ಉಡುಪಿ: ತುಳಸಿ ಸಂಕೀರ್ತನಾ ಸ್ಪರ್ಧೆ, ‘ಶ್ರೀಮಧ್ವಾನುಗ್ರಹ’ ಪ್ರಶಸ್ತಿ ಪ್ರದಾನ

Upayuktha
0

 



ಉಡುಪಿ: ಪರ್ಯಾಯ ಶ್ರೀ ಶಿರೂರು ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ರಿ.) ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 'ತುಳಸಿ ಸಂಕೀರ್ತನಾ ಸ್ಪರ್ಧೆ' ಹಾಗೂ 'ಶ್ರೀಮಧ್ವಾನುಗ್ರಹ ಪ್ರಶಸ್ತಿ ಪ್ರದಾನ' ಕಾರ್ಯಕ್ರಮವು ಶನಿವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.


ಬೆಳಿಗ್ಗೆ 9:00 ಗಂಟೆಗೆ ಶ್ರೀ ಶಿರೂರು ಮಠದ ದಿವಾನರಾದ ಡಾ. ಉದಯಕುಮಾರ ಸರಳತ್ತಾಯರು ಸಂಕೀರ್ತನ ತಂಡದ ಸದಸ್ಯರಿಗೆ ತಾಳವನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಪರ್ಧೆಯ ಯಶಸ್ಸಿಗೆ ದೇವರಲ್ಲಿ ಪ್ರಾರ್ಥಿಸಿದರು. ಬಳಿಕ ನಡೆದ ಭಜನಾ ಸಂಕೀರ್ತನಾ ಸ್ಪರ್ಧೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 16 ತಂಡಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದವು.


ಸಂಜೆ ನಡೆದ ಸಮಾರೋಪ ಹಾಗೂ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ವಹಿಸಿದ್ದರು. ಈ ಸಂದರ್ಭದಲ್ಲಿ ನಾಡಿನ ಹಿರಿಯ ವಿದ್ವಾಂಸರಾದ ವಿದ್ವಾನ್ ಶ್ರೀ ಅಡ್ವೆ ಲಕ್ಷ್ಮೀಶ ಆಚಾರ್ಯ, ಡಾ. ಬಿ. ಗೋಪಾಲ ಆಚಾರ್ಯ ಹಾಗೂ ಡಾ. ಅಜಿತ್ ಕುಮಾರ್ ಆಚಾರ್ಯ ಅವರಿಗೆ ತಲಾ ರೂ. 10,000 ನಗದು, ಶಾಲು, ಹಾರ ಮತ್ತು ಸ್ಮರಣಿಕೆಗಳೊಂದಿಗೆ ಪ್ರತಿಷ್ಠಿತ ‘ಶ್ರೀಮಧ್ವಾನುಗ್ರಹ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ, ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪುರಸ್ಕೃತರಾದ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಅವರಿಗೆ ‘ಸಾಧನ ಗೌರವ ಪ್ರಶಸ್ತಿ’ ನೀಡಿ ಶ್ರೀಗಳು ಅನುಗ್ರಹಿಸಿದರು.


ನಂತರ ಆಶೀರ್ವಚನ ನೀಡಿದ ಪೂಜ್ಯ ಶ್ರೀಪಾದರು, ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಯನ್ನು ಶ್ಲಾಘಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಸದಸ್ಯರಿಗೆ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ಡಾ. ವಂಶಿಕೃಷ್ಣ ಆಚಾರ್ಯ, ವಿದ್ವಾನ್ ಕೆ.ಪಿ. ಕುಮಾರ್ ಗುರು ತಂತ್ರಿ ಕೊರಂಗ್ರಪಾಡಿ, ಸಂಸ್ಥೆಯ ಗೌರವಾಧ್ಯಕ್ಷ ಅರವಿಂದಾಚಾರ್ಯ, ಅಧ್ಯಕ್ಷ ಜಯರಾಮ ಆಚಾರ್ಯ ಹಾಗೂ ಮಹಿಳಾ ಅಧ್ಯಕ್ಷೆ  ಪದ್ಮಲತಾ ವಿಷ್ಣು ಉಪಸ್ಥಿತರಿದ್ದರು.


ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕುಂಜಾರು ಗಿರಿಬಳಗ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಪಡುಬಿದ್ರೆಯ ವಾದಿರಾಜ ಸಂಕೀರ್ತನ ತಂಡ ಮತ್ತು ಪುತ್ತೂರು ಬ್ರಾಹ್ಮಣ ಸಭಾ ತಂಡಗಳು ಸಮಾಧಾನಕರ ಬಹುಮಾನಕ್ಕೆ ಪಾತ್ರವಾದವು. ಮಹಿಳೆಯರ ವಿಭಾಗದಲ್ಲಿ ಕನ್ನರ್ಪಾಡಿಯ ಜಯದುರ್ಗಾ ಭಜನಾ ಮಂಡಳಿ ಪ್ರಥಮ, ಯುವ ಬ್ರಾಹ್ಮಣ ಪರಿಷತ್ ದ್ವಿತೀಯ ಹಾಗೂ ಬೈಲೂರು ಬ್ರಾಹ್ಮಣ ಸಭಾ ತಂಡಗಳು ತೃತೀಯ ಬಹುಮಾನವನ್ನು ಪಡೆದುಕೊಂಡವು. ಮಕ್ಕಳ ವಿಭಾಗದಲ್ಲಿ ಕರಂಬಳ್ಳಿ ಬ್ರಾಹ್ಮಣ ಸಭಾ ಪ್ರಥಮ, ಕುಂಜಾರು ಗಿರಿಬಳಗ ದ್ವಿತೀಯ ಹಾಗೂ ಬೈಲೂರು ಬ್ರಾಹ್ಮಣ ಸಭಾ ತೃತೀಯ ಸ್ಥಾನವನ್ನು ಗಳಿಸಿದವು. ವಿಜೇತ ತಂಡಗಳಿಗೆ ಪರ್ಯಾಯ ಶ್ರೀ ಶಿರೂರು ಮಠದ ವತಿಯಿಂದ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.



ಸ್ಪರ್ಧೆಯ ತೀರ್ಪುಗಾರರಾಗಿ ಉಷಾ ಹೆಬ್ಬಾರ್, ಅರ್ಪಿತಾ ಹೆಗ್ಡೆ, ರಾಮಕೃಷ್ಣ ಕೊಡಂಚ, ಸ್ವಾತಿ ಆಚಾರ್ಯ ಹಾಗೂ ಪಿ. ಲಕ್ಷ್ಮೀನಾರಾಯಣ ಉಪಾಧ್ಯ ಸಹಕರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಂಸ್ಥೆಯ ಕೋಶಾಧಿಕಾರಿ ಕೃಷ್ಣಮೂರ್ತಿ ಆಚಾರ್ಯ, ಅಮಿತಾ ಕ್ರಮಧಾರಿ ಕೊರಂಗ್ರಪಾಡಿ, ಕೆ. ರಘುಪತಿ ರಾವ್, ಆಶಾ ಕೆ. ರಘುಪತಿ ರಾವ್, ರಮಾಕಾಂತ್ ಕಿನ್ನಿಮೂಲ್ಕಿ, ವಿವೇಕಾನಂದ ಪಾಂಗಣ್ಣಾಯ, ವಿಷ್ಣು ಪಾಡಿಗಾರ್ ಹಾಗೂ ಶ್ಯಾಮಲಾ ಅವರು ಶ್ರಮಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top