ಮಹಿಳಾ ಶಿಕ್ಷಣಕ್ಕೆ ಆದ್ಯತೆ: ಡಾ. ಜಿ. ಶಂಕರ್, ಸರ್ಕಾರಿ ಕಾಲೇಜಿಗೆ ₹25 ಲಕ್ಷ ನಿಧಿ

Shreya Hegde
0



ಉಡುಪಿ: ಇಲ್ಲಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ದಿನಾಚರಣೆ ಹಾಗೂ ಕಾಲೇಜಿನ ವಾರ್ಷಿಕ ಸಂಚಿಕೆ ‘ಕಲಶ’ ಬಿಡುಗಡೆ ಸಮಾರಂಭ ಮಂಗಳವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಮಹಾಪೋಷಕ ಡಾ. ಜಿ. ಶಂಕರ್, “ಸುಮಾರು 25 ವರ್ಷಗಳ ಹಿಂದೆ ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕಂಡ ಕನಸು, ಇಂದು 16 ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುವ ಮಟ್ಟಕ್ಕೆ ಕಾಲೇಜು ಬೆಳೆದಿದೆ” ಎಂದರು.


ಕಾಲೇಜಿಗೆ ಸುಸಜ್ಜಿತ ಸಭಾಭವನದ ಅಗತ್ಯವಿದ್ದು, ಅದನ್ನು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಕಾಲೇಜಿನ ವಿದ್ಯಾರ್ಥಿಗಳ ಅಗತ್ಯತೆಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ₹25 ಲಕ್ಷ ನಿಧಿಯನ್ನು ಮೀಸಲಿಡುವುದಾಗಿ ತಿಳಿಸಿದ ಅವರು, ಗುಣಮಟ್ಟದ ಶಿಕ್ಷಣ ದೊರೆಯಲು ವಿದ್ಯಾರ್ಥಿಗಳಷ್ಟೇ ಅಲ್ಲದೆ ಶಿಕ್ಷಕರೂ ಶಿಸ್ತು ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ತಂದೆ-ತಾಯಿ ಹಾಗೂ ಸಮಾಜಕ್ಕೆ ಒಳಿತನ್ನು ಮಾಡುವ, ಸಂಸ್ಕಾರವಂತ ಪ್ರಜೆಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು ಎಂದು ಹೇಳಿದರು.


ಶಿಕ್ಷಣವು ವ್ಯಕ್ತಿ ನಿರ್ಮಾಣ ಮತ್ತು ಸಮಾಜ ಸುಧಾರಣೆಯ ದಾರಿ:


ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ ಪಾಲ್ ಎ. ಸುವರ್ಣ, “ನಾವು ಜನಪ್ರತಿನಿಧಿಗಳಾಗಿ ನಿಮಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುತ್ತೇವೆ. ನೀವು ಉತ್ತಮ ಫಲಿತಾಂಶಗಳನ್ನು ನೀಡುವ ಮೂಲಕ ಈ ಕಾಲೇಜಿಗೆ ಉತ್ತಮ ಹೆಸರು ತಂದುಕೊಡಬೇಕು. ಕಾಲೇಜಿಗೆ ರ‍್ಯಾಂಕ್‌ಗಳು ಬರಬೇಕು. ಅಷ್ಟೇ ಅಲ್ಲದೆ, ಇಲ್ಲಿಂದ ಹೊರಬರುವ ವಿದ್ಯಾರ್ಥಿನಿಯರು ಸಮಾಜಕ್ಕೆ ಮಾದರಿಯಾಗಬೇಕು” ಎಂದರು.


ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿರುವ ಸರ್ಕಾರಿ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾಗಿದೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ತಾವು ಸಿದ್ಧರಿದ್ದು, 'ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್' ಅವರೊಂದಿಗೂ ಮಾತನಾಡಿ, ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಪಡೆಯಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು. "ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದ ಜ್ಞಾನವನ್ನು ಪಡೆಯುವುದಷ್ಟೇ ಅಲ್ಲ. ಶಿಕ್ಷಣವು ವ್ಯಕ್ತಿ ನಿರ್ಮಾಣಕ್ಕೂ, ಸಮಾಜದ ಸುಧಾರಣೆಗೂ ದಾರಿ ತೋರಿಸುವ ದಾರಿಯಾಗಿದೆ," ಎಂದು ಅವರು ಹೇಳಿದರು.


ವಿದ್ಯಾರ್ಥಿಗಳು ಕನಸು ಕಾಣಬೇಕು:

ಉಡುಪಿ ಜಿಲ್ಲಾ POSH ಸಮಿತಿಯ ಅಧ್ಯಕ್ಷೆ ವಿದ್ಯಾ ಭಟ್ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು ಹಾಗೂ ಕಲಿಕೆಯನ್ನು ಎಂದಿಗೂ ನಿಲ್ಲಿಸಬಾರದು ಎಂದು ಹೇಳಿದರು. ಕೀಳರಿಮೆ ಹೊಂದದೆ, “ಒಳ್ಳೆಯದೇ ಆಗುತ್ತದೆ” ಎಂಬ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಗುರಿ ಸಾಧನೆಗೆ ಪರಿಶ್ರಮ ಅತ್ಯಗತ್ಯ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಕಾನೂನಿನ ಅರಿವು ಹಾಗೂ ಆರ್ಥಿಕ ಸ್ವಾವಲಂಬನೆಯ ಮೂಲಕ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ಅರಿವು ಹೊಂದುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ಮಾತನಾಡಿ, ವಿದ್ಯಾರ್ಥಿಗಳು ಸಮಾಜಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಅವಕಾಶಗಳನ್ನು ರಚನಾತ್ಮಕವಾಗಿ ಬಳಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.


ಕಲಿತ ಸಂಸ್ಥೆಗೆ ಋಣ ತೀರಿಸುವಂತಾಗಬೇಕು:

ಲಯನ್ಸ್ ಕ್ಲಬ್ ನ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉದ್ಯೋಗಿಗಳಾಗಿ ಹಾಗೂ ಉದ್ಯಮಿಗಳಾಗಿ ಬೆಳೆದು, ತಾವು ಕಲಿತ ಸಂಸ್ಥೆಗೆ ಮರಳಿ ಬಂದು ಅದರ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.


ವಿದ್ಯಾರ್ಥಿ ಸಂಘದ ಪ್ರತಿಜ್ಞಾ ವಿಧಿ:

ಪ್ರಸ್ತುತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಚುನಾಯಿತರಾದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಚುನಾವಣಾ ಸಾಕ್ಷರತಾ ಸಮಿತಿ ಸಂಚಾಲಕ ಮಂಜುನಾಥ್ ಪ್ರತಿಜ್ಞಾ ವಿಧಿ ಬೋಧಿಸಿದರು.


‘ಕಲಶ’ ವಾರ್ಷಿಕ ಸಂಚಿಕೆ ಬಿಡುಗಡೆ:

ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ‘ಕಲಶ’ವನ್ನು ಬಿಡುಗಡೆ ಮಾಡಲಾಯಿತು. ಗ್ರಂಥಪಾಲಕ ವೆಂಕಟೇಶ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ‘ಕಲಶ’ವು ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಗೆ ವೇದಿಕೆಯಾಗಿದೆ.


ಸನ್ಮಾನ:

ವಯೋನಿವೃತ್ತಿ ಹೊಂದಿದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಭಟ್ ಅವರನ್ನು ಡಾ. ಜಿ. ಶಂಕರ್ ಹಾಗೂ ಶಾಸಕ ಯಶ್ ಪಾಲ್ ಎ. ಸುವರ್ಣ ಸನ್ಮಾನಿಸಿದರು. ಕಾಲೇಜಿನ ವತಿಯಿಂದ ಡಾ. ಜಿ. ಶಂಕರ್ ಹಾಗೂ ಶಾಸಕ ಯಶ್ ಪಾಲ್ ಎ. ಸುವರ್ಣ ಅವರನ್ನು ಸನ್ಮಾನಿಸಲಾಯಿತು.


ಪ್ರತಿಭಾ ಪ್ರದರ್ಶನ:

ವಿದ್ಯಾರ್ಥಿಗಳು ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ತೀರ್ಪುಗಾರರಾಗಿ ವಿಶ್ವರೂಪ ಮಧ್ಯಸ್ಥ, ಕುಸುಮಾ ಕಾಮತ್ ಹಾಗೂ ಶರತ್ ಕುಮಾರ್ ಭಾಗವಹಿಸಿದರು.


ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ರಾಜೇಂದ್ರ ಕೆ. ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ ಹಾಗೂ ಸಹಾಯಕ ಪ್ರಾಧ್ಯಾಪಕಿ ಕವಿತಾ ಅತಿಥಿಗಳನ್ನು ಪರಿಚಯಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಆಶಾ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top