ಕುಳಾಯಿ: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೆ ಒಳಪಟ್ಟ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಮೈರ್ಪಾಡಿ ಕುಳಾಯಿ ಇಲ್ಲಿ ಶಾಲಾ ವಾರ್ಷಿಕೋತ್ಸವವು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಜರುಗಿತು.
ಬೆಳಗ್ಗೆ ನಡೆದ ಆಟೋಟ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರಿನ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ರಾಮಕೃಷ್ಣ ಹೊಳ್ಳ, ವರ್ಕಾಡಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಪ್ರಸನ್ನ ಮೈರ್ಪಾಡಿ, ಶಾಲಾ ಸಂಚಾಲಕಿ ಶ್ರೀಮತಿ ಕೆ. ಕಲಾವತಿ ಮತ್ತು ಮುಖ್ಯ ಶಿಕ್ಷಕ ಗೋಪಾಲ್.ವಿ ಉಪಸ್ಥಿತರಿದ್ದರು.
ಸಾಯಂಕಾಲ ಜರುಗಿದ ಸಮಾರಂಭದ ಅಧ್ಯಕ್ಷತೆಯನ್ನು ಹಿಂದು ವಿದ್ಯಾದಾಯಿನೀ ಸಂಘದ ಗೌರವಾನ್ವಿತ ಕಾರ್ಯದರ್ಶಿ ಶ್ರೀಯುತ ಶ್ರೀರಂಗ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಮಾಜಿ ಅಧ್ಯಕ್ಷ ಪ್ರಭಾಕರ್ ಕುಳಾಯಿ ಮತ್ತು ಶಾಲಾ ಹಳೆ ವಿದ್ಯಾರ್ಥಿನಿ ಶ್ರೀಮತಿ ಶ್ಯಾಮಲಾ ಶುಭಕರನ್ ಭಾಗವಹಿಸಿದ್ದರು. ಶಾಲಾ ಸಂಚಾಲಕರಾದ ಶ್ರೀಮತಿ ಕೆ. ಕಲಾವತಿ ಮತ್ತು ಮುಖ್ಯೋಪಾಧ್ಯಾಯರಾದ ಗೋಪಾಲ್.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ:
ಕಾರ್ಯಕ್ರಮದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನೃತ್ಯ ಸಂಯೋಜನೆ ಮಾಡಿದ ವಿದುಷಿ ಶ್ರೀಮತಿ ಭಾರತಿ, ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಅಕ್ಷಯ ಕುಮಾರ ಕುಳಾಯಿ ಹಾಗೂ ಯಕ್ಷಗುರು ಶ್ರೀಮತಿ ಪೂರ್ಣಿಮಾ ಯತೀಶ್ ರೈ ಇವರನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಾಲಾ ಸಂಚಾಲಕರಾದ ಶ್ರೀಮತಿ ಕೆ. ಕಲಾವತಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಗೋಪಾಲ್.ವಿ ವಾರ್ಷಿಕ ವರದಿ ವಾಚಿಸಿದರು. ಸಹಶಿಕ್ಷಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರೆ, ಸಹಶಿಕ್ಷಕ ಮಲಕಪ್ಪ ಹನುಮಪ್ಪ ಧನ್ಯವಾದ ಸಮರ್ಪಿಸಿದರು. ಸಮಾರಂಭದಲ್ಲಿ ಹಿಂದು ವಿದ್ಯಾದಾಯಿನೀ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಶಿಕ್ಷಕ ರಕ್ಷಕ ಸಂಘ, ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು ಮತ್ತು ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

