ಡಾ. ಪೆರ್ಲ ಅವರಿಗೆ ಕೊ. ಅ. ಉಡುಪ ಪ್ರಶಸ್ತಿ ಘೋಷಣೆ

Upayuktha
0

ಕಿನ್ನಿಗೋಳಿ: ಯುಗಪುರುಷ ಪತ್ರಿಕೆಯ ಸಂಸ್ಥಾಪಕ ಕೊಡತ್ತೂರು ಅನಂತಪದ್ಮನಾಭ ಉಡುಪರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಕೊ. ಅ. ಉಡುಪ ಪ್ರಶಸ್ತಿಗೆ ಈ ಬಾರಿ ಕವಿ ಸಾಹಿತಿ ಚಿಂತಕ ಡಾ. ವಸಂತಕುಮಾರ ಪೆರ್ಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಪ್ರಕಾಶಕ- ಸಂಪಾದಕ ಕೆ. ಭುವನಾಭಿರಾಮ ಉಡುಪ ತಿಳಿಸಿದ್ದಾರೆ.


ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಫಲಕ, ಪ್ರಶಸ್ತಿಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಇದೇ ತಿಂಗಳ 24 ರಂದು ಕಿನ್ನಿಗೋಳಿಯಲ್ಲಿ ಜರಗಲಿರುವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಉಡುಪರು ತಿಳಿಸಿದರು.


ಪ್ರತಿಭಾವಂತ ಕವಿಯಾಗಿ, ಸಾಹಿತಿಯಾಗಿ ಚಿಂತಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಡಾ. ವಸಂತಕುಮಾರ ಪೆರ್ಲ ಅವರು ಸಾಹಿತ್ಯದ ಜೊತೆಗೆ ಪತ್ರಿಕೆ, ರೇಡಿಯೋ, ಟಿ.ವಿ. ಮುಂತಾದ ಸಮೂಹ ಮಾಧ್ಯಮಗಳಲ್ಲಿ ಹಾಗೂ ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲೂ ಪರಿಣಿತರು. ಒಳ್ಳೆಯ ವಾಗ್ಮಿ ಮತ್ತು ವಿದ್ವಾಂಸರೆಂದು ಗುರುತಿಸಲ್ಪಟ್ಟವರು. ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುತ್ತಿರುವ ಡಾ. ಪೆರ್ಲರ ಕವನಗಳು ಮಲಯಾಳಂ, ತಮಿಳು, ತೆಲುಗು, ಹಿಂದಿ, ಪಂಜಾಬಿ, ನೇಪಾಲಿ ಹಾಗೂ ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ.


ಮೈಸೂರು ವಿ. ವಿ. ಯಿಂದ ಕನ್ನಡ ಎಂ. ಎ. ಪದವಿ ಪಡೆದ ಬಳಿಕ ’ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಜಾನಪದ ಒಳನೋಟಗಳು’ ಎಂಬ ವಿಷಯದ ಬಗ್ಗೆ ಪ್ರೌಢ ಪ್ರಬಂಧ ರಚಿಸಿ ಮೈಸೂರು ವಿ.ವಿ.ಯಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಸುಮಾರು ಮೂವತ್ತು ವರ್ಷಗಳ ಕಾಲ ಮಂಗಳೂರು ಸಹಿತ ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ನಿರ್ದೇಶಕರಾಗಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. 


ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ವ್ಯಕ್ತಿಚಿತ್ರ, ಚಾರಣ, ಅಂಕಣಸಾಹಿತ್ಯ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಸುಮಾರು ಐವತ್ತರಷ್ಟು ಮೌಲಿಕ ಕೃತಿರಚನೆ ಮಾಡಿದ್ದಾರೆ. ಮಾತಿನಾಚೆಯ ಮೌನ, ಹುತ್ತದೊಳಗಿನ ಹಾವು, ಕೋಟಿಲಿಂಗ, ರಂಗಸ್ಥಳ, ಒಡ್ಡೋಲಗ ಮೊದಲಾದವು ಅವರ ಪ್ರಸಿದ್ಧ ಕವನ ಸಂಕಲನಗಳು. ಅಭ್ಯಾಸ, ಕಾಡಾನೆಗಳ ದವಡೆಯಲ್ಲಿ, ವರ್ತಮಾನ, ಏರುತ್ತೇರುತ್ತ ಶಿಖರ ಮೊದಲಾದವು ಅವರ ಪ್ರಸಿದ್ಧ ಗದ್ಯಕೃತಿಗಳು.    


ರಾಷ್ಟ್ರಾದ್ಯಂತ ಹಲವು ಸಭೆ ಸಮಾರಂಭಗಳಲ್ಲಿ ಮತ್ತು ಕಮ್ಮಟಗಳಲ್ಲಿ ಕನ್ನಡ ಹಾಗೂ ತುಳು ಭಾಷೆಯನ್ನು ಪ್ರತಿನಿಧಿಸಿದ್ದಾರೆ. ಹತ್ತಾರು ಪ್ರಶಸ್ತಿ ಬಹುಮಾನಗಳನ್ನು ಪಡೆದುಕೊಂಡಿರುವ ಅವರು ಸರಕಾರದ ಹಲವು ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. 


ಎಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಮಂದಿ ಬರಹಗಾರರನ್ನು ಗುರುತಿಸಿ, ಬೆನ್ನು ತಟ್ಟಿ ಬೆಳೆಸಿ ಪ್ರೋತ್ಸಾಹಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top