ಇಂಡಿಯನ್ ಕಾನ್ಟಿಟ್ಯೂಶನ್ ಇನ್ ಮೇಕಿಂಗ್ ಪುಸ್ತಕದ ಮರುಮುದ್ರಣದ ಲೋಕಾರ್ಪಣೆಯಲ್ಲಿ ಭಾಗಿ
ಮಂಗಳೂರು: "ತುಳುನಾಡಿನ ಶ್ರೇಷ್ಠ ಪುತ್ರ, ಕೆನರಾ ಶಾಲೆಯ ಹಳೆ ವಿದ್ಯಾರ್ಥಿ, ಪ್ರಕಾಂಡ ಜ್ಞಾನಿ ಹಾಗೂ ಭಾರತದ ಸಂವಿಧಾನದ ತೆರೆಮರೆಯ ಶಿಲ್ಪಿಯಾದ ಅದ್ಭುತ ಮೇಧಾವಿ ಸರ್ ಬೆನಗಲ್ ನರಸಿಂಗ್ ರಾವ್ ಅವರ 'ಇಂಡಿಯನ್ ಕಾನ್ಸ್ಟಿಟ್ಯೂಷನ್ ಇನ್ ಮೇಕಿಂಗ್' ಪುಸ್ತಕದ ಮರುಮುದ್ರಣವನ್ನು ಲೋಕಾರ್ಪಣೆಗೊಳಿಸುತ್ತಿರುವುದು ಅತೀವ ಸಂತಸ ತಂದಿದೆ," ಎಂದು ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.
ನಗರದ ಕೊಡಿಯಾಲ್ಬೈಲ್ನಲ್ಲಿರುವ ಟಿ.ವಿ. ರಮಣ್ ಪೈ ಕನ್ವೆನ್ಶನ್ ಸೆಂಟರ್ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. "ನರಸಿಂಗ್ ರಾವ್ ಅವರು ವಿದ್ಯಾರ್ಥಿ ದೆಸೆಯಲ್ಲೇ ಅಪಾರ ಪಾಂಡಿತ್ಯ ಹೊಂದಿದ್ದರು. ಕೇಂಬ್ರಿಡ್ಜ್ನಲ್ಲಿ ಅವರ ಸಹಪಾಠಿಯಾಗಿದ್ದ ಜವಾಹರಲಾಲ್ ನೆಹರು ಅವರು ತಮ್ಮ ತಂದೆಗೆ ಬರೆದಿದ್ದ ಪತ್ರದಲ್ಲಿ ರಾವ್ ಅವರ ಜ್ಞಾನ ಮತ್ತು ವಿದ್ವತ್ತನ್ನು ಪ್ರಶಂಸಿಸಿದ್ದರು. ರಾವ್ ಭಾರತದಲ್ಲಿ ಉನ್ನತ ಸ್ತರದಲ್ಲಿ ಸೇವೆ ಸಲ್ಲಿಸಲು ಸೂಕ್ತ ವ್ಯಕ್ತಿತ್ವ ಹೊಂದಿದ್ದಾರೆ ಎಂಬ ನೆಹರು ಅವರ ಮಾತು ಮುಂದೆ ನಿಜವಾಯಿತು," ಎಂದರು.
"ಭಾರತದ ಸಂವಿಧಾನದ ಪಾವಿತ್ರ್ಯದ ಬಗ್ಗೆ ವಿಶ್ವವೇ ಅಭಿಮಾನ ಪಡುವಾಗ, ಅದರ ರೂಪುರೇಷೆ ಸಿದ್ಧಪಡಿಸಿದ ರಾವ್ ನಿಜಕ್ಕೂ ಶ್ರೇಷ್ಠರು. ಅವರು ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಕೆನರಾ ಶಾಲೆಯಲ್ಲಿ ಪೂರೈಸಿರುವುದು ಈ ಭಾಗದವರಿಗೆಲ್ಲ ಹೆಮ್ಮೆಯ ವಿಷಯ. ರಾವ್ ಅವರ ವಿದ್ವತ್ತಿಗೆ ಅನೇಕ ದೃಷ್ಟಾಂತಗಳಿವೆ. ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ಅಂದಿನ ನ್ಯಾಯಮೂರ್ತಿ ಫೆಲಿಕ್ಸ್ ಫ್ರಾಂಕ್ಫರ್ಟರ್ ಅವರು ರಾವ್ ಅವರ ಜ್ಞಾನದಿಂದ ಎಷ್ಟು ಪ್ರಭಾವಿತರಾಗಿದ್ದರೆಂದರೆ, 'ಅಮೆರಿಕದ ಅಧ್ಯಕ್ಷರು ತಮ್ಮ ದೇಶದ ಸುಪ್ರೀಂ ಕೋರ್ಟ್ಗೆ ಅಮೆರಿಕದ ಇತಿಹಾಸ ಮತ್ತು ಕಾನೂನಿನ ಅರಿವಿರುವ ಸೂಕ್ತ ವ್ಯಕ್ತಿಯನ್ನು ಸೂಚಿಸುವಂತೆ ನನ್ನನ್ನು ಕೇಳಿದರೆ, ಬಿ.ಎನ್. ರಾವ್ ನನ್ನ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ' ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ಅಲ್ಲದೆ, 1949ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಭಾಷಣವೊಂದರಲ್ಲಿ 'ಸಂವಿಧಾನ ರಚನೆಯ ಶ್ರೇಯಸ್ಸಿನಲ್ಲಿ ಬೆನಗಲ್ ನರಸಿಂಗ್ ರಾವ್ ಅವರ ಪಾಲು ದೊಡ್ಡದಿದೆ' ಎಂದು ಸ್ಮರಿಸಿದ್ದರು. ದೇಶದ ಮೈಲಿಗಲ್ಲಾದ ಹಲವು ಕಾಯ್ದೆಗಳ ಜಾರಿಯಲ್ಲಿ ರಾವ್ ಅವರ ಪಾತ್ರ ಮಹತ್ವದ್ದಾಗಿದೆ," ಎಂದು ರಾಜ್ಯಪಾಲರು ಬಣ್ಣಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, "ಸರ್ ಬಿ.ಎನ್. ರಾವ್ ಅವರಂತಹ ಮೇಧಾವಿ ವಿದ್ಯಾರ್ಥಿಯನ್ನು ರೂಪಿಸಿದ ಶ್ರೇಯ ಕೆನರಾ ಶಾಲೆಗೆ ಸಲ್ಲುತ್ತದೆ. ಅವರ ಜೀವಿತಾವಧಿಯ ಕಾಲಘಟ್ಟದಲ್ಲಿ ನಾವೂ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಖ್ಯಾತ ನ್ಯಾಯಾಂಗ ತಜ್ಞ ಫಾಲಿ ನಾರಿಮನ್ ಅವರು ತಮ್ಮ ಕೊನೆಯ ಪುಸ್ತಕದಲ್ಲಿ ಸಂವಿಧಾನ ರಚನೆಗೆ ನರಸಿಂಗ್ ರಾವ್ ನೀಡಿದ ಕೊಡುಗೆಯನ್ನು ವಿಸ್ತೃತವಾಗಿ ಬಣ್ಣಿಸಿದ್ದಾರೆ. ಬಂಗಾಳ ಹೈಕೋರ್ಟ್ ನ್ಯಾಯಾಧೀಶರಾಗಿ, ಜಮ್ಮು-ಕಾಶ್ಮೀರದ ಪ್ರಧಾನ ಮಂತ್ರಿಯಾಗಿ, ಮ್ಯಾನ್ಮಾರ್ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ರಾವ್ ಸಲ್ಲಿಸಿದ ಸೇವೆ ಅನನ್ಯ. ಅಂತಹ ಮಹನೀಯರನ್ನು ಸ್ಮರಿಸುವ ಮೂಲಕ ಈ ಕಾರ್ಯಕ್ರಮ ಉತ್ತಮ ಮೇಲ್ಪಂಕ್ತಿ ಹಾಕಿದೆ," ಎಂದರು.
ಮರುಮುದ್ರಣದ ಪ್ರಥಮ ಪ್ರತಿಯನ್ನು ರಾವ್ ಅವರ ಸಹೋದರಿಯ ಮೊಮ್ಮಗ, ಹಿರಿಯ ಪತ್ರಕರ್ತ ಭರತ್ ಸಾವೂರ್ ಅವರಿಗೆ ರಾಜ್ಯಪಾಲರು ಹಸ್ತಾಂತರಿಸಿದರು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ವಾಸುದೇವ ಕಾಮತ್, ಗೌರವ ಕಾರ್ಯದರ್ಶಿ ಯೋಗೀಶ್ ಕಾಮತ್, ನಿವೃತ್ತ ಐಎಎಸ್ ಅಧಿಕಾರಿ ನಿತಿನ್ ಆರ್. ಗೋಕರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಸಕ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಸ್ಮಿತಾ ಭಟ್ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ ಐಟಂ:ಗಮನ ಸೆಳೆದ ದೃಶ್ಯ ಪ್ರದರ್ಶನ ಹಾಗೂ ಸಂವಾದ ಸಭಾಂಗಣದಲ್ಲಿ ಸರ್ ಬೆನಗಲ್ ನರಸಿಂಗ್ ರಾವ್ ಅವರ ಬಾಲ್ಯದಿಂದ ಹಿಡಿದು ಸಾಧನೆಯ ಪ್ರತಿ ಹೆಜ್ಜೆಯನ್ನು ಬಿಂಬಿಸುವ ಆಕರ್ಷಕ ದೃಶ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಭಾರತದ ಸಂವಿಧಾನದ ಮೊದಲ ಕರಡು ಪ್ರತಿ ಸೇರಿದಂತೆ ವಿವಿಧ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಾವ್ ಅವರ ಜೀವನ ಕುರಿತ 12 ನಿಮಿಷಗಳ ಸಾಕ್ಷ್ಯಾಚಿತ್ರ ಪ್ರದರ್ಶಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಸಂವಾದ ನಡೆಯಿತು. 'ಪ್ರಜಾಪ್ರಭುತ್ವ - ಕಾನೂನು, ಅಧಿಕಾರ ಮತ್ತು ಉತ್ತರದಾಯಿತ್ವ' ವಿಷಯದ ಕುರಿತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ನಿತಿನ್ ಆರ್. ಗೋಕರ್ಣ ಸಂವಾದ ನಡೆಸಿಕೊಟ್ಟರು. 'ಸರ್ ಬಿ.ಎನ್. ರಾವ್ - ಸಂವಿಧಾನ ಮತ್ತು ದೂರದೃಷ್ಟಿ' ವಿಷಯದ ಸಂವಾದದಲ್ಲಿ ನಿವೃತ್ತ ಪ್ರಾಧ್ಯಾಪಕ ಅನಂತಕೃಷ್ಣ ಭಟ್ ಮತ್ತು ಹಿರಿಯ ಪತ್ರಕರ್ತ ಭರತ್ ಸಾವೂರ್ ಭಾಗವಹಿಸಿದ್ದರು. ನ್ಯಾಯವಾದಿ ಸುಮಿತ್ ಭಟ್ ಸಂವಾದ ನಿರ್ವಹಿಸಿದರು.


