ಅ.9ರಿಂದ 15: ಕರ್ನಾಟಕ ಅಂಚೆ ವೃತ್ತದಿಂದ ‘ವಿಶ್ವ ಅಂಚೆ ದಿನ’

Shreya Hegde
0

 ಹಾಗೂ ‘ರಾಷ್ಟ್ರೀಯ ಅಂಚೆ ಸಪ್ತಾಹ 2026’ ಆಚರಣೆ

ಸಾರ್ವಜನಿಕರಿಗಾಗಿ ವಿಶೇಷ ಸೇವೆಗಳು ಮತ್ತು ಕಾರ್ಯಕ್ರಮಗಳ ಘೋಷಣೆ


ಬೆಂಗಳೂರು: “ಒಂದು ಅಂಚೆ ಜಾಲ, ಅನಂತ ಸಾಧ್ಯತೆಗಳು” ಎಂಬ ಪ್ರಧಾನ ಆಶಯದೊಂದಿಗೆ ಕರ್ನಾಟಕ ಅಂಚೆ ವೃತ್ತವು 2026ರ ಅಕ್ಟೋಬರ್ 9ರಿಂದ 15ರವರೆಗೆ ವಿಶ್ವ ಅಂಚೆ ದಿನ ಮತ್ತು ರಾಷ್ಟ್ರೀಯ ಅಂಚೆ ಸಪ್ತಾಹವನ್ನು ಅದ್ಧೂರಿಯಾಗಿ ಆಚರಿಸಲಿದೆ. ಆಧುನಿಕ ಅಂಚೆ ಜಾಲದ ಮೂಲಕ ರಾಜ್ಯದ ನಾಗರಿಕರು, ವಿದ್ಯಾರ್ಥಿಗಳು, ಗ್ರಾಮೀಣ ಸಮುದಾಯಗಳು ಹಾಗೂ ಉದ್ಯಮಗಳನ್ನು ಪರಸ್ಪರ ಸಂಪರ್ಕಿಸುವ ಮತ್ತು ಡಿಜಿಟಲ್ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 1874ರಲ್ಲಿ ವಿಶ್ವ ಅಂಚೆ ಒಕ್ಕೂಟ (UPU) ಸ್ಥಾಪನೆಯಾದ ನೆನಪಿಗಾಗಿ ಆಚರಿಸಲಾಗುವ ಈ ದಿನವು, ಜಾಗತಿಕ ಸಂಪರ್ಕ ಹಾಗೂ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಅಂಚೆ ಜಾಲಗಳ ನಿರ್ಣಾಯಕ ಪಾತ್ರವನ್ನು ಸಾರುತ್ತದೆ. ಕರ್ನಾಟಕದ ನಗರ, ಗ್ರಾಮೀಣ ಹಾಗೂ ಒಳನಾಡಿನ ದೂರದ ಪ್ರದೇಶಗಳ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಭಾರತೀಯ ಅಂಚೆ ಇಲಾಖೆ ನಿರಂತರವಾಗಿ ಕೊಡುಗೆ ನೀಡುತ್ತ ಬಂದಿದೆ.


ನಾಗರಿಕ ಕೇಂದ್ರಿತ ಸೇವೆಗಳು ಮತ್ತು ಆಧಾರ್ ವಿಸ್ತರಣೆ:

ರಾಜ್ಯದ 867 ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಹಾಗೂ ನವೀಕರಣ ಸೇವೆಗಳು ಲಭ್ಯವಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ 35 ವಿಶೇಷ ಲ್ಯಾಪ್‌ಟಾಪ್ ಕಿಟ್‌ಗಳನ್ನು ನಿಯೋಜಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಒಟ್ಟು 8,13,423 ಆಧಾರ್ ವಹಿವಾಟುಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ರಾಜ್ಯದ ಎಲ್ಲ 31 ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಲ್ಲಿ 6 ವರ್ಷದೊಳಗಿನ ಮಕ್ಕಳಿಗಾಗಿ ವಿಶೇಷ ಆಧಾರ್ ಶಿಬಿರಗಳನ್ನು ನಡೆಸಲಾಗುತ್ತಿದೆ. ವಿದೇಶಾಂಗ ಸಚಿವಾಲಯದ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ 23 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (POPSK) ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ 1,38,194 ಅರ್ಜಿಗಳನ್ನು ಪ್ರಕ್ರಿಯೆಗೊಳಿಸಿವೆ.


ವಿಶ್ವಾಸಾರ್ಹ ಸ್ಪೀಡ್ ಪೋಸ್ಟ್ ಮತ್ತು ಸಾಂಸ್ಥಿಕ ಸೌಲಭ್ಯಗಳು:

ದಶಕಗಳಿಂದ ಅತ್ಯಂತ ವಿಶ್ವಾಸಾರ್ಹವಾಗಿರುವ ಸ್ಪೀಡ್ ಪೋಸ್ಟ್ ಸೇವೆಯು ಆರಂಭದಿಂದ ಅಂತ್ಯದವರೆಗೆ ಆನ್‌ಲೈನ್ ಟ್ರ್ಯಾಕಿಂಗ್, ಒಟಿಪಿ ಆಧಾರಿತ ಸುರಕ್ಷಿತ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ಅಂಚೆ ಶುಲ್ಕದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡುತ್ತಿದೆ. ಆದಾಯ ತೆರಿಗೆ ಇಲಾಖೆ (CPC ITD), ಮುಖ್ಯ ಚುನಾವಣಾಧಿಕಾರಿಗಳು, ಸಾರಿಗೆ ಇಲಾಖೆ ಹಾಗೂ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಂತಹ ಪ್ರಮುಖ ಸಾಂಸ್ಥಿಕ ಗ್ರಾಹಕರಿಗೆ ಅಂಚೆ ಇಲಾಖೆಯು ಬೆನ್ನೆಲುಬಾಗಿ ನಿಂತಿದೆ.


ಹಣಕಾಸು ಒಳಗೊಳ್ಳುವಿಕೆ ಮತ್ತು ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (POSB):

ಒಟ್ಟು 7,959 ಶಾಖಾ ಅಂಚೆ ಕಚೇರಿಗಳು ಹಾಗೂ 1,649 ಮುಖ್ಯ ಮತ್ತು ಉಪ ಅಂಚೆ ಕಚೇರಿಗಳ ಮೂಲಕ ಅಂಚೆ ವೃತ್ತವು 2026ರ ಸೆಪ್ಟೆಂಬರ್ ವೇಳೆಗೆ 2.78 ಕೋಟಿಗೂ ಅಧಿಕ ಚಾಲ್ತಿಯಲ್ಲಿರುವ POSB ಖಾತೆಗಳನ್ನು ನಿರ್ವಹಿಸುತ್ತಿದೆ. ಇದರಲ್ಲಿ 1.04 ಕೋಟಿಗೂ ಹೆಚ್ಚು ಖಾತೆಗಳು ಗ್ರಾಮೀಣ ಭಾಗದವರೇ ಆಗಿದ್ದಾರೆ. ಸುಕನ್ಯಾ ಸಮೃದ್ಧಿ ಖಾತೆ (SSA) ಹಾಗೂ ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯ ಮೂಲಕ ಹೆಣ್ಣುಮಕ್ಕಳ ಆರ್ಥಿಕ ಭದ್ರತೆಗೆ ವಿಶೇಷ ಒತ್ತು ನೀಡಲಾಗಿದೆ.


ಅಂಚೆ ಜೀವ ವಿಮೆ (PLI/RPLI) ಹಾಗೂ ಪಾರ್ಸೆಲ್ ಸಾಗಣೆ:

ಭಾರತದ ಅತ್ಯಂತ ಹಳೆಯ ಜೀವ ವಿಮಾ ಸಂಸ್ಥೆಯಾಗಿರುವ PLI ಕಡಿಮೆ ಪ್ರೀಮಿಯಂನಲ್ಲಿ ಅತ್ಯಧಿಕ ಬೋನಸ್ ನೀಡುತ್ತಿದ್ದು, ಯುಪಿಐ ಪಾವತಿ ಹಾಗೂ ಮನೆಬಾಗಿಲಿನಲ್ಲಿ ಮೈಕ್ರೋ ಎಟಿಎಂ ಸೇವೆಗಳನ್ನು ಒದಗಿಸುತ್ತಿದೆ. ಪಾರ್ಸೆಲ್ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವ ಕರ್ನಾಟಕ ಅಂಚೆ ವೃತ್ತವು, 2026-27ರ ಮೊದಲ ಅರ್ಧವರ್ಷದಲ್ಲೇ ₹50 ಕೋಟಿಗೂ ಅಧಿಕ ಆದಾಯ ಗಳಿಸಿದೆ. 'ಒನ್ ಡಿಸ್ಟ್ರಿಕ್ಟ್ ಒನ್ ಪ್ರೊಡಕ್ಟ್' (ODOP), ಜಿಐ (GI) ಉತ್ಪನ್ನಗಳು ಹಾಗೂ 'ಕಾಫಿ ಪೋಸ್ಟ್' ಮೂಲಕ ಸ್ಥಳೀಯ ಉದ್ಯಮಗಳಿಗೆ ಭಾರಿ ಉತ್ತೇಜನ ನೀಡಲಾಗಿದೆ.


ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ 2.0 (APT 2.0):

ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರವು (CEPT) ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ APT 2.0 ವೇದಿಕೆಯು ಏಕಗವಾಕ್ಷಿ ಯುಪಿಐ ಪಾವತಿಗಳು, ಡಿಜಿಟಲ್ ಟ್ರ್ಯಾಕಿಂಗ್, ಒಟಿಪಿ ಆಧಾರಿತ ವಿತರಣೆ ಹಾಗೂ DIGIPIN ಬೆಂಬಲದೊಂದಿಗೆ ಮುಂದಿನ ತಲೆಮಾರಿನ ಸಾರ್ವಜನಿಕ ಮೂಲ ಸೌಕರ್ಯವನ್ನು ಒದಗಿಸುತ್ತಿದೆ.


ರಾಷ್ಟ್ರೀಯ ಅಂಚೆ ಸಪ್ತಾಹ 2026 - ದಿನವಾರು ಕಾರ್ಯಕ್ರಮಗಳು:

ಅಕ್ಟೋಬರ್ 09ರಂದು ವಿಶ್ವ ಅಂಚೆ ದಿನದ ಅಂಗವಾಗಿ ಎಲ್ಲ ಅಂಚೆ ಕಚೇರಿಗಳಲ್ಲಿ ಪ್ರಚಾರ ಸಾಮಗ್ರಿಗಳ ಪ್ರದರ್ಶನ ಹಾಗೂ ಡಿಜಿಟಲ್ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಅಕ್ಟೋಬರ್ 12ರಂದು ಅಂಚೆಚೀಟಿ ಸಂಗ್ರಹಣಾ ದಿನದ ಪ್ರಯುಕ್ತ ಫಿಲಾಟೆಲಿ ಬ್ಯೂರೋಗಳಲ್ಲಿ ಮೈ ಸ್ಟಾಂಪ್ ಕೌಂಟರ್, ಇಂಡಿಗೊ ವಿಮಾನದಲ್ಲಿ ಡಿಜಿಟಲ್ ಡಿಟಾಕ್ಸ್ ಹಾಗೂ ಮದ್ರಾಸ್ ಸ್ಯಾಪರ್ಸ್ ಕುರಿತ ಶಾಶ್ವತ ಚಿತ್ರಾತ್ಮಕ ಅಂಚೆ ಮೊಹರು (PPC) ಬಿಡುಗಡೆ ಮಾಡಲಾಗುತ್ತದೆ. ಅಕ್ಟೋಬರ್ 13ರಂದು ಹಣಕಾಸು ಒಳಗೊಳ್ಳುವಿಕೆ ಮತ್ತು ನಾಗರಿಕ ಸೇವಾ ದಿನದ ಭಾಗವಾಗಿ ₹524 ಕೋಟಿ ಮೊತ್ತದ ವಿಮಾ ಪಾಲಿಸಿಗಳ ಗುರಿಯೊಂದಿಗೆ ಅಂಚೆ ಜೀವ ವಿಮೆ ಮಹಾಮೇಳ ಹಾಗೂ ಆಧಾರ್ ಶಿಬಿರಗಳನ್ನು ಆಯೋಜಿಸಲಾಗಿದೆ. ಅಕ್ಟೋಬರ್ 14ರಂದು ಅಂಚೆ ಮತ್ತು ಪಾರ್ಸೆಲ್ ದಿನದ ನಿಮಿತ್ತ ಬೆಂಗಳೂರು ಸೇರಿದಂತೆ ವಿವಿಧೆಡೆ ಗ್ರಾಹಕರ ಸಮಾವೇಶಗಳನ್ನು ನಡೆಸಲಾಗುತ್ತದೆ. ಅಂತಿಮವಾಗಿ, ಅಕ್ಟೋಬರ್ 15ರಂದು ತಂತ್ರಜ್ಞಾನ ಮತ್ತು ನಾವೀನ್ಯತೆ ದಿನದ ಆಚರಣೆಯು ಬೆಂಗಳೂರು ಜಿಪಿಒದಿಂದ ವೃತ್ತ ಕಚೇರಿವರೆಗೆ ಪೋಸ್ಟ್ ವಾಕಥಾನ್ ಹಾಗೂ ಸಿಬ್ಬಂದಿಗಾಗಿ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯೊಂದಿಗೆ ಸಂಪನ್ನಗೊಳ್ಳಲಿದೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top