|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷಗಾನದ ಸತ್ವಪೂರ್ಣ ಪ್ರತಿಭೆ- ಮಯೂರ ನಾಯ್ಗ

ಯಕ್ಷಗಾನದ ಸತ್ವಪೂರ್ಣ ಪ್ರತಿಭೆ- ಮಯೂರ ನಾಯ್ಗ



ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೋಟೆಕಾರಿನ ಶ್ರೀಮತಿ ಸತ್ಯ ನಾಯ್ಗ ಹಾಗೂ ಶ್ರೀ ಹರಿಶ್ಚಂದ್ರ ನಾಯ್ಗ ಇವರ ಮಗನಾಗಿ 12.11.1998 ರಂದು ಮಯೂರ ನಾಯ್ಗ ಅವರ ಜನನ. ಕನ್ನಡ ಎಂ.ಎ ಅಲ್ಲಿ ಎರಡನೇ ರಾಂಕ್ ಪಡೆದು ಪ್ರಸ್ತುತ B.Ed ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇವರ ತಂದೆ ಹರಿಶ್ಚಂದ್ರ ನಾಯ್ಗರಿಂದ ಮತ್ತು ಬಾಲ್ಯದಲ್ಲಿಯೇ ಆವರಿಸಿದ್ದ ಯಕ್ಷಗಾನ ವಲಯಗಳು ಇವರು ಯಕ್ಷಗಾನ ಚೆಂಡೆ ಮದ್ದಳೆ ಕಲಿಯಲು ಪ್ರೇರಣೆಯಾಯಿತು ಎಂದು ಮಯೂರ ಹೇಳುತ್ತಾರೆ.


ಯಕ್ಷಗಾನದ ಚೆಂಡೆ ಮದ್ದಲೆ  ಗುರುಗಳು:-

ಪ್ರಾಥಮಿಕ ಶಿಕ್ಷಣ:- ಹರಿಶ್ಚಂದ್ರ ನಾಯ್ಗ (ಚೆಂಡೆ + ಮದ್ದಳೆ + ಕುಣಿತ)

ನಂತರ:- ಬೊಟ್ಟಿಕೆರೆ ಪುರುಷೋತ್ತಮ ಪೂಂಜ (ಚೆಂಡೆ + ಮದ್ದಳೆ + ಪ್ರಾಥಮಿಕ ಛಂದಸ್ಸು ಮತ್ತು ಭಾಗವತಿಕೆ).

ಗಣೇಶ ಕೊಲೆಕಾಡಿ (ಛಂದಶ್ಶಾಸ್ತ್ರ).


ಗುರುಗಳಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಹಾಗೂ  ಕೊಲೆಕಾಡಿಯವರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

೧) ಬೊಟ್ಟಿಕೆರೆ ಪುರುಷೋತ್ತಮ ಪೂಂಜ:- 

ಯಕ್ಷಗಾನದ ಸರ್ವ ಕಲಾವಿದರೂ ಒಂದು ಮಟ್ಟಿಗೆ ಭಯವೆಂದೇ ಹೇಳಬಹುದಾದ ಗೌರವದಿಂದ ನಡೆದುಕೊಳ್ಳುತ್ತಿದ್ದ ಪೂಂಜರು, ಶಿಷ್ಯನಾದ ನನಗೆ "Hii - Bye" ಎನ್ನುವಷ್ಟರ ಮಟ್ಟಿಗಿನ ಉದಾರಿ. ಸಕಲರಿಗೂ ಸಂಕೀರ್ಣರಾಗಿದ್ದ ಅವರು ನನಗೆ ಸರಳ ಮತ್ತು ಸಲುಗೆಯ ಖಣಿ.


ಯಕ್ಷಗಾನದ ಸರ್ವಾಂಗಗಳಲ್ಲೂ ಪರಿಣತಿ ಪಡೆದಿದ್ದರೂ ತಮ್ಮನ್ನು ತಾವು “ I'm Master of None ” ಅಂತಲೇ ಹೇಳಿಕೊಳ್ಳುತ್ತಿದ್ದ ವಿನಯವಂತ. ಕಲೆಯ ಕುರಿತಾದ ದಿವ್ಯ- ನವ್ಯ ಆಲೋಚನೆಗಳನ್ನು ನನ್ನ ತಲೆಯಲ್ಲಿ ಬಿತ್ತಿದ ಮಹನೀಯ. ಒಂದನ್ನು ವಿವರಿಸುವಾಗ ತತ್ಸಂಬಂಧಿ ಇತರ ವಿಷಯಗಳನ್ನು ಹೇಳಿಕೊಟ್ಟ ಪರಮಗುರು.

ಕಳೆದ ಹತ್ತು ವರ್ಷಗಳಿಂದ ತಮ್ಮ ಮನೆ ಅಂಬುರುಹದಲ್ಲಿಯೆ ಸಾಕುಮಗನಾಗಿ ಬೆಳೆಸಿ, ನಮ್ಮ ಆಸಕ್ತಿಯೊಂದನ್ನು ಬಿಟ್ಟು ಬೇರಾವುದನ್ನೂ ಗುರುದಕ್ಷಿಣೆಯಾಗಿ ಪಡೆದವರಲ್ಲ. ಅವರ ಧರ್ಮಪತ್ನಿ ಶೋಭಾ ಪೂಂಜರವರು ನಮ್ಮೆಲ್ಲರಿಗೂ ಪ್ರೀತಿಯ ಅಮ್ಮ. ಅವರ ಇಬ್ಬರ ಮಕ್ಕಳಿಗೂ ನಾನು ಭ್ರಾತೃ ಸಮಾನ.

ಪೂಂಜರು ಕೊನೆ ಕೊನೆಗೆ ತೀವ್ರವಾದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಶಿಷ್ಯರಾದ ನಮ್ಮ ಜೊತೆ ಕಲೆತು ಕಲಾಸಂಬಂಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ‌. ಕಲೋದ್ಧರಣದ ಅವರ ನಿರ್ಮಲ ಕನಸುಗಳನ್ನು ನನಸಾಗಿಸುವುದು ನಮ್ಮ ಆದ್ಯ ಕರ್ತವ್ಯ.


೨) ಗಣೇಶ್ ಕೊಲೆಕಾಡಿ:-

ತಮ್ಮನ್ನು ನಿರಂತರವಾಗಿ ಕಾಡುವ ಅನಾರೋಗ್ಯದ ನಡುವೆಯೂ ಶಿಷ್ಯಪ್ರೇಮದಿಂದ ಅವರ ಜ್ಞಾನದಾಹವನ್ನು ತಣಿಸುತ್ತಿರುವ ಕಲಿಯುಗದ ನಿಜಗುರು. ಇವರ ಮನೆಯಲ್ಲೂ ಸನಾತನ ಗುರುಕುಲ ಪದ್ಧತಿಯು ಸಾಕಾರಗೊಂಡಿದೆ. ನನಗೆ ಛಂದಶ್ಶಾಸ್ತ್ರದ ಅನೇಕ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ನಾನು ಕೇಳಿದ ಪ್ರಶ್ನೆಗೆ ಪುಟಗಟ್ಟಲೆ ಉತ್ತರ ಟೈಪ್ ಮಾಡಿ, ವಾಟ್ಸಪ್ ನಲ್ಲಿ ಕಳುಹಿಸಿ ನನ್ನೆಲ್ಲ ಸಂದೇಹಗಳನ್ನು ನಿವಾರಿಸುತ್ತಿದ್ದರು. ಮೊನ್ನೆ ಮೊನ್ನೆ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗಲೂ ಮಂಚದಲ್ಲಿ ಮಲಗಿಕೊಂಡೆ ನನಗೆ ಪಾಠ ಮಾಡಿದ್ದಾರೆ. ಈ ಪ್ರೀತಿಗೆ ಪ್ರತಿಯಾದ ವಸ್ತು ಈ ಜಗತ್ತಿನಲ್ಲಿ ಮತ್ತೊಂದು ಇರಲು ಸಾಧ್ಯವಿಲ್ಲ. ಅವರ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥನೆ.


ಯಕ್ಷಗಾನದಲ್ಲಿ ವೇಷ ಮಾಡುವ ಅಥವಾ ಭಾಗವತಿಗೆ ಮಾಡುವ ಆಸಕ್ತಿ ಇದೆಯಾ:-

ಯಕ್ಷರಂಗದ ಪ್ರಯಾಣ ವೇಷದೊಂದಿಗೆ ಆರಂಭ. ಎರಡನೇ ತರಗತಿಯಲ್ಲಿ ಶಬರಿಮಲೆ ಅಯ್ಯಪ್ಪ ಪ್ರಸಂಗದ ಹರಿಹರನಾಗಿ, ಬಬ್ರುವಾಹನ, ಕೃಷ್ಣ, ಬಲರಾಮ, ದೇವತೆ, ಬಾಡು ಪೂಜಾರಿ, ವನಪಾಲಕ ಮತ್ತು ಕೆಲವು ಸಲ ಸ್ತ್ರೀ ವೇಷಗಳನ್ನು ನಿಭಾಯಿಸಿದ್ದುಂಟು. ಪಿಯುಸಿ ಆನಂತರ ಹಿಮ್ಮೇಳವೊಂದೇ ಆಸಕ್ತಿಯ ಕ್ಷೇತ್ರವಾಯಿತು ಎಂದು ನಾಯ್ಗ ಹೇಳುತ್ತಾರೆ.

ಭಾಗವತಿಕೆಯ ಪೂರ್ವರಂಗವನ್ನು ಪೂಂಜರಿಂದ ಅಭ್ಯಸಿಸಿ, ಆನಂತರದ ಛಂದಶ್ಶಾಸ್ತ್ರದ ಅಧ್ಯಯನದಿಂದ ಭಾಗವತಿಕೆಯ ಜಾಡು ಸುಲಭವಾಗಿ ಅರ್ಥವಾಗಿದೆ.


ನಿಮ್ಮ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು:-

ಈ ಹಿಂದೆ ಗತಿಸಿಹೋದ ಹಿರಿಯ ಚೇತನಗಳು ನೆಡ್ಲೆ, ಚಿಪ್ಪಾರು, ದಿವಾಣರು. ಮತ್ತೀಗ ಪ್ರತ್ಯಕ್ಷ ದಂತಕಥೆಗಳಂತಿರುವ ಪದ್ಯಾಣ ಶಂಕರನಾರಾಯಣ ಭಟ್ (ಹಿರಿತನ ), ದೇಲಂತಮಜಲು (ಕ್ಷಮತೆ), ಕಡಂಬಳಿತ್ತಾಯ (ಮಾಧುರ್ಯತೆ), ಉಳಿತ್ತಾಯ (ಅಧ್ಯಯನ), ಚೈತನ್ಯ ಪದ್ಯಾಣ (ಪ್ರೇರಣೆ), ಉಪಾಧ್ಯಾಯ (ತೀಕ್ಷ್ಣತೆ) ಮತ್ತು ಅನೇಕರು.


ನಿಮ್ಮ ನೆಚ್ಚಿನ ಭಾಗವತರು:-

ಬೊಟ್ಟಿಕೆರೆ ಪುರುಷೋತ್ತಮ ಪೂಂಜ (ನಿರ್ದೇಶನ), ಬಲಿಪ ನಾರಾಯಣ ಭಾಗವತ (ಸಂಪ್ರದಾಯ), ಕುರಿಯ ಭಾಗವತರು (ರಂಗ ರಾಜ), ಪದ್ಯಾಣ ಗಣಪತಿ ಭಟ್ (ಓಜಸ್ವೀ),  ದಿನೇಶ್ ಅಮ್ಮಣ್ಣಾಯ (ಮಾಧುರ್ಯ),  ಸತೀಶ್ ಪಟ್ಲ (ಯುವ ಪ್ರೇರಣೆ), ದೇವಿಪ್ರಸಾದ್ ಆಳ್ವ (ಮಾಧುರ್ಯ), ಧೀರಜ್ ರೈ ಸಂಪಾಜೆ (ನಾವಿನ್ಯ), ಚಿನ್ಮಯ್ ಭಟ್ ಕಲ್ಲಡ್ಕ ( ಸೃಜನಶೀಲ), ಇನ್ನಿತರರು.


ಮಾನಿಷಾದ, ಶ್ರೀ ದೇವೀ ಮಾಹಾತ್ಯ್ಮಂ, ಲೋಕಾಭಿರಾಮ, ಸಮರ ಸೌಗಂಧಿಕಾ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ;

ಯಕ್ಷಗಾನದ ವ್ಯಾಪ್ತಿ ಹೆಚ್ಚಾಗುತ್ತಿದೆ. ಯಕ್ಷಗಾನವೊಂದು ಪಾಪವೆಂಬ ಕುರುಡುನಂಬಿಕೆ ಈಗ ಇಲ್ಲವಾಗಿ ಅದಕ್ಕೀಗ ಪಾವಿತ್ರ್ಯತೆ ಸಂದಿದೆ. ಅದುವೆ ಅದರ ಉಳಿವಿಗೆ ಕಾರಣವಾಗಿದೆ‌. ಪರಂಪರೆಯನ್ನು ಹಾಗೆಯೆ ಕಣ್ಮುಚ್ಚಿ ನಂಬಿ ನಡೆಯುವುದು, ಪರಂಪರೆಯನ್ನು ಸ್ವಲ್ಪವೂ ಪುರಸ್ಕರಿಸದೆ ಆಧುನಿಕ ಮಾರ್ಗದಲ್ಲಿ ಕ್ರಮಿಸುವುದು, ಎರಡರ ಸಮಾಹಾರ- ಹೀಗೆ ಮೂರು ಮಾರ್ಗಗಳು ಇದೀಗ ತೆರೆದುಕೊಂಡಿದೆ ಎಂದು ಹೇಳುತ್ತಾರೆ ಮಯೂರ ನಾಯ್ಗ.


ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ;

ಅಗ್ಗದ ಮನೋರಂಜನೆಗೆ ತಲೆಬಾಗದೆ,  ಉತ್ತಮೋತ್ತಮವೆನಿಸಿದ್ದನ್ನು ಕಲೆಯಿಂದ ನಿರೀಕ್ಷಿಸಬೇಕು. ಒಂದೇ ಮಾತಿನಲ್ಲಿ ಹೇಳುವುದೆಂದರೆ ಯಕ್ಷಗಾನದ ನೋಡುಗರು, ಕೇಳುಗರು 'ಸಹೃದಯ' ರಾಗಬೇಕು. ಅಂಥವರ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳುತ್ತಾರೆ ಮಯೂರ ನಾಯ್ಗ.

         


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಕೇಳಿದಾಗ:-

ಸಹೃದಯ ಶಿವರು ಸೃಷ್ಟಿಯಾದಾಗಲೆ ಕಲೆಯ ಔನತ್ಯ ಸಾಧ್ಯವಾಗುತ್ತದೆ. ಆಳವಾದ ಅಧ್ಯಯನ ನಡೆಸಿ ಯಕ್ಷಗಾನದ ಶಾಸ್ತ್ರಕ್ಕೂ ಅದರ ಪ್ರಾಯೋಗಿಕತೆಗೂ ಇರುವ ಅಂತರವನ್ನು ದೂರೀಕರಿಸಿ, ಲಕ್ಷ್ಯ ಲಕ್ಷಣ ಸಮನ್ವಯವಾಗುವಂತೆ ಮಾಡಬೇಕು. ಅದೊಂದು ಭರತನ ಮಾರ್ಗದಿಂದಲೇ ಉದಿಸಿಬಂದ ದೇಶೀಪ್ರಕಾರವೆಂಬ ಸತ್ಯವನ್ನು ಸರ್ವರೂ ಒಪ್ಪುವಂತೆ ಮಾಡಬೇಕು. ನನ್ನ ಗುರುಗಳೀರ್ವರು ಕಂಡಿರುವ ಸುವರ್ಣ ಸ್ವಪ್ನವನ್ನು ವಾಸ್ತವಗೊಳಿಸಬೇಕು.


ನಮ್ಮ ಪ್ರಾಚೀನರು ಪರಂಪರೆಯ ರಾಜಮಾರ್ಗದಲ್ಲಿ ಎಳೆದು ತಂದ ಯಕ್ಷರಥವನ್ನು ಇನ್ನೂ ವಿಸ್ತೃತ ನವ್ಯಪಥಗಳಲ್ಲಿ ಮತ್ತಷ್ಟು ದಿವ್ಯ ರಮಣೀಯವಾಗಿ ಮುಂದುವರಿಸುವ ಸಾರಸ್ವತೋತ್ಸವಕ್ಕೆ ನನ್ನೆರಡೂ ಕೈಗಳೂ ಸೇರಿಕೊಳ್ಳಬೇಕು ಎಂದು ಹೇಳುತ್ತಾರೆ ಮಯೂರ ನಾಯ್ಗ.


ಹವ್ಯಾಸಿಯಾಗಿ ಇದ್ದುಕೊಂಡು ಕಟೀಲು, ಬಪ್ಪನಾಡು, ಸಸಿಹಿತ್ಲು, ಚೀರುಂಬ, ಬೆಂಕಿನಾಥೇಶ್ವರ ಮೇಳಗಳಲ್ಲಿ ಭಾಗವಹಿಸಿರುವ ಇವರು, ಅನೇಕ ಮಕ್ಕಳ ತಂಡಗಳಲ್ಲಿ ಹಿಮ್ಮೇಳವಾದಕರಾಗಿ ಭಾಗವಹಿಸಿದ್ದಾರೆ.

೧) ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ.

೨) ದಿಗಿಣ ದಿವಿಜ ತಂಡ, ಮೂಡಬಿದಿರೆ.

೩) ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಕೇಂದ್ರ ಮಂಜನಾಡಿ.

೪) ಮಹಿಳಾ ತಂಡ, ಸುರತ್ಕಲ್.

೫) ಕೇಶವ ಶಿಶು ಮಂದಿರ, ಕಿನ್ಯ ಇತ್ಯಾದಿ ಸಂಸ್ಥೆಯಲ್ಲಿ ಭಾಗವಹಿಸಿದ್ದಾರೆ.

ಎರಡನೇ ತರಗತಿಯಲ್ಲಿ ಮೊದಲ ಬಾರಿ ವೇಷ ಮಾಡಿದ್ದ ಇವರು ಒಟ್ಟು ೧೬ ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.


ಸಾಹಿತ್ಯದ ಆಸಕ್ತಿ ಇರುವ ಇವರು, ಕೆಲವೊಂದು ಆಲ್ಬಂ ಗೀತೆಗಳನ್ನು, ಅನುವಾದ ಕವಿತೆಗಳನ್ನು, ಯಕ್ಷಗಾನ ಪದ್ಯಗಳನ್ನು, ನೃತ್ಯ- ನಾಟಕಗಳಿಗೆ ಸಾಹಿತ್ಯ, ಪ್ರಬಂಧ, ಕಥೆಗಳನ್ನು ಬರೆದಿದ್ದಾರೆ.

ಎಳೆಯನಾಗಿರುವಾಗ ಭಾಷಣ, ಏಕಪಾತ್ರಾಭಿನಯ, ನಾಟಕ, ನೃತ್ಯಗಳಲ್ಲಿ ಭಾಗವಹಿಸಿದ್ದಾರೆ.

ಶಾಸ್ತ್ರೀಯ ಸಂಗೀತವನ್ನು ಮಹಾಬಲೇಶ್ವರ ಭಾಗವತ ಹಾಗೂ ದೇವೀಪ್ರಸಾದ ಆಳ್ವರಲ್ಲಿ ಅಭ್ಯಾಸ ಮಾಡಿದ್ದಾರೆ.


ಕೆಲವೊಂದು ಸಂಘ ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರಗಳು ಸಂದಿವೆ. ಪ್ರಸಿದ್ಧಿಗಿಂತಲೂ ಸಿದ್ಧಿಯೆಡೆಗೆ ನನ್ನ ಆಸಕ್ತಿ ಹೆಚ್ಚು. ಸಿದ್ಧಿಯಿಲ್ಲದ ಪ್ರಸಿದ್ಧಿ ಹೆಚ್ಚು ಕಾಲ ತಾಳಲಾರದು; ಬಾಳಲಾರದು ಎಂದು ಹೇಳುತ್ತಾರೆ ಮಯೂರ ನಾಯ್ಗ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ, ಶಕ್ತಿನಗರ ಮಂಗಳೂರು.

8971275651

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


1 Comments

Post a Comment

Post a Comment

Previous Post Next Post