ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ: ಕೃಷಿಕರ ತೋಟಕ್ಕೆ ನುಗ್ಗಿ ಅಪಾರ ಬೆಳೆ ಹಾನಿ

Shreya Hegde
0



ಪುತ್ತೂರು: ಪೆರ್ನಾಜೆ ಹಾಗೂ ಸುತ್ತಮುತ್ತಲಿನ ಕೃಷಿ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಸ್ಥಳೀಯ ಕೃಷಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇಂದು ಬೆಳಗಿನ ಜಾವ ತೋಟಕ್ಕೆ ನುಗ್ಗಿದ ಕಾಡಾನೆಯೊಂದು ಅಪಾರ ಪ್ರಮಾಣದ ಕೃಷಿ ಬೆಳೆಗಳನ್ನು ನಾಶಪಡಿಸಿದೆ.


ಪೆರ್ನಾಜೆಯ ಪ್ರಗತಿಪರ ಕೃಷಿಕರಾದ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ಇಂದು ಬೆಳಗಿನ ಜಾವ ದಾಳಿ ಇಟ್ಟಿರುವ ಕಾಡಾನೆ, ಹತ್ತಕ್ಕೂ ಹೆಚ್ಚು ಫಸಲು ಭರಿತ ಬಾಳೆಗಿಡಗಳು ಹಾಗೂ ಅಡಿಕೆ ಸಸಿಗಳನ್ನು ತುಳಿದು ನಾಶಪಡಿಸಿದೆ. ಇದರಿಂದ ಕೃಷಿಕರಿಗೆ ಅಪಾರ ನಷ್ಟ ಉಂಟಾಗಿದೆ.


ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ಒಂದೊಂದು, ಎರಡೆರಡು ಹಾಗೂ ಏಳರ ಸಂಖ್ಯೆಯ ಹಿಂಡುಗಳಲ್ಲಿ ಕಾಡಾನೆಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿವೆ. ತೋಟಗಳಿಗೆ ಲಗ್ಗೆ ಇಡುತ್ತಿರುವ ಆನೆಗಳು ಕೃಷಿ ಫಸಲನ್ನು ನಾಶಪಡಿಸುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಇಂದು ತೋಟಕ್ಕೆ ದಾಳಿ ಮಾಡಿದ ಕಾಡಾನೆಯು ಬಳಿಕ ನೂಜಿಬೈಲು ಪ್ರದೇಶದ ಕಡೆಗೆ ತೆರಳಿರುವ ಶಂಕೆಯಿದೆ ಎಂದು ಕುಮಾರ್ ಪೆರ್ನಾಜೆ ಅವರು ಮಾಹಿತಿ ನೀಡಿದ್ದಾರೆ.


ನಿರಂತರವಾಗಿ ಕಾಡಾನೆಗಳು ಜನವಸತಿ ಹಾಗೂ ಕೃಷಿ ಪ್ರದೇಶಗಳಿಗೆ ಬರುತ್ತಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಈ ಬಗ್ಗೆ ಗಮನಹರಿಸಿ, ಆನೆಗಳನ್ನು ಕಾಡಿಗೆ ಅಟ್ಟಲು ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಕೃಷಿಕರು ಒತ್ತಾಯಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top