ನೆನಪು: ಆಕೆ ಇರುತ್ತಿದ್ದರೆ...

Upayuktha
0

ಬೇಗ ಹೊರಡು ಅದೆಷ್ಟು ಹೊತ್ತಿಂದ ತಯಾರಿ ಮಾಡುತ್ತಿದ್ದಿ? ಇನ್ನೂ ಹೊರಟಾಗಿಲ್ಲವೇ... ಯಾವಾಗಲೂ ನಿನ್ನದು ಇದೇ ಸಮಸ್ಯೆ. ಸರಿಯಾದ ವೇಳೆಗೆ ಹೊರಡುವುದೆಂದರೆ ನಿನಗಾಗದ ವಿಷಯ... ಎಂಬಂಥ ನುಡಿಮುತ್ತುಗಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೇಳಿ ಬರವಂಥದ್ದು. ಸಾಧಾರಣವಾಗಿ ಮನೆಯೊಡತಿಯೊಡನೆ ನಾವೆಲ್ಲಿಗಾದರೂ ಹೋಗುವುದಾದರೆ ಕೊನೆಗಳಿಗೆಯಲ್ಲಿ ತಯಾರಾಗುವವಳೇ ಮನೆಯೊಡತಿ. ಯಜಮಾನ, ಮಕ್ಕಳು, ವೃದ್ಧರು ಯಾರೇ ಇರಲಿ ಸಮಯಕ್ಕೆ ಸರಿಯಾಗಿ ಹೊರಡುವುದಾದರೆ ಈಕೆಗೆ ಮಾತ್ರ ಯಾಕೆ ಆಗದು ಎನ್ನುವುದು ಇತರರ ಪ್ರಶ್ನೆ. ಅವರವರ ದೃಷ್ಟಿಯಲ್ಲಿ ಅದು ಸರಿಯೂ ಇರಬಹುದು. ಆದರೆ ಮನೆಯೊಡತಿಯ ದೃಷ್ಟಿಕೋನವೇ ಬೇರೆ ಇರುತ್ತದೆ. ಆಕೆಗೆ ಹೊರಟು ಹೋಗುವುದಕ್ಕಿಂತಲೂ ವಾಪಸು ಮನೆಗೆ ಬಂದ ಮೇಲಿನ ಜವಾಬ್ದಾರಿಯ ಅರಿವಿರುತ್ತದೆ.


ಮನೆಯ ಎಲ್ಲ ಕೆಲಸಗಳನ್ನು ನಿಭಾಯಿಸಿ ಹೊರಡುವುದೆಂದರೆ ಅದು ಸಣ್ಢ ವಿಷಯವಲ್ಲ. ಒಲೆಯನ್ನು ಆರಿಸಬೇಕು, ವಿದ್ಯುತ್ತಿನ ಮೈನ್ ಸ್ವಿಚ್ ಆಫ್ ಮಾಡಬೇಕು, ಬಾಗಿಲುಗಳ ಚಿಲಕಗಳನ್ನು ಹಾಕಿಕೊಳ್ಳಬೇಕು, ಪಂಪ್ - ಟಿ.ವಿ. ಮಳೆಗಾಲವಾದರೆ ಫ್ರಿಜ್ - ಇನ್ವರ್ಟರ್ ಇತ್ಯಾದಿ ಫ್ಲಗ್ ತಪ್ಪಿಸಬೇಕು, ದನ ನಾಯಿ ಬೆಕ್ಕುಗಳಿದ್ದರೆ ಅದಕ್ಕೆ ಆಹಾರದ ವ್ಯವಸ್ಥೆ ಮಾಡಬೇಕು ಮತ್ತು ಅದು ಹೊರಡುವ ಗಳಿಗೆಯಲ್ಲೇ ಮಾಡಬೇಕು. ಹೀಗೆ ಹತ್ತಾರು ವಿಷಯಗಳಲ್ಲಿ ಆಕೆಯದೇ ಪ್ರಧಾನ ಪಾತ್ರವಿರುವಾಗ ನಮ್ಮಂತೆ ಅಷ್ಟು ಬೇಗ ಹೊರಡಲಾದೀತೇ? ನನ್ನಾಕೆ ಯಾವಾಗಲೂ ಹೇಳುತ್ತಿದ್ದರು 'ನಿಮಗೇನು ಒಂದು ವೇಷ್ಟಿ ಒಂದು ಅಂಗಿ ಹಾಕಿದರೆ ಆಯಿತು. ಬಾಚಲು ಕೂದಲೂ ಇಲ್ಲ, ಚಪ್ಪಲಿ ಮೆಟ್ಟಿಕೊಂಡು ಹೊರಟರೆ ನಿಮ್ಮ ಕೆಲಸವಾಯಿತು' ಎಂದು. ಈಗ ಹೌದೆನಿಸುತ್ತದೆ. ಯಾವಾಗಲೂ ಅಷ್ಟೆ ವಸ್ತುವಾಗಲಿ ವ್ಯಕ್ತಿಯಾಗಲಿ ಅನುಪಸ್ಥಿತಿಯಲ್ಲಿ ಅದರ ಮಹತ್ವ ಗೊತ್ತಾಗುವಷ್ಟು ಉಪಸ್ಥಿತಿಯಲ್ಲಿ ಗೊತ್ತಾಗದಿರುವುದು ದುರ್ದೈವ.


ಒಂದು ಮನೆ ಚಂದವಾಗಿ, ವ್ಯವಸ್ಥಿತವಾಗಿ ಇರಬೇಕಾದರೆ ಗೃಹಿಣಿಯ ಕೊಡುಗೆ ನೂರಕ್ಕೆ ತೊಂಭತ್ತರಷ್ಟಿದೆ. ಉಳಿದ ಹತ್ತು ಇನ್ನಿತರರದ್ದು. ಎಲ್ಲರಂತೆ ನನಗೂ ಅನ್ನಿಸುತ್ತಿತ್ತು ಹೊರಗಿನ ವ್ಯವಹಾರಕ್ಕಿಂತ ಮನೆಯೊಳಗಿನ ವ್ಯವಹಾರ ಸುಲಭವೆಂದು. ಆದರೆ ನನಗೆ ಈಗ ಗೊತ್ತಾಗಿದೆ ಅಥವಾ ಗೊತ್ತಾಗತೊಡಗಿದೆ. ಮನೆಯ ಹೊರಗಿನಷ್ಟೇ ಮಹತ್ವ ಮನೆಯ ಒಳಗೂ ಇದೆ ಅಥವಾ ಒಂದಷ್ಟು ಜಾಸ್ತಿಯೇ ಎಂದು. ಅದಕ್ಕೆ ಹಲವು ಸಾಕ್ಷಿಗಳು ನನ್ನ ಕಣ್ಣ ಮುಂದಿವೆ. ಬೆಳಗ್ಗಿನ ಜಾವ ನಾವು ಏಳುವುದಕ್ಕೆ ಮುಂಚೆ ಒಂದರ್ಧ ಗಂಟೆಯ ಕೆಲಸಗಳನ್ನು ಆಕೆ ಮಾಡಿ ಆಗುತ್ತಿತ್ತು. ಮಾತ್ರವಲ್ಲ ಆ ಅರ್ಧ ಗಂಟೆಯೇ ಇಡೀ ದಿವಸಕ್ಕೆ ಉತ್ತೇಜನವೂ ನಿರ್ಣಾಯಕವೂ ಆಗುತ್ತಿತ್ತು. ಈಗ ಗೊತ್ತಾಗುತ್ತದೆ ಬೆಳಗ್ಗೆ ಹತ್ತು ನಿಮಿಷ ತಡವಾಗಿ ಎದ್ದರೂ ಸಮಯವನ್ನು ಹೊಂದಾಣಿಕೆ ಮಾಡಲು ಬಹಳ ತ್ರಾಸವಾಗುತ್ತದೆ ಎಂದು. ಅದೇ ವೇಳೆ ಆಕೆ ಮಾಡುತ್ತಿದ್ದ ಕೆಲಸಗಳನ್ನು ನಾವು ಮಾಡಿದರೂ ಅದರ ಕೊನೆ ಮುಟ್ಟಿಸುವಲ್ಲಿ ಸಫಲರಾಗುವುದಿಲ್ಲ.


ಉದಾಹರಣೆಗೆ ನಾವು ಟ್ಯಾಂಕಿಗೆ ನೀರು ತುಂಬಲು ಪಂಪ್ ಚಾಲು ಮಾಡಿದರೆ ಅದನ್ನು ಕ್ಲಪ್ತ ಸಮಯದಲ್ಲಿ ನಿಲ್ಲಿಸುವುದೇ ಇಲ್ಲ. ಎಷ್ಟೋ ಸಲ ಪಂಪ್ ಹೊತ್ತಿ ಹೋದರೂ ನಾವು ಪಾಠ ಕಲಿತಿಲ್ಲ. ಆಕೆಯಾದರೋ ಒಂದು ದಿನವೂ ಇದನ್ನು ಮರೆತದ್ದಿಲ್ಲ. ಪಂಪ್ ಸುಟ್ಟಿದ್ದೂ ಇಲ್ಲ. ಸ್ಟೌ ಮೇಲೆ ಇಟ್ಟಂಥ ವ್ಯಂಜನಗಳು ಪಾತ್ರೆಯನ್ನೇ ಬಿಸಾಡುವಷ್ಟು ಕರಚಿದರೂ ಕರಚಿದ ಪಾತ್ರೆಗಳು ಹೆಚ್ಚಾಗುತ್ತವೆಯೇ ಹೊರತು ನಾವು ಪಾಠ ಕಲಿತಿಲ್ಲ. ಆಕೆಯ ಕೈಯಲ್ಲಿ ಪಾತ್ರೆ ಕರಚಿದರೂ ಪಾತ್ರೆಯನ್ನೇ ತ್ಯಜಿಸುವ ಪ್ರಸಂಗ ಬಂದಿರಲಿಲ್ಲ. ಕಸವನ್ನು ಗುಡಿಸಿದರೂ ಸಂದಿ ಮೂಲೆಯ ಕಸವನ್ನು ಗಮನಿಸುವುದೇ ಇಲ್ಲ. ಇಲಿಯೋ ಹೆಗ್ಗಣವೋ ಸತ್ತಿದ್ದರೆ ಮೂಗಿನ ಆಜ್ಞೆ ಬಂದೊಡನೆಯೇ ಹುಡುಕಲು ಪ್ರಾರಂಭಿಸಿ ಒಂದರ್ಧ ಗಂಟೆಯಷ್ಟು ವ್ಯಯಿಸಿದಾಗಲೇ ಯಥಾಸ್ಥಿತಿಗೆ ಬರುವುದು. ತಂದು ಹಾಕಿದ ಸಾಮಾನುಗಳ ಬಗ್ಗೆ ಅದೇನು ಹೇಳಲಿ, ಉಪಯೋಗಕ್ಕಿಂತ ಬಿಸಾಡುವುದೇ ಹೆಚ್ಚು. ಯಾವ ಯಾವ ದಿನಸಿ ಎಷ್ಟೆಷ್ಟು ಇದೆ ಎಂದು ತಿಳಿದು ಬೇಕಾದದ್ದನ್ನು ಬೇಕಾದಷ್ಟೇ ತರಿಸುತ್ತಿದ್ದ ಕಾಲ ಆಕೆಯದ್ದಾಗಿದ್ದರೆ, ಬೇಕಾದದ್ದು ಯಾವುದು ಬೇಡವಾದದ್ದು ಯಾವುದು ಎಂಬ ಗೊಂದಲಕ್ಕೀಡಾಗಿ ಮನೆಯು ಗೋಡೌನಾದರೂ ವಿಶೇಷವಿಲ್ಲವೆಂದೆನಿಸುತ್ತದೆ.


ಇನ್ನು ಬಟ್ಟೆ ಬರೆ ವಿಚಾರದಲ್ಲೂ ಬಹಳಷ್ಟಿದೆ. ನಾವು ಹಾಕುವ ಹಳತು ಹೊಸತು ಬಟ್ಟೆಯ ವಿಂಗಡಣೆಯಿಂದ ತೊಡಗಿ ಹೊಸ ಬಟ್ಟೆ ಖರೀದಿವರೆಗೂ ಮಾತ್ರವಲ್ಲ ನಮಗೆ ಯಾವುದು ಒಪ್ಪುತ್ತದೆ ಯಾವುದು ಒಪ್ಪದು ಎಂಬ ನಿರ್ಣಯದವರೆಗೂ ಆಕೆಯ ಹಸ್ತಕ್ಷೇಪವಿದ್ದಾಗ ಮಾತ್ರ ಮಾಡಿದ ವ್ಯವಹಾರಕ್ಕೆ ಪೂರ್ಣ ವಿರಾಮ. ಹಾಗಾದರೆ ಎಲ್ಲವೂ ಇನ್ನೊಬ್ಬರ ಮೇಲೆ ಅವಲಂಬಿತವಾದರೆ ಇದೇ ಗತಿ ಎನಿಸಬಹುದಲ್ಲವೇ? ಖಂಡಿತ ಹೌದು. ಆದರೆ ಇದು ಅವಲಂಬನೆ ಎಂದು ಅಂದು ಗೊತ್ತಾಗಲೇ ಇಲ್ಲ. ಆಗ ಅದೇ ಸಹಜವಾಗಿತ್ತು.


ಇರಲಿ... ನಾವಿಕನಿಲ್ಲದ ನೌಕೆ, ಹಾಯಿ ಇಲ್ಲದ ದೋಣಿ ಗುರಿ ಮುಟ್ಟಲುಂಟೇ? ಮುಟ್ಟಿದ್ದೇ ಗುರಿ ಎಂದೆನಿಸದೆ? ಖಂಡಿತ ಸಂಸಾರ ನೌಕೆಗೆ ಗುರಿ ತೋರಿಸುವವಳೂ, ಗುರಿ ನಿರ್ಮಿಸುವವಳೂ, ಗುರುವಾಗಿಯೂ ಮಾರ್ಪಡುವವಳು ಗೃಹಿಣಿಯೇ. ಪೃಥ್ವಿಯ ಗುರುತ್ವಾಕರ್ಷಣೆ ಅದೆಲ್ಲವನ್ನೂ  ಸೆಳೆದುಕೊಂಡು ಕಶ್ಮಲಗಳೆಲ್ಲವನ್ನೂ ಕಳೆದು ಶುದ್ಧ ನೀರನ್ನು ಮಾತ್ರ ಮೇಲೇರುವಂತೆ ಮಾಡುವುದೋ ಅದೇರೀತಿ ಗೃಹಿಣಿ ಎಂಬ ಮಾಯೆಯ ಗುರುತ್ವಾಕರ್ಷಣೆಗೆ ಒಳಗಾಗಿ ಯಾರು ಸಂಸಾರವೆಂಬ ಸಾಗರದಲ್ಲಿ ಮುಳುಗಿ ಎಲ್ಲ ಕರ್ಮಫಲಗಳನ್ನು ಸಾಗರದಲ್ಲೇ ಬಿಡಬಲ್ಲನೋ ಆತನನ್ನು ಮೇಲೇರುವಂತೆ ಮಾಡುತ್ತಾಳೆ, ಜತೆಗೆ ತಾನೂ ಉದ್ಧಾರವಾಗುತ್ತಾಳೆ. ಅವಳೇ ಗೃಹಿಣಿ.  


ಮನೆಯೊಡತಿ ಎಂದರೆ ಯಜಮಾನನಿಗೆ ಹೆಂಡತಿ, ಮಕ್ಕಳಿಗೆ ತಾಯಿ, ಅತ್ತೆ ಮಾವನಿಗೆ ಸೊಸೆ, ಕೆಲಸದವರಿಗೆ ಅಮ್ಮ, ಸಣ್ಣವರಿಗೆ ಅಕ್ಕ, ದೊಡ್ಡವರಿಗೆ ಹೆಸರು ಹೇಳುವಷ್ಟು ಸಲುಗೆ, ನೆರೆಕರೆಯವರಿಗೆ ಗೃಹಿಣಿ ಇದೆಲ್ಲ ಪಾತ್ರಗಳನ್ನು ಆಕೆ ನಿರ್ವಹಿಸಲೇ ಬೇಕು. ಎಲ್ಲರ ಎಲ್ಲ ರೀತಿಯ ವ್ಯವಹಾರಕ್ಕೂ ಆಕೆಯ ಸಾಂಗತ್ಯ ಬೇಕು. ಆಕೆಯಿಲ್ಲದ ಒಂದು ಸಂಸಾರವು ಅಪೂರ್ಣವೇ  ಆಗಿರುವುದು. ಅದೇರೀತಿ ಒಂದು ಸಂಸಾರವೆಂದಾಗ ಸುಖ ಕಷ್ಟಗಳು ಬಂದೇ ಬರುತ್ತವೆ. ಇತರರಿಗೆ ಬಂದ ಕಷ್ಟಗಳು ತನಗೇ ಬಂದಿದೆ ಎಂದರಿತು ಅವರೊಂದಿಗೆ ಗೃಹಿಣಿಯಾದವಳು ಸ್ಪಂದಿಸುವಂತೆ ಆಕೆ ಕಷ್ಟಕ್ಕೊಳಗಾದರೆ ಇತರ ಸದಸ್ಯರು ಸ್ಪಂದಿಸುವುದು ವಿರಳ. ಒಂದು ವೇಳೆ ಗೃಹಿಣಿಯೊಬ್ಬಳು ಸಂಸಾರಕ್ಕೆ ದುರ್ಲಭವಾದರೆ ಆ ಸಂಸಾರ ಅಧೋಗತಿಗೆ ಹೋಗುವುದರಲ್ಲಿ ಸಂಶಯವೇ ಇಲ್ಲ. ಅಂದರೆ ಆಕೆಗೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಯಾರೇ ಆಗಲಿ ಗೃಹಿಣಿ ಎಂಬ ಹುದ್ದೆಯಲ್ಲಿರುವವಳನ್ನು ದೇವರಂತೇ ನೋಡಬೇಕು ಮತ್ತು ಆಕೆಯನ್ನು ಸದಾ ಪ್ರಸನ್ನಳಾಗಿರುವಂತೆ ವರ್ತಿಸುತ್ತಿರಬೇಕು. ಯಾರು ಯಾರನ್ನು ಬೇಕಾದರೂ ಉಪೇಕ್ಷಿಸಬಹುದು. ಆದರೆ ಗೃಹಿಣಿ ಎಂಬಲ್ಲಿಗೆ ಬಂದರೆ ಅದು ಉಪೇಕ್ಷಿಸುವ ಹುದ್ದೆಯೇ ಅಲ್ಲ ಎಂಬ ಸತ್ಯದರಿವಾದರೆ ಆ ಸಂಸಾರ ಸುಖ ಸಂಸಾರವಾಗುವುದರಲ್ಲಿ ಸಂಶಯವಿಲ್ಲ. 


ಹೆಣ್ಣು ಎಂದರೆ ಮಾಯೆ ಎನ್ನುವವರೂ ಇದ್ದಾರೆ. ಇರಬಹುದು. ಆದರೆ ಗೃಹಿಣಿ ಎಂಬ ಮಾಯೆ ನಮ್ಮನ್ನು ಸಾಧನೆಯ ಉತ್ತುಂಗಕ್ಕೆ ಕರೆದೊಯ್ಯುತ್ತದೆ. ಅದು ಲೌಕಿಕ ವ್ಯವಹಾರ ಇರಬಹುದು ಅಲೌಕಿಕವೂ ಇರಬಹುದು. ಗೃಹಿಣಿ ಎನ್ನುವವಳು ಎರಡು ಕಡೆಯಲ್ಲೂ ನಿರ್ಣಾಯಕಳೇ ಆಗಿರುತ್ತಾಳೆ. ಅದಕ್ಕೇ ಅಲ್ಲವೆ ಜ್ಞಾನಿಗಳು ಹೇಳಿದ್ದು... ಯತ್ರ ನಾರ್ಯಸ್ತು ಪೂಜ್ಯಂತೇ.... ಎಂದು. ನಿಜವಾಗಿಯೂ ಇದು ನಿತ್ಯ ಸತ್ಯವೇ ಹೊರತು ಮೂಢನಂಬಿಕೆಯಲ್ಲ. 

ಏನಂತೀರಿ..?

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top