾ ಕ್ರಿಕೇಟ್ ಆಟಗಾರನಿಗೆ ಸಿಗುವ ಗೌರವದ ಎರಡು ಪಟ್ಟು ಗೌರವ ಅಗ್ನಿವೀರರಿಗೆ ಸಿಗುತ್ತದೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು. ನಾಲ್ಕು ವರ್ಷಗಳ ನಂತರ ಮುಂದೇನು ಎಂಬ ಚಿಂತೆ ಬಿಟ್ಟುಬಿಡಿ. ಅನಿಶ್ಚತೆಯ ಬಗ್ಗೆ ಯೋಚಿಸಬೇಡಿ. ನಮ್ಮ ಜೀವನವೇ ಅನಿಶ್ಚಕತೆಯ ಭಂಡಾರ ನಾಳೆಯನ್ನು ಇಂದೇ ನೋಡಿದವನು ಈವರೆಗೆ ಹುಟ್ಟಿಲ್ಲ. ಇವತ್ತು ನಿರುದ್ಯೋಗಿಗಳಾದ ವೈದ್ಯರು, ವಕೀಲರು ಹಾಗೂ ಇಂಜಿನೀಯರ್‍ಗಳು ನಮ್ಮ ಸಮಾಜದಲ್ಲಿ ಬೇಕಾದಷ್ಟು ಇದ್ದಾರೆ.
ಜೀವನದ ಭದ್ರತೆ ಮುಖ್ಯ ಹೌದು. ಹಾಗೆಂದ ಮಾತ್ರಕ್ಕೆ ಬರೀ ಭದ್ರತೆಯೇ ಜೀವನವಲ್ಲ. ಎಲ್ಲರಿಗೂ ಜೀವನ ಎನ್ನುವುದು ಕಬ್ಬಿಣದ ಕಡಲೆಯೇ. ಅದನ್ನು ನಾವು ಎದುರಿಸುವ ಮನೋಸ್ಥಿತಿ ಬದಲಿಸಬೇಕು. ನಾಲ್ಕು ವರ್ಷಗಳ ನಂತರ ಕೆಲಸ ಸಿಗದು, ನಿವೃತ್ತಿ ವೇತನ ಸಿಗದು ಎಂದು ಕುಂಟು ನೆಪ ಹೇಳಿ ನಿಮಗೆ ದೊರಕಿದ ಸುವರ್ಣಾವಕಾಶ ಕಳೆದುಕೊಳ್ಳಬೇಡಿ. ಧರ್ಮಕ್ಕೆ ಸಿಕ್ಕಿದ ಡಾಟಾ ಪ್ಯಾಕ್‍ನಲ್ಲಿ ಯಾರೋ ಬಾಲಿವುಡ್‍ನ ಹೀರೋಯಿನ್ ಮಾಲ್ಡೀವ್ಸ್‍ನ ಕಡಲ ತೀರದಲ್ಲಿ ಅರೆ ಬರೆ ಬಟ್ಟೆ ತೊಟ್ಟು ಕುಣಿಯುವುದನ್ನು ನೋಡುತ್ತಾ, ಸರಿಯಾಗಿ ಸಂಸ್ಕರಿಸದ ಆಟ(ಮೈದಾಹಿಟ್ಟು) ದಿಂದ ತಯಾರಿಸಿದ ಪಿಜ್ಜಾ ತಿಂದುಕೊಂಡು ಸಿಗರೇಟು ಸೇದುತ್ತಾ ಜೀವನ ವ್ಯರ್ಥ ಮಾಡಿ ಆರೋಗ್ಯ ಹಾಳು ಮಾಡುವ ಬದಲು ಅಗ್ನಿವೀರರಾಗಿ ಸೇನೆಗೆ ಸೇರಿ ಶಿಸ್ತು ಸಂಯಮ, ಸಮಯ ಪಾಲನೆ, ವೃತ್ತಿಪರತೆ ಮೈಗೂಡಿಸಿಕೊಳ್ಳೊಣ. ದೈಹಿಕ ಆರೋಗ್ಯವನ್ನು ಹೆಚ್ಚಿಸಿಕೊಂಡು ಮಾನಸಿಕ ದೃಢತೆ ಹಾಗೂ ಏಕಾಗ್ರತೆ ಪಡೆಯೋಣ.
ಅವಕಾಶ ಸಿಕ್ಕರೆ ದೇಶಕ್ಕಾಗಿ ಸೇವೆ ಸಲ್ಲಿಸುವ ಮಾನಸಿಕತೆಯನ್ನು ಬೆಳೆಸಿಕೊಳ್ಳೋಣ. ದೇಶಕ್ಕಾಗಿ ಒಂದೆರಡು ಹನಿ ಬೆವರು ಸುರಿಸುವ ಅವಕಾಶ ಸಿಕ್ಕಲ್ಲಿ ಎರಡು ಕೈಗಳಿಂದ ಬಾಚಿಕೊಳ್ಳೋಣ. ಅದರಿಂದ ಮುಂದೆ ದೇಶಕ್ಕಾಗಿ ನಾಲ್ಕು ಹನಿ ರಕ್ತ ಚಿಲ್ಲುವ ಅವಕಾಶ ಸಿಕ್ಕಲ್ಲಿ ಅದನ್ನೂ ಎದುರಿಸೋಣ. ನೂರು ವರ್ಷಗಳ ಕಾಲ ಸೋಮಾರಿಗಳಾಗಿ ಸತ್ತಂತೆ ಬದುಕುವ ಬದಲು, ದೇಶಕ್ಕಾಗಿ ತಮ್ಮ ಜೀವನದ ಒಂದಷ್ಟು ದಿನಗಳನ್ನು ತ್ಯಾಗ ಮಾಡೋಣ. ಅಗ್ನಿವೀರರಾಗಿ ನಮ್ಮೊಳಗಿನ ದೇಶಪ್ರೇಮದ ಕಿಚ್ಚನ್ನು ಕೆಚ್ಚದೆಯಿಂದ ಕಾಪಿಟ್ಟುಕೊಳ್ಳೋಣ. ಅಗತ್ಯವಿದ್ದಾಗಲೆಲ್ಲಾ ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಹಿಂಜರಿಯದಿರೋಣ. ಅದುವೇ ನಾವು ನಮ್ಮ ಭವ್ಯ ಭಾರತ ಮಾತೆಗೆ ನೀಡುವ ಬಹುಮೂಲ್ಯ ಕಾಣಿಕೆ ಎಂದರೂ ಅತಿಶಯೋಕ್ತಿಯಾಗದು.
-ಡಾ|| ಮುರಲೀ ಮೋಹನ್‍ಚೂಂತಾರು
BDS, MDS,DNB,MOSRCSEd(U.K), FPFA, M.B.A
ಮೊ: 9845135787
drmuraleechoontharu@gmail.com