ಹೀಗೇ ಕೆಲವು ವರ್ಷಗಳ ನಂತರ ಅತಿಯಾದ ಕೆಲಸ ಮಾಡಿರುವುದರ ಪರಿಣಾಮವಾಗಿ ಸುಶೀಲಾಳ ಆರೋಗ್ಯ ಕ್ಷೀಣಿಸುತ್ತಾ ಬಂತು. ಈ ಸಂದರ್ಭದಲ್ಲಿ ಗೀತಾಳು ತನ್ನ ಓದನ್ನು ಹತ್ತನೇ ತರಗತಿಯಲ್ಲಿ ನಿಲ್ಲಿಸಿ, ತಾನೂ ಕೆಲಸ ಮಾಡಿ ತನ್ನ ತಾಯಿಗೆ ನೆರವಾಗುತ್ತಾಳೆ. ಗೀತಾಳಿಗೆ ಒಂದೇ ಒಂದು ಕನಸು. ಅದು ತನ್ನ ತಂಗಿ ಆಶಾಳನ್ನು ಚೆನ್ನಾಗಿ ಓದಿಸಬೇಕೆಂದು. ಇದು ಅವರ ತಾಯಿಯ ಕನಸು ಕೂಡಾ ಆಗಿತ್ತು. ಇದಕ್ಕಾಗಿ ಆಶಾ ಚೆನ್ನಾಗಿಯೇ ಓದುತ್ತಿದ್ದಳು.
ಬದುಕು ಎಷ್ಟೊಂದು ಕಠೋರವಲ್ಲವೇ..... ಅದೊಂದು ದಿನ ಇವರ ಸಂತೋಷದ ಬದುಕಿಗೊಂದು ತಡೆ ಬಂದಿತು. ಆಶಾ ಮತ್ತು ಗೀತಾರ ಪಾಲಿಗೆ ಸರ್ವಸ್ವವೂ ಆಗಿದ್ದ ಸುಶೀಲ ದೈವಾಧೀನರಾದರು. ಆಗ ಆಶಾ ಇನ್ನೂ 10ನೇ ತರಗತಿಯಲ್ಲಿ ಓದುತ್ತಿದ್ದಳಷ್ಟೇ. ಈ ಸಂದರ್ಭದಲ್ಲಿ ಗೀತಾ ತನ್ನ ಧೈರ್ಯವನ್ನು ಕಳೆದುಕೊಳ್ಳಲಿಲ್ಲ. ತನ್ನ ತಂಗಿಯ ಪಾಲಿಗೆ ತಾನೇ ಅಮ್ಮನಂತೆ ಪ್ರೀತಿ ಕೊಡಲಾರಂಭಿಸಿದಳು. ಆಕೆಯನ್ನು ತಾನೇ ಮುಂದೆ ನಿಂತು ಓದಿಸಿದಳು. ಆದರೆ ಆಶಾಳಿಗೆ ತನ್ನ ತಾಯಿಯ ನೆನಪು ಆಗಾಗ ಕಾಡುತ್ತಿತ್ತು. ಸದಾ ಧೈರ್ಯವನ್ನು ತುಂಬಿ, ಪ್ರೀತಿಯಿಂದ ತಬ್ಬಿಕೊಳ್ಳುತ್ತಿದ್ದ ತನ್ನ ಅಮ್ಮ ಇಂದು ನನ್ನೊಂದಿಗಿಲ್ಲವಲ್ಲಾ ಎಂದು ದುಃಖಿಸುತ್ತಿದ್ದಳು. ಓದಿನ ಕಡೆಗೆದ್ದಾಗ ಗಮನ ಕ್ರಮೇಣವಾಗಿ ಕಡಿಮೆಯಾಗತೊಡಗಿತು. ಸದಾ ಸಪ್ಪೆ ಮೊರೆ ಹಾಕಿಕೊಂಡಿರುತ್ತಿದ್ದಳು. ಗೀತಾ ಇದನ್ನೆಲ್ಲಾ ಗಮನಿಸಿ, ಅವಳಿಗೆ ತಾಯಿಯನ್ನು ಕಳೆದುಕೊಂಡ ದುಃಖದ ಜೊತೆಗೆ ಬೇರೇನೋ ನೋವು ಇದೆ ಎಂದು ಅರಿತಳು. ಆ ನೋವು ಏನೆಂದು ಗೀತಾ ಯೋಚಿಸಿದಷ್ಟೂ ಆಕೆಗೆ ಏನೆಂದೇ ಗೊತ್ತಾಗಲಿಲ್ಲ.
ಗೀತಾ ಒಂದು ಬಾರಿ ಆಶಾಳ ಕೋಣೆಗೆ ಹೋಗಿದ್ದಾಗ ಒಂದು ಸಣ್ಣ ಪತ್ರ ಕಾಣಿಸಿತು. ಅದರ ಮೇಲೆ 'ಮನಸ್ಸಿನ ಮಾತು' ಎಂದು ಬರೆದಿತ್ತು. ಗೀತಾ ಆ ಪತ್ರವನ್ನು ತನ್ನ ಕೈಗೆತ್ತಿಕೊಂಡು ಓದಲಾರಂಭಿಸಿದಳು.
"ಅಪ್ಪ ಅಂದ್ರೆ ಆಕಾಶ. ಅವನ ತೋಳೇ ಮಕ್ಕಳ ಪ್ರಪಂಚ. ಅವನೊಂದಿಗೆ ಕಳೆದ ಕ್ಷಣಗಳು ಬದುಕಿನುದ್ದಕ್ಕೂ ಎಂದಿಗೂ ಮಾಸದ ಸವಿ ನೆನಪು. ತಾನು ಮುಳ್ಳಿನ ಹಾದಿಯಲ್ಲಿ ಪಯಣಿಸಿ ಸಂಸಾರವನ್ನು ಜೋಪಾನ ಗೆಯ್ಯುವ ಮಹತ್ವಪೂರ್ಣ ವ್ಯಕಿತ್ವ. ತಾನು ಕಾಣದನ್ನು ತನ್ನ ಕಂದ ಕಾಣಲಿ ಎಂದು ಬದುಕಿನುದ್ದಕ್ಕೂ ಶ್ರಮಿಸುವವ. ಹಗಲಿರುಳೆನ್ನದೆ ಕಷ್ಟಪಟ್ಟು ತನ್ನ ಮಕ್ಕಳ ಕನಸನ್ನು ನನಸಾಗಿಸಲು ಹಪಹಪಿಸುವವನು.
ಹೀಗೆ ತಂದೆಯ ಪ್ರೀತಿಯನ್ನು ಇನ್ನಷ್ಟು ಬರೆಯಬಹುದು. ಅವನನ್ನು ಬೇಕಾದಷ್ಟು ಹೊಗಳಬಹುದು. ಆದರೆ ಅಂತಹ ಯಾವುದೇ ಪ್ರೀತಿ ಸಿಗದವರ ಸಾಲಿನಲ್ಲಿ ನಾನು ಒಬ್ಬಳು. ಶಾಲಾ - ಕಾಲೇಜುಗಳಲ್ಲಿ ಅಪ್ಪನ ಪ್ರೀತಿಯ ಬಗ್ಗೆ ವಿವರಣೆಯನ್ನು ಕೇಳಿ ಕೊಂಡಾಗ ಒಳಗೊಳಗೇ ಯಾತನೆ ಅನುಭವಿಸಿದಾಕೆ. ನನ್ನ ತಾಯಿಯ ಪ್ರೀತಿಯಲ್ಲಿ ಆಕೆಯ ಬಿಸಿಯಪ್ಪುಗೆಯಲ್ಲಿ ನನ್ನೆಲ್ಲಾ ನೋವುಗಳನ್ನು ಸರಿಸಿ, 'ಅಪ್ಪ' ಎನ್ನುವ ಬಂಧವನ್ನು ಮನಸಾರೆ ದ್ವೇಷಿಸಲು ಆರಂಬಿಸಿದೆ. ನಾನು ನನ್ನ ತಂದೆಯ ಮುಖವನ್ನೇ ನೋಡಿರಲಿಲ್ಲ. ಆದರೂ ಆತನನ್ನು ದ್ವೇಶಿಸುತ್ತಿದ್ದೆ. ಕಾರಣ ಗೊತ್ತಿಲ್ಲ. ನಾನು ಎಂಟನೇ ತರಗತಿಯಲ್ಲಿ ಒಂದು ದಿನ ಶಾಲೆ ಬಿಟ್ಟು ಮನೆಗೆ ಬಂದಾಗ ಯಾರೋ ಒಬ್ಬರು ಮನೆಯ ಎದುರು ಕುಳಿತುಕೊಂಡದ್ದು ನೋಡಿದೆ. ಆ ವ್ಯಕ್ತಿಯೆಡೆಗೆ ನನಗರಿವಿಲ್ಲದೆ ಯಾವುದೋ ಬಂಧ ಕೈ ಬೀಸಿ ಕರೆದಂತಾಗಿ ಮೂಕವಿಸ್ಮಿತಳಾದೆ, ಇಟ್ಟ ನೋಟ ಬಿಡದೆ. ನಾನು ದ್ವೇಷಿಸುವ ವ್ಯಕ್ತಿ ಇವನು ಎನ್ನುವ ಸತ್ಯಾಂಶ ನನಗೆ ಅರಿವಾಗಲು ಅದೆಷ್ಟೋ ಸಮಯ ಬೇಕಾಯಿತು. ಹೌದು ಆತನೇ ನನ್ನ ತಂದೆ. ಅರ್ಧಗಂಟೆ ಇದ್ದು ಮತ್ತೊಮ್ಮೆ ಮರೆಯಾದ. ಅವನು ಹೊರಟ ಮೇಲೆ ನನ್ನ ಕಳೆದುಹೋಗುವಿಕೆಗೆ ಕಾರಣ ದೊರಕಿತು. ಮತ್ತೆಂದೂ ಆತ ಬರಲೇ ಇಲ್ಲ.
ಈಗ ನನ್ನಲ್ಲಿ ಕಾಡುವ ಪ್ರಶ್ನೆ ಏನೆಂದರೆ, ನಾನು ದ್ವೇಷಿಸುವ ವ್ಯಕ್ತಿ ನನ್ನೆದುರು ಬಂದಾಗ ನನ್ನ ರೋಷ ಎಲ್ಲಿಗೆ ಹೋಗಿತ್ತು? ನನ್ನಲ್ಲಿ ಮನೆಮಾಡಿದ್ದ ಪ್ರಶ್ನೆಗಳನ್ನು ಅಂದೇಕೆ ನಾನು ಕೇಳದೆ ಮೂಕವಿಸ್ಮಿತಳಾಗಿ ಕುಳಿತೆ? ಆತ ಎಂದಿಗೂ ನನಗೆ ಪ್ರೀತಿ ಹಂಚಿದವನಲ್ಲ. ಬದುಕಿನಲ್ಲಿ ಯಾವುದೇ ಸಂದರ್ಭದಲ್ಲೂ ನನ್ನೊಂದಿಗೆ ನಿಲ್ಲದವನು. ಆದರೂ ಅಂದು ನನ್ನಲ್ಲೇಕೆ ಬದಲಾವಣೆ ಆಯಿತು? ಅದಕ್ಕೆಲ್ಲಾ ಉತ್ತರ 'ಅಪ್ಪ' ಎನ್ನುವ ಬಾಂಧವ್ಯ."
ಇಷ್ಟನ್ನೂ ಓದಿದ ಗೀತಾಳಿಗೆ ಪರಿಸ್ಥಿತಿ ಏನೆಂದು ಸ್ಪಷ್ಟವಾಗಿ ಅರ್ಥವಾಯಿತು. ಇದೆಲ್ಲವನ್ನೂ ನಿಂತುಕೊಂಡು ನೋಡುತ್ತಿದ್ದ ಆಶಾ ಓಡಿಬಂದು ಗೀತಾಳನ್ನು ತಬ್ಬಿ ಹಿಡಿದು ಜೋರಾಗಿ ಅತ್ತಳು. ಆಗ ಗೀತಾ,
"ಇದಕ್ಕಾಗಿ ನೀನು ಇಷ್ಟು ದಿನ ನೋವು ಅನುಭವಿಸಿದ್ಯಾ...ನನ್ನಲ್ಲಿ ಒಮ್ಮೆಯಾದರೂ ಇದರ ಬಗ್ಗೆ ಮಾತನಾಡಬಹುದಿತ್ತಲ್ಲಾ.”
ಆಶಾ, "ಇಲ್ಲ ಅಕ್ಕ. ನನಗಾಗಿದ್ದ ನೋವನ್ನು ಪತ್ರದಲ್ಲಿ ಬರೆದಾಗಲೇ ನನ್ನ ಮನಸ್ಸಿನ ಭಾರ ಇಳಿಯಿತು. ನನ್ನನ್ನು ದಯವಿಟ್ಟು ಕ್ಷಮಿಸಕ್ಕಾ. ಮುಂದೆಂದೂ ನಾನು ಹೀಗೆ ಯೋಚಿಸುವುದಿಲ್ಲ. ನೀನೇ ನನ್ನ ಅಮ್ಮ ಅಪ್ಪ ಅಕ್ಕ ಅಣ್ಣ ಎಲ್ಲವೂ.” ಎಂದು ಕಣ್ಣೀರು ಒರೆಸುತ್ತಾ ಹೇಳಿದಳು.
ಇಷ್ಟನ್ನೂ ಯೋಚಿಸುತ್ತಿದ್ದ ಆಶಾಳಿಗೆ ಬಾಗಿಲ ಬಳಿ ಒಂದು ನೆರಳು ಕಾಣಿಸಿತು. ತನ್ನ ಪತಿ ಬಂದರೇ ಎಂದು ಇಣುಕಿ ನೋಡಿದಳು. ಆದರೆ ತನ್ನ ಪ್ರೀತಿಯ ಅಕ್ಕ ಬಂದಿದ್ದಳು. ಬಂದವಳೇ ಸೀದ ಮಗುವಿನ ಬಳಿ ಹೋಗಿ ಮುದ್ದಿಸಿದಳು.
ಆಶಾ, " ಅಕ್ಕಾ, ಮಗು ಯಾರ ಹಾಗೆ ಕಾಣ್ತಾ ಉಂಟಕ್ಕಾ"
ಗೀತಾ, " ಥೇಟ್ ಕಿರಣ್ ನ ಹಾಗೆಯೇ ಇದ್ದಾಳೆ. ಆದರೆ ಮೂಗು ಮಾತ್ರ ನಿನ್ನದೇ ಬಿಡು"
ಆಶಾ ಜೋರಾಗಿ ನಕ್ಕಳು.
ಗೀತಾ, "ನೋಡು ಆಶಾ, ನೀನಿನ್ನು ಒಂದು ಮಗುವಿನ ತಾಯಿ. ಬಹಳ ಜಾಗರೂಕತೆಯಿಂದ ಇರು"
ಆಶಾ, "ಆಯ್ತಕ್ಕ. ನಿನ್ನ ಮುಖ ಯಾಕೋ ಬಾಡಿಹೋದ ಹಾಗೆ ಕಾಡ್ತಾ ಉಂಟು. ಏನಾಯ್ತು..... ಭಾವ, ಕಾರ್ತಿಕ್ ಪುಟ್ಟ ಎಲ್ಲಾ ಹುಷಾರಾಗಿದ್ದಾರೆ ತಾನೇ?"
ಗೀತಾ, "ಎಲ್ಲರೂ ಚೆನ್ನಾಗಿಯೇ ಇದ್ದಾರೆ. ಬಿಸಿಲಲ್ಲಿ ಬಂದೆ ಅಲ್ವಾ? ಅದಕ್ಕೆ ನನ್ನ ಮುಖ ಹಾಗೆ ಕಾಣಿಸ್ತಾ ಇರಬಹುದು. ಅದಿರಲಿ, ನೀನು ತಿಂಡಿ ತಿಂದೆ ತಾನೇ..."
ಆಶಾ, "ತಿಂದೆ ಅಕ್ಕಾ. ಅತ್ತೆನೇ ಬಂದು ಕೈ ತುತ್ತು ತಿನ್ನಿಸಿದರು. ಆದರೆ ಅವರ ಮುಖದಲ್ಲೂ ಏನೋ ಒಂದು ಬದಲಾವಣೆ ಕಾಣಿಸ್ತು. ಅವರು ಯಾವತ್ತೂ ಹಾಗೆ ಇದ್ದವರಲ್ಲ"
"ಇರು ಆಶಾ ನಾನು ನಿನಗೇನಾದರೂ ಹಣ್ಣು ತರುತ್ತೇನೆ" ಎಂದು ಹೇಳಿ ತನ್ನ ಬ್ಯಾಗನ್ನು ಅಲ್ಲೇ ಇಟ್ಟು ಹೊರಗೆ ಹೋದಳು.
ಕೆಲ ನಿಮಿಷಗಳಲ್ಲಿ ಗೀತಾಳ ದೂರವಾಣಿ ರಿಂಗಾಯಿತು. ಆಶಾ ಕರೆಯನ್ನು ಸ್ವೀಕರಿಸಿ, ತನ್ನ ಕಿವಿಯಲ್ಲಿಟ್ಟಳು. ಒಮ್ಮೆಲೇ ಆಚೆ ಕಡೆಯಿಂದ,
"ಗೀತಾ ಅವರೇ, ಇಲ್ಲಿ ಕಿರಣ್ ರವರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಆದಷ್ಟು ಬೇಗ ಎ ಪಾಸಿಟಿವ್ ಬ್ಲಡ್ ಬೇಕು. ಎಲ್ಲಿದ್ದೀರಿ ಸ್ವಲ್ಪ ತಡವಾದರೂ ಜೀವಕ್ಕೆ ಅಪಾಯ. ಆದಷ್ಟು ಬೇಗ ಬನ್ನಿ"
ಆಶಾಳಿಗೆ ಭೂಮಿಯೇ ಕುಸಿದಂತಾಗಿ, ತನ್ನ ಪ್ರಪಂಚವೇ ಮುಳುಗಿ ಹೋಗುತ್ತಿರುವಂತೆ ಭಾಸವಾಯಿತು.
ಹತ್ತು ನಿಮಿಷಗಳ ನಂತರ ಗೀತಾ ಅಲ್ಲಿಗೆ ಬಂದಳು. ಆಶಾ ಕೂಡಲೇ
"ಯಾಕಕ್ಕ, ಯಾಕೆ ನನ್ನಿಂದ ಈ ವಿಚಾರವನ್ನು ಮುಚ್ಚಿಟ್ಟೆ ?ಹೇಳಕ್ಕ ನನ್ನ ಕಿರಣ್ ಗೆ ಏನಾಯ್ತು? ಬೇಗ ಹೇಳಕ್ಕ ನಾನೀಗಲೇ ಅವನನ್ನು ನೋಡಬೇಕು"
ಗೀತಾ, "ಇರು ಆಶಾ. ಅವನು ಆಸ್ಪತ್ರೆಗೆ ಬರುವ ದಾರಿಯಲ್ಲಿ ಒಂದು ಸಣ್ಣ ಅಪಘಾತ ನಡೀತು. ನಿನಗೆ ಈ ಪರಿಸ್ಥಿತಿಯಲ್ಲಿ ವಿಷಯ ಹೇಳುವುದು ಬೇಡ ಎಂದು ಮುಚ್ಚಿಟ್ಟೆ. ಅವನಿಗೆ ಏನು ಆಗಿಲ್ಲ ಈಗಷ್ಟೇ ಬ್ಲಡ್ ವ್ಯವಸ್ಥೆ ಮಾಡಿ ಬರ್ತಿದ್ದೇನೆ.”
ಆಶಾ "ಅಕ್ಕ, ಕಿರಣ್ ಗೆ ಏನಾದ್ರು ಆದ್ರೆ ನಾನಂತೂ ಬದುಕಿರಲ್ಲ. ಅವನಿಲ್ಲದ ಜೀವನವೇ ನನಗೆ ಬೇಡ ಅಕ್ಕ. ನನ್ನನ್ನೀಗಲೇ ಕರೆದುಕೊಂಡು ಹೋಗು. ನಾನು ಈಗಲೇ ಅವರನ್ನು ನೋಡಬೇಕು"
ಗೀತಾ, "ಆಶಾ, ನೀನು ಯಾವತ್ತೂ ಧೈರ್ಯ ಕಳೆದುಕೊಳ್ಳಬೇಡ ನಿನ್ನೊಂದಿಗೆ ನಾನಿದ್ದೇನೆ ಕಣೇ. ಕಿರಣ್ ಗೆ ಏನು ಆಗಲ್ಲ. ಆದರೆ ನೀನು ಮಾತ್ರ ಭರವಸೆ ಕಳೆದುಕೊಳ್ಳಬೇಡ. ಇಷ್ಟಕ್ಕೇ ಜೀವ ಕಳೆದುಕೊಳ್ಳುತ್ತೇನೆ ಎಂದು ಹೇಳಿದರೆ ಹೇಗೆ? ನೀನಿವತ್ತು ತೆಗೆದುಕೊಳ್ಳಬೇಕೆಂದಿರುವ ಇದೇ ನಿರ್ಧಾರ ಅವತ್ತು ನಮ್ಮಮ್ಮಾನು ಆಯ್ಕೆ ಮಾಡಿದ್ದಿದ್ದರೆ ಈಗ ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು? ನಿನ್ನ ಮಗಳ ಬಗ್ಗೆನೂ ಸ್ವಲ್ಪ ಯೋಚನೆ ಮಾಡು"
ಆಶಾ ಒಮ್ಮೆ ಅಕ್ಕನ ಮುಖವನ್ನೂ, ಇನ್ನೊಮ್ಮೆ ಮಗುವಿನ ವದನವನ್ನೂ ನೋಡಿ, ಶಾಂತತೆಯಿಂದ ಅಲ್ಲಿಯೇ ಕುಳಿತಳು.
ಗೀತಾ, "ಆಶಾ ನೀನೇನು ಹೆದರಬೇಡ. ಕಿರಣ್ ಗೆ ಅಷ್ಟೇನು ಪೆಟ್ಟಾಗ್ಲಿಲ್ಲ. ನಾಳೆ ಬೆಳಿಗ್ಗೆ ಅವನು ಇಲ್ಲಿಗೆ ಬರುತ್ತಾನೆ" ಎಂದಳು. ಆಶಾ ರಾತ್ರಿ ಇಡೀ ಕಿರಣ್ ನ ಬಗ್ಗೆನೇ ಯೋಚಿಸುತ್ತಿದ್ದಳು. ಮರುದಿನ ಬೆಳಿಗ್ಗೆ ಕಿರಣ್ ಆಶಾಳ ಬಳಿಗೆ ಬಂದು, ಮಗುವನ್ನು ನೋಡಿ ಹರ್ಷದಿಂದ ಆಶಾಳನ್ನು ತಬ್ಬಿಹಿಡಿದನು. ಆಶಾಳಿಗೆ ತನ್ನ ಪ್ರಪಂಚ ಮರಳಿ ಸಿಕ್ಕಷ್ಟು ಖುಷಿಯಾಯ್ತು. ಆಶಾಳ ಬದುಕಿನ ಆಶಾಕಿರಣ ಮತ್ತೊಮ್ಮೆ ಬೆಳಗಿತು.
ಮೂರು ದಿನಗಳ ನಂತರ ಆಶಾ ಮತ್ತು ಕಿರಣ್ ಮಗುವಿನೊಂದಿಗೆ ನೇರವಾಗಿ ಮನೆಗೆ ಹೊರಟರು. ಅತ್ತೆ ವಿಜಯಮ್ಮ, ಆರತಿಯೊಂದಿಗೆ ಮನೆಯಲ್ಲಿ ಕಾಯುತ್ತಿದ್ದಳು. ಬಂದ ಕೂಡಲೇ ಪ್ರೀತಿಯಿಂದ ಮಗ ಸೊಸೆ ಮತ್ತು ಮೊಮ್ಮಗುವನ್ನು ಮನೆಯೊಳಗೆ ತುಂಬಿಸಿಕೊಂಡಳು. ಮನೆಗೆ ತಲುಪಿದ ಕೂಡಲೇ ಆಶಾ ಮೊದಲು ಅಕ್ಕನಿಗೆ ಕರೆ ಮಾಡಿದಳು.
ಆಶಾ, "ಹಲೋ" ಎಂದ ತಕ್ಷಣ ಆ ಕಡೆಯಿಂದ ಗಂಡಸಿನ ಧ್ವನಿ ಕೇಳಿಸಿತು.
"ಹೇಳು ಆಶಾ, ಹೇಗಿದ್ದೀಯ? ಇವತ್ತು ಡಿಸ್ಟಾರ್ಜ್ ಅಂತ ಗೀತಾ ಹೇಳಿದ್ಲು. ಮನೆಗೆ ತಲುಪಿದ್ರಾ?"
ಆಶಾ, "ಹೋಗಿ ಭಾವ. ನಾನು ನಿಮ್ಮಲ್ಲಿ ಮಾತಾಡಲ್ಲ. ನೋಡಲು ಬರಲೇ ಇಲ್ವಲ್ಲ."
ವಿಜಯ್ "ಸಾರೀ ಆಶಾ, ಕೆಲಸ ಇತ್ತಲ್ಲ ಅದೆ ಬೆಂಗಳೂರು ಹೋಗಿದ್ದೆ. ತಕ್ಷಣ ಬರೋಕಾಗ್ಲಿಲ್ಲ."
ಆಶಾ "ಪರವಾಗಿಲ್ಲ ಭಾವ. ನಾನು ಹೀಗೆ ತಮಾಷೆ ಮಾಡಿದೆ. ಎಲ್ಲಾ ಆರಾಮ ತಾನೇ?"
ವಿಜಯ್ "ನನಿಗೇನಮ್ಮ ಹುಷಾರಾಗಿಯೇ ಇದ್ದೇನೆ. ನೀನು ಹೇಗಿದ್ದೀಯಾ ಹೇಳು? ಏನು ಮಾಡುತ್ತಿದ್ದಾಳೆ ಮುದ್ದು ಮಗಳು?"
ಆಶಾ, "ನಾವೆಲ್ಲರೂ ಚೆನ್ನಾಗಿದ್ದೇವೆ. ಹಾ ಭಾವ ಮನೆಗೆ ತಲುಪಿದ್ದೇವೆ. ಪುಟ್ಟಿ ಮಲಗಿದ್ದಾಳೆ."
ವಿಜಯ್ "ಹೌದಾ, ಬಾಗಿಲು ತೆಗೆಯಮ್ಮ"
ಆಶಾ ಏನನ್ನೋ ಯೋಚಿಸಿಕೊಂಡು ಬೇಗನೆ ಹೋಗಿ ಬಾಗಿಲು ತೆರೆದಳು. ಹೋಗಿ ನೋಡಿದ್ರೆ ಗೀತಾ, ವಿಜಯ್ ತಮ್ಮ ಪುಟ್ಟ ಮಗು ಕಾರ್ತಿಕ್ ನೊಂದಿಗೆ ಬಂದಿದ್ದರು.
ಆಶಾಳಿಗೆ ಖುಷಿಯೋ ಖುಷಿ.
ಗೀತಾ ಮಾತನಾಡುತ್ತಾ, "ನೀನು ಕಾಲ್ ಮಾಡುವ ಮೊದಲೇ ಹೊರಟಿದ್ವಿ ಕಣೇ. ಅವರಲ್ಲಿ ನಾನೇ ಹೇಳಿದ್ದು ಈಗಲೇ ಹೇಳೇಡಿ ಎಂದು. ನಿನಗೆ ಸರ್ಪ್ರೈಸ್ ಆಗ್ಲಿ ಅಂತ"
ಆಶಾ, " ಅಂತೂ ಇಂತೂ ನೀವೆಲ್ಲರೂ ಒಟ್ಟಿಗೆ ಮನೆಗೆ ಬಂದ್ರಲ್ಲ ಅಷ್ಟು ಸಾಕು ನಂಗೆ. ಬನ್ನಿ ಭಾವ"
ವಿಜಯ್ "ಎಲ್ಲಮ್ಮಾ ಕಿರಣ್? ಕಿರಣ್....." ಎಂದು ಕರೆದುಕೊಂಡು ಒಳಗೆ ಹೋದ.
ಹೀಗೇ ಹಲವು ವರ್ಷಗಳು ಕಳೆಯಿತು. ಎಲ್ಲರೂ ಅನ್ನೋನ್ಯದಿಂದಿದ್ದರು. ಕಲ್ಯಾಣಿಗೀಗ ಐದು ವರ್ಷ. ಆಶಾ ಎಂದಿನಂತೆ ಮನೆ ಕೆಲಸವನ್ನು ಮುಗಿಸಿ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗಲು ಅನುವಾದಳು.
ಕಿರಣ್ ಹೊರಗಡೆ ಕಾರಿನಲ್ಲಿ ಕುಳಿತುಕೊಂಡು ಕಾಯುತ್ತಿದ್ದ.
ಕಿರಣ್ "ಆಯ್ತಾ ಆಶಾ, ಬೇಗ ಬನ್ನಿ. ನಂಗೆ ಲೇಟ್ ಆಗ್ತಾ ಇದೆ. ಬೇಗ ಬೇಗ"
ಆಶಾ "ಇರಿ ರೀ ಯಾಕಿಷ್ಟು ಅವಸರ ಬರ್ತಾ ಇದ್ದೇವೆ."
ಆಗ ಕಲ್ಯಾಣಿ "ಅಪ್ಪಾ ನಾನು ಬಂದೆ" ಎಂದು ಓಡೋಡಿ ಬಂದು ಕಾರು ಹತ್ತಿದಳು.
ಆಶಾಳೂ ಬಂದಳು.
ಕಾರು ಮುಂದೆ ಸಾಗಿತು.
ಆಶಾ ಮಾತಿಗೆ ತೊಡಗಿ, "ಏನು ಗೊತ್ತಾ ಮೊನ್ನೆ ಒಂದು ಸಂಗೀತ ಸ್ಪರ್ಧೆ ಇತ್ತಲ್ಲ ಅದ್ರಲ್ಲಿ ನಮ್ಮ ಕಲ್ಯಾಣಿ ಫಸ್ಟ್ ಅಂತೆ"
ಕಿರಣ್ ಹೌದಾ ಎಂದು ಕೇಳಿದ.
ಆಶಾ "ನಾಳೆ ನಿಮಿಗೆ ರಜೆ ಅಲ್ವಾ ನಾವು ಮೂವಿಗೆ ಹೋಗೋಣ. ತುಂಬಾ ದಿನ ಆಯ್ತು. ಎಲ್ಲಿಗೂ ಹೋಗ್ಲಿಲ್ಲಲ್ವಾ" ಎಂದಾಗ
ಕಲ್ಯಾಣಿ ಕೂಡಲೇ "ಹೇ... ನಾವು ನಾಳೆ ಮೂವೀ ಗೆ ಹೋಗ್ತಿವಿ." ಅಂತ ಖುಷಿಯಲ್ಲಿ ಕುಣಿದಳು.
ಆದರೆ ಕಿರಣ್ ಇದೆಲ್ಲವನ್ನೂ ಕೇಳಿಯೂ ಕೇಳಿಸದವನ ಹಾಗೆ ಇದ್ದ. ಏನೂ ಮಾತಾಡಲಿಲ್ಲ. ಆಶಾಳಿಗೆ ಒಂದು ರೀತಿಯ ಕಸಿವಿಸಿಯಾಗಲು ಶುರುವಾಯಿತು. ಕಿರಣ್ ಗೆ ಏನಾಯ್ತು ಇವತ್ತು... ಯಾವಾಗಲೂ ಪಟ ಪಟಾಂತ ಮಾತಾಡ್ತಿದ್ದವು ಇವತ್ತೇಕೆ ಮೌನಿಯಾಗಿದ್ದಾರೆ? ಎಂದು ಯೋಚಿಸಿದಳು.
ಅಷ್ಟರಲ್ಲಿ ಕಲ್ಯಾಣಿ "ನನ್ನ ಶಾಲೆ ಬಂತು" ಎಂದು ಹಾಡಿದಳು. ಕಿರಣ್ ಅವಳನ್ನು ಶಾಲೆ ಒಳಗೆ ಹೋಗಿ ಬಿಟ್ಟು ಬಂದ.
ಆಶಾ ಮತ್ತೆ ಮಾತಿಗೆ ಶುರುಮಾಡಿದಳು "ರೀ ಏನಾಯ್ತು ನಿಮಗೆ? ಯಾಕೆ ಮುಖ ಸಪ್ಪೆಯಾಗಿದೆ? ಮಗಳ ಜೊತೆನೂ ಸರಿಯಾಗಿ ಮಾತಾಡ್ಲಿಲ್ಲ. ಯಾಕೆ?"
ಹಾಗೇನಿಲ್ಲ ಎಂದು ಹೇಳಿ ಸುಮ್ಮನಾದ ಕಿರಣ್.ಅಲ್ಲಿಗೆ ಇಬ್ಬರೂ ಮಾತು ನಿಲ್ಲಿಸಿ ಸುಮ್ಮನಾದರು. ಹೀಗೆಯೇ ಒಂದು ವಾರ ಮುಂದುವರೆಯಿತು. ಕಿರಣ್ ನಲ್ಲಿ ಹಲವಾರು ಬದಲಾವಣೆಗಳು ಉಂಟಾದವು. ಆಶಾಳ ಜೊತೆಗಿನ ಮಾತು ಕಮ್ಮಿಯಾಗತೊಡಗಿತು. ಸಂಸಾರದಲ್ಲಿ ನಿರಾಸಕ್ತಿ ವಹಿಸಿದವನಂತೆ ಆಡತೊಡಗಿದ. ಮಗಳ ಜೊತೆ ಸದಾ ನಲಿವಿನಿಂದ ಇರುತ್ತಿದ್ದ ಕಿರಣ್ ಒಂದು ವಾರದಿಂದ ಯಾರಲ್ಲೂ ಮಾತನಾಡಲಿಲ್ಲ. ಆಶಾಳ ಯೋಚನೆ ಎತ್ತಲೋ ಸಾಗುತ್ತಿತ್ತು. ನೋವಿನಿಂದ ಯಾರಲ್ಲೂ ನೊಂದು ಯಾರಲ್ಲೂ ಹೇಳದಂತಾದಳು.
ಅದೊಂದು ದಿನ ಆಶಾ ಸಂಗೀತ ಕಚೇರಿಯಲ್ಲಿರುವಾಗ ಕಿರಣ್ ಗೆ ಏನಾಗಿರಬಹುದು ಎಂದು ಯೋಚಿಸುತ್ತಾ ಕುಳಿತಿದ್ದಳು. ಅಷ್ಟರಲ್ಲಿ ಅವಳ ಮೊಬೈಲ್ ರಿಂಗಾಯ್ತು. ಫೋನ್ ಎತ್ತಿ ಆಶಾ, "ಹಲೋ ಯಾರು?" ಎಂದಾಗ, ಆ ಕಡೆಯಿಂದ
"ಹೇ ಆಶಾ ನಾನು ಕಣೇ ಅನುಪಮಾ."
ಆಶಾ, " ಓ ಅನುಪಮಾ ಎಷ್ಟು ವರ್ಷ ಆಯ್ತು ನಿನ್ನ ಬಳಿ ಮಾತಾಡದೆ. ಹೇಗಿದ್ದೀಯ? ಏನು ಮಾಡ್ತಾ ಇದ್ದೀಯ? ಎಲ್ಲಿದ್ದೀಯಾ? ಯಾಕೆ ಇಷ್ಟು ವರ್ಷ ಕಾಲೇ ಮಾಡ್ಲಿಲ್ಲ?"
ಅನುಪಮಾ "ಸಮಾಧಾನ ಕಣೆ. ಒಂದೊಂದು ಪ್ರಶ್ನೆ ಕೇಳು. ಎಲ್ಲಾ ಒಟ್ಟಿಗೆ ಕೇಳಿದ್ರೆ ನಾನು ಯಾವುದಕ್ಕೆ ಅಂತ ಉತ್ತರ ಹೇಳಲಿ?"
ಆಶಾ, "ಹಾ. ಓಕೆ ಓಕೆ. ನೀನೀಗ ಏನು ಮಾಡ್ತಿದ್ದೀಯಾ ಹೇಳು?"
ಅನುಪಮಾ, "ನಾವೀಗ ಅಮೇರಿಕಾದಲ್ಲಿ ಸೆಟ್ ಆಗಿದ್ದೀವಿ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿನ್ನ ಸಮಾಚಾರ ಕೂಡ ಹೇಳು"
ಆಶಾ,"ನನಗೆ ಒಬ್ಬಳು ಮಗಳಿದ್ದಾಳೆ. ಹೆಸರು ಕಲ್ಯಾಣಿ ಅಂತ."
ಅನುಪಮಾ "ಸಾರಿ ಕಣೆ. ನಿನಗೆ ಕಾಲ್ ಮಾಡ್ಲಿಕ್ಕೆ ಆಗ್ಲಿಲ್ಲ. ಯಾಕಂದ್ರೆ ನಿನ್ನ ನಂಬರ್ ಡಿಲೀಟ್ ಆಗಿತ್ತು. ಇವತ್ತು ಹೇಗೋ ಹುಡುಕಿ ಬಿಟ್ಟೆ ನೋಡು"
ಆಶಾ "ನಾನು ನಿನ್ನ ಕಾಲ್ ಗಾಗಿ ಕಾಯ್ತಾ ಇದ್ದೆ. ನನ್ನ ನಂಬರ್ ನಿನಗೆ ಕೊಟ್ಟಿದ್ದೆ, ಆದರೆ ನಿನ್ನ ನಂಬರ್ ನನ್ನ ಬಳಿ ಇರಲಿಲ್ವಲ್ಲ. ಅದಕ್ಕೋಸ್ಕರ ನನಗೆ ಕಾಲ್ ಮಾಡ್ಲಿಕ್ ಆಗ್ಲಿಲ್ಲ."
ಅನುಪಮಾ "ಇರಲಿ ಬಿಡು. ಮತ್ತೆ ಏನು ಸಮಾಚಾರ?"
"ಏನಿಲ್ಲ. ಎಲ್ಲಾ ನೀನೇ ಹೇಳ್ಳೇಕು. ಅದಿರಲಿ ನೀನು ಊರಿಗೆ ಯಾವಾಗ?"
"ಮುಂದಿನ ತಿಂಗಳು ಆದರೆ ಬರ್ಬೇಕು."
ಆಶಾ " ಹೌದಾ. ಆಗ ಮನೆಗೆ ಬರಲು ಮಾತ್ರ ಮರಿಬೇಡ. ಹೇ.. ಅನು, ಸಂಗೀತ ಈಗ ಏನ್ ಮಾಡ್ತಿದ್ದಾಳೆ? "
ಅನುಪಮಾ " ಹೋ ನಿಂಗೆ ವಿಷಯ ಗೊತ್ತಿಲ್ವಾ?"
ಆಶಾ "ಏನು ವಿಷಯ ಆರಾಮಾಗಿಯೇ ಇದ್ದಾಳೆ ತಾನೇ?"
ಅನುಪಮಾ " ಏನು ಅಂತ ಹೇಳೋದು ಅವಳೀಗ ಗಂಡ ಬೇಡ ಅಂತ ಹೇಳಿ ಮನೆಯಲ್ಲಿ ಕುಳಿತಿದ್ದಾಳಂತೆ. ಒಬ್ಬ ಮಗ ಕೂಡ ಇದ್ದಾನೆ."
ಆಶಾ "ಹೌದಾ! ಏನು ಕಾರಣ?"
ಅನುಪಮಾ "ಅದೊಂದು ದೊಡ್ಡ ಕಥೆ. ಹೇಳೇನೆ ಕೇಳು...
(ಮುಂದುವರಿಯುವುದು....)
-ಸಂಶೀನ ಸೂರ್ಯ

