ಕಲೆ-ಸಂಸ್ಕೃತಿ: ಚೆಂಡೆ ವಾದಕಿ ದಿವ್ಯಶ್ರೀ ನಾಯಕ್ ಸುಳ್ಯ

Upayuktha
0

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಮರ್ಕಂಜ ಗ್ರಾಮದ ಶ್ರೀಮತಿ ಪ್ರೇಮಾ ಹಾಗೂ ನಾರಾಯಣ ನಾಯಕ್ ಇವರ ಮಗಳಾಗಿ ದಿನಾಂಕ 18.06.1993ರಂದು ಇವರ ಜನನ. ಮಾನವ ಸಂಪನ್ಮೂಲ ಅಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಪದವಿ.


ತಂದೆ ಮೂಲತಃ ಯಕ್ಷಗಾನ ಹಿಮ್ಮೇಳವಾದಕರು. ಅವರು ಮನೆಯಲ್ಲಿ ಬೇರೆ ಮಕ್ಕಳಿಗೆ ಚಂಡೆ ತರಗತಿಯನ್ನು ಮಾಡುತ್ತಿರುವುದನ್ನು ನಾನೂ ಗಮನಿಸುತ್ತಿದ್ದೆ. ತಂದೆ ಮಾಡಿದ ಪಾಠವನ್ನು ನೋಡಿ, ಕೇಳಿ ನಾನು ಒಪ್ಪಿಸುತ್ತಿದ್ದೆ. ಆಮೇಲೆ ತಂದೆ ನನಗೂ ಕಲಿಸಲು ಶುರು ಮಾಡಿದರು ಎಂದು ಇವರು ಹೇಳುತ್ತಾರೆ. ಚೆಂಡೆ ಕಲಿಯಲು ಮೊದಲ ಗುರು ಇವರ ತಂದೆ ಹಾಗೂ ಆಮೇಲಿನ ಹೆಚ್ಚಿನ ಅಭ್ಯಾಸ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಲ್ಲಿ ಕಲಿತು ಉತ್ತಮ ಚೆಂಡೆ ವಾದಕಿ ಆಗಿ ಬೆಳೆದು ನಿಂತಿದ್ದಾರೆ.


ಯಕ್ಷಗಾನ ರಂಗದಲ್ಲಿ ಒಟ್ಟು 19 ವರ್ಷಗಳಿಂದ ಸೇವೆಯನ್ನು ಮಾಡುತ್ತಿರುವ ಇವರು ಅನೇಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ದುಬೈ, ಅಬುಧಾಬಿ, ಬಹರೈನ್ ದೇಶದಲ್ಲಿ ಇವರು ಪ್ರದರ್ಶನವನ್ನು ನೀಡಿದ್ದಾರೆ.


ಪದ್ಯಾಣ ಶಂಕರ ನಾರಾಯಣ ಭಟ್, ಕೃಷ್ಣ ಪ್ರಕಾಶ್ ಉಳಿತ್ತಾಯರು ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.ಬಲಿಪ ಭಾಗವತರು, ಪುತ್ತಿಗೆ ಹೊಳ್ಳರು, ಮಹಿಳೆಯರಲ್ಲಿ ಭವ್ಯಶ್ರೀ ಕುಲ್ಕುಂದ ಇವರ ನೆಚ್ಚಿನ ಭಾಗವತರು. ಯಕ್ಷಗಾನದಲ್ಲಿ ಇರುವ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಅದರಲ್ಲೂ ದೇವಿ ಮಹಾತ್ಮೆ ತುಂಬಾ ನೆಚ್ಚಿನ ಪ್ರಸಂಗ.


ಯಕ್ಷಗಾನದಲ್ಲಿ ವೇಷ, ನಾಟ್ಯ, ಭಾಗವತಿಕೆ ಸ್ವಲ್ಪ ಕಲಿತಿದ್ದೇನೆ. ಆದರೆ ಆಸಕ್ತಿ ಬಹಳ ಕಡಿಮೆ ಎಂದು ದಿವ್ಯಶ್ರೀ ಅವರು ಹೇಳುತ್ತಾರೆ. ಕರ್ನಾಟಕ ಶಾಸ್ತ್ರೀಯ ಮೃದಂಗ ಜೂನಿಯರ್ ಹಂತ ಮುಗಿಸಿದ್ದಾರೆ. ಪುಸ್ತಕ ಓದುವುದು, ಕವನ ಬರೆಯುವುದು ಇವರ ನೆಚ್ಚಿನ ಹವ್ಯಾಸಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ಯಕ್ಷಗಾನ ಕೇವಲ ದಕ್ಷಿಣ ಕನ್ನಡ, ಉಡುಪಿ ಭಾಗಕ್ಕೆ ಮೀಸಲಾಗಿಲ್ಲ. ಇವಾಗ ಎಲ್ಲಾ ವರ್ಗದ ಜನ ಇಷ್ಟ ಪಡುತ್ತಿದ್ದಾರೆ, ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಯಕ್ಷಗಾನ ಲೋಕ ವಿಖ್ಯಾತಿ ಪಡೆಯುತ್ತಿದೆ, ಅದು ಸಂತಸವೇ ಸರಿ.


ಆದರೆ ಯಕ್ಷಗಾನ ಕ್ಷೇತ್ರದ ಒಂದು ವಿಪರ್ಯಾಸ ಅಂತಾನೆ ಹೇಳಬಹುದೇನೋ ಯಕ್ಷಗಾನ ಕಲೆಗೆ ಜಾತಿ ಎಂಬ ಒಂದು ಪಿಡುಗು ಬಂದು ಬಿಟ್ಟಿದೆ. ಇತ್ತೀಚೆಗೆ ಜಾತಿ ಆಧಾರದ ಮೇಲೆ ಪ್ರೋತ್ಸಾಹ, ಜಾತಿ ಆಧಾರದ ಮೇಲೆ ಅವಕಾಶ ಹೀಗೆ. ಇದೊಂದು ಶಾಪವೇ ಸರಿ ಈ ರಂಗಕ್ಕೆ. ನಾನು ಜಾತಿ ಮಾತುಗಳಿಂದ ತುಂಬಾ ದೂರ. ಹಾಗಾಗಿ ಈ ಜಾತಿ ಆಧಾರದ ಮೇಲೆ ಅವಕಾಶ, ಪ್ರೋತ್ಸಾಹ ಇವೆಲ್ಲವನ್ನು ನಾನು ತುಂಬಾ ವಿರೋಧಿಸುತ್ತೇನೆ. ಅವಕಾಶ ಇಲ್ಲದಿದ್ದರೂ ಸರಿ ನಾನು ಅಂತಹ ಕೀಳು ಮಟ್ಟಕ್ಕಿಳಿದು ಅವಕಾಶ ಗಿಟ್ಟಿಸಿಕೊಳ್ಳಲಾರೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಇವತ್ತಿನ ಪ್ರೇಕ್ಷಕರು ಹಳೆಯ ಪರಂಪರೆ ಇಷ್ಟ ಪಡುವುದು ಕಡಿಮೆ, ಅವರಿಗೇನಿದ್ದರೂ ಹೊಸತನ ಬೇಕು. ಅದಕ್ಕೆ ಸರಿಯಾಗಿ ಕಲಾವಿದರು ಕೂಡ ಏನೇನೋ ಹೊಸತನ ಮಾಡಲು ಹೋಗಿ ಯಕ್ಷಗಾನದ ಚಂದವನ್ನು ಹಾಳು ಮಾಡುತ್ತಾ ಬಂದಿದ್ದಾರೆ. ಆದರೆ ಅದೇ ಚಂದವನ್ನು ಇಷ್ಟ ಪಡುವ ಪ್ರೇಕ್ಷಕರ ಬಗ್ಗೆ ವಿಚಿತ್ರ ಅನಿಸುತ್ತದೆ. ಹಾಗಂತ ಪರಂಪರೆ ಪ್ರಖರವಾದ ಯಕ್ಷಗಾನವನ್ನು ಕೂಡ ಮನಸಾರೆ ಅನುಭವಿಸುವವರು ಇಲ್ಲದೇನಿಲ್ಲ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಕೇಳಿದಾಗ ಹೀಗೆ ಹೇಳುತ್ತಾರೆ:-

ನಾನು ಒಬ್ಬ ಕಲಾವಿದೆಯಾಗಿ ನನಗೇನು ತಿಳಿದಿದೆಯೊ ಅದನ್ನು ಬೇರೆಯವರಿಗೂ ಕಲಿಸುವ ಆಸೆ ತುಂಬಾ ಇದೆ. ನಾನು ನನ್ನದೇ ಆದ "ಕೈವಲ್ಯ ಕಲಾ ಕೇಂದ್ರ" ಎಂಬ ಒಂದು ಆರ್ಟ್ ಶಾಲೆ ಒಂದನ್ನು ನಾನು ಮತ್ತು ನನ್ನ ಸ್ನೇಹಿತರಾದ ಸ್ವತಃ ಕಲಾವಿದರದ ಶರತ್ ಬೋಪಣ್ಣ ಅವರ ಜೊತೆ ಸೇರಿ ಆರಂಭಿಸಿ ನಡೆಸುತ್ತಿದ್ದೇವೆ. ಇದನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಆಸೆ ಇದೆ. ಅಷ್ಟು ಮಾತ್ರವಲ್ಲ ಎಲ್ಲಾ ಕಲೆಗಳು ಉಳಿಯಬೇಕು, ಬೆಳೆಯಬೇಕು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡಬೇಕು ಎಂಬ ಆಸೆ ಇದೆ.


'ಯಕ್ಷಗಾನ ರಂಗದ ಪ್ರಥಮ ಮಹಿಳಾ ಚೆಂಡೆ ವಾದಕಿ' ಎಂಬ ಬಿರುದಿನೊಂದಿಗೆ ಈ ಕರಾವಳಿ ಪ್ರತಿಭೆಗೆ ಕರ್ನಾಟಕ ಪ್ರತಿಭಾ ರತ್ನ ಪುರಸ್ಕಾರ (2012), ಕಲಾಶ್ರೀ ಪ್ರಶಸ್ತಿ (2016) ಲಭಿಸಿದೆ. ಚೆಂಡೆ ಹೆಗಲಿಗೇರಿಸಿಕೊಂಡ ಧೀರೆ. ಇವರು ಇತರ ಕಲಾವಿದರಿಗೂ ಸ್ಪೂರ್ತಿಯಾಗಿ ನಿಲ್ಲುತ್ತಾರೆ.


ಯಕ್ಷಗಾನ ರಂಗದಲ್ಲಿ ನನಗೆ ಸಂಪೂರ್ಣ ಸಹಕಾರ ನೀಡಿದ ನನ್ನ ಅಕ್ಕ ರೂಪಶ್ರೀ, ವಿದ್ಯಾಭ್ಯಾಸ ಮಾಡುವಾಗ ನನಗೆ ಪ್ರೋತ್ಸಾಹ ನೀಡಿದ ಶಿಕ್ಷಕರು ಹಾಗೂ ಸಂಸ್ಕೃತಿ ಕ್ಷೇತ್ರದಿಂದ ನನಗೆ ಉಚಿತ ಶಿಕ್ಷಣ ಕೊಟ್ಟ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಹಾಗೂ ಪ್ರೋತ್ಸಾಹ ನೀಡಿದ ಪ್ರತೀ ಒಬ್ಬರಿಗೂ ಧನ್ಯವಾದಗಳು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


#Photo_Click:-Shree Ranga Rao & Suhas Karaba


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top