ಪುಸ್ತಕ ಪರಿಚಯ: ತುಳು ಸಾಂಸ್ಕೃತಿಕ ಕೋಶ – ಗಾಂಪನ ಪುರಾಣ

Upayuktha
0

ತುಳು ಬರವಣಿಗೆಯ ಲೋಕಕ್ಕೆ ಒಂದು ಅಪೂರ್ವವಾದ ಕೃತಿ ಗಾಂಪನ ಪುರಾಣ. ಏಕೆಂದರೆ, ಇದು ಕವಿತೆಯ ಪ್ರಕಾರವಲ್ಲ, ಸಣ್ಣಕತೆ ಅಥವಾ ಕಾದಂಬರಿಯಲ್ಲ. ನಾಟಕ ಪ್ರಕಾರದಂತಹ ಲಕ್ಷಣಗಳಿದ್ದರೂ ನಾಟಕವೇ ಅಲ್ಲ. ಇದು ಮಾತುಕತೆಯ ಬಗೆಯದು. ಇದರಲ್ಲಿ ಕತೆಯೂ ಇದೆ, ಪದ್ಯವೂ ಇದೆ, ನಾಟಕದ ಸಂಭಾಷಣೆಯೂ ಇದೆ. ಅಂದರೆ, ಒಂದರ್ಥದಲ್ಲಿ ಎಲ್ಲವನ್ನು, ಎಲ್ಲಾ ಪ್ರಕಾರಗಳನ್ನೂ ಒಳಗೊಂಡಂತಂಹ ನೈಪುಣ್ಯತೆಯುಳ್ಳ ಒಂದು ಹೊಚ್ಚ ಹೊಸ ಬಗೆಯ ಪ್ರಕಾರ. ಈ ಕೃತಿಯ ಮೂಲಕ ತುಳು ಸಾಹಿತ್ಯ ಲೋಕಕ್ಕೆ ಒಂದು ಹೊಸ ಸಾಹಿತ್ಯ ಪ್ರಕಾರ ಒದಗಿದೆ, ಎಂದು ಹೇಳಿದರೆ, ಖಂಡಿತ ಅತಿಶಯೋಕ್ತಿ ಆಗದು. ಹಾಗಾಗಿಯೇ ಗಾಂಪನ ಪುರಾಣ ಒಂದು ಅಪೂರ್ವ ಕೃತಿ. ಮಾತ್ರವಲ್ಲದೆ, ಇವತ್ತಿನ ಕಾಲಕ್ಕೆ ಪ್ರಸ್ತುತವೆನಿಸುವ ಕೃತಿಯೂ ಹೌದು. ಯಾಕೆಂದರೆ, ಈ ಕೃತಿಯ ಒಡಲು, ಪಟ್ಟಾಂಗದ ಕಟ್ಟೆ, ಅಂದರೆ ಮಾತಿನ ಮಂಟಪ. ಮಾತುಕತೆಯೇ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ, ಎಲೆಕ್ಟ್ರಾನಿಕ್ ಗೆಜೆಟ್ಸ್‍ಗಳಲ್ಲೇ ದಿನ-ಮಾನ-ಕ್ಷಣಗಳನ್ನು ಕಳೆಯುತ್ತಿರುವ ಯುವ ಪೀಳಿಗೆಯೆದುರು, ಒಂದು ಕಾಲದ ಸಾಂಸ್ಕೃತಿಕ ಬದುಕಿನ ಸಂಭ್ರಮಗಳನ್ನು ವಿವರಿಸುವ, ಚರ್ಚಿಸುವ, ಮೂರು ಪಾತ್ರಗಳು ಕುಳಿತು ಮಾತನಾಡುವ ಒಂದು ಸಹಜ ಸುಂದರ ಮಾತಿನ ಮಂಟಪ, ಗಾಂಪನ ಪುರಾಣ. ಒಂದು ಕಾಲದಲ್ಲಿ ನಮ್ಮ ಹಿರಿಯರು ಕಾವ್ಯ ಪಾರಾಯಣ ಮಾಡುತ್ತಿದ್ದ ಮುಸ್ಸಂಜೆಯ ಹೊತ್ತಿನಲ್ಲಿ ಕುಳಿತು ಈ ಮೂವರು ಈ ದಿನಗಳಲ್ಲಿ ಅಂಚಿಗೆ ಸರಿದಿರುವ ಎಷ್ಟೋ ವಿಷಯಗಳ ಮೇಲೆ ಬೆಳಕು ಬೀರುತ್ತಾರೆ. ಹಲವಾರು ಆಚರಣೆಗಳ ಕುರಿತು ವಿವರಿಸುತ್ತಲೇ ಅವುಗಳ ಹಿನ್ನೆಲೆ ಮತ್ತು ಆರಂಭವಾದ ಕಾಲದ ಕುರಿತು ನಿಷ್ಕರ್ಷೆ ಮಾಡುತ್ತಾರೆ.



ಭಾರತೀಯ ಪುರಾಣಗಳು ಸೃಷ್ಟಿ, ಲಯ, ಮನ್ವಂತರದ ಕುರಿತು ಹಾಗೂ ರಾಜವಂಶ, ಚರಿತ್ರೆ, ಋಷಿ ಮುನಿಗಳ ಕುರಿತು ಹೇಳುವ ಹದಿನೆಂಟು ಕೃತಿಗಳಿವೆ. ಈ ದಿನ ಅನಾವರಣಗೊಂಡ ಪ್ರಸ್ತುತ ಕೃತಿ ಪುರಾಣದ ಜೊತೆಗೆ ವರ್ತಮಾನದ ಹೊಸತುಗಳನ್ನೂ ಒಳಗೊಂಡಿದೆ. ಉದಾಹರಣೆಗೆ, ತುಳುವರ ಯುಗಾದಿಯ ಬಿಸು ಕಣಿಗೆ ಬೇಕಾಗುವ ಅಗತ್ಯ ಸಾಮಾಗ್ರಿಗಳ ಕುರಿತು ಹೇಳುತ್ತಲೇ ಈ ದಿನಗಳಲ್ಲಿ ಜನಸಾಮಾನ್ಯರಿಗೆ ಸಹಕಾರಿಯಾಗಿರುವ ಸಹಕಾರಿ ಸಂಘಗಳ ಕುರಿತು ಕೃತಿ ಮಾತನಾಡುತ್ತದೆ. ಈ ಎಲ್ಲವುಗಳ ಜೊತೆಗೆ, ಕುಕ್ಕುವಳ್ಳಿಯವರು ಆಯಾಯ ಹಬ್ಬ ಆಚರಣೆಗೆ ಸಂಬಂಧಿಸಿ, ಅದ್ಭುತವಾದ ಕಾವ್ಯ ಕಟ್ಟಿರುವುದು, ಅವರ ಕಾವ್ಯ ಶಕ್ತಿಯನ್ನು ನಿರ್ವಚಿಸುವುದರ ಜೊತೆಗೆ, ಒಟ್ಟು ಸಂಸ್ಕೃತಿಯ ನಿರ್ವಚನವನ್ನು ಮಾಡಿದೆ. 


ಗಾಂಪನ ಪುರಾಣ ಕೃತಿಯಲ್ಲಿ ಬರುವ ಗಾಂಪಣ್ಣ, ಸೀನಣ್ಣ ಮತ್ತು ಸೀತಕ್ಕ ಕುಳಿತು ಮಾತನಾಡುವುದು, ಮಂಗಳೂರಿನ ಕದ್ರಿ ಗುಡ್ಡೆಯಲ್ಲಿ. ಅದರದೇ ಆದ ಚಾರಿತ್ರಿಕತೆ ಇರುವಂತಹ, ಕದ್ರಿಗುಡ್ಡೆಯಲ್ಲಿ ಎರಡು ತಲೆಮಾರಿನ ಮೂವರು ಕುಳಿತು, ತಿಳಿಸುವ ಮತ್ತು ತಿಳಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸ್ಕೃತಿ ಪ್ರಸಾರದ ಹಿನ್ನೆಲೆಯಲ್ಲೂ ಇದೇ ನೆಲೆಯಿದೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ತಿಳಿಸುತ್ತಾ ಸಂಸ್ಕೃತಿಯ ಚಲನಶೀಲತೆಯನ್ನು ಉಳಿಸಿಕೊಳ್ಳುವ ಕೆಲಸ ಇಲ್ಲಿ ನಡೆಯುತ್ತಿದೆ. ಹಾಗಾಗಿ, ಒಂದಷ್ಟು ವರ್ಷಗಳ ಕಾಲ, ರೇಡಿಯೋ ಕೇಳುಗರಿಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತಾ ಬಂದಿರುವ ಗಾಂಪಣ್ಣ ತಿರ್ಗಾಟ, ಈ ಕೃತಿಯ ಮೂಲಕ ದಾಖಲೆಯಾಗುತ್ತಿದೆ. ಮೂವತ್ತ-ಮೂರು ಕಂತುಗಳಲ್ಲಿ ಸುಮಾರು ಎಪ್ಪತ್ತೆಂಬತ್ತು ಸಂಗತಿಗಳನ್ನು ಒಂದಷ್ಟು ವರ್ಷಗಳ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬ, ಆಚರಣೆಗಳನ್ನು ಚರ್ಚೆ ಮಾಡುವ ಗಾಂಪನ ಪುರಾಣ, ನನ್ನ ಪ್ರಕಾರ ಒಂದಷ್ಟು ವರ್ಷಗಳ ತುಳು ಸಂಸ್ಕೃತಿಯ ಎನ್‍ಸೈಕ್ಲೋಪಿಡಿಯಾವೆ! ನಮ್ಮ ತುಳುವ ನಾಡಿನಲ್ಲಿ ನಡೆದ ಹಲವಾರು ಸಂಭ್ರಮಗಳನ್ನು ತಿಳಿಸುವುದರ ಜೊತೆಗೆ, ಪಶ್ಚಿಮದಿಂದ ಪೂರ್ವಕ್ಕೆ ಬಂದ ಅನೇಕ ಹೊಸ ಆಚರಣೆಗಳನ್ನೂ ಸಕಾರಾತ್ಮಕವಾಗಿಯೇ ನೋಡುತ್ತದೆ. ಹೆಚ್ಚಿನ ಎಲ್ಲ ಪರಂಪರೆಯ ಮತ್ತು ಹೊಸ ಆಚರಣೆಗಳನ್ನು ಸಕಾರಾತ್ಮಕವಾಗಿಯೇ ಗಾಂಪನ ಪುರಾಣ ನಿರ್ವಚಿಸಿದೆ.  


ಈ ಕೃತಿಯಲ್ಲಿ ನಾನು ಗಮನಿಸಿದ ಇನ್ನೊಂದು ಮುಖ್ಯ ಅಂಶವೆಂದರೆ, ತುಳುನಾಡಿನ ಸಂಗತಿಗಳನ್ನು ತಿಳಿಸುತ್ತಾ ತಿಳಿಸುತ್ತಾ ಗಾಂಪಣ್ಣ ತೋರಿಸುವ ಧರ್ಮ ಸೌಹಾರ್ದತೆ. ಪ್ರಾಯಶಃ ಇವತ್ತಿನ ದಿನಮಾನಕ್ಕೆ ಬೇಕಾಗುವ ಬಹಳ ಮುಖ್ಯ ವಿಷಯವೂ ಹೌದು. ‘ಸಹನೌ ಭುನಕ್ತು’ ಎನ್ನುವ ಸಂಸ್ಕೃತ ಶ್ಲೋಕದ ಆಶಯವನ್ನು ಇಫ್ತಾರ್ ಕೂಟದಲ್ಲಿ ಕಾಣುವುದಿರಬಹುದು, ಪುದ್ವಾರ್‍ನ ನೆರಳಿನಲ್ಲಿ ಮೊಂತಿಫೆಸ್ಟನ್ನು ನೋಡುವುದಿರಬಹುದು ಅಥವಾ 2019ರ ಸಪ್ಟೆಂಬರ್‍ನ ಒಂದೇ ತಿಂಗಳಿನಲ್ಲಿ ಆಚರಿಸಲ್ಪಟ್ಟ ಮೊಂತಿ ಫೆಸ್ಟ್, ಚೌತಿ ಮತ್ತು ಮೊಹರಂ- ಹೀಗೆ ಮೂರೂ ಧರ್ಮದ ಆಚರಣೆಗಳಿರಬಹುದು, ಅಥವಾ ಹುಲಿ ವೇಷ ಹಾಕಿದ ತುಳು ಬಾಂಧವರು ದೇವಸ್ಥಾನದ ಜೊತೆಗೆ ದರ್ಗಾಕ್ಕೂ ಹೋಗಿ ದೇವರನ್ನು ಸ್ತುತಿಸುವುದಿರಬಹುದು– ಈ ಎಲ್ಲ ಸಂಗತಿಗಳು ಭಾಸ್ಕರ ರೈ ಕುಕ್ಕುವಳ್ಳಿಯವರ ಮನಸಿನ ಆಶಯವನ್ನು ತಿಳಿಸುತ್ತದೆ. ಪಕ್ಕದ ಮನೆಯ ಇಬ್ರಾಹಿಂ ಸಾಹೇಬರ ಮನೆಯ ರಮ್ಜಾಂನನ್ನು ಮತ್ತು ದೂಜ ಪೊರ್ಬುನ ಮನೆಯ ಈಸ್ಟರನ್ನು ಸಂಭ್ರಮಿಸುವ ಗಾಂಪಣ್ಣನ ವ್ಯಕ್ತಿತ್ವದ ಅನಾವರಣ- ಈ ಕಾಲಘಟ್ಟದಲ್ಲಿ ಗಟ್ಟಿ ಧ್ವನಿಯಾಗಿ ನಿಲ್ಲಬೇಕಾದ ಜರೂರನ್ನು ತಿಳಿಸುತ್ತದೆ. 


ನಮ್ಮ ತುಳು ಭಾಷೆಯ ಭಾಷಾ ವಿಸ್ತಾರವನ್ನು ತಿಳಿಯಬೇಕಾದರೆ, ಈ ಕೃತಿಯನ್ನೊಮ್ಮೆ ಓದಲೇ ಬೇಕು. ಕೃತಿಕಾರ ಭಾಸ್ಕರ ರೈ ಕುಕ್ಕುವಳ್ಳಿಯವರ ಜ್ಞಾನದ ಅರಿವಿದ್ದವರಿಗೆ, ಖಂಡಿತ ಆಶ್ಚರ್ಯ ಆಗಲಿಕ್ಕಿಲ್ಲ. ಏಕೆಂದರೆ, ಅವರ ತುಳು ಭಾಷೆಯ ಫಸಲಿಗೆ ಮತ್ತು ಅವರಿಗಿರುವ ತುಳು ಸಂಸ್ಕೃತಿಯ ಜ್ಞಾನಕ್ಕೆ ಸಾಕ್ಷಿಯಾಗುವ ಕೃತಿ, ಗಾಂಪನ ಪುರಾಣ. ಅವರು ಜಾನಪದ ಆಟಗಳ ಕುರಿತು ವಿವರಿಸುವಾಗ, ‘ಪಲ್ಲಿ ಪತ್ತುನ ಗೊಬ್ಬು’ ಎಂದು ಒಂದು ಕಡೆ ಹೇಳುತ್ತಾರೆ. ತುಳುನಾಡಿನಲ್ಲೆ ಹುಟ್ಟಿ ಬೆಳೆದ ನನಗೆ ಈ ಆಟದ ಕುರಿತು ತಿಳಿದಿಲ್ಲ. ಜಾನಪದ ಆಟಗಳ ಕುರಿತು ಈಗಾಗಲೇ ಸಂಶೋಧನ ಮತ್ತು ಅಧ್ಯಯನ ಕೃತಿಗಳು ಪ್ರಕಟವಗಿದ್ದರೂ ಕೂಡಾ, ಈ ಕೃತಿ, ಜನ ಸಾಮಾನ್ಯರಿಗೂ, ಮಕ್ಕಳಿಗೂ, ಸಂಶೋಧಕರಿಗೂ, ಹೀಗೆ ಎಲ್ಲರ ಅರ್ಥ ಪರಿಧಿಗೂ ಎಟುಕುವಂತದ್ದು. ಮಾತ್ರವಲ್ಲದೆ ಆಕರ್ಷಕ, ಹಿತ ಮಿತ ಹಾಸ್ಯ ಬೆರೆತ ಸಂಭಾಷಣೆಯ ಮೂಲಕ ಓದುಗರನ್ನು ಹಿಡಿದಿಡುವಂತಹದ್ದು. ಸಂಭಾಷಣೆಯ ನಡುನಡುವೆ ಬರುವ ಗಾದೆಗಳು ಇಲ್ಲಿಯ ಮಣ್ಣಿನ ಪರಿಮಳವನ್ನು ಅಲ್ಲಲ್ಲಿ ಸಿಂಪಡಿಸುತ್ತವೆ. ತುಳುವರ ಆಚರಣೆಯಾದ ಪತ್ತನಾಜೆಯ ಜೊತೆಗಿರುವ ಕೃಷಿಯ ಲೆಕ್ಕಾಚಾರವನ್ನು ತಿಳಿಯ ಪಡಿಸುತ್ತಲೇ, ಕೃಷಿಯ ಕಡೆಗೆ ಮುಖ ಮಾಡ ಬೇಕಾದ ಸತ್ಯವನ್ನು ಹಾಗೂ ಕೃಷಿಯ ಕುರಿತು ತಿಳಿದುಕೊಳ್ಳಬೇಕಾದ ಜರೂರನ್ನೂ ಇದು ತಿಳಿಸುತ್ತದೆ.


ಬಹಳ ಸೂಕ್ತವೆನಿಸುವ ಹಾಗೆ ಗಾಂಪನ ಪುರಾಣದ ಮುಖ್ಯ ಪಾತ್ರ ಗಾಂಪಣ್ಣನ ಪೂರ್ತಿ ಹೆಸರು ಗಣಪತಿ ಎಂಬುದಾಗಿ. ಜ್ಞಾನಿ, ವಿಘ್ನನಾಶಕ ಎಂಬ ಸೂಚ್ಯಾರ್ಥ ಗಣಪತಿ ಹೆಸರಿನ ಹಿಂದಿರುವಂತದ್ದು. ಅಂತಹದೇ ಜ್ಞಾನಪುಂಜವಾಗಿ ಇಲ್ಲಿ ಗಾಂಪಣ್ಣ ಪಾತ್ರದ ಗಣಪತಿ ಕಾಣಸಿಗುತ್ತಾರೆ. ಸಮಾಜದಲ್ಲಿ ಬಳಕೆಯಲ್ಲಿರುವ ಮಾದಕ ವಸ್ತುಗಳ ನಿರ್ಮೂಲನೆಯ ಕುರಿತಂತೆ ಮಾತನಾಡುತ್ತ ಮಾದಕ ವಸ್ತು ವಿರೋದಿ ದಿನ, ವಿಶ್ವ ತಂಬಾಕು ದಿನ – ಈ ಮೊದಲಾದ ಉತ್ತಮ ಮಾಹಿತಿಗಳನ್ನು ನೀಡುವ ಗಣಪತಿ ಹೆಸರಿನ ಗಾಂಪಣ್ಣ ಒಂದರ್ಥದಲ್ಲಿ ವಿಘ್ನನಾಶಕನೆ ಸರಿ. 


ಮೊನ್ನೆ ಇಷ್ಟೂ ಕಂತುಗಳನ್ನು ಒಟ್ಟಿಗೆ ಕುಳಿತು ಓದುವಾಗ ಎಷ್ಟೋ ತಿಳಿಯದ ಸಂಗತಿಗಳ ಆಚರಣೆಗಳ ಒಳ ತುಡಿತ, ನಂಬಿಕೆಗಳ ಹಿಂದಿನ ಆಶಯ, ಅಕಾಡೆಮಿಯ ಸಂಗತಿಗಳು, ಬಾವುಟ ಗುಡ್ಡೆ ಬಾವುಟ ಗುಡ್ಡೆ ಆಗಿರುವ ಇತಿಹಾಸ, ತೆಂಕುತಿಟ್ಟು-ಬಡಗುತಿಟ್ಟುಗಳ ಯಕ್ಷಗಾನದ ಸಂಗತಿಗಳು, ಕಾರ್ಮಿಕರ ದಿನಾಚರಣೆಯ ಕುರಿತು, ನಾಡ ಹಬ್ಬಗಳ ಕುರಿತು, ಹೀಗೆ ಎಲ್ಲ ಎಲ್ಲವೂ ಈ ಗಾಂಪನ ಪುರಾಣದಲ್ಲಿದೆ. ಒಂದರ್ಥದಲ್ಲಿ ಇದು ಎಲ್ಲವೂ ‘ಸೇರಿಗೆ’ಯಾಗಿರುವ ಪುರಾಣ. ಹೀಗೆ ಸೇರಿಗೆಯಾಗಲು, ಆ ಎಲ್ಲವನ್ನೂ ತಿಳಿಸಿರುವ ಲೇಖಕರೂ ಜ್ಞಾನಿಯಾಗಿದ್ದಾಗ ಮಾತ್ರ ಸಾಧ್ಯ. ನಮಗೆಲ್ಲ ಗೊತ್ತಿರುವ ಹಾಗೆ, ಭಾಸ್ಕರ ರೈ ಕುಕ್ಕುವಳ್ಳಿಯವರು ಕೇವಲ ಬರವಣಿಗೆಗೆ ಸೀಮಿತರಾದವರಲ್ಲ. ಯಕ್ಷಗಾನ ಅರ್ಥಗಾರಿಕೆ, ವೇಷಗಾರಿಕೆ, ಕೃತಿ ಸಂಪಾದನೆ, ನಿರೂಪಣೆ, ಸ್ಥಳಿಯ ಮತ್ತು ಬೆಂಗಳೂರಿನ ಟಿವಿ ವಾಹಿನಿಗಳಲ್ಲಿ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಕುಕ್ಕುವಳ್ಳಿಯವರ ಜ್ಞಾನದ ನೆರಳನ್ನು ಈ ಅಪೂರ್ವವಾದ ಕೃತಿಯಲ್ಲಿಯೂ ಕಾಣಬಹುದು. ಸ್ವರದ ಅಮೂರ್ತತೆಯನ್ನು ಕಳೆದು, ಅಕ್ಷರದ ಮೂರ್ತ ರೂಪಕ್ಕೆ ಬಂದಿರುವ ಗಾಂಪನ ಪುರಾಣ ಎಲ್ಲರ ಮನೆ ಮನಗಳ ತುಂಬಲಿ ಎಂಬ ಹಾರೈಕೆ ನನ್ನದು.


-ಅಕ್ಷಯ ಆರ್. ಶೆಟ್ಟಿ.

ಸಹಾಯಕ ಪ್ರಾಧ್ಯಾಪಕರು

ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜು

ಅಡ್ಯಾರ್, ಮಂಗಳೂರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top