ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ವೇದಿಕೆ ಸಿಗಲಿ: ಸುಂದರ್ ರೈ ಮಂದಾರ
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಅಂತರ್ ತರಗತಿ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಖ್ಯಾತ ರಂಗಭೂಮಿ ನಟ, ಬಹುಭಾಷಾ ಸಿನಿಮಾ ನಟ ಹಾಗೂ ನಿರ್ದೇಶಕರಾಗಿರುವ ಸುಂದರ್ ರೈ ಮಂದಾರ ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು, ಪ್ರತಿಭೆ ಎಂಬುದು ಕೇವಲ ಕೆಲವರ ಸ್ವತ್ತಲ್ಲ; ಅದು ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿ ಅಡಗಿರುವ ಒಂದು ಅದ್ಭುತ ಶಕ್ತಿ. ನಮ್ಮ ದೈನಂದಿನ ಬದುಕಿನ ಪ್ರತಿ ಹೆಜ್ಜೆಯಲ್ಲೂ ಪ್ರತಿಭೆ ಅಡಗಿದೆ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಅಂತಹ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಕ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿದಾಗ ಆತ ದೊಡ್ಡ ಕಲಾವಿದನಾಗಿ ರೂಪುಗೊಳ್ಳುತ್ತಾನೆ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಹೊರಬರುತ್ತದೆ ಎಂದರು.
ಜೊತೆಗೆ ತಾನು ನಡೆದು ಬಂದ ಸಾಧನೆಯ ದಾರಿಯನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯತರ ಚಟುವಟಿಕೆಗಳಿಗೂ ಮಹತ್ವ ನೀಡಬೇಕು. ಪಠ್ಯ ಹಾಗೂ ಪತ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಶಿಕ್ಷಣದ ಮೂಲ ಗುರಿ ಜ್ಞಾನವನ್ನು ಪಡೆಯುವುದಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಪಠ್ಯತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಯಶೋಧರ ಜೈನ್ ಮಾತನಾಡಿ, ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕು. ಪ್ರತಿಯೊಬ್ಬರಲ್ಲಿಯೂ ವಿಶಿಷ್ಟ ಪ್ರತಿಭೆ ಅಡಗಿದ್ದು, ಅದನ್ನು ಶ್ರದ್ಧೆ, ಶಿಸ್ತು ಮತ್ತು ಪರಿಶ್ರಮದಿಂದ ಬೆಳೆಸಿಕೊಳ್ಳಬೇಕು. ಈ ಪ್ರತಿಭಾ ದಿನಾಚರಣೆಯು ಕೇವಲ ಒಂದು ಸ್ಪರ್ಧೆಯಲ್ಲ. ಇದು ನಿಮ್ಮಲ್ಲಿರುವ ಕಲಾ ಕೌಶಲ್ಯವನ್ನು ಜಗತ್ತಿಗೆ ತೋರಿಸುವ ಒಂದು ಸುಂದರ ಅವಕಾಶ. ಗೆಲುವು-ಸೋಲಿಗಿಂತ ಭಾಗವಹಿಸುವಿಕೆ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ಇದರಲ್ಲಿ ಭಾಗವಹಿಸಬೇಕು ಎಂದು ಶುಭಹಾರೈಸಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಕ್ಷತಾ ಎ. ಪಿ., ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಉಪನ್ಯಾಸಕಿ ಹಾಗೂ ಸಾಂಸ್ಕೃತಿಕ ಸಂಘದ ಸಂಯೋಜಕಿ ಸಂಗೀತಾ ಎಸ್. ಎಂ. ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ಸಂಯೋಜಕಿ ಅಕ್ಷತಾ ಸ್ವಾಗತಿಸಿ, ಇನ್ನೊರ್ವ ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ಸಂಯೋಜಕಿ ವಿದ್ಯಾ ವಂದಿಸಿದರು. ವಿದ್ಯಾರ್ಥಿ ಪರಿಷತ್ ನ ಜೊತೆ ಕಾರ್ಯದರ್ಶಿ ಶ್ರದ್ದಾ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿವಿಧ ತರಗತಿಗಳ ನಡುವೆ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ತೀರ್ಪುಗಾರರಾಗಿ ವಿಧೂಷಿ ರಶ್ಮಿ ದಿಲೀಪ್ ರೈ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕಿ ಜಯಲಕ್ಷ್ಮೀ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಉಪನ್ಯಾಸಕಿ ಸಂಹಿತಾ ಕೆ. ಎಸ್. ತೀರ್ಪುಗಾರರಾಗಿ ಭಾಗವಹಿಸಿದ್ದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಉಪನ್ಯಾಸಕಿ ಹಾಗೂ ಸಾಂಸ್ಕೃತಿಕ ಸಂಘದ ಸಂಯೋಜಕಿ ಮಾಳವಿಕ ಎಚ್. ಎಸ್. ಸೇರಿದಂತೆ ಉಪನ್ಯಾಸಕ ವೃಂದವು ಮಾರ್ಗದರ್ಶನ ಮಾಡಿದರು.

