ಸುರಪುರ: 'ರೈತರು ಬೆಳೆದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ರಕ್ಷಣೆಗಾಗಿ ಸರ್ಕಾರವು ಇದೇ ಡಿಸೆಂಬರ್ ಅಂತ್ಯದವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು. ಮಧ್ಯೆ ಹತ್ತು ದಿನಗಳ ಕಾಲ ನೀರು ಸ್ಥಗಿತಗೊಳಿಸಿ, ಆರು ದಿನಗಳ ವಾರಾಬಂದಿ ಪದ್ಧತಿಯನ್ನು ಜಾರಿಗೊಳಿಸಬೇಕು' ಎಂದು ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, "ನೀರಿಗಾಗಿ ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ, ಕೊಡೇಕಲ್ಲ, ನಾರಾಯಣಪುರ ಸೇರಿದಂತೆ ಜಿಲ್ಲೆಯಾದ್ಯಂತ ರೈತರ ಸರಣಿ ಸಭೆಗಳು, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ, ರಸ್ತೆ ತಡೆ, ಬಂದ್ ಹಾಗೂ ಬೃಹತ್ ರ್ಯಾಲಿಗಳು ನಿರಂತರವಾಗಿ ನಡೆಯುತ್ತಿವೆ. ಜಿಲ್ಲೆಯ ಜನಪ್ರತಿನಿಧಿಗಳು, ಮಾಜಿ ಸಚಿವರು ಮತ್ತು ರೈತ ಮುಖಂಡರು ಸಂಬಂಧಪಟ್ಟವರಿಗೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ನಿನ್ನೆಯಷ್ಟೇ ರೈತರು ಸಚಿವ ಕಾಶಪ್ಪನವರ ಅವರ ಸ್ವಗ್ರಾಮಕ್ಕೆ ತೆರಳಿ ಮನವಿ ಪತ್ರ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
ಬರದ ಭೀತಿ ಮತ್ತು ಹೋರಾಟದ ಎಚ್ಚರಿಕೆ:
"ಮಳೆಯ ಅಭಾವದಿಂದ ಎಲ್ಲೆಡೆ 1972ರ ಭೀಕರ ಬರಗಾಲದ ಛಾಯೆ ಆವರಿಸುತ್ತಿದೆ. ಕೊನೆಯ ಹಂತದಲ್ಲಿರುವ ಬೆಳೆ ಕೈಗೆ ಸಿಗದಿದ್ದರೆ ರೈತ ಸಂಪೂರ್ಣವಾಗಿ ನಿರ್ನಾಮವಾಗುತ್ತಾನೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ, ನೀರು ಬಿಡದಿದ್ದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಾಹಿತಿಗಳು, ಕವಿಗಳು, ಲೇಖಕರು ಹಾಗೂ ಕಲಾವಿದರೆಲ್ಲರೂ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯಕ್ಕೆ ಖಂಡನೆ:
"ಒಕ್ಕಲಿಗ ಬಿಕ್ಕಿದರೆ ಜಗವೆಲ್ಲ ಮಣ್ಣು ಮುಕ್ಕುವುದು ಎಂಬ ಮಾತನ್ನು ಸರ್ಕಾರ ನೆನಪಿನಲ್ಲಿಟ್ಟುಕೊಳ್ಳಬೇಕು. ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಇತರ ರೈತ ಸಂಘಟನೆಗಳ ಹೋರಾಟಕ್ಕೆ ನಮ್ಮ 'ಹರಿತ ಲೇಖನಿ'ಯ ಅಖಂಡ ಬೆಂಬಲ ಸದಾ ಇರಲಿದೆ" ಎಂದಿರುವ ಅವರು, "ನೀರಾವರಿ ಎಂದರೆ ಕೇವಲ ಕಾವೇರಿ ನದಿ ಪಾತ್ರ ಮಾತ್ರವಲ್ಲ, ಕೃಷ್ಣಾ ನದಿ ಪಾತ್ರದ ರೈತರೂ ಇದ್ದಾರೆ ಎಂಬುದನ್ನು ಆ ಭಾಗದ ಮುಖಂಡರು ಅರ್ಥಮಾಡಿಕೊಳ್ಳಬೇಕು. ಆಳುವ ಸರ್ಕಾರಗಳು ಮೊದಲಿನಿಂದಲೂ ಕಾವೇರಿ ಮತ್ತು ಕೃಷ್ಣೆ ವಿಚಾರದಲ್ಲಿ 'ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ' ಎಂಬ ತಾರತಮ್ಯ ನೀತಿ ಅನುಸರಿಸುತ್ತಿವೆ. ಕಲ್ಯಾಣ ಕರ್ನಾಟಕ ಭಾಗದ ಬಗೆಗಿನ ಈ ದಿವ್ಯ ನಿರ್ಲಕ್ಷ್ಯವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಬಲ ಸೂಚಿಸಿದ ಗಣ್ಯರು:
ರೈತರ ಈ ನ್ಯಾಯಯುತ ಹೋರಾಟಕ್ಕೆ ನಿವೃತ್ತ ಲೋಕಾಯುಕ್ತ ಎಸ್ಪಿ ಸಿ.ಎನ್. ಭಂಡಾರಿ, ನಬೀಲಾಲ ಮಕಾನದಾರ, ಪ್ರಕಾಶಚಂದ ಜೈನ್, ಡಾ. ಲಕ್ಷ್ಮಿಕಾಂತ ಮೊಹರೀರ, ಸಾಜನಶೆಟ್ಟಿ, ಚಂದ್ರಕಾಂತ ಮಾರ್ಗೆಲ್, ಶರಣಬಸಪ್ಪ ಯಾಳವಾರ, ಪ್ರಕಾಶ ಬಣಗಾರ, ಮಲ್ಲಿಕಾರ್ಜುನ ಉದ್ಧಾರ, ವಿಶ್ವಪೂರ್ವ ಸತ್ಯಂಪೇಟೆ, ಡಾ. ಸತ್ಯನಾರಾಯಣ ಆಲದರ್ತಿ, ಎಚ್. ರಾಠೋಡ, ಕನಕಪ್ಪ ವಾಗನಗೇರಿ, ಬಸವರಾಜ ಜಮದ್ರಖಾನಿ, ಯಲ್ಲಪ್ಪ ಹುಲಕಲ್ಲ, ಪ್ರಕಾಶ ಅಲಬನೂರ, ಮುದ್ದಪ್ಪ ಅಪ್ಪಾಗೋಳ, ದೇವು ಹೆಬ್ಬಾಳ, ವೆಂಕಟೇಶ ಪಾಟೀಲ, ಜಯಲಲಿತಾ ಪಾಟೀಲ, ಶಕುಂತಲಾ ಜಾಲವಾದಿ, ಜಾವೀದ ಹುಸೇನ, ರಾಘವೇಂದ್ರ ಭಕ್ರಿ ಸೇರಿದಂತೆ ಹಲವು ಗಣ್ಯರು ಬೆಂಬಲ ಸೂಚಿಸಿದ್ದಾರೆ.

