ಸುರಪುರ: ಸುರಪುರದ ಹಿರಿಯ ಸಾಹಿತಿ ಹಾಗೂ ಸಂಘಟಕರಾಗಿದ್ದ ಪಾಂಡುರಂಗ ಚಿನ್ನಾಕಾರ ಅವರ ಪುತ್ರರಾದ ಅಪ್ಪಣ್ಣ ಚಿನ್ನಾಕಾರ ಅವರನ್ನು ಕರ್ನಾಟಕ ಸರಕಾರವು ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ಮಂಡಳಿ ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಅದಕ್ಕಾಗಿ ಇವರನ್ನು ಯಾದಗಿರಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ ಜಾಲವಾದಿ ಅವರು ಅಭಿನಂದಿಸಿದ್ದಾರೆ.
ನಿವೃತ್ತ ಮುಖ್ಯ ಶಿಕ್ಷಕರೂ ಆಗಿದ್ದ ಪಾಂಡುರಂಗ ಚಿನ್ನಾಕಾರ ಅವರು ಇಲ್ಲಿನ ಸಾಹಿತ್ಯ, ಸಂಸ್ಕೃತಿ, ಶಿಕ್ಷಣಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಕೆಂಭಾವಿಯಲ್ಲಿ 1996ರಲ್ಲಿ ನಡೆದಿದ್ದ ಸುರಪುರ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನ ರೂವಾರಿಗಳಾಗಿದ್ದರು. ಅವರ ಮಕ್ಕಳು ಗಣೇಶ ಚಿನ್ನಾಕಾರ, ರಮೇಶ ಚಿನ್ನಾಕಾರ, ಅಪ್ಪಣ್ಣ ಚಿನ್ನಾಕಾರ ಅವರು ಸಹ ತಮ್ಮ ತಂದೆಯ ಮಾರ್ಗದಲ್ಲಿಯೇ ಮುನ್ನಡೆದು ಸಮಾಜ ಸೇವೆ, ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಗಣೇಶ ಚಿನ್ನಾಕಾರ ಅವರು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅವಿಭಾಜ್ಯ ಅಂಗವೇ ಆಗಿ, ನಿರಂತರ ಕನ್ನಡಮ್ಮನ ಸೇವೆಗೈಯ್ಯುತ್ತಿದ್ದಾರೆ.
'ಚಿನ್ನಾಕಾರ ಎಂದರೆ ಚಿನ್ನದಂತಹ ಮನಸ್ಸುಳ್ಳವರು ಎಂಬ ಭಾವನೆ ಇದೆ. ಇವರೆಲ್ಲಾ ತಂದೆ ತಾಯಿಗಳು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿರುವುದು ನಮಗೆಲ್ಲಾ ತುಂಬ ಸಂತಸದ ಸಂಗತಿಯಾಗಿದೆ' ಎಂದವರು ಹೇಳಿದ್ದಾರೆ. ಅಪ್ಪಣ್ಣ ಚಿನ್ನಾಕಾರ ಅವರು ಸವಿತಾ ಸಮಾಜದ ಅಧ್ಯಕ್ಷರಾಗಿ, ಯಾದಗಿರಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತ, ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ. ಇವರನ್ನು ಸರಕಾರ ಗುರುತಿಸಿ ಹೊಸ ಜವಾಬ್ದಾರಿಯನ್ನು ನೀಡಿದೆ. ತಮ್ಮ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಸೇವೆ ಸಲ್ಲಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾ, ಇವರಿಗೆ ಮುಂದಿನ ದಿನಗಳಲ್ಲಿ ಸೇವೆ ಸಲ್ಲಿಸಲು ಇನ್ನೂ ಹೆಚ್ಚಿನ ಅವಕಾಶಗಳು ದೊರೆಯಲಿ ಎಂದು ಹಿರಿಯ ಸಾಹಿತಿಗಳೂ ಆದ ಶ್ರೀನಿವಾಸ ಜಾಲವಾದಿ ಅವರು ಹಾರೈಸಿದ್ದಾರೆ.

