ವಿವಿ ಕಾಲೇಜು: ಪರಿಸರ ಸಂಘದಿಂದ ಸಂವಾದ ಕಾರ್ಯಕ್ರಮ

Upayuktha
0


ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ 'ಪರಿಸರ ಸಂಘʼವು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 'ನಮ್ಮ ಊರಲ್ಲಿರಬೇಕಾದ ಮರಗಿಡಗಳುʼ ಎಂಬ ವಿಷಯವನ್ನು ಆಧರಿಸಿ ಸಾಹಿತಿ, ಪರಿಸರ ಪ್ರೇಮಿ ಪ್ರಸನ್ನಕುಮಾರ್ ಅವರ ಜೊತೆ ಭಾನುವಾರ ಸಂವಾದ ಹಮ್ಮಿಕೊಂಡಿತ್ತು. 


ಸಂವಾದದಲ್ಲಿ ಮಾತನಾಡಿದ ಪ್ರಸನ್ನಕುಮಾರ್, ಕಳೆದ ಒಂದು ದಶಕದ ಹಿಂದೆ ಶೇಕಡಾ 36  ಇದ್ದ ಅರಣ್ಯ ಇಂದು 31% ಆಗಿದೆ. ಜನಪದ ಪರಂಪರೆಯಲ್ಲಿ ವೃಕ್ಷಗಳಿಗೆ ದೈವದ ಸ್ಥಾನ ದೊರೆತಿತ್ತು. ಮರಗಳನ್ನು ತಮ್ಮ ಜೀವದ ಅವಿಭಾಜ್ಯವನ್ನಾಗಿಸಿಕೊಂಡಿದ್ದ ಹಿರಿಯರು, ಬೆಳಗೆದ್ದು ಭೂಮಿತಾಯಿಯನ್ನು ನೆನೆಸಿಯೇ ತಮ್ಮ ದಿನಚರಿ ಆರಂಭಿಸುತ್ತಿದ್ದರು. ಅರಳಿಮರ ಸುತ್ತುವುದು, ತುಳಸಿ ಪೂಜೆಯ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಆದರೆ ಇಂದು ನಾವು ವೃಕ್ಷಗಳ ಉಳಿವಿನ ಮೌಲ್ಯಗಳನ್ನು ಗಾಳಿಗೆ ತೂರಿದ್ದೇವೆ. ಬ್ಯಾನರ್ ಹಿಡಿದು ಹೋರಾಡುವುದಕ್ಕಿಂತ  ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಮುಂದೆ, ತಮ್ಮ ಬೀದಿ ಬದಿಯಲ್ಲಿ, ಊರ ಗಡಿಯಲ್ಲಿ ಗಿಡ ಮರಗಳನ್ನು ನೆಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. 


ಪರಿಸರ ಸಂಘದ ಸಹನಿರ್ದೇಶಕ ಡಾ. ಸಿದ್ದರಾಜು ಎಂ ಎನ್ ಮಾತನಾಡಿ,  ಕಾರ್ಯಕ್ರಮದ ಮೂಲ ಉದ್ದೇಶ ಈ ಲಾಕ್ಡೌನ್ ಸಮಯದಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಸಪ್ಪೆಯಾಗದಂತೆ ನೋಡಿಕೊಳ್ಳುವುದು, ಎಂದರು. ಅಲ್ಲದೆ ಅವರು ಈ 2 ತಿಂಗಳಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ಕನ್ನಡದ 101 ಗಿಡಗಳ ಸಚಿತ್ರ ಪರಿಚಯ, ಎಲ್ಲಾ ರಾಜ್ಯಗಳ ಮರ, ಹೂವು ಮತ್ತು ಹಣ್ಣುಗಳ ಸಚಿತ್ರ ವಿವರಣೆ, ಹೂವುಗಳ ಹೆಸರುಳ್ಳ ಕನ್ನಡ ಚಿತ್ರಗೀತೆ ಗಾಯನ ಮೊದಲಾದ ಕಾರ್ಯಕ್ರಮಗಳ ವಿವರ ನೀಡಿದರು. 


ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಅನಸೂಯಾ ರೈ, ಅರಣ್ಯ ನಾಶ ಮನುಕುಲದ ಮೇಲೆ ತೀವ್ರತರದ ದುಷ್ಪರಿಣಾಮಗಳನ್ನು ಬೀರುತ್ತವೆ. ಸಕಲ ಜೀವರಾಶಿಗಳ ಜೀವನ ಚಕ್ರ ನಾವು ಬೆಳೆಸಲೇಬೇಕಾದ ಮರಗಳ ಮೇಲೆ, ಉಳಿಸಲೇಬೇಕಾದ ಅರಣ್ಯದ ಮೇಲೆ ಅವಲಂಬಿತವಾಗಿದೆ, ಎಂದು ಅಭಿಪ್ರಾಯಪಟ್ಟರು. 


ಸುಶ್ರಾವ್ಯ, ಶ್ರುತಿ, ಮಲ್ಲೇಶ್ವರಿ, ಬಸಮ್ಮ, ಮೆಲ್ರೀನ್, ಧನ್ಯಶ್ರೀ ಮತ್ತು ಡಾ. ರವಿಕುಮಾರ್ ಹೂ- ಹೆಸರ ಗಾಯನದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿನಿಯರಾದ ಸಲೋನಿ, ಆಶಿತಾ ರೈ, ಸಂಗೀತ, ಧನ್ಯಶ್ರೀ ಸಸ್ಯ ಸಂಕುಲದ ಬಗ್ಗೆ ವಿಷಯ ಮಂಡಿಸಿದರು. ವೇದಾಶಿನಿ ಕಾರ್ಯಕ್ರಮ ನಿರೂಪಿಸಿದರೆ, ಚೇತನ್ ಸ್ವಾಗತಿಸಿ, ಧನ್ಯ ವಂದಿಸಿದರು.


(ಉಪಯುಕ್ತ ನ್ಯೂಸ್)

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top