'ಭಾಷಣಾತ್ ಭಾಷಾ'- ಅಂದರೆ ನಾವು ಮಾತನಾಡುವುದರಿಂದ ಭಾಷೆ ಎಂಬುದು ಭಾಷಾ ನಿಷ್ಪತ್ತಿ. ಇಂದು ವಿಶ್ವದಾದ್ಯಂತ ಸಾವಿರಾರು ಭಾಷೆಗಳು ಬಳಕೆಯಲ್ಲಿವೆ. ಹಿಂದಿನ ಅನೇಕ ಭಾಷೆಗಳು ನಾಶವಾಗಿ ಹೋಗಿವೆ. ಭಾಷೆ ಬಳಕೆಯಲ್ಲಿ ಇಲ್ಲದಾಗ ಅದು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಬಿಡುತ್ತದೆ. ಇದಕ್ಕೆ ಅನೇಕ ಕಾರಣಗಳು ಇಲ್ಲದಿಲ್ಲ. ಇಂತಹ ಭಾಷಾ ಪ್ರಪಂಚದಲ್ಲಿ ತನ್ನದೇ ಆದ ಸೊಗಡನ್ನು ಇನ್ನೂ ಉಳಿಸಿಕೊಂಡು ಬಂದಿರುವ ಭಾಷೆ ಕುಂದಾಪ್ರ ಕನ್ನಡ. ಕನ್ನಡದ ಒಂದು ಉಪಭಾಷೆಯಾಗಿ ಇದು ಗುರುತಿಸಿಕೊಂಡಿದ್ದರೂ ಸಹ ಶಿಷ್ಟ ಕನ್ನಡಕ್ಕಿರುವ ಪ್ರಾಚೀನತೆ ಇದಕ್ಕಿದೆ.
ಉಡುಪಿಯ ಕಲ್ಯಾಣಪುರ ಸುವರ್ಣ ನದಿಯಿಂದ ಉತ್ತರದ ಶಿರೂರುವರೆಗೆ ಕುಂದಾಪ್ರ ಕನ್ನಡ ಭಾಷೆಯ ಬಳಕೆ ನೋಡಬಹುದು. ಇದನ್ನು ಕುಂದ ಕನ್ನಡ ಅಂತಲೂ ಕರೆಯುತ್ತಾರೆ. ಕೋಟ ಕನ್ನಡ ಕೂಡ ಇದರ ಸಾಮೀಪ್ಯ ಇರುವುದರಿಂದ ಕೆಲವರು ಇದನ್ನು ಕೋಟ ಕನ್ನಡ ಅಂತಲೂ ಹೇಳಲಾಗುತ್ತದೆ. ಕೆಲವು ಭಾಷಾ ಶಾಸ್ತ್ರಜ್ಞರ ಪ್ರಕಾರ ಕೋಟ ಕನ್ನಡವೇ ಮುಂದೆ ಕುಂದಾಪ್ರ ಕನ್ನಡ ಎಂದು ಪ್ರಸಿದ್ಧವಾಯಿತು ಎಂದು ಕೂಡ ಹೇಳುತ್ತಾರೆ. ಏನೇ ಆದರೂ ಈಗ ಇದು ಕುಂದಾಪುರದ ಭೌಗೋಳಿಕ ವ್ಯಾಪ್ತಿಯಲ್ಲಿ ಹೆಚ್ಚು ಬಳಕೆಯಲ್ಲಿ ಇರುವುದರಿಂದ ಇದು ಕುಂದಾಪ್ರ ಕನ್ನಡ ಎಂದೇ ಪ್ರಸಿದ್ದವಾಗಿದೆ. ಇಲ್ಲಿರುವ ಜನರು ಹಾಗೆ ಬೆಂಗಳೂರು, ಮುಂಬಯಿ ಮುಂತಾದ ಕಡೆ ಹಾಗೂ ಅಮೇರಿಕಾ ಮುಂತಾದ ವಿದೇಶಗಳಲ್ಲಿ ಇರುವ ಕುಂದಾಪುರ ಕನ್ನಡ ಮಾತನಾಡುವ ಜನರು ಈ ಭಾಷೆಯನ್ನು ತಮ್ಮ ಸಂಸ್ಕೃತಿ ಎಂಬಂತೆ ಬಿಡದೆ ಕಾಪಾಡುತ್ತಿರುವುದು ಬಹಳ ಹೆಮ್ಮೆಯ ವಿಷಯ. ಹಾಗಂತ ಇದು ಬೇರೆ ಭಾಷೆಗಳ ಪ್ರಭಾವದಿಂದ ಸ್ವಲ್ಪ ವ್ಯತ್ಯಾಸ ಆಗುತ್ತಿಲ್ಲ ಎಂದು ಅಲ್ಲ. ಇದನ್ನು ಸಹ ನಾವು ಗಮನಿಸಬೇಕು. ಹಾಗಾಗಿ ಇಂತಹ ಭಾಷೆಯನ್ನು ಮೂಲದಂತೆ ಉಳಿಸುವುದು ಕೂಡ ಅಷ್ಟೇ ಮುಖ್ಯ ಕೂಡ. ಅದಕ್ಕಾಗಿ ಇಂತಹ ನಿಘಂಟುಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.
ಕುಂದಾಪ್ರ ಕನ್ನಡ ಗ್ರಾಂಥಿಕವಾಗಿ ತನ್ನ ಪ್ರಭಾವ ಬೀರದಿದ್ದರೂ ಮೌಖಿಕವಾಗಿ ಅತ್ಯಂತ ಶ್ರೀಮಂತ ಭಾಷೆ ಎಂದು ಹೇಳಬಹುದು. ನೇಜಿ ನೆಡುವಾಗ ಹಾಗೂ ಭತ್ತ ಕುಟ್ಟುವಾಗ ಹೀಗೆ ವ್ಯವಸಾಯ ಸಂದರ್ಭಗಳ ಹಾಡುಗಳ ಮೂಲಕ, ಶೋಭಾನೆ ಹಾಡುಗಳು, ಧಿಂಸಾಲ್ ಹಾಡು, ಹೌದೇರಾಯನ ವಾಲಗ ಮುಂದಾದ ಜನಪದೀಯ ಹಾಡುಗಳ ಮೂಲಕ ಇಲ್ಲಿನ ಜನಪದಿಯರು ಕುಂದಾಪ್ರ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ.
ಕುಂದಾಪ್ರ ಕನ್ನಡ ವಿಶಿಷ್ಟತೆ ಅಂದರೆ ಸಂಕ್ಷಿಪ್ತ ಪದಗಳಲ್ಲಿ ಮಾತನಾಡುವುದು ಅಥವಾ ಉಚ್ಚಾರದಲ್ಲಿ ಸಾಧ್ಯವಾದಷ್ಟು ಸಂಕ್ಷಿಪ್ತಗೊಳಿಸುವುದು. ಉದಾ: ಬಟ್ಟಲು- ಬಟ್ಲು, ತೋರಣ- ತೋರ್ಣ, ಸಿಡಿಲು- ಸೆಡ್ಲು, ಮದುವೆ- ಮದಿ, ಬರಬೇಕು- ಬರ್ಕ್, ಹೋಗಬೇಕು- ಹೊಯ್ಕ್ ಇತ್ಯಾದಿ.
ಇನ್ನು ಕೆಲವು ಧ್ವನಿ ವಿಸ್ತಾರ ಪಡೆಯುವ ಶಬ್ದಗಳು ಇವೆ. ಉದಾ: ಕ್ರಯ- ಕಿರಾಯ, ಪ್ರಾಯ- ಪಿರಯ, ನೂಲು- ನುಗುಲು ಇತ್ಯಾದಿ.
ಅನೇಕ ಅಪಭ್ರಂಶ ಪದಗಳು ಸೇರಿಕೊಂಡು ಕುಂದಾಪ್ರ ಕನ್ನಡ ಎನ್ನುವ ಮಟ್ಟಿಗೆ ಹಾಸುಹೊಕ್ಕಾಗಿವೆ. ಉದಾ: ಡಾಕ್ಟರ್- ಡಾಕ್ಟ್ರು, ಮಾಸ್ಟರ್ - ಮಾಸ್ಟ್ರು, ಪೌಡರ್ - ಪೌಂಡ್ರು ಇತ್ಯಾದಿ. ಅನೇಕ ವಾಗ್ರೂಢಿ ಮೂಲಕ ರೂಪಕಾರ್ಥ ಪದಗಳು ಬಳಕಯಲ್ಲಿವೆ.
ಉದಾ: ಕೀಲುಹಾಕು (ತಡೆ), ನೆಗ್ದು ಬೀಳು (ಮೋಸಹೋಗು), ಚಿಪ್ಪಾನ್ ಹಿಂಡ್ (ಗುಂಪು ಗುಂಪು), ಪೆಟ್ಟಿಗೆ ಕಟ್ಟು (ಸ್ಥಳ ಬಿಡು) ಇತ್ಯಾದಿ.
ಅನೇಕ ಪದಗಳು ಇಲ್ಲಿನ ವಿಶಿಷ್ಠ ಪದಗಳೇ ಆಗಿವೆ. ಉದಾ: ಜಂಬು (ದುರ್ವಾಸನೆ), ಬಯ್ಟ್ (ಪರಚು), ಅಂಡುದು (ಹೊಂಚು ಹಾಕುವುದು) ಇತ್ಯಾದಿ. ದ್ವಯಾರ್ಥಕ ಪದಗಳು ಸಾವಿರಾರು ಇವೆ. ಉದಾ: ಕಾಸು (ಬಿಸಿಮಾಡು, ಕಾಯಿಸು), ನೆಗಿ (ಎತ್ತು- (ಕ್ರಿಯಾಪದ), ನಗು) ಇತ್ಯಾದಿ.
ವಸ್ತು ವಾಚಕ, ಭಾವನಾಮ ಮೊದಲಾದ ಪ್ರಭೇದಗಳಲ್ಲಿ ಧ್ವನಿ ವ್ಯತ್ಯಾಸ ಬಿಟ್ಟರೆ ಸಾಮಾನ್ಯ ಕನ್ನಡ ರೂಪದಂತೆ ಇವೆ. ಉದಾ: ಅತ್ಲಾಯಿ- ಅಲ್ಲಿ, ಇತ್ಲಾಯಿ- ಇಲ್ಲಿ, ಹೀಗೆ ತೆಂಕ್ಲಾಯಿ, ಬಡ್ಲಾಯಿ ಇತ್ಯಾದಿ. ಕಾಲ ವಾಚಕಗಳಲ್ಲಿ ಅಳು ಪ್ರತ್ಯಯ ಬರುತ್ತದೆ. ಉದಾ: ಆಗಳು- ಆಗ, ಈಗಳು- ಈಗ, ಏಗಳು- ಯಾವಾಗ ಇತ್ಯಾದಿ.
ಕುಂದಾಪ್ರ ಕನ್ನಡದಲ್ಲಿ ಮಹಾಪ್ರಾಣ ಅಕ್ಷರಗಳ ಬಳಕೆ ಬಹಳ ಕಡಿಮೆ. ಮುಖ್ಯವಾಗಿ ಮೂರು ರೀತಿಯ ಧ್ವನಿ ಸಂಯೋಜನೆ ಮುಖ್ಯವಾಗಿವೆ. ಉಕಾರದಲ್ಲಿ ಕೊನೆಗೊಳ್ಳುವ ಶಬ್ದಗಳು ಉದಾ: ಜ್ವರು, ಹಣು ಇತ್ಯಾದಿ. ಒ ಕಾರದಲ್ಲಿ ಕೊನೆಗೊಳ್ಳುವುದು ಉಂತೊ, ಬತ್ತೊ, ಹೋತೊ ಇತ್ಯಾದಿ. ಅರ್ಧಾಕ್ಷರದಲ್ಲಿ ಕೊನೆಗೊಳ್ಳುವುದು ನೇಲ್, ಹೋಪುದ್, ಬಪ್ಪುದ್, ಉಂಬುದ್ ಇತ್ಯಾದಿ. ಅಕಾರವು ಇಕಾರವಾಗುವ ಅನೇಕ ಪದಗಳು ಕುಂದಾಪ್ರ ಕನ್ನಡದಲ್ಲಿ ನೋಡಬಹುದು. ಉದಾ: ಮಂಡೆ- ಮಂಡಿ, ಮಡೆ- ಮಡಿ, ಜಡೆ- ಜಿಡಿ ಇತ್ಯಾದಿ. ಇಂತಹ ಅಸಂಖ್ಯ ಸ್ವರ ಹಾಗೂ ವ್ಯಂಜನ ಅಕ್ಷರ ಬದಲಾವಣೆ ಕುಂದಾಪ್ರ ಕನ್ನಡದಲ್ಲಿ ಸರ್ವೇ ಸಾಮಾನ್ಯ.
ದೇಶಿ ಹಾಗೂ ವಿದೇಶಿ ಭಾಷೆಗಳ ಪ್ರಭಾವ ಕೂಡ ಕುಂದಾಪ್ರ ಕನ್ನಡ ಭಾಷೆಯಲ್ಲಿ ನೋಡಬಹುದು. ಉದಾ: ಹರ್ಕತ್, ನಸೀಪ್, ಪಾಯ್ದಿ, ಚಪ್ಪನ್ ಚೂರ್ ಇತ್ಯಾದಿ. ಹೀಗೆ ಈ ಭಾಷೆಯ ಹರವು ವಿಸ್ತಾರವಾದದ್ದು.
ಅಪಾರ ಶಬ್ದ ರಾಶಿ ಹೊಂದಿರುವ ಕುಂದಾಪ್ರ ಕನ್ನಡವನ್ನು ಉಳಿಸಬೇಕು ಹಾಗೂ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ವಿಶ್ವ ಕುಂದಾಪ್ರ ದಿನದ ಆಚರಣೆ ಬಹಳ ಸ್ತುತ್ಯರ್ಹ.
-ಡಾ. ಪ್ರಸನ್ನಕುಮಾರ ಐತಾಳ್
ಎಸ್‌ಡಿಎಂ ಕಾಲೇಜು ಉಜಿರೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ