ಪೆರಿಕೊರೋನೈಟಿಸ್ ಎಂಬುದು ದಂತ ಸಂಬಂಧಿ ರೋಗವಾಗಿದ್ದು ಮೂರನೇ ದವಡೆ ಹಲ್ಲು ಬರುವ ಸಂದರ್ಭದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹಲ್ಲು ಬಾಯಿಯಲ್ಲಿ ಮೂಡುವಾಗ ಅದರ ಮೇಲ್ಬಾಗದ ಚರ್ಮವನ್ನು ಅಥವಾ ವಸಡಿನ ಭಾಗವನ್ನು ಸೀಳಿಕೊಂಡು ಹೊರಬರುತ್ತದೆ. ಆದರೆ ಕೆಲವೊಮ್ಮೆ ಈ ವಸಡಿನ ಭಾಗ ಬಹಳ ದಪ್ಪವಾಗಿದ್ದು ಪೂರ್ತಿಯಾಗಿ ತೆರೆದುಕೊಳ್ಳುವುದಿಲ್ಲ. ಹೀಗಾದಾಗ ಹಲ್ಲು ಹೊರ ಬರಲು ಸಾಧ್ಯವಾಗುವುದಿಲ್ಲ. ಹೊರ ಬರಲು ಪ್ರಯತ್ನಿಸುವ ಹಲ್ಲಿನ ಮೇಲ್ಭಾಗದ ಈ ಮಾಂಸದ ಭಾಗವನ್ನು ಪೆರಿಕೊರೋನಲ್ ಪ್ಲಾಪ್ ಅಥವಾ ಓಪರ್ ಕುಲಮ್ ಎಂದು ಆಂಗ್ಲ ಭಾಷೆಯಲ್ಲಿ ಹೇಳುತ್ತಾರೆ.
ಹಲ್ಲು ಮತ್ತು ಹಲ್ಲಿನ ಮೇಲ್ಬಾಗದಲ್ಲಿರುವ ಮಾಂಸದ ನಡುವೆ ತಿಂದ ಆಹಾರಗಳು ಸಿಕ್ಕಿಹಾಕಿಕೊಂಡು, ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ ಮತ್ತು ಮೇಲ್ಬಾಗದ ಮಾಂಸದ ಅಥವಾ ಪೊರೆಯ ಉರಿಯೂತಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಮೂರನೇ ದವಡೆ ಹಲ್ಲು ಹುಟ್ಟುವ ಸಮಯದಲ್ಲಿ ಈ ನೋವು ಕಾಣಿಸುತ್ತದೆ. 17 ರಿಂದ 21 ರ ವಯಸ್ಸಿನ ನಡುವೆ ಮೂರನೇ ದವಡೆ ಹಲ್ಲುಗಳು ಹುಟ್ಟುತ್ತದೆ. ಕೆಳಗಿನ ದವಡೆಯ ಮೂರನೇ ದವಡೆ ಹಲ್ಲಿನಲ್ಲಿ ಈ ತೊಂದರೆ ಜಾಸ್ತಿ ಕಂಡುಬರುತ್ತದೆ. ಮೇಲ್ಬಾಗದ ದವಡೆಯ ಮೂರನೇ ದವಡೆ ಹಲ್ಲು ಹುಟ್ಟುವಾಗ ಈ ರೀತಿ ತೊಂದರೆಗಳು ಆಗುವುದು ಬಹಳ ಕಡಿಮೆ. ಯುವ ಜನರಲ್ಲಿ ಟೀನೇಜ್ ದಾಟುವ ಸಂದರ್ಭದಲ್ಲಿ ಈ ತೊಂದರೆ ಬಹಳ ಹೆಚ್ಚಾಗಿ ಕಂಡು ಬರುತ್ತದೆ.
ಲಕ್ಷಣಗಳು ಏನು?
1) ವಿಪರೀತವಾದ, ಸಹಿಸಲು ಅಸಾಧ್ಯವಾದ ನೋವು ಇರುತ್ತದೆ.
2) ಬಾಯಿಯಲ್ಲಿ ಅಸಹ್ಯಕರ ವಾಸನೆ ಬರುತ್ತದೆ. ಹೊರಬರಲು ಪರದಾಡುತ್ತಿರುವ ಹಲ್ಲು ಮತ್ತು ಮೇಲ್ಬಾಗದ ಅಂಗಾಂಶಗಳ ನಡುವೆ ನೀವು ತಿಂದ ಆಹಾರ ಸಿಕ್ಕಿಹಾಕಿಕೊಂಡು ಅದರಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡು ವಿಪರೀತ ಬಾಯಿ ವಾಸನೆಗೆ ಕಾರಣವಾಗುತ್ತದೆ.
3) ಬಾಯಿ ತೆರೆಯಲು ಕಷ್ಟವಾಗುತ್ತದೆ. ಸಾಮಾನ್ಯವಾಗಿ 4 ರಿಂದ 5 ಸೆಂಟಿಮೀಟರ್ ಬಾಯಿ ತೆರೆಯಲು ಸಾಮಾನ್ಯ ಮನುಷ್ಯರಿಗೆ ಸಾಧ್ಯವಿದೆ. ಆದರೆ ಈ ಪೆರಿಕೊರೊನೈಟಿಸ್ ಇದ್ದಾಗ ಒಂದು ಸೆಂಟಿಮೀಟರ್‍ಗಿಂತ ಜಾಸ್ತಿ ಬಾಯಿ ತೆರೆಯಲು ಸಾಧ್ಯವಾಗುವುದಿಲ್ಲ. ಬಾಯಿ ತೆರೆಯಲು ಪ್ರಯತ್ನಿಸಿದಾಗ ವಿಪರೀತ ನೋವು ಮತ್ತು ಯಾತನೆ ಇರುತ್ತದೆ. ಬಾಯಿ ತೆರೆಯುವ ಸ್ನಾಯುಗಳ ಉರಿಯೂತದಿಂದ ಈ ತೊಂದರೆ ಉಂಟಾಗುತ್ತದೆ.
4)ನೋವು ಕೆಲವೊಮ್ಮೆ ಬರಿ ಬಾಯಿಗೆ ಸೀಮಿತವಾಗದೇ ಕಿವಿ ನೋವು, ದವಡೆ ಕೀಲುನೋವು, ತಲೆಯ ಒಂದು ಭಾಗವಿಡೀ ನೋವಿನಿಂದ ಕೂಡಿರುತ್ತದೆ. ಎಲ್ಲಿಂದ ನೋವು ಆರಂಭವಾಗಿದೆ ಎಂಬುದು ರೋಗಿಗಳಿಗೆ ಅರಿವಾಗದಿರಲೂಬಹುದು.
5) ವಿಪರೀತ ಸುಸ್ತು, ನಿಶ್ಯಕ್ತಿ ಮತ್ತು ಜ್ವರ ಬರುವ ಸಾದ್ಯತೆ ಇರುತ್ತದೆ. ಆಹಾರ ಸೇವನೆ ಮಾಡಲು ಕಷ್ಟವಾಗುತ್ತದೆ. ಆಹಾರ ಜಗಿಯಲು ಮತ್ತು ನುಂಗಲು ಸಾಧ್ಯವಾಗುವುದಿಲ್ಲ. ಬರಿ ದ್ರವಾಹಾರ ಮತ್ತು ನೀರು ಕುಡಿಯಲು ಸಾದ್ಯವಾಗುತ್ತದೆ. ಆಹಾರ ಸೇವನೆ ಕಡಿಮೆಯಾದಾಗಲೆಲ್ಲ, ಆಯಾಸ, ಬಳಲಿಕೆ, ಸುಸ್ತು, ತಲೆಸುತ್ತು ಕಾಣಿಸಿಕೊಳ್ಳುತ್ತದೆ. ದೈನಂದಿನ ಚಟುವಟಿಕೆ ಮಾಡಲು ನಿರಾಸಕ್ತಿ ಮತ್ತು ಸಾಧ್ಯವಾಗದೇ ಇರಬಹುದು.
6) ಹೊರಬರುವ ಹಲ್ಲಿನ ಸುತ್ತ ಕೀವು ತುಂಬಿಕೊಂಡು ಕಿವು ಚೀಲ ಉಂಟಾಗಬಹುದು ಅಥವಾ ಕೆಳಭಾಗದ ದವಡೆ ಊದಿಕೊಳ್ಳಬಹುದು ಕುತ್ತಿಗೆಯ ಭಾಗದಲ್ಲಿರುವ ದುಗ್ಧರಸ ಗ್ರಂಥಿಗಳು ಊದಿಕೊಂಡು ವಿಪರೀತ ನೋವು ಇರುತ್ತದೆ.
ಚಿಕಿತ್ಸೆ ಹೇಗೆ?
ಸಾಮಾನ್ಯವಾಗಿ ಬಾಯಿ ವಾಸನೆÀ, ವಿಪರೀತ ನೋವು, ದವಡೆ ಊದಿಕೊಂಡು ಬಾಯಿ ತೆರೆಯಲು ಕಷ್ಟವಾಗಿರುವ ಯುವಕ/ಯುವತಿಯರು ಬಂದಾಗ ದಂತವೈದ್ಯರು ತಕ್ಷಣವೇ ಹಲ್ಲಿನ ಕ್ಷ-ಕಿರಣ ತೆಗೆಯುತ್ತಾರೆ. ಮೂರನೇ ದವಡೆ ಹಲ್ಲು ಬಂದಿದೆ ಅಥವಾ ಬರುತ್ತಿದೆಯೇ ಎಂಬುವುದನ್ನು ಕ್ಷ-ಕಿರಣದ ಮುಖಾಂತರ ಪತ್ತೆ ಹಚ್ಚುತ್ತಾರೆ. ಹಲ್ಲು ಮೂಡುವ ಕಾರಣದಿಂದ ಮೇಲಿನ ತೊಂದರೆ ಬಂದಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಚಿಕಿತ್ಸೆ ನೀಡುವುದು ಬಹಳ ಸುಲಭ.
1) ಮೊದಲನೇ ಔಷಧಿಯಾಗಿ ಆಂಟಿಬಯೋಟಿಕ್ ಔóಷಧಿ ನೀಡಲಾಗುತ್ತದೆ. ಹಲ್ಲಿನ ಸುತ್ತ ತುಂಬಿರುವ ಕೀವನ್ನು ಉಪಶಮನ ಮಾಡಲು ಮತ್ತು ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಸೂಕ್ತವಾದ ಅಂಟಿಬಯೋಟಿಕ್ ಔಷಧಿ ದಂತ ತಜ್ಞರು ನೀಡುತ್ತಾರೆ. ವೈದ್ಯರ ಸಲಹೆಯಿಲ್ಲದೆ ಅಂಟಿಬಯೋಟಿಕ್ ಬಳಸಬೇಡಿ.
2) ನೋವು ನಿವಾರಕ ಔಷಧಿ ನೀಡಿ ನೋವನ್ನು ಶಮನ ಮಾಡಲಾಗುತ್ತದೆ. ನೋವಿನ ತೀವ್ರತೆ ಮತ್ತು ರೋಗಿಯ ಮಾನಸಿಕ ಸ್ಥಿತಿಯನ್ನು ಪರಿಗಣಿಸಿ ವೈದ್ಯರು ಔಷಧಿ ನೀಡುತ್ತಾರೆ. ನೋವಿನ ಜೊತೆಗೆ ಜ್ವರವಿದ್ದಲ್ಲಿ ಮತ್ತು ರೋಗಿ ಬಹಳ ಬಳಲಿದ್ದಲ್ಲಿ ಒಳರೋಗಿಯಾಗಿ ದಾಖಲಾತಿ ಮಾಡಿ ರೋಗಿಗೆ ನಿರ್ಜಲೀಕರಣವಾಗದಂತೆ ಔಷದಿ ನೀಡಲಾಗುತ್ತದೆ.
3) ದಂತ ವೈದ್ಯರು ಸಾಮಾನ್ಯವಾಗಿ ಹೈಡ್ರೋಜನ್ ಪರಾಕ್ಸೆಡ್ ಮತ್ತು ಕ್ಲೋರ್ಸ್‍ಹೆಕ್ಸಿಡೆನ್ ಎಂಬ ಔಷಧದಿಂದ ಹಲ್ಲು ಮೂಡುವ ಜಾಗವನ್ನು ಶುಚಿಗೊಳಿಸಿರುತ್ತಾರೆ. ಹಲ್ಲಿನ ಸುತ್ತ ತುಂಬಿರುವ ಕೀವನ್ನು ತೆಗೆಯಲಾಗುತ್ತದೆ.
4) ಬಾಯಿ ತೆರೆಯಲು ಕಷ್ಟವಾಗುತ್ತಿದ್ದಲ್ಲಿ ಬಾಯಿ ತೆರೆಯಲು ಸಹಾಯ ಮಾಡುವ ಔಷಧಿಗಳನ್ನೂ ಸಹ ವೈದ್ಯರು ನೀಡುತ್ತಾರೆ.
5) ಸಾಮಾನ್ಯವಾಗಿ ರೋಗಿಗೆ ಮನೆಯಲ್ಲಿ ಬಿಸಿನೀರಿಗೆ ಒಂದು ಹಿಡಿಕೆ ಉಪ್ಪು ಸೇರಿಸಿ ಬಾಯಿಯನ್ನು ಶುಚಿಗೊಳಿಸಲು ತಿಳಿಸುತ್ತಾರೆ. ಇದೊಂದು ಉತ್ತಮ ಆಂಟಿಸೆಪ್ಟಿಕ್ ಔಷಧಿಯಾಗಿದ್ದು ದಿನದಲ್ಲಿ ಆರೇಳು ಬಾರಿ ಮಾಡಬಹುದು. ಈ ರೀತಿ ಮಾಡುವುದರಿಂದ ಬಾಯಿಯಲ್ಲಿನ ಕೀವು ಹೊರಬರುತ್ತದೆ. ಬ್ಯಾಕ್ಟೀರಿಯಾಗಳ ಸಂಖ್ಯೆ ಕುಂಠಿತವಾಗುತ್ತದೆ ಮತ್ತು ರೋಗಿ ಬೇಗನೆ ಗುಣಮುಖರಾಗುತ್ತಾರೆ.
6) ರೋಗಿಗೆ ಸಾಕಷ್ಟು ನೀರು, ದ್ರವಾಹಾರವಾದ ತಾಜಾ ಹಣ್ಣಿನ ರಸ, ಎಳನೀರು ಸೇವಿಸಲು ತಿಳಿಸಲಾಗುತ್ತದೆ. ನಿರ್ಜಲೀಕರಣವಾಗದಂತೆ ತಡೆಯಲು ಸಾಕಷ್ಟು ನೀರು ಸೇವನೆ ಅತೀ ಅಗತ್ಯ.
7) ಮೇಲಿನ ಎಲ್ಲಾ ತೊಂದರೆಗಳಿಗೆ ಮೂಲ ಕಾರಣವಾದ ಮೂರನೇ ದವಡೆ ಹಲ್ಲನ್ನು ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುತ್ತಾರೆ. ಉರಿಯೂತ ಹಾಗೂ ಜ್ವರ ಇರುವಾಗ ಶಸ್ತ್ರಚಿಕಿತ್ಸೆ ಮಾಡಬಾರದು ಮತ್ತು ವೈದ್ಯರು ರೋಗಿ ಗುಣಮುಖವಾದ ಬಳಿಕವಷ್ಟೆ ಈ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಹಲ್ಲು ಕೀಳಿಸಿಕೊಳ್ಳದಿದ್ದಲ್ಲಿ ಪದೇ ಪದೇ ಈ ರೀತಿ ನೋವು ಬರುತ್ತದೆ. ಕೆಲವೊಮ್ಮೆ ಹಲ್ಲು ಹೊರಬರಲು ಜಾಗವಿದ್ದಲ್ಲಿ ಹಲ್ಲಿನ ಮೇಲ್ಬಾಗದ ಪದರವನ್ನು ಕತ್ತರಿಸಿ ತೆಗೆದು ಹಲ್ಲು ಹೊರಬರಲು ಅವಕಾಶ ಮಾಡಿಕೊಡಲಾಗುತ್ತದೆ. ಕೆಲವೊಮ್ಮೆ ಮೇಲ್ಬಾಗದ ಮೂರನೇ ದವಡೆ ಹಲ್ಲನ್ನು ತೆಗೆಯಲಾಗುತ್ತದೆ. ಇಲ್ಲವಾದಲ್ಲಿ ಮೇಲ್ಬಾಗದ ದವಡೆ ಹಲ್ಲು ಕೆಳಭಾಗದ ದವಡೆ ಹಲ್ಲಿನ ಮೇಲಿರುವ ಮಾಂಸದ ಮೇಲೆ ಒತ್ತಡ ಹಾಕಿ, ಪದೇ ಪದೇ ಕೀವು ಉಂಟಾಗುವಂತೆ ಮಾಡುತ್ತದೆ. ಒಟ್ಟಿನಲ್ಲಿ ನೋವಿಗೆ ಮತ್ತು ಯಾತನೆಗೆ ಕಾರಣವಾದ ಮೇಲಿನ ಮತ್ತು ಕೆಳಗಿನ ಮೂರನೇ ದವಡೆ ಹಲ್ಲನ್ನು ಕಿತ್ತು ಹೊಲಿಗೆ ಹಾಕಿ ನೋವು ಶಮನವಾಗುವಂತೆ ಮಾಡಲಾಗುತ್ತದೆ. ಯಾವ ಶಸ್ತ್ರ ಚಿಕಿತ್ಸೆ ಯಾವಾಗ ಮಾಡಬೇಕೆಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.
ಕೊನೆ ಮಾತು:
ಇತ್ತೀಚಿನ ದಿನಗಳಲ್ಲಿ ಯುವ ಜನರಿಗೆ ಮೂರನೇ ದವಡೆ ಹಲ್ಲು ಬರುವುದೇ ಇಲ್ಲ. ಇದನ್ನು ನಾಗರೀಕತೆಯ ಶಾಪ ಎಂದು ವೈದ್ಯರು ಹೇಳುತ್ತಾರೆ. ನಾವು ತಿನ್ನುವ ಆಹಾರ ಜೀವನ ಶೈಲಿಯಿಂದಾಗಿ ದವಡೆ ಬೆಳೆಯಲು ಯಾವುದೇ ಪ್ರಚೋದನೆ ಇಲ್ಲದ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಯುವ ಜನರಿಗೆ ಮೂರನೇ ದವಡೆ ಹಲ್ಲು ಹುಟ್ಟುವುದೇ ಇಲ್ಲ. ಒಂದು ವೇಳೆ ಹುಟ್ಟಿದರೂ ದವಡೆಯಿಂದ ಹೊರಬರುವುದಕ್ಕೆ ಜಾಗ ಇರುವುದಿಲ್ಲ, ಹೊರ ಬರಲು ಪ್ರಯತ್ನಪಟ್ಟಾಗ ಪೆರಿಕೊರನೈಟಿಸ್ ರೋಗ ಬರುತ್ತದೆ. ಇದನ್ನೇ ದಂತ ವ್ಯೆದ್ಯರು ನಾಗರೀಕತೆಯ ರೋಗ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬುದ್ದಿಶಕ್ತಿ ಬರುವ ಸಮಯದಲ್ಲಿ ಅಂದರೆ 17 ರಿಂದ 21 ನೇ ವಯಸ್ಸಿನಲ್ಲಿ ಈ ಮೂರನೇ ದವಡೆ ಹಲ್ಲು ಹುಟ್ಟುವ ಕಾರಣದಿಂದ ಈ ಹಲ್ಲಿಗೆ ಬುದ್ಧಿಶಕ್ತಿ ಹಲ್ಲು ಎಂದೂ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ‘ವಿಸ್ಡಮ್ ಟೂತ್’ ಎನ್ನುತ್ತಾರೆ ಆದರೆ ವ್ಯಕ್ತಿಯ ಬುದ್ದಿಶಕ್ತಿಗೂ ಮತ್ತು ಮೂರನೇ ದವಡೆ ಹಲ್ಲಿಗೂ ಯಾವುದೇ ಸಂಬಂಧವಿಲ್ಲ. ಸಾಮಾನ್ಯವಾಗಿ ಜನರು ವಿಸ್ಡಮ್ ಟೂತ್ ಕೀಳಿಸಿದರೆ ನಮ್ಮ ಬುದ್ದಿಶಕ್ತಿ ಕಡಿಮೆಯಾಗುತ್ತದೆಯೇ ಎಂದು ಮುಗ್ದವಾಗಿ ಕೇಳುವುದು ಸರ್ವೇಸಾಮಾನ್ಯವಾಗಿದೆ. ಅದೇನೆ ಇರಲಿ ತೊಂದರೆ ಕೊಡುವ ವಿಸ್ಡಮ್ ಹಲ್ಲನ್ನು ಕೀಳಿಸುವುದಲ್ಲಿಯೇ ಜಾಣತನ ಅಡಗಿದೆ ದಂತ ವೈದ್ಯರ ಒಕ್ಕೊರಲಿನ ಭಾವನೆ ಎನ್ನುವುದಂತೂ ಸತ್ಯವಾದ ಮಾತು.
-ಡಾ: ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ
ಮೊ.ನಂ. 9845135787
E-mail: drmuraleemohan@gmail.com