ಎಂಆರ್‌ಪಿಎಲ್‌ಗೆ ಶಾಸಕರ ಭೇಟಿ, ಅಧಿಕಾರಿಗಳಿಗೆ ಒತ್ತಾಯ
ಮಂಗಳೂರು: ಸ್ಫೋಟ ಸಂಭವಿಸಿದ ಮಂಗಳೂರಿನ ಎಂಆರ್‌ಪಿಎಲ್ ಸ್ಥಾವರಕ್ಕೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಂ ಆರ್ ಪಿ ಎಲ್ ಸ್ಥಾವರದಲ್ಲಿ ನಡೆದ ಸ್ಫೋಟ ಸುರತ್ಕಲ್ ಮಾತ್ರವಲ್ಲ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಭೂಕಂಪನದಂತಹ ಸ್ಪೋಟ ಸೃಷ್ಟಿಯಾಗಿದ್ದು ಎಚ್ಚರಿಕೆಯ ಸಂದೇಶವಾಗಿದೆ. ಮೊದಲ ವರದಿಯಲ್ಲಿ 9 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿತ್ತು. ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ ಸಂದರ್ಭದಲ್ಲಿ ಸ್ಥಾವರದ ಬಳಿ ಕರ್ತವ್ಯ ನಿರತರಾಗಿದ್ದ ನೌಕರ ಮೃತಪಟ್ಟಿರುವುದು ಬಳಿಕ ತಡವಾಗಿ ತಿಳಿದು ಆಘಾತವಾಗಿದೆ ಎಂದು ಶಾಸಕರು ಹೇಳಿದರು.
"ಇಂತಹ ದುರ್ಘಟನೆ ಮುಂದೆ ನಡೆಯಬಾರದು. ಸ್ಫೋಟದ ನಿಖರ ಕಾರಣ ಪತ್ತೆಹಚ್ಚಿ ಸಮಗ್ರ ತನಿಖೆ ನಡೆಸಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕಂಪನಿಯೇ ಭರಿಸಿ, ಸೂಕ್ತ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದರು.
ಇಂತಹ ಅಪಾಯಕಾರಿ ಸ್ಥಳದಲ್ಲಿ ಕೆಲಸ ಮಾಡುವ ನೌಕರವೃಂದಕ್ಕೆ ಸಂಸ್ಥೆಯು ಆರೋಗ್ಯ ಸುರಕ್ಷಾ ಸೌಲಭ್ಯವನ್ನು ತಾಕ್ಷಣ ಜಾರಿ ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ, ಕಾರ್ಮಿಕರಿಗೆ ಸೂಕ್ತ ರಕ್ಷಣಾ ಸೌಲಭ್ಯ ಮತ್ತು ಮೂಲಸೌಕರ್ಯ ಒದಗಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸ್ಫೋಟದಿಂದ ಸುತ್ತಮುತ್ತಲಿನ ಮನೆ, ಕಟ್ಟಡಗಳಿಗೆ ಹಾನಿಯಾಗಿದ್ದಲ್ಲಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಹೇಳಿದರು. ಬಳಿಕ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ನೌಕರರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.