(ಜಗತ್ತು ಹಿಮ್ಮುಖ ಚಲನೆಗೆ ತೊಡಗಿದೆಯೇ? ಸರಣಿಯ ಮೂರನೇ ಭಾಗ)
ಈ ವರೆಗೆ ಸಂಪರ್ಕ ಸಾಧನಗಳು ಅಂದು ಇಂದು ಹೇಗಿತ್ತು ಎಂಬುದನ್ನು ತಿಳಿಸಲು ಒಂದು ಪ್ರಯತ್ನ ಮಾಡಿದೆ. ಎಷ್ಟರ ಮಟ್ಟಿಗೆ ಅದನ್ನು ನಿಮಗೆ ಮನನ ಮಾಡಿಸಲು ಸಾಧ್ಯವಾಯಿತೋ ತಿಳಿಯದು. ಈಗ ವಿದ್ಯುತ್ ಶಕ್ತಿ ಅಂದು ಇಂದು ಹೇಗಿತ್ತು ಎಂಬ ಬಗ್ಗೆ ನೋಡೋಣ.
ನಾವು ಚಿಕ್ಕವರಿರುವಾಗ ಕರೆಂಟು ಬಲ್ಬೇ ಕಂಡಿರಲಿಲ್ಲ. ಸ್ವಲ್ಪ ದೊಡ್ಡವರಾದ ಮೇಲೆ ಅಪ್ಪನೊಂದಿಗೆ ಪೇಟೆಗೆ ಹೋದರೆ ಒಂದು ಫ್ಯಾನ್ ಅಥವಾ ಲೈಟ್ ಉರಿಯೋದು ಕಂಡರೆ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದೆವು. ಹೈಸ್ಕೂಲ್ ಕಲಿಯುವಾಗ ಮೈಸೂರಿಗೆ ಪ್ರವಾಸ ಹೋಗಿ ಚಾಮುಂಡಿ ಬೆಟ್ಟದ ಮೇಲಿಂದ ಸಂಪೂರ್ಣ ಮೈಸೂರನ್ನು ನೋಡಿ ಬೆರಗಾಗಿದ್ದೆವು. ಸಂಪೂರ್ಣ ನಕ್ಷತ್ರ ಪುಂಜವೇ ಭೂಮಿಗೆ ಬಂದಿದೆ ಏನೋ ಅನ್ನಿಸಿತ್ತು ಆಗ. ನಕ್ಷತ್ರ ಪುಂಜಗಳಂತೆ ಕಾಣುತ್ತಿದ್ದ ಆ ವಿದ್ಯುತ್ ಲೈಟುಗಳ ಅದ್ಭುತ ಲೋಕದಲ್ಲಿ ನಾವು ಕಳೆದೇ ಹೋಗಿದ್ದೆವು. ದೈವದಾಟವೋ ಗೊತ್ತಿಲ್ಲ ಮುಂದೆ ಹೊಟ್ಟೆಪಾಡಿಗೆ ಈ ವಿದ್ಯುತ್ತಿನ ಕೆಲಸವನ್ನೇ ಆಯ್ಕೆ ಮಾಡಬೇಕಾಯಿತು. ಈಗ ನಾವು ನಮ್ಮ ಊರು ಅಂದು ಹೇಗಿತ್ತು ಎಂದು ನೋಡೋಣ.
ಐವತ್ತರ ಹಾಗೂ ಅರುವತ್ತರ ದಶಕಗಳಷ್ಟೇ ನನಗೆ ಗೊತ್ತು. ಅದರಿಂದ ಹಿಂದೆ ಗೊತ್ತಿಲ್ಲ. ನನಗೆ ಗೊತ್ತಿದ್ದ ಕಾಲ ಸೀಮೆ ಎಣ್ಣೆಯ ಬುಡ್ಡಿ ದೀಪ, ಉಸ್ಕೋ ಲೇಂಪ್ ಎಂಬ ದೊಡ್ಡ ಬತ್ತೀ ದೀಪಗಳು,ಸಣ್ಣ ಬುರುಡೇ ಲೇಂಪ್ ಗಳೇ ನಮಗೆ ಬೆಳಕು ನೀಡುತ್ತಿದ್ಧುದು. ಇದಲ್ಲದೆ ಆಚೀಚೆ ನಡೆದಾಡಲು ಲಾಟೀನು (ಲಾಟನ್ ಎಂದೂ ಅನ್ನುತ್ತಿದ್ದರು) ಉಪಯೋಗಿಸುತ್ತಿದ್ದೆವು. ಕೆಲವು ಮನೆಗಳಲ್ಲಿ ಹರಳೆಣ್ಣೆ ದೀಪ ಎಳ್ಳೆಣ್ಣೆ ದೀಪ ಉರಿಯುತ್ತಿದ್ಧುದೂ ಇತ್ತು. ದಾರಿ ನಡೆಯಲು ಹೆಚ್ಚಿನವರು ಮಡಲಿನ ಸೂಟೆ ಮಾಡಿ (ಒಣಗಿದ ಮಡಲಿನ ಒಂದೊಂದು ಕೈಯನ್ನು ಬೇರೆ ಬೇರೆ ಮಾಡಿ ಒಂದು ಕೈಯಲ್ಲಿ ಹಿಡಿಯುವಷ್ಟು ದೊಡ್ಡ ಕಟ್ಟು ಮಾಡಿ ಅದಕ್ಕೆ ಅಲ್ಲಲ್ಲಿ ಬಾಳೆ ಹಗ್ಗ ಅಥವಾ ಹಸಿ ಮಡಲಿನಿಂದ ಕಟ್ಟು ಹಾಕಿ ಮಾಡುವ ವಸ್ತುವೇ ಸೂಟೆ. ಈಗಲೂ ಗುಳಿಗನ ಕೋಲ ನೋಡಿದವರಿಗೆ ಸೂಟೆ ಕಂಡು ಗೊತ್ತಿರಬಹುದು) ಹೊತ್ತಿಸಿ ಅದನ್ನು ಬೀಸುತ್ತಾ ಹೋಗುತ್ತಿದ್ದರು. ಇದು ಕಾಡು ಪ್ರಾಣಿಗಳಿಂದ ರಕ್ಷಣೆಯೂ ಕೊಡುತ್ತಿತ್ತು. ನಾನು ಕೂಡ ಈ ಸೂಟೆ ಹಿಡಿದು ನಡೆದುದು ಇದೆ. ಎವರೆಡಿಯವರ ಟೋರ್ಚ್ ಲೈಟ್ ಒಬ್ಬೊಬ್ಬರ ಮನೆಯಲ್ಲಿ ಇರುತ್ತಿತ್ತು. ಕ್ರಮೇಣ ಇದು ಎಲ್ಲಾ ಮನೆಯಲ್ಲೂ ಅವಶ್ಯ ವಸ್ತುಗಳ ಪಟ್ಟಿಗೆ ಸೇರಿತು. ಮುಂದೆ ಕೇಂದ್ರ ಸರ್ಕಾರದ ರೂರಲ್ ಎಲೆಕ್ಟ್ರಿಫಿಕೇಶನ್ ಎಂಬ ಕಾರ್ಯಕ್ರಮದಡಿ ಹಳ್ಳಿ ಹಳ್ಳಿಗಳಿಗೆ ವಿದ್ಯುತ್ ಬಂತು. ಬಂದರೂ ವೋಲ್ಟೇಜ್ ಸಮಸ್ಯೆಯಿಂದಲಾಗಿ ಹಾಗೂ ದಿನ ನಿತ್ಯ ಕೈ ಕೊಡುತ್ತಿದ್ದ ಕರೆಂಟಿನಿಂದಾಗಿ ಅದರ ಪ್ರಯೋಜನ ಸಂಪೂರ್ಣ ಸಿಗುತ್ತಿರಲಿಲ್ಲ. ಕಾಲ ಹೋದಂತೆ ಸಮಸ್ಯೆಗಳು ಕಡಿಮೆಯಾಗಿ ಇತ್ತೀಚೆಗಂತೂ ಸಮಸ್ಯೆಗಳು ಅತಿಕಡಿಮೆಯಾಗಿದೆ. ವಿಧ್ಯುತ್ ಸರಾಗವಾಗಿ ಸಿಗಲು ತೊಡಗುವುದರೊಂದಿಗೆ ಜನರು ಕರೆಂಟನ್ನು ಹೊಂದುವುದೂ ಅತಿಯಾಗುತ್ತಾ ಹೋಗಿದೆ.
ಗ್ರೈಂಡರ್, ನೀರಿನ ಪಂಪುಗಳು, ಫೇನ್, ಮಿಕ್ಸಿ, ಫ್ರಿಜ್ ಎಲ್ಲಾ ಅವಶ್ಯಗಳ ಪಟ್ಟಿಯಲ್ಲೇ ಸೇರಿ ಹೋಗಿ ಅವುಗಳಿಲ್ಲದೆ ಜೀವನ ಇಲ್ಲ ಎಂಬ ಸ್ಥಿತಿಗೆ ತಲಪಿದ್ದೇವೆ. ಅವುಗಳ ಚಾಲನಾ ಶಕ್ತಿಯಾದ ವಿದ್ಯುತ್ ಇಲ್ಲದಿದ್ದರಂತೂ ಆಕಾಶವೇ ತಲೆಯ ಮೇಲೆ ಬಿದ್ದವರಂತೆ ನಡೆದುಕೊಳ್ಳುವವರೇ ಎಲ್ಲಾ.
ಮೇ ತಿಂಗಳ ಏಳನೇ ತಾರೀಕು ನನಗೆ ಕೊರೋನಾ ಬಂದು ಹತ್ತು ದಿವಸಗಳಾಗಿತ್ತು. ನಮ್ಮಲ್ಲಿ ಸಂಜೆ ಏಳು ಗಂಟೆಗೆ ಭೀಕರ ಸಿಡಿಲು ಮಳೆ ಸುರುವಾಯಿತು. ಹೆಚ್ಚು ಕಡಮೆ ಒಂದು ಗಂಟೆ ಇದರ ಆರ್ಭಟ ನಡೆದೇ ಇತ್ತು. ಮಂಚದಿಂದ ಕಾಲು ಕೆಳಗೆ ಇಡಲೂ ಸಾಧ್ಯವಿಲ್ಲದಂತೆ ಮಿಂಚಿನ ಬೆಳಕು ನೆಲದಲ್ಲಿ ಹರಿದಾಡುತ್ತಿದೆ ಎಂದು ಅನ್ನಿಸುತ್ತಿತ್ತು. ಕರೆಂಟು ಏಳು ಗಂಟೆಗೇ ಹೋಗಿತ್ತು. ಮಿಂಚಿನ ಆರ್ಭಟ ಕಡಮೆಯಾಗುವಲ್ಲಿ ವರೆಗೂ ಸ್ವಿಚ್ ಓನ್ ಇದ್ದ ಎಲ್ಲಾ ಲೈಟುಗಳು ಫೇನ್ ಗಳು ಇನ್ವರ್ಟರ್ ನ ಸಹಾಯದಿಂದ ತಿರುಗುತ್ತಾನೇ ಇತ್ತು. ಅವುಗಳನ್ನೆಲ್ಲಾ ಓಪ್ ಮಾಡಿ ನಿದ್ರೆ ಮಾಡುವಾಗ ಹೆಚ್ಚು ಕಡಮೆ ಎರಡು ಗಂಟೆಗಳಷ್ಟು ಕಾಲ ಮನೆಯ ಹೆಚ್ಚಿನ ಉಪಕರಣಗಳೂ ಚಾಲೂ ಸ್ಥಿತಿಯಲ್ಲೇ ಇದ್ದುವು.
ರಾತ್ರಿ ಮೂರು ಗಂಟೆ ಫ್ಯಾನ್ ತಿರುಗೋದು ನಿಂತು ಎಚ್ಚರ ವಾಯ್ತು. ನೋಡಿದರೆ ಇನ್ವರ್ಟರ್ ಬ್ಯಾಟರಿ ಖಾಲಿಯಾಗಿದೆ. ಲೈಟು ಇಲ್ಲ. ಸೊಳ್ಳೆಗಳು ಅವುಗಳ ಕೆಲಸ ಮಾಡ್ತಾನೇ ಇದ್ಧುವು. ನಾನು ಕ್ವಾರೆಂಟೈನ್ ನಲ್ಲಿ ಇದ್ದವ ಹೊರಗೆ ಹೋಗುವಂತಿಲ್ಲ. ಮೊಬೈಲ್ ಚಾರ್ಜ್ ಇಲ್ಲ ಎನ್ನುತ್ತಿತ್ತು. ಪುಣ್ಯಕ್ಕೆ ಟಾರ್ಚ್ ಲೈಟ್ ಇತ್ತು. ಹೇಗೋ ಬೆಳಗಿನ ವರೆಗೆ ಸುಧಾರಿಸಿದೆವು. ಮರುದಿನ ಸಂಜೆ ಏಳೂವರೆ ಆಗಿತ್ತು ಕರೆಂಟು ಬರುವಾಗ.
ಸ್ನೇಹಿತರೇ ಯೋಚಿಸಿ ಇದೇ ಸ್ಥಿತಿ (ಕರೆಂಟು ಇಲ್ಲದೆ ಕಳೆಯುವ ಸ್ಥಿತಿ) ಸದಾ ಆದರೆ ಏನಾಗಬಹುದು? ಈಗ ಇರುವ ಸ್ಥಿತಿಯಿಂದ ನಾವು ಎಷ್ಟು ಹಿಂದೆ ಹೋಗ ಬಹುದು? ಊಹಿಸಲೂ ಅಸಾಧ್ಯವಲ್ಲವೇ?. ಅಂತಹ ಸಂದರ್ಭ ಬರಲಾರದೆಂದೇ ಹೇಳಲು ಸಾಧ್ಯವೇ? ಕೊರೋನಾ ಎಂಬ ಹೆಮ್ಮಾರಿ ಭೂಲೋಕದ ನಾಲ್ಕೈದು ವರ್ಷಗಳನ್ನು ಕಸಿದು ಕೊಂಡರೆ ಆರ್ಥಿಕ ಸ್ಥಿತಿ ಎಲ್ಲವನ್ನೂ ಸಾಮಾನ್ಯ ಜನರ ಕೈಗೆ ಎಟುಕದ ವಸ್ತುವಾಗಿಸಬಹುದಲ್ಲಾ?
ಮುಂದಿನ ಸಂಚಿಕೆಯಲ್ಲಿ ಇದರ ಪ್ರಭಾವ ಸಾಮಾನ್ಯ ಜೀವನದ ಯಾವೆಲ್ಲಾ ರಂಗಗಳ ಮೇಲೆ ಬೀಳ ಬಹುದು? ಹೀಗೆ ನಡೆಯಲು ಸಾಧ್ಯವೇ? ಒಂದೊಮ್ಮೆ ಆಗಿಯೇ ಹೋದರೆ ಹೇಗಿರ ಬಹುದು ಈ ಲೋಕ? ಎಂಬ ಬಗ್ಗೆ ಯೋಚಿಸೋಣ?
- ಎಡನಾಡು ಕೃಷ್ಣ ಮೋಹನ ಭಟ್ಟ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ