ಕನ್ನಡದಲ್ಲಿ ವಿಜ್ಞಾನ ಪ್ರಪಂಚ ಕಟ್ಟಿದ ಶಿವರಾಮ ಕಾರಂತರು

Shreya Hegde
0


ಡಾ. ಕೆ. ಶಿವರಾಮ ಕಾರಂತರು ಕೇವಲ ಸಾಹಿತ್ಯ ಸೃಷ್ಟಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡವರಲ್ಲ. ವಿಜ್ಞಾನವೂ ಸೇರಿದಂತೆ ಎಲ್ಲಾ ಜ್ಞಾನಶಾಖೆಗಳ ವಿಚಾರಗಳು ಕನ್ನಡದಲ್ಲೇ ದೊರೆಯಬೇಕೆಂಬುದು ಅವರ ಉನ್ನತ ಆಶಯವಾಗಿತ್ತು. ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾದ ಕಾರಂತರು, ತಮ್ಮ 'ವಿಜ್ಞಾನ ಪ್ರಪಂಚ' ಯೋಜನೆಯಡಿ 'ಈ ಜಗತ್ತು', 'ಜೀವ ಜೀವನ', 'ವಸ್ತು ಚೈತನ್ಯ' ಮತ್ತು 'ವಿಜ್ಞಾನ ಸಾಧನ' ಎಂಬ ನಾಲ್ಕು ಬೃಹತ್ ಸಂಪುಟಗಳನ್ನು 1959 ರಿಂದ 1964 ರ ಅವಧಿಯಲ್ಲಿ ಕನ್ನಡಿಗರ ಮುಂದೆ ಇರಿಸಿದರು.


ಅವರ ಈ ಸಾಹಸಮಯ ಪ್ರಯತ್ನ ಆರಂಭದಲ್ಲಿ ಕಷ್ಟಕರವಾಗಿ ಕಂಡರೂ, ಒಟ್ಟಾರೆಯಾಗಿ ನಷ್ಟವನ್ನೇನೂ ತಂದುಕೊಡಲಿಲ್ಲ ಎಂಬುದನ್ನು 'ವಸ್ತು ಚೈತನ್ಯ' ಸಂಪುಟದ ದ್ವಿತೀಯ ಮುದ್ರಣದ (1980) ಮುನ್ನುಡಿಯಲ್ಲಿ ಅವರೇ ಸ್ಮರಿಸಿಕೊಂಡಿದ್ದಾರೆ. ಈ ಮುನ್ನುಡಿಯಲ್ಲಿ ಅವರು ಅಂದಿನ ಶಿಕ್ಷಣ ಕ್ರಮದ ಲೋಪದೋಷಗಳ ಕುರಿತು ಗಂಭೀರವಾಗಿ ಬೆಳಕು ಚೆಲ್ಲುತ್ತಾರೆ: "ನಮ್ಮಲ್ಲಿ ನೆಲೆಸಿರುವ ಶಿಕ್ಷಣ ಕ್ಷೇತ್ರದ ಔದಾಸೀನ್ಯದಿಂದಾಗಿ, ಮಕ್ಕಳಲ್ಲಿ ವಿವಿಧ ರೀತಿಯ ಜ್ಞಾನಕುತೂಹಲವನ್ನು ಬೆಳೆಸಲು ನಾವು ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನನ್ನ ಇಂತಹ ಬರವಣಿಗೆಗಳು ಮಾರಾಟವಾಗದೆ ಹೋದರೆ ಆಶ್ಚರ್ಯವೇನಿಲ್ಲ. ಇದಕ್ಕೆ ಮುಖ್ಯ ಕಾರಣ ಮಕ್ಕಳನ್ನು ಆಕರ್ಷಿಸಿ, ವಿವಿಧ ವಿಷಯಗಳಲ್ಲಿ ಆಸಕ್ತಿ ಮೂಡಿಸದ ಪಠ್ಯಕ್ರಮ ಮತ್ತು ಶಿಕ್ಷಣ ಪದ್ಧತಿ. ಈ ಪರಿಸ್ಥಿತಿ ಬದಲಾಗಬೇಕಾದರೆ, ಇಂತಹ ಜ್ಞಾನವರ್ಧಕ ಪ್ರಯತ್ನಗಳು ನಮ್ಮ ಶಿಕ್ಷಣ ವಿಧಾನದಲ್ಲೇ ಅಳವಡಿಕೆಯಾಗಬೇಕು."


ಒಂದು ಭಾಷೆಯನ್ನು ಶೈಕ್ಷಣಿಕವಾಗಿ ಸಶಕ್ತಗೊಳಿಸುವ ಕ್ರಮ ಯಾವುದು? ಒಂದು ಭಾಷೆ ಶಿಕ್ಷಣದ ಮಾಧ್ಯಮವಾಗಬೇಕಾದಾಗ, ಅದಕ್ಕೆ ಪೂರಕವಾದ ಬೃಹತ್ ಗ್ರಂಥ ಭಂಡಾರ ಬೇಡವೇ? ಎಂಬ ಮೂಲಭೂತ ಪ್ರಶ್ನೆಯನ್ನು ಕಾರಂತರು ಕನ್ನಡಿಗರ ಮುಂದಿಡುತ್ತಾರೆ: "ನಾವೆಲ್ಲರೂ 'ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು' ಎಂದು ಘರ್ಜಿಸುತ್ತೇವೆ! ಆದರೆ ಅದು ನಿಜವಾದ ಮಾಧ್ಯಮವಾಗಬೇಕಾದರೆ, ವಿವಿಧ ವಿಷಯಗಳ ಕುರಿತಾದ ಗ್ರಂಥಬಾಹುಳ್ಯ (ಪುಸ್ತಕಗಳ ವೈವಿಧ್ಯ) ಕನ್ನಡದಲ್ಲಿ ಬರದಿದ್ದರೆ ಹೇಗೆ ಸಾಧ್ಯ? ಕೇವಲ ಪಠ್ಯಪುಸ್ತಕಗಳ (Textbooks) ರಚನೆ ಮತ್ತು ವ್ಯಾಪಾರದ ವ್ಯಾಮೋಹದಿಂದಷ್ಟೇ ದುಡಿದರೆ ಕನ್ನಡ ನುಡಿ ಪುಷ್ಟಿಯಾಗುತ್ತದೆಯೇ? ಶಿಕ್ಷಣ ಮಾಧ್ಯಮವಾಗಿ ಯಶಸ್ವಿಯಾಗಲು ಸಾಧ್ಯವೇ?" ಎಂದು ಅವರು ನೇರವಾಗಿ ಪ್ರಶ್ನಿಸುತ್ತಾರೆ.


ಹೊಸದಾಗಿ ಭಾಷೆಯೊಂದನ್ನು ಶೈಕ್ಷಣಿಕ ಲೋಕದಲ್ಲಿ ವಿಸ್ತರಿಸುವಾಗ ಆಗಬೇಕಾದ ಕಾರ್ಯಗಳು ಅನೇಕ. ಅದಕ್ಕೆ ಸುಸಜ್ಜಿತ ಕಾರ್ಯಯೋಜನೆಗಳ ಅಗತ್ಯವಿದೆ ಎಂಬುದನ್ನು ವಿವರಿಸುತ್ತಾ-  "ಯಾವ ವಿಷಯದಲ್ಲೂ ಸೂಕ್ತ ಗ್ರಂಥಗಳೇ ಇಲ್ಲದಿರುವ ಭಾಷೆಯಲ್ಲಿ ಎಷ್ಟೆಲ್ಲ ಕೆಲಸಗಳಾಗಬೇಕಲ್ಲವೇ? ಮೊದಲು ಗ್ರಂಥಸಮುದಾಯ ಬೆಳೆಯಬೇಕು; ಅವುಗಳಲ್ಲಿ ಬರುವ ವಿಷಯಗಳನ್ನು ಕುರಿತು ಇನ್ನಷ್ಟು ಆಳವಾಗಿ ತಿಳಿಯಲು ಬಯಸುವವರಿಗೆ ಆಧಾರ ಗ್ರಂಥಗಳು (Reference Books) ಬೇಕು. ತದನಂತರ ವಿಶ್ವಕೋಶಗಳೂ ನಿರ್ಮಾಣವಾಗಬೇಕು" ಎನ್ನುತ್ತಾರೆ.


ಕನ್ನಡದ ಜ್ಞಾನ ಭಂಡಾರವನ್ನು ಸಮೃದ್ಧಗೊಳಿಸಲು ಕಾರಂತರು ಸತತವಾಗಿ ಶ್ರಮಿಸಿದರು. ಯುವ ಸಮುದಾಯದಲ್ಲಿ ಕನ್ನಡ ಓದಿನ ಕುರಿತು ಆಸಕ್ತಿ ಮೂಡಿಸುವ ಬಗ್ಗೆ ಚಿಂತಿಸುತ್ತಾ ಅವರು ಹೀಗೆ ಹೇಳುತ್ತಾರೆ: "ಒಮ್ಮೊಮ್ಮೆ ಅನಿಸುತ್ತದೆ—ಬಲ್ಯದಲ್ಲೇ ಜ್ಞಾನತೃಷೆಯನ್ನು ಬೆಳೆಸಿಕೊಳ್ಳದ ತರುಣರು, ನನ್ನ ಈ ಗ್ರಂಥದಲ್ಲಿ ವಿವರಿಸಿದ ವಿವಿಧ ವಿಷಯಗಳಲ್ಲಿ ಆಸಕ್ತಿ ತಳೆಯಲು ಸಾಧ್ಯವೇ? ನಿಜ, ನನ್ನ ಈ ಕೆಲಸ ತಳಪಾಯವೇ ಇಲ್ಲದ ಮನೋಮಂದಿರದ ಗೋಡೆ ಮತ್ತು ಮಾಡುಗಳನ್ನು ಕಟ್ಟಲು ಹೋದಂತೆಯೇ ಸರಿ! ಚಿಕ್ಕಂದಿನಲ್ಲಿ ಮಕ್ಕಳಲ್ಲಿ ಜ್ಞಾನದ ಹಸಿವನ್ನು ನಮ್ಮ ಮಾತೃಭಾಷೆಯ ಮೂಲಕ ನಾವು ಬೆಳೆಸಲೇ ಇಲ್ಲ. ಬದಲಿಗೆ ನಾವು ಬೆಳೆಸಿದ್ದು ಬರಿ 'ಪರೀಕ್ಷೆ' ಎಂಬ ಡೊಂಬರಾಟಕ್ಕೆ ಸಿದ್ಧತೆಯನ್ನೇ ಹೊರತು, ನಿಜವಾದ ಜ್ಞಾನಲಾಲಸೆಯನ್ನಲ್ಲ."


ಅಂದಿನ ವಾಸ್ತವ ಪರಿಸ್ಥಿತಿ ತಮಗೆ ಅನುಕೂಲಕರವಾಗಿರದಿದ್ದರೂ, ಕಾರಂತರು ಹಿಂಜರಿಯದೆ ವಿಜ್ಞಾನದ ಕಠಿಣ ವಿಚಾರಗಳನ್ನು ಸರಳ ಕನ್ನಡದಲ್ಲಿ ನಿರೂಪಿಸಿದರು. ಕನ್ನಡ ಮಾಧ್ಯಮದಲ್ಲೇ ಶಾಲಾ ಶಿಕ್ಷಣ ಮುಗಿಸಿ ಕಾಲೇಜು ಮೆಟ್ಟಿಲೇರುವ ಯುವಜನತೆಗೆ ಈ ವಿಜ್ಞಾನ ಸಂಪುಟಗಳು ದಾರಿದೀಪವಾಗಬೇಕೆಂಬ ಅವರ ದೀರ್ಘದೃಷ್ಟಿಯ ಪ್ರಯತ್ನವು ಕನ್ನಡ ಸಾಹಿತ್ಯ ಮತ್ತು ವಿಜ್ಞಾನ ಚರಿತ್ರೆಯಲ್ಲಿ ಅತ್ಯಂತ ವಿಶಿಷ್ಟವಾದದ್ದಾಗಿದೆ.


- ಪ್ರೊ. ಕೃಷ್ಣಮೂರ್ತಿ ಕುಳಾಯಿ

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top