ಬಾಕಾಹು ಪಿಜ್ಜಾ
ಪಾಕ: ಸುಮಂತ್ ಭಂಡಾರಿ, ತೀರ್ಥಹಳ್ಳಿ
ಉಳಿತಾಯ ಮತ್ತು ಆರೋಗ್ಯದ ದೃಷ್ಟಿಯಿಂದ ಇಂತಹ ಪಿಜ್ಜಾದಂತಹ ಖಾದ್ಯಗಳನ್ನು ಮನೆಯಲ್ಲೇ ಮಾಡುವ ಹವ್ಯಾಸ ನನಗಿದೆ. ಹಲವು ಬಾರಿ ಮೈದಾ ಹಿಟ್ಟಿನಿಂದಲೇ ಪಿಜ್ಜಾ ಮಾಡಿದ್ದೇನೆ. ಆದರೆ ಪಿಜ್ಜಾ ಬೇಸ್ ರುಚಿ ಆಗಲಿಲ್ಲ. ತುಂಬಾ ಗಟ್ಟಿಯಾಗಿ ಇರದ ಕಾರಣ ಒಂದೊಂದು ಬಾರಿ ತಿನ್ನುವಾಗ ಮಧ್ಯದಲ್ಲೇ ತುಂಡಾಗುತ್ತಿತ್ತು.
ಮನೆಯಲ್ಲಿ ನಾವು ಜಾಸ್ತಿ ಮೈದಾ ಉಪಯೋಗಿಸುವುದಿಲ್ಲ. ಹೀಗಾಗಿ ನಮಗೆ ಬಾಳೆಕಾಯಿ ಹುಡಿ ನಿಜಕ್ಕೂ ಒಂದು ಉಡುಗೊರೆಯಾಗಿದೆ. ಹೊರಗಡೆ 300 ರೂ. ತೆತ್ತು ತಿನ್ನುವಂತಹ ಇದೇ ಖಾದ್ಯ ಮನೆಯಲ್ಲಿ 60 ರಿಂದ 70 ರೂಪಾಯಿಗೆ ಸಿದ್ಧವಾಗಿದೆ. ಪಿಜ್ಜಾ ಬೇಸ್ ರುಚಿ ಮತ್ತು ಗಟ್ಟಿಯಾಗಿಯೂ ಇತ್ತು. ಇದನ್ನು ತಿಂದ ಅಪ್ಪ-ಅಮ್ಮ ತಮ್ಮನೂ ಖುಷಿಯಾಗಿದ್ದಾರೆ.
ಬೇಕಾಗುವ ಸಾಮಗ್ರಿಗಳು: ಬಾಳೆಕಾಯಿ ಹುಡಿ 200 g, ಮೈದಾ ಹಿಟ್ಟು 100 g, ಎಣ್ಣೆ 50 ml, ಚೀಸ್ 4 ತುಂಡು, ಈರುಳ್ಳಿ ದೊಡ್ಡದು 1, ಟೊಮೆಟೊ 1, ಕ್ಯಾಪ್ಸಿಕಮ್ 1, ಸಿಹಿ ಜೋಳ 1, ಚಿಲ್ಲಿ ಫ್ಲೆಕ್ಸ್ 2 (2 ಒಣ ಮೆಣಸನ್ನು ಗರಿಗರಿಯಾಗಿ ಕಾಯಿಸಿ ಪುಡಿ ಮಾಡಿಟ್ಟುಕೊಳ್ಳಿ), ಪಿಜ್ಜಾ ಸಾಸ್ 50 ml (ಟೊಮೆಟೊ ಹಣ್ಣಿನ ಸಾಸ್ ಮಾಡಿ, ಅದಕ್ಕೆ ಸ್ವಲ್ಪ ಮೆಣಸಿನ ಹುಡಿ ಮತ್ತು ಗರಂ ಮಸಾಲ ಹಾಕಿ ಕುದಿಸಿ ಗಟ್ಟಿ ಮಾಡಿ ಇಟ್ಟುಕೊಳ್ಳಿ), ಉಪ್ಪು ಮತ್ತೆ ಸಕ್ಕರೆ ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೊದಲಿಗೆ ಬಾಳೆ ಕಾಯಿ ಹುಡಿ (ಬಾಕಾಹು ) ಮತ್ತು ಮೈದಾವನ್ನು ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಹಾಕಿ. ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಅದನ್ನು ಚಪಾತಿಯ ಹಿಟ್ಟಿನ ಹದಕ್ಕೆ ಕಲಸಿ ಇಟ್ಟುಕೊಳ್ಳಿ. ನಂತರ ಅದಕ್ಕೆ ಎಣ್ಣೆ ಸವರಿ 3 - 4 ಗಂಟೆ ಇಡಿ.
ಈರುಳ್ಳಿ ಕ್ಯಾಪ್ಸಿಕಂ ಟೊಮೆಟೊ ಮತ್ತು ಸಿಹಿ ಜೋಳವನ್ನು ನಮಗೆ ಬೇಕಾದ ರೀತಿಯಲ್ಲಿ ಕತ್ತರಿಸಿಕೊಳ್ಳಬಹುದು.
ನಾಲ್ಕು ಗಂಟೆಗಳ ನಂತರ ಉಂಡೆ ಕಟ್ಟಿರುವ ಹಿಟ್ಟನ್ನು ದಪ್ಪವಾಗಿ ಲಟ್ಟಿಸಿ. ಹೀಗೆ ಲಟ್ಟಿಸಿದಾಗ ನಮ್ಮ ಪಿಜ್ಜಾ ಬೇಸ್ ತಯಾರಾಗುತ್ತದೆ. ಅದನ್ನು ಕಾವಲಿಯಲ್ಲಿ ಒಂದು ಭಾಗ ಮಾತ್ರ ಚೆನ್ನಾಗಿ ಬೇಯಿಸಿಕೊಳ್ಳಿ. ಗ್ಯಾಸ್ ಆಫ್ ಮಾಡಿ.
ನಂತರ ಅದನ್ನು ಮಗುಚಿ ಹಾಕಿ ಅದರ ಮೇಲೆ ಫೋರ್ಕ್ ಅಥವಾ ಚೂಪಾದ ವಸ್ತುವಿನಿಂದ ಚುಚ್ಚಿ. ಹೀಗೆ ಮಾಡುವುದರಿಂದ ಹಾಕುವಂತಹ ಪಿಜ್ಜಾ ಸಾಸ್ ಪಿಜ್ಜಾ ಬೇಸ್ ಗೆ ತಲುಪುತ್ತದೆ.
ನಂತರ ಬೇಯದ ಭಾಗವನ್ನು ಕೆಳಗೆ ಹಾಕಿ ಬೆಂದ ಭಾಗದ ಮೇಲೆ ಪಿಜ್ಜಾ ಸಾಸ್ ಅನ್ನು ಸವರಿ. ಅದರ ಮೇಲೆ ಕತ್ತರಿಸಿದ ಹಸಿ ತರಕಾರಿಯನ್ನು ಅಲಂಕರಿಸಿ. ತರಕಾರಿಯ ಮೇಲೆ ಚಿಲ್ಲಿ ಫ್ಲೇಕ್ಸ್ ಅನ್ನು ಹರಡಿ. ಅದರ ಮೇಲೆ ಚೀಸನ್ನು ಇಡಿ. ನಂತರ ಗ್ಯಾಸ್ ಆನ್ ಮಾಡಿ ಮೂರರಿಂದ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
ಓವನ್ ಇಲ್ಲದೆ ಮಾಡುವುದರಿಂದ ಚೀಸ್ ಕರಗಿರುವುದಿಲ್ಲ. ಹಾಗೆಯೇ ಮೇಲೆ ಇರುವ ತರಕಾರಿಗಳು ಅರೆಬೆಂದಿರುತ್ತವೆ. ಆದ್ದರಿಂದ ಕಾವಲಿ ಸಮೇತವಾಗಿ ಕಟ್ಟಿಗೆ ಒಲೆಯ ಬಳಿ ತೆಗೆದುಕೊಂಡು ಹೋಗಿ ಗಟ್ಟಿಯಾದ ಮುಚ್ಚಳದಿಂದ ಕಾವಲಿಯನ್ನು ಮುಚ್ಚಿ. ಮುಚ್ಚಳದ ಮೇಲೆ ಕೆಂಡವನ್ನು ಮೂರರಿಂದ ಐದು ನಿಮಿಷಗಳ ಕಾಲ ಇಡಿ.
ಐದು ನಿಮಿಷದ ನಂತರ ಜೋಪಾನವಾಗಿ ಕೆಂಡವನ್ನೆಲ್ಲ ಸರಿಸಿ ಮುಚ್ಚಳ ತೆಗೆಯಿರಿ. ಮನಮೋಹಕವಾದ ಬಾಕಾಹು ಪಿಜ್ಜಾ ನಿಮ್ಮ ಮುಂದೆ ಇರುತ್ತದೆ.
(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key Words: Banana Flour, Banana Powder, Bakahu, Pizza, Recipe, Pizza Recipe, ಬಾಕಾಹು, ಬಾಳೆಕಾಯಿ ಹುಡಿ, ಸವಿರುಚಿ, ಪಿಜ್ಜಾ ರೆಸಿಪಿ, ಬಾಕಾಹು ಪಿಜ್ಜಾ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ