ನಿಟ್ಟೆ: 'ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲೂ ಸಮಾನ ಗೌರವ, ಸ್ಥಾನಮಾನ ದೊರೆತು ಮಹಿಳೆ ಸಬಲೆ ಎಂಬಂತಾಗಬೇಕು' ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಂಟರ್ನಲ್ ಕಂಪ್ಲೇಂಟ್ಸ್ ಕಮಿಟಿ ಡಿ.11 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 'ಮಹಿಳೆಯರ ಮೇಲೆ ಯಾವುದೇ ತರಹದ ಶೋಷಣೆಯಾಗುವುದನ್ನು ಕಂಡರೂ ಅದನ್ನು ಖಂಡಿಸುವ ಧೈರ್ಯ ನಮ್ಮಲ್ಲಿರಬೇಕು. ಬಾಲ್ಯದಿಂದಲೇ ಮಕ್ಕಳಲ್ಲಿ ಲಿಂಗಬೇಧದ ಚಿಂತನೆಗೆ ಅವಕಾಶ ಸಿಗದಂತೆ ಸಮಾನತೆಯ ಬೀಜವನ್ನು ಬಿತ್ತಿ ಪ್ರೋತ್ಸಾಹದಾಯಕ ನಿಲುವನ್ನು ಪೋಷಕರು ತಾಳಬೇಕು. ಸಣ್ಣಪುಟ್ಟ ಕಾರಣಕ್ಕೋಸ್ಕರ ಬೇರೆಯಾಗುವ ದಂಪತಿಗಳಿಗೆ ಸರಿಯಾದ ಮಾರ್ಗದರ್ಶನವೂ ಅಗತ್ಯ. ಅದೆಷ್ಟೋ ಕ್ಲಿಷ್ಠಕರವಾದ ಕೇಸ್‍ಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂಬುದು ಹೆಮ್ಮೆಯ ವಿಚಾರ' ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಶ್ಯಾಮಲಾ ಕುಂದರ್ ಅವರ ಕಾರ್ಯ ಶ್ಲಾಘನೀಯ. ಈ ಕೆಲಸದಲ್ಲಿ ಸಮಾಜದ ಸರ್ವಪ್ರಜೆಯೂ ಕೈಜೋಡಿಸಬೇಕು' ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಾ.ಐ ರಮೇಶ್ ಮಿತ್ತಂತಾಯ, ನಿಟ್ಟೆ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಬಿ.ಕೆ, ನಿಟ್ಟೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೊಳ್ಳ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ 250 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಂಟರ್ನಲ್ ಕಂಪ್ಲೇಂಟ್ಸ್ ಕಮಿಟಿಯ ಸಂಯೋಜಕಿ ಡಾ.ಕರುಣಾ ಪಂಡಿತ್ ಸ್ವಾಗತಿಸಿದರು. ಇಂಟರ್ನಲ್ ಕಂಪ್ಲೇಂಟ್ಸ್ ಕಮಿಟಿಯ ವಿದ್ಯಾರ್ಥಿ ಸದಸ್ಯೆ ದೀಕ್ಷಿತಾ ವಂದಿಸಿದರು. ಎಂ.ಸಿ.ಎ ವಿಭಾಗದ ಸಹಪ್ರಾಧ್ಯಾಪಕಿ ಡಾ.ಸ್ಪೂರ್ತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ