ನಮ್ಮ ಕನ್ನಡ ನಾಡು ಮಹಾನ್ ಸಂತರ, ದಾರ್ಶನಿಕರ ಮತ್ತು ತತ್ವಜ್ಞಾನಿಗಳ ಬೀಡು. ಅಂತಹ ಮಹಿಮಾನ್ವಿತರ ಚರಣಸ್ಪರ್ಶಗಳಿಂದ ಪುನೀತವಾದ ನಮ್ಮ ಕರ್ನಾಟಕದ ಸಾಹಿತ್ಯ ಕ್ಷೇತ್ರಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಹರಿದಾಸ ಪರಂಪರೆಯಲ್ಲಿ ಬರುವ ದಾಸಶ್ರೇಷ್ಠರೆಲ್ಲರೂ ತಮ್ಮ ಅದ್ಭುತವಾದ ರಚನೆಗಳಿಂದ ಮತ್ತು ಅನುಸರಿಸಿದ ಮಾರ್ಗಗಳಿಂದ ಜನಮಾನಸದಲ್ಲಿ ವಿಶೇಷವಾದ ಗೌರವಾದರಗಳನ್ನು ಪಡೆದಿದ್ದಾರೆ. ಇಂತಹ ಹರಿದಾಸ ಪರಂಪರೆಯಲ್ಲಿ ಬರುವ ಕಾಖಂಡಕಿಯ ಶ್ರೀ ಮಹಿಪತಿದಾಸರದು ಬಹಳ ವಿಭಿನ್ನವಾದ ಹಾಗೂ ವಿಶಿಷ್ಟವಾದ ವ್ಯಕ್ತಿತ್ವ. ಮುಖ್ಯವಾಗಿ ಪುರಂದರದಾಸರು, ಕನಕದಾಸರ ನಂತರ ಅಂದಿನ ಸಾಮಾಜಿಕ ಸ್ಥಿತ್ಯಂತರಗಳಿಂದಾಗಿ ದಾಸ ಸಾಹಿತ್ಯಕ್ಕೆ ಮಂಕು ಆವರಿಸಿದ್ದ ಸಮಯದಲ್ಲೇ ಧ್ರುವತಾರೆಯಾಗಿ ಕಂಗೊಳಿಸಿದ ಮಹಾಮಹಿಮರು ಶ್ರೀ ಮಹಿಪತಿದಾಸರು. ಬಹುಭಾಷಾ ಪಾರಂಗತರು, ತತ್ವಜ್ಞಾನಿಗಳು, ಅನುಭಾವಿಗಳು ಮತ್ತು ವರಕವಿಗಳಾಗಿದ್ದ ಗುರುರಾಯರು ಆದಿಲ್ ಷಾಹಿ ಆಸ್ಥಾನದ ದಿವಾನರಾಗಿದ್ದವರು. ಗುರುಗಳಾದ ಭಾಸ್ಕರ ಸ್ವಾಮಿಗಳಿಂದ ಭಕ್ತಿ ಹಾಗೂ ಯೋಗ ಮಾರ್ಗವನ್ನು ಅನುಸರಿಸಿ ಮಹಿಪತಿದಾಸರಾಗಿ, ತನ್ಮೂಲಕ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು, ಸ್ವತಃ ತಾವು ಸವಿದ ಆ ಅನುಭವವನ್ನು ತಮ್ಮ ಸಾಹಿತ್ಯದ ಮೂಲಕ ಹರಿದಾಸ ಸಾಹಿತ್ಯವನ್ನು ಪೋಷಿಸಿದ ಮಹಾಮಹಿಮಾನ್ವಿತರು.
ಇನ್ನು 'ಕಾಖಂಡಕಿಯ ಶ್ರೀ ಮಹಿಪತಿದಾಸರು' ಚಲನಚಿತ್ರದ ವಿಷಯಕ್ಕೆ ಬರುವುದಾದರೆ, ಈ ಚಲನಚಿತ್ರದ ನಿರ್ದೇಶಕರಾದ ಡಾ. ಮಧುಸೂದನ ಹವಾಲ್ದಾರ್ ಸರ್ ಅವರ ವ್ಯಕ್ತಿತ್ವವೂ ಕೂಡ ಬಹಳ ವಿಶಿಷ್ಟವಾದದ್ದೇ. ಇಂದಿನ ಸಮಯದಲ್ಲಿ ಬಿಡುಗಡೆಯಾಗುತ್ತಿರುವ ಬರಿ ಆಡಂಬರದ, ವಾಸ್ತವಕ್ಕೆ ತದ್ವಿರುದ್ಧವಾದ ವಿಷಯಗಳುಳ್ಳ ಚಲನಚಿತ್ರಗಳಿಗೆ ಹೋಲಿಸಿದಾಗ ಹವಾಲ್ದಾರ್ ಸರ್ ಅವರ ಆಯ್ಕೆಯ ಬಗ್ಗೆ ಬಹಳ ಹೆಮ್ಮೆ ಮತ್ತು ಅಭಿಮಾನ ಮೂಡುತ್ತದೆ. ಒಂದು ವರ್ಗದ ಪ್ರೇಕ್ಷಕರಿಗೆ ಮಾತ್ರ ಸೀಮಿತವಾಗಬಹುದಾಗಿದ್ದ, ಅತ್ಯಂತ ಸವಾಲಿನ ದಾರಿಯನ್ನು ಅಷ್ಟೇ ನಿಷ್ಠೆಯಿಂದ, ಶ್ರದ್ಧೆಯಿಂದ ದಾಸ ಸಾಹಿತ್ಯದ ದಾಸವರೇಣ್ಯರ ಚಲನಚಿತ್ರಗಳನ್ನು ಸರಣಿರೂಪದಲ್ಲಿ ತರುತ್ತಿರುವ ಅವರು ಛಲದಂಕಮಲ್ಲರೇ ಸರಿ. ಅವರ ಕಾರ್ಯಕ್ಕೆ ಈ ಬಾರಿಯ 'ಮಹಿಪತಿದಾಸರು' ಚಲನಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತವರು ನಮ್ಮ ಹುಬ್ಬಳ್ಳಿಯ ಪ್ರಖ್ಯಾತ ನೇತ್ರವೈದ್ಯರು, ಪದ್ಮಶ್ರೀ ಪುರಸ್ಕೃತರಾದ ಡಾ. ಎಂ. ಎಂ. ಜೋಶಿಯವರು ಎಂಬುದು ಹುಬ್ಬಳ್ಳಿಯವರಾದ ನಮಗೆಲ್ಲ ಅತ್ಯಂತ ಹೆಮ್ಮೆಯ ವಿಷಯವಾಗಿದೆ.
'ಮಹಿಪತಿದಾಸರು' ಚಲನಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಬ್ಬ ಕಲಾವಿದರೂ ತಮಗೆ ಸಿಕ್ಕ ಸದವಕಾಶವನ್ನು ಯಶಸ್ವಿಯಾಗಿ ನಿಭಾಯಿಸಿ ತೋರುವ ಧನ್ಯತಾಭಾವವನ್ನು ಕಂಡು ಪ್ರೇಕ್ಷಕರಿಗೂ ಒಂದು ಅತ್ಯುತ್ತಮ ಚಿತ್ರ ವೀಕ್ಷಿಸಿದ ಸಾರ್ಥಕ್ಯದ ಅನುಭವವಾಗುತ್ತದೆ. ನಾಯಕನಟರಾದ ಶ್ರೀ ವಿಜಯಾನಂದ ಅವರ ಪರಕಾಯಪ್ರವೇಶದ ನಟನೆ, ಮನೋಜ್ಞವಾದ ಅಭಿನಯ ಇಡೀ ಚಿತ್ರದ ಆಕರ್ಷಣೆಯ ಕೇಂದ್ರವಾಗಿದ್ದು, ಪತ್ನಿಯ ಪಾತ್ರಧಾರಿ ಚಾಂದನಿ, ತಂದೆಯ ಪಾತ್ರ ನಿರ್ವಹಿಸಿದ ಶ್ರೀಯುತ ಬೆಳ್ಳುಬ್ಬಿ ಸರ್, ಭಾಸ್ಕರ ಸ್ವಾಮಿಗಳ ಪಾತ್ರಧಾರಿಗಳು... ಹೀಗೆ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿ ಚಿತ್ರದ ಗರಿಮೆಯನ್ನು ಹೆಚ್ಚಿಸಿದ್ದಾರೆ. ವೈಭವೋಪೇತ ಒಳಾಂಗಣ ಸೆಟ್ಗಳು, ಸುಂದರವಾದ ಹೊರಾಂಗಣಗಳಲ್ಲಿ ಚಿತ್ರೀಕರಣಗೊಂಡ ಈ ಚಲನಚಿತ್ರವು ವೀಕ್ಷಿಸುವ ಕಣ್ಣುಗಳಿಗೆ ಹಬ್ಬ, ಮನಕೆ ಮಹದಾನಂದವನ್ನುಂಟು ಮಾಡುವಲ್ಲಿ ಸಫಲವಾಗಿದೆ.
ಅಲ್ಲದೇ ಬಹುಮುಖ ಪ್ರತಿಭೆಯ ನಿರ್ದೇಶಕರಾದ ಡಾ. ಹವಾಲ್ದಾರ್ ಸರ್ ಅವರ ಇನ್ನೊಂದು ವಿಶೇಷ ಪ್ರತಿಭೆಯ ಅನಾವರಣ ಈ ಚಲನಚಿತ್ರದ ಮೂಲಕ ಆಗಿದೆ. ಅವರು ಸಂಗೀತ ನಿರ್ದೇಶನ ಮತ್ತು ಸುಮಧುರ ಗಾಯನದೊಂದಿಗೆ ಪ್ರೇಕ್ಷಕವರ್ಗವನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ಸನ್ನು ಕಂಡಿದ್ದಾರೆ. ಚಿತ್ರಕಥೆಗೆ ಪೂರಕವಾಗಿ ಪರದೆಯ ಮೇಲೆ ಮೂಡಿಬರುವ ಮಹಿಪತಿದಾಸರ ಮಹೋನ್ನತ ರಚನೆಗಳು ಆಸ್ವಾದಿಸುವ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಾರಣ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಶ್ರೀ ಮಹಿಪತಿದಾಸರ ಸುಪುತ್ರರಾದ ಶ್ರೀಕೃಷ್ಣದಾಸರ "ಉಧೋ ಉಧೋ ಎಲ್ಲಮ್ಮ" ಗೀತೆಯಂತೂ ಇಡೀ ಚಿತ್ರಮಂದಿರ ದೇವಿಯ ದೈವಿಕ ಶಕ್ತಿಯ ಅನುಭೂತಿಯಿಂದ ತೇಲುವಂತೆ ಮಾಡುತ್ತದೆ. ತಮ್ಮ ಪ್ರತಿ ದಾಸ ಚಿತ್ರಗಳ ಮೂಲಕ ನಿರ್ದೇಶನದಲ್ಲಿ ಪಳಗುತ್ತ ಸಾಗುತ್ತಿರುವ ಡಾ. ಹವಾಲ್ದಾರ್ ಸರ್ ಅವರ ಪಾತ್ರಗಳ ಆಯ್ಕೆ, ಕಥೆಯನ್ನು ನಿರೂಪಿಸುವ ಚಾಕಚಕ್ಯತೆ ಈ ಚಲನಚಿತ್ರದಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರವಾಗುತ್ತದೆ. ಕೊನೆಯಲ್ಲಿ ಬರುವ ಮಹಿಪತಿದಾಸರಿಗೆ ಅವತಾರತ್ರಯರ (ಹನುಮ, ಭೀಮ, ಮಧ್ವ) ದರ್ಶನದ ದೃಶ್ಯವನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಮಾಡಿದ್ದು ಅತ್ಯದ್ಭುತವಾಗಿ, ಪರಿಣಾಮಕಾರಿಯಾಗಿ ಮೂಡಿಬಂದಿದೆ. ಈ ಚಲನಚಿತ್ರದ ಕಥೆ ಮತ್ತು ಸಂಭಾಷಣೆಯನ್ನು ಬರೆದ ನಾಡಿನ ಖ್ಯಾತ ಸಾಹಿತಿಗಳು, ಸಂಶೋಧಕರಾದ ಶ್ರೀಯುತ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ, ಎಲ್ಲಮ್ಮನ ಹಾಡನ್ನು ಹಾಡಿದ ಖ್ಯಾತ ಗಾಯಕರು ಶ್ರೀ ಅನಂತ ಕುಲಕರ್ಣಿ ಹಾಗೂ ಇನ್ನೊಬ್ಬ ಖ್ಯಾತ ಗಾಯಕರು ಶ್ರೀ ರಾಯಚೂರು ಶೇಷಗಿರಿದಾಸರಿಗೂ ಹೃತ್ಪೂರ್ವಕ ಅಭಿನಂದನೆಗಳು.
'ಸೌರಭ ದಾಸಸಾಹಿತ್ಯ ವಿದ್ಯಾಲಯ'ದ ವಿದ್ಯಾರ್ಥಿಗಳಾದ ನಾವು ಯತಿಗಳ, ದಾಸಶ್ರೇಷ್ಠರ ಜೀವನ ಮತ್ತು ಅವರ ಕೃತಿಗಳ ಆಳವಾದ ಅಧ್ಯಯನವನ್ನು ಮಾಡುತ್ತಿರುವ ಈ ಸಮಯದಲ್ಲೇ ಡಾ. ಹವಾಲ್ದಾರ್ ಸರ್ ನಿರ್ದೇಶನದ ಈ ದಾಸ ಸರಣಿಯ ಚಲನಚಿತ್ರಗಳು ಬಿಡುಗಡೆಗೊಂಡು ರಸದೌತಣವನ್ನು ನೀಡಿ, ಅವರ ಮುಂದಿನ ಚಲನಚಿತ್ರಗಳನ್ನು ಕಾತುರದಿಂದ ಕಾಯುವಂತೆ ಮಾಡುತ್ತಿವೆ. ಅತ್ಯಂತ ಪ್ರಭಾವಶಾಲಿಯಾದ ದೃಶ್ಯ ಮಾಧ್ಯಮದ ಮೂಲಕ ನಾಡಿನ ದಾಸಶ್ರೇಷ್ಠರ ಜೀವನ ಚರಿತ್ರೆಯನ್ನು ಪರಿಚಯಿಸುತ್ತಿರುವ ಡಾ. ಮಧುಸೂದನ ಹವಾಲ್ದಾರ್ ಸರ್ ಮತ್ತು ಅವರ ಚಿತ್ರತಂಡದ ಕಾರ್ಯ ನಿಜಕ್ಕೂ ಸ್ತುತ್ಯಾರ್ಹ; ಅದಕ್ಕಾಗಿ ವಿಶೇಷ ಅಭಿನಂದನೆಗಳು ಮತ್ತು ಧನ್ಯವಾದಗಳು. ಸಮಾಜದ ಎಲ್ಲ ವರ್ಗದವರಿಂದ ಗೌರವಾದರಗಳನ್ನು ಪಡೆದಿದ್ದ ಶ್ರೀ ಮಹಿಪತಿದಾಸರ ಈ ಚಲನಚಿತ್ರವು ಸಹಜವಾಗಿಯೇ ಎಲ್ಲ ವರ್ಗದ ಪ್ರೇಕ್ಷಕರ ಅಭೂತಪೂರ್ವ ಬೆಂಬಲವನ್ನು ಪಡೆದು ಶತದಿನೋತ್ಸವದ ಸಂಭ್ರಮವನ್ನು ಆಚರಿಸುವಂತಾಗಿ, ಡಾ. ಹವಾಲ್ದಾರ್ ಸರ್ ಮತ್ತು ತಂಡದ ನಿರಂತರ ಪರಿಶ್ರಮಕ್ಕೆ ತಕ್ಕುದಾದ ಪ್ರತಿಫಲ ದೊರಕಲೆಂದು ಮನಸಾರೆ ಹಾರೈಸುತ್ತೇವೆ.
- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ


