ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭ

Shreya Hegde
0



ಸುರತ್ಕಲ್: ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಆಸರೆಯಾಗುವ ಜೊತೆಗೆ, ತಮ್ಮ ಗುರಿಗಳನ್ನು ಸಾಧಿಸಲು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಲು ಉತ್ತಮ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಇಸ್ರೋದ ನಿವೃತ್ತ ವಿಜ್ಞಾನಿ ಲಕ್ಷ್ಮೀಶ ಭಟ್, ಕಳವಾರ್ ಅಭಿಪ್ರಾಯಪಟ್ಟರು.


ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ (IQAC) ಸಹಯೋಗದೊಂದಿಗೆ, ರಾಧಾ ದಯಾನಂದ ರಾವ್ ಟ್ರಸ್ಟ್ ವತಿಯಿಂದ ದಿವಂಗತ ಪೇಜಾವರ ದಯಾನಂದ ರಾವ್ ಅವರ ಸ್ಮರಣಾರ್ಥ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪೇಜಾವರ ರಾಧಾ ದಯಾನಂದ ರಾವ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ರಾಧಾ ರಾವ್ ಅವರು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್‌ನ ಟ್ರಸ್ಟಿ ಪ್ರವೀಣ್ ರಾವ್, "ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಟ್ರಸ್ಟ್ ನಿರಂತರವಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು," ಎಂದು ಕರೆ ನೀಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ್ ಆಚಾರ್ಯ ಮಾತನಾಡಿ, "ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಾಧನೆಯೇ ವಿದ್ಯಾರ್ಥಿವೇತನಕ್ಕೆ ಮುಖ್ಯ ಮಾನದಂಡವಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ಹಲವು ದಾನಿಗಳಿಂದ ಪ್ರೋತ್ಸಾಹ ಮತ್ತು ವಿದ್ಯಾರ್ಥಿವೇತನ ದೊರೆಯುವಂತೆ ಕಾಲೇಜು ನಿರಂತರವಾಗಿ ಶ್ರಮಿಸುತ್ತಿದೆ," ಎಂದರು.


ಶಾರದಾ ಪೂಜಾ ಸಮಾರಂಭ:

ಇದೇ ಶುಭ ಸಂದರ್ಭದಲ್ಲಿ ಕಾಲೇಜಿನ ಗ್ರಂಥಾಲಯದಲ್ಲಿ ಜರಗಿದ ಶಾರದಾ ಪೂಜಾ ಸಮಾರಂಭವನ್ನು ಪೇಜಾವರ ರಾಧಾ ದಯಾನಂದ ರಾವ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ರಾಧಾ ರಾವ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.


40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ:

ರಾಧಾ ದಯಾನಂದ ರಾವ್ ಟ್ರಸ್ಟ್ ವತಿಯಿಂದ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ 36 ವಿದ್ಯಾರ್ಥಿಗಳಿಗೆ ಹಾಗೂ ಮುಲ್ಕಿಯ ವಿಜಯ ಕಾಲೇಜಿನ 4 ವಿದ್ಯಾರ್ಥಿಗಳಿಗೆ ಸೇರಿದಂತೆ ಒಟ್ಟು 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ., ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಮುರಳೀಧರ ರಾವ್, ಟ್ರಸ್ಟಿಗಳಾದ ಶ್ರೀಮತಿ ಪೂರ್ಣಿಮಾ ರಾವ್, ಶ್ರೀಮತಿ ಮಲ್ಲಿಕಾ ಪ್ರವೀಣ್ ರಾವ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಾಮನ ಕಾಮತ್, ಗ್ರಂಥಪಾಲಕಿ ಡಾ. ಸುಜಾತ ಬಿ., ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಗಣೇಶ್ ಆಚಾರ್ಯ, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಜೆ.ಎಸ್. ಹಾಗೂ ಮುಲ್ಕಿ ವಿಜಯ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ. ವೆಂಕಟೇಶ್ ಭಟ್ ಉಪಸ್ಥಿತರಿದ್ದರು.


ಟ್ರಸ್ಟಿ ಪ್ರವೀಣ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ನೀಲಪ್ಪ ವಿ. ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಮೇಜರ್ ಸುಧಾ ಯು. ವಂದನಾರ್ಪಣೆ ನೆರವೇರಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top