ಉಡುಪಿ ಜಿಲ್ಲೆ ಸ್ಥಾಪನೆಯಾದಂದಿನಿಂದಲೂ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಜಿಲ್ಲೆಯ ಸಾಧಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸೇವೆಯನ್ನು ಗುರುತಿಸಿ ವೇದಿಕೆಯಲ್ಲಿ ಗೌರವಿಸುವುದು ಸಾಂಪ್ರದಾಯಿಕವಾಗಿ ನಡೆದುಬಂದ ಸಂಸ್ಕೃತಿ. ಆದರೆ, ಈ ಬಾರಿ ಉಡುಪಿ ಜಿಲ್ಲಾಧಿಕಾರಿಗಳು ತಾವೇ ಸ್ವಯಂ ಸೃಷ್ಟಿಸಿಕೊಂಡ ನಿಯಮವೊಂದನ್ನು ಹೇರಿ, ಜಿಲ್ಲಾಮಟ್ಟದ ಪ್ರಶಸ್ತಿಗೆ ಕತ್ತರಿ ಹಾಕುವ ಮೂಲಕ ಜಿಲ್ಲೆಯ ಸಾಧಕರಿಗೆ ತೀವ್ರ ನಿರಾಸೆ ಮೂಡಿಸಿದ್ದಾರೆ.
ಅವರು ಈ ನಿರ್ಧಾರಕ್ಕೆ ನೀಡುತ್ತಿರುವ ಕಾರಣವಂತೂ ತೀರಾ ಹಾಸ್ಯಾಸ್ಪದವಾಗಿದೆ. "ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ನೀಡಿದರೆ ರಾಜ್ಯಮಟ್ಟದ ಪ್ರಶಸ್ತಿಯ ಘನತೆ-ಗೌರವ ಕಡಿಮೆಯಾಗುತ್ತದೆ" ಎಂಬುದು ಅವರ ವಾದ. ಹಾಗಾದರೆ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷ ಜಿಲ್ಲಾ ಪ್ರಶಸ್ತಿ ನೀಡಲಾಗುತ್ತಿದೆಯಲ್ಲ, ಅಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಗೌರವ ಕಡಿಮೆಯಾಗಿದೆಯೇ? ಅಥವಾ ಇಷ್ಟು ವರ್ಷಗಳ ಕಾಲ ಉಡುಪಿಯಲ್ಲಿ ಜಿಲ್ಲಾ ಪ್ರಶಸ್ತಿ ನೀಡಿದ್ದರಿಂದ ರಾಜ್ಯೋತ್ಸವ ಪ್ರಶಸ್ತಿಯ ಮೌಲ್ಯವೇನಾದರೂ ಕುಂದಿತ್ತೇ?
ಜಿಲ್ಲಾಮಟ್ಟದಲ್ಲಿ ನೀಡುವ ಪ್ರಶಸ್ತಿಗೆ ಸರಕಾರಿ ಅಧಿಕೃತ ಮುದ್ರೆ ಇಲ್ಲ ಎಂಬ ಭಾವನೆ ಜಿಲ್ಲಾಡಳಿತಕ್ಕಿದ್ದರೆ, ಇದುವರೆಗೆ ಈ ಪ್ರಶಸ್ತಿ ಪಡೆದುಕೊಂಡವರೆಲ್ಲರೂ ತಮ್ಮ ಪ್ರಶಸ್ತಿಗಳನ್ನು ಜಿಲ್ಲಾಡಳಿತಕ್ಕೇ ವಾಪಸ್ ನೀಡುವುದು ಸೂಕ್ತ. ಆ ಮೂಲಕವಾದರೂ ರಾಜ್ಯಮಟ್ಟದ ಪ್ರಶಸ್ತಿಯ ‘ಘನತೆ’ಯನ್ನು ಉಳಿಸಿದ ಕೀರ್ತಿ ಉಡುಪಿ ಜಿಲ್ಲಾಡಳಿತಕ್ಕೆ ಸಿಗಲಿ! ಇದೇ ತರ್ಕವನ್ನು ಮುಂದುವರಿಸಿದರೆ, ಮುಂದೆ ಶಿಕ್ಷಕರ ದಿನಾಚರಣೆಯಂದು ನೀಡುವ ಜಿಲ್ಲಾಮಟ್ಟದ 'ಉತ್ತಮ ಶಿಕ್ಷಕ' ಪ್ರಶಸ್ತಿಯನ್ನೂ ನಿಲ್ಲಿಸಿದರೂ ಆಶ್ಚರ್ಯವಿಲ್ಲ. ಏಕೆಂದರೆ, ಅಲ್ಲೂ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗುತ್ತದಲ್ಲವೇ?
ಈಗಾಗಲೇ ಜಿಲ್ಲೆಯ ಹಲವಾರು ಹಿರಿಯ ವ್ಯಕ್ತಿಗಳು ಹಾಗೂ ಸಾಧಕರು ಪ್ರಶಸ್ತಿಯ ನಿರೀಕ್ಷೆಯಲ್ಲಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಹತೆ ಮತ್ತು ನಿರೀಕ್ಷೆಗೆ ಕನಿಷ್ಠ ಗೌರವವನ್ನೂ ನೀಡದೆ, ಏಕಾಏಕಿ ಪ್ರಶಸ್ತಿ ವಿತರಣೆಗೆ ಬ್ರೇಕ್ ಹಾಕಿರುವುದು ಉಡುಪಿ ಜಿಲ್ಲೆಯ ಜನರಲ್ಲಿ ತೀವ್ರ ಅಸಮಾಧಾನವನ್ನುಂಟುಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಸಾಧಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂಬುದು ಉಡುಪಿ ಜಿಲ್ಲೆಯ ಸಮಸ್ತ ಜನರ ಒಕ್ಕೊರಲ ಒತ್ತಾಯವಾಗಿದೆ.
– ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.

