ವಿದ್ಯಾರ್ಥಿಗಳು ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪದೊಂದಿಗೆ ಮುನ್ನಡೆಯಬೇಕು : ಶ್ರದ್ಧಾ ವಿ. ಶೆಟ್ಟಿ

Upayuktha
0

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 14 ವಿವಿಧ ಸ್ಪರ್ಧೆಗಳು 

ಹಿರಿಯ ವಿದ್ಯಾರ್ಥಿನಿ ಸಿ.ಎ ಶ್ರದ್ಧಾ ವಿ. ಶೆಟ್ಟಿ ಅವರಿಗೆ ಸನ್ಮಾನ  



ಪುತ್ತೂರು: ಕಂಡ ಕನಸುಗಳನ್ನು ನನಸು ಮಾಡುವ ಪ್ರಯತ್ನಗಳು ಜೊತೆಗೂಡಿದಾಗ ಭವಿಷ್ಯ ಸುಂದರವಾಗಬಲ್ಲದು. ಕನಸು ಕಾಣುವುದು ಸುಲಭ, ಆದರೆ ಆ ಕನಸುಗಳನ್ನು ನನಸಾಗಿಸಲು ನಿರಂತರ ಪರಿಶ್ರಮ, ಆತ್ಮವಿಶ್ವಾಸ, ಶಿಸ್ತು ಮತ್ತು ದೃಢಸಂಕಲ್ಪ ಅತ್ಯಗತ್ಯ. ಜೀವನದಲ್ಲಿ ಎದುರಾಗುವ ಸವಾಲುಗಳು ನಮ್ಮನ್ನು ಹಿಮ್ಮೆಟ್ಟಿಸುವುದಕ್ಕಲ್ಲ, ಬದಲಾಗಿ ನಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಿಗುವ ಅವಕಾಶಗಳಾಗಿವೆ. 


ಸೋಲು ಎದುರಾದಾಗ ಕುಗ್ಗದೆ, ಅದನ್ನೇ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುನ್ನಡೆಯಬೇಕು. ನಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ, ಸಾಧಿಸುವ ಛಲ ನಮ್ಮಲ್ಲಿರಲಿ, ಪ್ರಯತ್ನದಲ್ಲಿ ಎಂದಿಗೂ ವಿರಾಮವಿರದಿರಲಿ. ಇಂದಿನ ಸಣ್ಣ ಪ್ರಯತ್ನಗಳೇ ನಾಳಿನ ದೊಡ್ಡ ಸಾಧನೆಗಳಿಗೆ ಭದ್ರ ಬುನಾದಿಯಾಗುತ್ತವೆ.  


ಯುವಜನತೆ ತಮ್ಮಲ್ಲಿರುವ ಪ್ರತಿಭೆ, ಶಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು, ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ವೇದಾಂತ ಐರನ್ ಅಂಡ್ ಸ್ಟೀಲ್ ಲಿಮಿಟೆಡ್, ಗೋವಾ ಇದರ ಅಸೋಸಿಯೇಟ್ ಮ್ಯಾನೇಜರ್ ಸಿಎ ಶ್ರದ್ಧಾ ವಿ. ಶೆಟ್ಟಿ ಹೇಳಿದರು. ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಏಕತಾ ವೇದಿಕೆಯಲ್ಲಿ ನಡೆದ ರಾಜ್ಯಮಟ್ಟದ “ಕನಸುಗಳು - 2026À ಇದರ ಉದ್ಘಾಟನೆಯನ್ನು ನಡೆಸಿಕೊಟ್ಟು ಮಾತನಾಡಿದರು.  


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ  ಆಡಳಿತಮಂಡಳಿಯ ನಿರ್ದೇಶಕರಾದ  ರಮೇಶ್ಚಂದ್ರ ಎಮ್. ಮಾತನಾಡಿ,  ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಜ್ಞಾನಾರ್ಜನೆಗೆ, ಕೌಶಲ್ಯಗಳ ಅಭಿವೃದ್ಧಿಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು, ಅಂತೆಯೇ  ಕನಸುಗಳು ಕಾರ್ಯಕ್ರಮ  ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸುವಲ್ಲಿ ಬೇಕಾದ ಅಡಿಪಾಯವನ್ನು  ಒದಗಿಸಿ ಕೊಡಲಿ ಎಂದು ಆಶಿಸಿದರು. 


ಉದ್ಘಾಟನಾ ಸಮಾರಂಭದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸುಮಾರು 14 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಚಿತ್ರಕಲೆ, ಕನ್ನಡ ಕವನ ರಚನೆ ಮತ್ತು ವಾಚನ, ಪ್ರಾಕೃತಿಕ ರಂಗೋಲಿ, ಯುವಪತ್ರಕರ್ತ, ಯುವ ವಾಣಿಜ್ಯೋದ್ಯಮಿ, ಮುಖವರ್ಣಿಕೆ, ವೀಡಿಯೋ ಸಂಕಲನ , ಚರ್ಚಾ ಸ್ಪರ್ಧೆ,  ತಾಳವಾದ್ಯ ,  ಕಲರವ - ಸಾಂಸ್ಕೃತಿಕ ವೈವಿಧ್ಯ , ನಿಧಿಶೋಧ, ಭಗವದ್ಗೀತಾ ಕಂಠಪಾಠ ಮುಂತಾದ ಸ್ಪರ್ಧೆಗಳನ್ನು  ನಡೆಸಲಾಯಿತು. 


ಕಾರ್ಯಕ್ರಮದ ವೇದಿಕೆಯಲ್ಲಿ ಕನಸುಗಳು ಕಾರ್ಯಕ್ರಮದ ಸಂಯೋಜಕಿ ದೀಕ್ಷಿತಾ ಬಿ. ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿಯರಾದ ಮೊನೀಷಾ ವಂದಿಸಿ, ಮಮತಾ ಶೆಟ್ಟಿ  ಕಾರ್ಯಕ್ರಮವನ್ನು ನಿರೂಪಿಸಿದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top