ಸಿ.ಎಂ. ಉದಾಸಿ: ರಾಜಕಾರಣದಲ್ಲಿ ನಂಬಿಕೆ-ನಿಷ್ಠೆಗೆ ನೀರೆರೆದ ಚೇತನ

Upayuktha
0



ಶಾಸಕ ಸಿ.ಎಂ. ಉದಾಸಿ ಅವರ ಕಣ್ಮರೆಯಿಂದಾಗಿ ಮನಸು ಉದಾಸ್, ಉದಾಸ್ ಆಗಿದೆ. ಭಾವ ಮುದುಡಿ ಸೂನಾ, ಸೂನಾ ಅಂತನಿಸುತ್ತಿದೆ. ರಾಜಕಾರಣದಲ್ಲಿ ನಂಬಿಕೆ, ನಿಷ್ಠೆಗೆ ಇಂತಹ ಅಕಾಲದಲ್ಲೂ ನೀರೆರೆದವರು. ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಬೆಳಗಾವಿಯ ಸುವರ್ಣಸೌಧದ  ಪರಿಕಲ್ಪನೆಯನ್ನು ಮೂರೇ ವರ್ಷಗಳಲ್ಲಿ ಸಾಕಾರಗೊಳಿಸಿ ಕಣ್ಣಮುಂದೆ ನಿಲ್ಲಿಸಿದ ಕನಸುಗಾರ. ಆಗ (2008-11) ಬಿ.ಎಸ್. ಯಡಿಯೂರಪ್ಪನವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಕನ್ನಡಕ್ಕೆ ಅಸ್ಮಿತೆ ನೀಡಿ ಬೆಳಗಾವಿಯ ಕನ್ನಡಿಗರು ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದರು. ತಮ್ಮ ಹಾನಗಲ್ ಕ್ಷೇತ್ರವನ್ನೂ ಅಭಿವೃದ್ಧಿಯ ಹಳಿಗೆ ಹಚ್ಚಿದರು.

ನೊಂದವರಿಗೆ ನೆರವಾದರು. ನೆರೆಯಲ್ಲಿ ನೆಂದವರ ಕಂಬನಿ ಒರೆಸಿದರು. ಉದಾಸ ಮನಸ್ಥಿತಿಯ ಜನರಲ್ಲಿ ಉಲ್ಲಾಸದ ಹೂಮಳೆಗರೆದರು. ಈ ಕಾಯಕನಿಷ್ಠ ಜೀವಿ. ಮೌನಕ್ಕೇ ಹೆಚ್ಚು ಶರಣಾದವರು. ಬಿಎಸ್‌ವೈ ಭಾಜಪ ತೊರೆದು ಕೆಜೆಪಿ ಕಟ್ಟಿದಾಗ, ಅವರೊಂದಿಗೆ ಹೆಜ್ಜೆಹಾಕಿದ ವಿಶ್ವಾಸಿ. ಮುಂದಿನ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋಲು. ಅದಕ್ಕೆ ಕಾರಣವಾದ ಕೈಗಳು ನೂರು. ಅದರ ಮುಂದಿನ ಚುನಾವಣೆಯ ವೇಳೆಗೆ ಯಡಿಯೂರಪ್ಪನವರ ಜೊತೆಗೆ ಭಾಜಪಕ್ಕೆ ಮರಳಿ ಮತ್ತೆ (2018) ಸ್ಪರ್ಧಿಸಿ ಗೆಲುವಿನ ದಡ ಸೇರಿದರು. ಅಪರವಯಸ್ಕರಾದದ್ದರಿಂದ ಸಚಿವರಾಗಲಿಲ್ಲ. ಅವರು ಸಂಪುಟದಲ್ಲಿ ಇದ್ದಿದ್ದರೆ ಈ ಸರ್ಕಾರದ ಸಾಧನೆಯ ಮಟ್ಟ ಖಂಡಿತ ಹೆಚ್ಚುತ್ತಿತ್ತು.

ಅವರು ಎಲ್ಲ ರಾಜಕಾರಣಿಗಳಂತಲ್ಲ. ಮತದಾರರ ಮನಗೆದ್ದ ಜನನಾಯಕ. ಅವರ ಮಗ ಶಿವಕುಮಾರ ಉದಾಸಿ ಎರಡನೆಯ ಬಾರಿಗೆ ಹಾವೇರಿಯ ಸಂಸದರು. ತಂದೆ ಮತ್ತು ಮಗನ ಕಾರ್ಯಶೈಲಿಯ ನಡುವೆ ತಲೆಮಾರಿನ ಅಂತರ! ಮಗನ ನಡೆಯಲ್ಲಿ ಕಾರ್ಪೊರೇಟ್ ಶೈಲಿಯ ಸ್ಪರ್ಶ. ಅಪ್ಪ ಸಿ.ಎಂ. ಉದಾಸಿಯವರದು ಜನಸ್ನೇಹಿ ರಾಜಕಾರಣ.  ಹಾಗಾಗಿ ಕ್ಷೇತ್ರದಲ್ಲಿ ಇವರ ಮಾತಿಗೆ ಮಣೆ-ಮನ್ನಣೆ. 

ಉದಾಸಿ ಅವರೊಂದಿಗಿನ ನೆನಪು: 

2016ರಲ್ಲಿ ಕಸಾಪಕ್ಕೆ ನಾಡೋಜ ಡಾ. ಮನು ಬಳಿಗಾರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ನನ್ನನ್ನು ರಾಜ್ಯ ತರಬೇತಿ ಸಂಚಾಲಕನನ್ನಾಗಿ ನೇಮಿಸಿದರು. ನಾಡು-ನುಡಿ ಕುರಿತು ಪರಿಷತ್ತಿನ ಪದಾಧಿಕಾರಿಗಳಿಗೆ, ಆಸಕ್ತ ಸಾರ್ವಜನಿಕರಿಗೆ ಶಿಬಿರಗಳನ್ನು ಆಯೋಜಿಸಿ, ಅವುಗಳ ನಿರ್ದೇಶಕನಾಗಿ ಕಾರ್ಯನಿರ್ವಹಿಸುವ ಹೊಣೆ ನನ್ನದಾಗಿತ್ತು. ರಾಜ್ಯದಲ್ಲಿ ಅಂತಹ ಮೊದಲ ಕಮ್ಮಟ ಹಾವೇರಿ ಜಿಲ್ಲಾ ಕಸಾಪ ಆಯೋಜಿಸಿತ್ತು. ಆಗ ಒಂದು ದಿನ ಮುಂಚೆಯೇ ವ್ಯವಸ್ಥೆಯ ಪರಿಶೀಲನೆಯ ಸಲುವಾಗಿ ಹಾವೇರಿ  ತಲಪಿದ್ದೆ: 25-6-2016. ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ.  ಜೂನ್ 26ರಂದು ಕನ್ನಡ ಜಾಗೃತಿ ಕಮ್ಮಟ. ಇಡೀ ದಿನ ನಾನು ಏಕಮಾತ್ರ ಸಂಪನ್ಮೂಲ ವ್ಯಕ್ತಿ. 

ಲಿಂಗಯ್ಯನವರು ಮತ್ತೊಂದು ಜವಾಬ್ದಾರಿ ಅಲ್ಲಿಗೆ ಹೋದ ಮೇಲೆ ವಹಿಸಿದರು. ಮಾರನೆಯ ದಿನ, ಅಂದರೆ ಶಿಬಿರ ನಡೆಯುವ 26-6-2016ರಂದೇ ಭಾಜಪದ ಹಾವೇರಿ ಜಿಲ್ಲಾ ಕಚೇರಿಯಲ್ಲಿ 1975ರಲ್ಲಿ ಆಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ಕುರಿತು ಮುಕ್ಕಾಲು ಗಂಟೆ ಮಾತನಾಡಬೇಕೆಂಬ ಕೋರಿಕೆ. 26ಕ್ಕೆ ಯಾರಾದರೂ ಭಾಷಣಕಾರರು ಬೇಕೆಂದು 25ರಂದು ಉದಾಸಿ ಮತ್ತು ನೆಹರು ಓಲೇಕಾರ್ ಲಿಂಗಯ್ಯನವರನ್ನು ಕೋರಿದಾಗ, ನನ್ನನ್ನು ಕೇಳದೆಯೇ ನನ್ನ ಹೆಸರನ್ನು ಸೂಚಿಸಿದ್ದಾರೆ. ಗೋಟಗೋಡಿಯಲ್ಲಿನ ಉತ್ಸವ್ ರಾಕ್ ಗಾರ್ಡನ್ ಮತ್ತು ಜನಪದ ವಿವಿ ನೋಡಲು ತೆರಳಿದ್ದ ನನಗೆ ಕರೆ ಮಾಡಿ ಈ ಕುರಿತು ತಿಳಿಸಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನನಗೆ ಹದಿನೇಳರ ಹರೆಯ. 41 ವರ್ಷಗಳ ಹಿಂದಿನ ಘಟನೆಗಳ ವಿವರ ಅಸ್ಪಷ್ಟವಾಗಿತ್ತು. ಆದರೆ ಲಿಂಗಯ್ಯನವರು ಬಿಡಲಿಲ್ಲ. ಬಿಜೆಪಿಯಿಂದ ನನ್ನ ಭಾಷಣ ಕಾರ್ಯಕ್ರಮ ಕುರಿತು ಪತ್ರಿಕಾ ಹೇಳಿಕೆಯೂ ನೀಡಲಾಗಿದೆ ಎಂದರು. ರಾತ್ರಿಯಿಡೀ ನೆನಪುಗಳನ್ನು ತಡಕಿ, ತಡಕಿ ಹಿಡಿದು ಅಕ್ಷರಗಳನ್ನಾಗಿ ಹೆಣೆದೆ. ಆತ್ಮವಿಶ್ವಾಸದ ಆವಾಹನೆಯಾಯಿತು‌. 

ಮಾರನೆಯ ದಿನದ ಭಾಷಣಕ್ಕೆ ಸಿ.ಎಂ. ಉದಾಸಿಯವರದೇ ಅಧ್ಯಕ್ಷತೆ. ತುಂಬು ಸಭಾಂಗಣ. ಭಾಷಣ ಕೇಳಲು ರಸ್ತೆಯಲ್ಲೆಲ್ಲಾ ಧ್ವನಿವರ್ಧಕಗಳ ವ್ಯವಸ್ಥೆಯಾಗಿತ್ತು.  ನನ್ನ ಮಾತಿನ ಓಘ ಆಲಿಸಿದ ರಸ್ತೆಯಲ್ಲಿನ ಜನರೂ ಸಭಾಂಗಣಕ್ಕೆ ಧಾವಿಸಿ ಬಂದರು. ಮತ್ತೆ ಕುರ್ಚಿಗಳನ್ನು ತರಿಸಿದರು. 50 ನಿಮಿಷಗಳ ಸುದೀರ್ಘ ಭಾಷಣ. ಉದಾಸಿಯವರ ಸಚಿವತ್ವದ ಅವಧಿಯಲ್ಲಿನ ಕಾರ್ಯವೈಖರಿಯನ್ನು ಒಂದೆರಡು ಮಾತುಗಳಲ್ಲಿ ಪ್ರಶಂಸಿಸಿದೆ. ಉದಾಸಿ ಅವರು 41 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯ ಘಟನೆಗಳನ್ನು ಒಳನೋಟಗಳ ಸಮೇತ ನಾನು ದಾಖಲಿಸಿದ ಕ್ರಮವನ್ನು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಮುಕ್ತಕಂಠದಿಂದ ಪ್ರಶಂಸಿಸಿದರು. ಯಾವ ಪೂರ್ವಸೂಚನೆಯೂ ಇಲ್ಲದೆ, ಪರಾಮರ್ಶನಕ್ಕೆ ಅವಕಾಶವೇ ಇಲ್ಲದ ಸಂದರ್ಭದಲ್ಲೂ ಕೆ. ರಾಜಕುಮಾರ್ ಅವರು ಮಾತನಾಡಿದ ಬಗೆಯನ್ನು ಕೇಳಿ ಬೆರಗಾಗಿದ್ದೇನೆ ಎಂದರು. ಶಾಲು, ಏಲಕ್ಕಿ ಹಾರ, ಫಲತಾಂಬೂಲ ಮತ್ತು ಸಂಭಾವನೆ ನೀಡಿ ಸತ್ಕರಿಸಿದರು. ಹೊರಗಡೆ ಬಂದು ವಾಹನಕ್ಕೆ ಹತ್ತಿಸಿ ಶುಭ ಹಾರೈಸಿ ಬೀಳ್ಕೊಟ್ಟರು‌. ಅವರ ಸೌಜನ್ಯ ನೆನೆದರೆ ಇಂದಿಗೂ ಮನಸ್ಸು ಸಂಕೋಚದ ಮುದ್ದೆಯಾಗುತ್ತದೆ‌. ಆ ಹಿರಿಯರು ಲಿಂಗಯ್ಯನವರ ಬಳಿಯೂ ನನ್ನ ಕುರಿತು ಮೆಚ್ಚಿ ಮಾತನಾಡಿದರಂತೆ. ಅದು ಅವರ ದೊಡ್ಡಗುಣ. ಸಾಮುದಾಯಿಕ ಹಿತದ ಕಾರ್ಯವನ್ನು ನಾವು ಸಾಧಿಸಿಯೇ ತೀರಬೇಕೆಂಬ ಆದರ್ಶವೊಂದನ್ನು ತಾವೇ ಅನುಸರಿಸುವ ಮೂಲಕ ಅನುಷ್ಠಾನ ಮಾಡಿ ತೆರಳಿದ್ದಾರೆ. ಆ ಹಾದಿಯಲ್ಲಿ ಕ್ರಮಿಸಿದರೆ ನಾಡು ಸುಭಿಕ್ಷವಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

- ಕೆ. ರಾಜಕುಮಾರ್

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top