ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬೋಗಸ್ ಮತದಾನ: ಬಿಜೆಪಿ ಆರೋಪ

Shreya Hegde
0

 ವೀಡಿಯೊ ಸಾಕ್ಷ್ಯ ಸಮೇತ ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ

‌



ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ನಾಲ್ಕೂ ಕ್ಷೇತ್ರಗಳಲ್ಲಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ, ಪಶ್ಚಿಮ ಪದವೀಧರ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಬೋಗಸ್ ಮತದಾನ (ವೋಟ್ ಚೋರಿ) ನಡೆಸಿದ್ದಾರೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಸಾಕ್ಷ್ಯ ಸಮೇತ ಗಂಭೀರ ಆರೋಪ ಮಾಡಿದರು.


ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಶಾಸಕರಾದ ಧೀರಜ್ ಮುನಿರಾಜು ಹಾಗೂ ಬಿಜೆಪಿ ಮುಖಂಡರ ಉಪಸ್ಥಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಡಿಯೋ ತುಣುಕುಗಳು ಮತ್ತು ದಾಖಲೆಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು.


ಮುಖ್ಯಾಂಶಗಳು:

ಆಶಾ ಪಾಟೀಲ್ ಹೆಸರಿನಲ್ಲಿ ಬೋಗಸ್ ವೋಟ್: ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ್‌ಕುಮಾರ್ ಪಾಟೀಲ್ (ನೀರಲಗಿ) ಅವರ ಧರ್ಮಪತ್ನಿ ಆಶಾ ಪಾಟೀಲ್ ಅವರ ಹೆಸರಿನ ಮತವನ್ನು (ಕ್ರಮ ಸಂಖ್ಯೆ 50) ಬೇರೊಬ್ಬ ಮಹಿಳೆಯಿಂದ ಹಾಕಿಸಲಾಗಿದೆ. 


ಸಚಿವರ ಸಮ್ಮುಖದಲ್ಲೇ ಮತದಾನ: ಪದವೀಧರೆಯಲ್ಲದ ಹಾಗೂ ಹಾವೇರಿ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯೆಯಾಗಿರುವ ಶಿಲ್ಪಾ ಬುಡಣ್ಣವರ್ ಎಂಬುವವರು ಸಚಿವ ರುದ್ರಪ್ಪ ಲಮಾಣಿ ಅವರ ಜೊತೆ ಮತಗಟ್ಟೆ ಸಂಖ್ಯೆ 85ಕ್ಕೆ ತೆರಳಿ ಆಶಾ ಪಾಟೀಲ್ ಅವರ ಹೆಸರಿನಲ್ಲಿ ಬ್ಯಾಲೆಟ್ ಪೇಪರ್ ಪಡೆದು ಕಳ್ಳಮತದಾನ ಮಾಡಿದ್ದಾರೆ.


ಕಾಂಗ್ರೆಸ್‌ನ ಇಬ್ಬಂದಿ ನೀತಿ: ಒಂದೆಡೆ ದೆಹಲಿಯಲ್ಲಿ "ವೋಟ್ ಬಚಾವೋ, ದೇಶ್ ಬಚಾವೋ" ಎಂದು ಪ್ರತಿಭಟನೆ ನಡೆಸಲು ಹೊರಟಿರುವ ಕಾಂಗ್ರೆಸ್ ನಾಯಕರು, ಇನ್ನೊಂದೆಡೆ ಸ್ವತಃ ಬೋಗಸ್ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಟೀಕಿಸಿದರು.


ಚುನಾವಣಾ ಆಯೋಗ ಹಾಗೂ ಪೊಲೀಸರಿಗೆ ದೂರು: ಬಿಜೆಪಿ ಪ್ರತಿಭಟನೆಯ ಫಲವಾಗಿ ಕರ್ತವ್ಯ ಲೋಪವೆಸಗಿದ್ದ ಮತಗಟ್ಟೆ ಸಹಾಯಕ ಶಿಕ್ಷಕ ವಿ. ಜಿ. ಮಲ್ಲೂರ್ ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ ಕಳ್ಳಮತದಾನ ಮಾಡಿದ ಶಿಲ್ಪಾ ಬುಡಣ್ಣವರ್ ಹಾಗೂ ಇದಕ್ಕೆ ಕಾರಣರಾದ ಕಾಂಗ್ರೆಸ್ ಮುಖಂಡರ ವಿರುದ್ಧ ಸೂಕ್ತ ತನಿಖೆ ನಡೆಸಿ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.


'ಗೃಹಲಕ್ಷ್ಮಿ' ಯೋಜನೆಯ ₹5,000 ಕೋಟಿ ಎಲ್ಲಿ ಹೋಯಿತು?

ಇದೇ ವೇಳೆ ಸರಕಾರದ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಶಾಸಕರು, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ₹5,000 ಕೋಟಿ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆ ಈ ಕುರಿತು ಶ್ವೇತಪತ್ರ ಹೊರಡಿಸಬೇಕು. ಪರಿಷ್ಕರಣೆಯ ನೆಪದಲ್ಲಿ ಬಡ ತಾಯಂದಿರಿಗೆ ನೀಡಬೇಕಾದ ಬಾಕಿ ಹಣವನ್ನು ಮುಚ್ಚಿಹಾಕಲು ಯತ್ನಿಸಿದರೆ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಜನ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.


ಈ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಧೀರಜ್ ಮುನಿರಾಜು, ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ರಾಜ್ಯ ವಕ್ತಾರರಾದ ವಿಜಯ್ ಪ್ರಸಾದ್, ಎಚ್. ಎನ್. ಚಂದ್ರಶೇಖರ್ ಹಾಗೂ ವಿಕಾಸ್ ಪೂಜಾರಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top