ಸಂಸ್ಕೃತಿ, ಮೌಲ್ಯ, ಜೀವನೋತ್ಸಾಹ ನೀಡದ ಶಿಕ್ಷಣ ಅರ್ಥ ಹೀನ‌: ಡಾ. ಗುರುರಾಜ ಕರ್ಜಗಿ

Shreya Hegde
0

ಕಟೀಲು ಭ್ರ ಮರ ಇಂಚರ ನುಡಿ ಹಬ್ಬ 





ಕಟೀಲು: ಶಿಕ್ಷಣ ಎಂದರೆ ಜ್ಞಾನ ಸಂಪಾದನೆ ಎನ್ನುವ ಕಾಲವಿತ್ತು. ಈಗ ಅದು ಭವಿಷ್ಯದ ಬದುಕಿಗಾಗಿ ಹೂಡಿಕೆ ಎನ್ನುವ ಮಟ್ಟಕ್ಕೆ ಬದಲಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಲೆ, ಸಂಗೀತ, ತತ್ವ ಶಾಸ್ತ್ರ, ಸಾಂಸ್ಕೃತಿಕ ಕೋರ್ಸುಗಳನ್ನು ಕೇಳುವವರಿಲ್ಲ ಎಂಬಂತಾಗಿದೆ. ಸಂಪಾದನೆಗಾಗಿ ಕಲಿಕೆ ಎನ್ನುವ ಇಂದಿನ ಪರಿಸ್ಥಿತಿಯಲ್ಲಿ ಆದರ್ಶಗಳು ಕಳೆದು ಹೋಗಿವೆ. ಶಿಕ್ಷಣವೆಂದರೆ ಪದವಿ, ಪ್ರಮಾಣ ಪತ್ರಗಳಲ್ಲ ಎನ್ನುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಂಸ್ಕಾರ, ಸಂಸ್ಕೃತಿ, ಮೌಲ್ಯ, ಜೀವನೋತ್ಸಾಹ ನೀಡದ ಶಿಕ್ಷಣ ಅರ್ಥ ಹೀನವಎಂದು ಶಿಕ್ಷಣ ತಜ್ಞ, ಚಿಂತಕ ಡಾ. ಗುರುರಾಜ ಕರ್ಜಗಿ ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದಿರುವ ಆರನೇ ವರ್ಷದ ಮೂರು ದಿನಗಳ ಭ್ರಮರ ಇಂಚರ ನುಡಿ ಹಬ್ಬದ ಎರಡನೇ ದಿನವಾದ ಶನಿವಾರ ಕಟೀಲು ಪದವಿ ಪೂರ್ವ ಕಾಲೇಜಿನ ಶ್ರೀ ವಿದ್ಯಾ ಸಭಾಭವನದಲ್ಲಿ " ಶಿಕ್ಷಣವೆಂದರೆ ಇಷ್ಟೇ ಅಲ್ಲ" ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.


ಸುಶಿಕ್ಷಿತರಿಂದಲೇ ಅಪಾಯ!

ದೇಶದಲ್ಲಿಂದು ಅನಕ್ಷರಸ್ಥರಿಂದ ಯಾವುದೇ ಅಪಾಯವಿಲ್ಲ. ಆದರೆ ಸುಶಿಕ್ಷಿತರೆನಿಸಿಕೊಂಡ ವೃತ್ತಿಪರರೇ ದೇಶದಲ್ಲಿ ಮೋಸ ವಂಚನೆಯಿಂದ ಗಮನ ಸೆಳೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದ ಡಾ. ಕರ್ಜಗಿ ಐಎಎಸ್ ಅಧಿಕಾರಿಗಳಂಥವರೂ ಅಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೇಶಕ್ಕೆ ಅನ್ಯಾಯವಾಗುತ್ತಿದ್ದರೂ ಮೋಸಗಾರರ ಕಡೆ ಪ್ರಭಾವೀ ವಕೀಲರು ವಾದಕ್ಕೆ ಮುಂದಾಗುತ್ತಿದ್ಧಾರೆ. ಸುಶಿಕ್ಷಿತರೇ ಕೊಲೆ,ಸುಲಿಗೆ, ವಂಚನೆ ಹೀಗೆ ಅಕ್ರಮ ನಡೆಸುತ್ತಿದ್ದಾರೆ. ಶಿಕ್ಷಣ ಮೌಲ್ಯಗಳನ್ನು ನೀಡದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ದೇಶವನ್ನೇ ಚೂರು ಚೂರು ಮಾಡುತ್ತೇವೆ ಎನ್ನುವವರು, ಜೆನ್ ಝೀ ಗಳೆನಿಸಿಕೊಂಡವರ ನಡೆ ನುಡಿಗಳು ಉತ್ತಮ ನಿದರ್ಶಗಳಾಗಿವೆ. ಎಂದವರು ವಿಷಾದಿಸಿದರು. ಹಲವು ದಶಕಗಳ ಹಿಂದೆ ರಾಷ್ಟ್ರದ ಪ್ರಮುಖ ಪತ್ರಿಕೆ ಇಲ್ಲಸ್ಟ್ರೇಟೆಡ್ ವೀಕ್ಲೀ ಯಲ್ಲಿ ಬುದ್ಧಿವಂತರೆನಿಸಿಕೊಂಡವರ ಅಪ್ರಾಮಾಣಿಕತೆಯ ಕುರಿತು ತಾವು ಬರೆದಿದ್ದ ಲೇಖನ ಸಾಕಷ್ಟು ಚರ್ಚೆಗೊಳಗಾದಾಗ ಸಂಪಾದಕ ಖುಷ್ವಂತ್ ಸಿಂಗ್ ಲೇಖನವನ್ನು ಸಮರ್ಥಿಸಿಕೊಂಡ ದಿಟ್ಟತನವನ್ನು ನೆನಪಿಸಿಕೊಂಡ ಅವರು ಐದು ಸಾವಿರ ವಂಚಿಸಿದವರು ಸುದ್ದಿಯಾಗುತ್ತಾರೆ. ಆದರೆ ಸಾವಿರಾರು ಕೋಟಿ ವಂಚಿಸಿದವರು ಆರಾಮವಾಗಿದ್ಧಾರೆ ಎಂದರು.


ಇಂದು ಕಲಿತದ್ದನ್ನು ಬಾಯಿಪಾಠ ಒಪ್ಪಿಸಿ ಅಂಕ ಸಂಪಾದಿಸುವ ಶಿಕ್ಷಣ ಅಪ್ರಯೋಜಕವಾಗಿದೆ. ಪ್ರವಾಸಕ್ಕೆ ಹೋಗುವಾಗ ಅಗತ್ಯ ಬಟ್ಟೆ ಬರೆಗಳನ್ನು ಚಳಿ, ಸೆಕೆ ಹೀಗೆ ಹವಾಮಾನಕ್ಕೆ ಅನುಗುಣವಾಗಿ ಮಾಡುವುದಿದೆ. ನಮ್ಮ ಮಕ್ಕಳ ಭವಿಷ್ಯದ ಪ್ರಯಾಣಕ್ಕೆ ಪ್ಯಾಕ್ ಮಾಡಬೇಕಾದ ಸೂಟ್ ಕೇಸ್ ನಲ್ಲಿ ಮೌಲ್ಯ, ಸಂಸ್ಕೃತಿ, ಸಂಸ್ಕಾರಗಳಿರಲೇಬೇಕು. ಹೃದಯಕ್ಕೆ ತಲುಪಿದ್ದು ಮರೆಯುವುದಿಲ್ಲ, ಕೀಳರಿಮೆಯಿಲ್ಲದ , ಆತ್ಮ ವಿಶ್ವಾಸ ತುಂಬಿದ, ಭಾಷೆಯನ್ನು ಪ್ರೀತಿಸುವ, ಬಳಸುವ, ದೇಶದ ಬಗ್ಗೆ ಅಭಿಮಾನ ತುಂಬಿರುವ ಯುವ ಸಮೂಹ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಮೂಡಿ ಬರಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.


ಸಮಾರಂಭದಲ್ಲಿ ಸಚಿನ್ ಅಡಪ ಗುರುಪುರ, ಡಾ, ಮೋಹನ್ ಭಟ್ ದೇರಳ ಕಟ್ಟೆ, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಅತಿಥಿಗಳನ್ನು ಗೌರವಿಸಿದರು. ಕನ್ನಡ ಉಪನ್ಯಾಸಕಿ ಶೈಲಜಾ ಅತಿಥಿಯವರನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಿಂಧು ಶ್ರೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಡಾ. ಕರ್ಜಗಿ ಹೇಳಿದ್ದು...

* ಶಾಲೆಯಲ್ಲಿ ಕಲಿಸಿದ್ದು ಮರೆತ ಮೇಲೆ ಉಳಿದದ್ದೇ ಶಿಕ್ಷಣ

* ದೇಶ ಹಾಳಾಗಿಲ್ಲ. ಹಾಳಾಗುವುದೂ ಇಲ್ಲ. ಹಾಳಾಗಿರುವುದು ಮಾತು ಹಾಳು ಮಾಡಿದ್ದೂ ನಾವೇ.

* ನಾವು ನುಡಿದಂತೆ ನಡೆದಾಗ ಎಳೆಯರೂ ಅದನ್ನೇ ಅನುಸರಿಸುತ್ತಾರೆ. 

* ನಮ್ಮ ಮಕ್ಕಳು ಸಂಸ್ಕೃತಿ ಎಂಬ ಬೇರು , ಜೀವನೋತ್ಸಾಹ ಎಂಬ ಚಿಗುರು ಕಡಿದು ಕೊಂಡ ಬೊನ್ಸಾಯ್ ಗಿಡಗಳಾಗದೇ ಎತ್ತರ, ಅಡ್ಡ ಬೆಳೆಯುವ ಶರ್ಮನ್ ಕಿಂಗ್ ಮರಗಳಂತಾಗಬೇಕು.

* ಇಂದಿನ ಶಿಕ್ಷಣ ವೆಂಬ ಸ್ಪಷ್ಟ ಪ್ರಕ್ರಿಯೆ ಅಸ್ಪಷ್ಟ ಭವಿಷ್ಯಕ್ಕೆ ಕಾರಣವಾಗಿದೆ.

* ಶಿಕ್ಷಕರಾದವರು ತೈತ್ತರೀಯ ಉಪನಿಷತ್ ಒದಲೇ ಬೇಕಾಗಿದೆ.

* ಪ್ರಕೃತಿಯಲ್ಲಿರುವುದು ಸಂಸ್ಕಾರಗಳಿಂದ ಸಂಸ್ಕೃತಿಯಾಗದಿದ್ದಾಗ ವಿಕೃತಿಯಾಗುತ್ತದೆ.

* ಅವಳಿ ಮನುಷ್ಯರೂ ಬುದ್ದಿ, ದೇಹ ರಚನೆ, ಬೆರಳಿನ ರೇಖೆಗಳಲ್ಲಿ ವಿಭಿನ್ನರಾಗಿರುತ್ತಾರೆ. ಹಾಗಾಗಿ ಮನುಷ್ಯ ಜಗತ್ತಿನ ಅಧ್ಭುತಗಳಲ್ಲಿ ಒಂದು!

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top