ದೇವತೆಗಳು ಕೋಲು ಹಿಡಿದು ದಂಡಿಸುವುದಿಲ್ಲ, ಬುದ್ಧಿಯನ್ನೇ ಬದಲಿಸುತ್ತಾರೆ: ರಾಘವೇಶ್ವರ ಶ್ರೀ

Upayuktha
0

ನಮ್ಮ ಏಳಿಗೆ-ಪತನದ ಲಕ್ಷಣಗಳು ನಮ್ಮ ಬುದ್ಧಿಯಲ್ಲೇ ಇದೆ

ಸೃಷ್ಟಿಯನ್ನು ನಾವು ವ್ಯತ್ಯಾಸಗೊಳಿಸಬಾರದು

ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ‌ B.Y. ವಿಜಯೇಂದ್ರ





ಬೆಂಗಳೂರು: ದೇವತೆಗಳು ಕೋಲನ್ನು ತೆಗೆದುಕೊಂಡು ಜೀವಿಗಳಿಗೆ ದಂಡನೆ ಮಾಡುವುದಿಲ್ಲ. ಯಾರನ್ನಾದರೂ ಉದ್ದಾರವಾಗಿಸಬೇಕೆಂದಾಗ ದೇವರು ಜೀವಿಗೆ ಒಳ್ಳೆಯ ಬುದ್ಧಿಯನ್ನು ಅನುಗ್ರಹಿಸುತ್ತಾರೆ. ಹಾಗೆಯೇ ಶಿಕ್ಷೆ ಕೊಡಬೇಕಾದಾಗ ಬುದ್ಧಿಯನ್ನು ಕೆಡಿಸುವ ಮೂಲಕ ಜೀವಿಯು ತೊಂದರೆಗೆ ಒಳಗಾಗುವಂತೆ ಮಾಡುತ್ತಾರೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ 'ನವರಾತ್ರ ನಮಸ್ಯಾ' ಕಾರ್ಯಕ್ರಮದಲ್ಲಿ 19/10/2026 ರಂದು ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದ ಶ್ರೀಗಳು, ನಮ್ಮ ಪತನ ಹಾಗೂ ಏಳ್ಗೆಯ ಲಕ್ಷಣಗಳನ್ನು ನಮ್ಮಲ್ಲೇ ಕಾಣಬಹುದಾಗಿದ್ದು, ನಮ್ಮ ಬುದ್ಧಿ ಯಾವ ದಿಕ್ಕಿನಲ್ಲಿ ಸಾಗಿದೆ, ನಮ್ಮ ಆಚರಣೆಗಳು ಏನಾಗಿದೆ ಎಂಬುದನ್ನು  ಅವಲೋಕಿಸಿಕೊಂಡರೆ ನಮ್ಮ ಭವಿಷ್ಯವನ್ನು ನಾವು ಅರಿತುಕೊಳ್ಳಬಹುದು. ನಾವು ಸರಿದಾರಿಯಲ್ಲಿದ್ದರೆ ದೇವರು ನಮ್ಮನ್ನು ಅನುಗ್ರಹಿಸುತ್ತಿದ್ದಾನೆ ಎಂದೂ, ತಪ್ಪು ದಾರಿಯಲ್ಲಿ ಹೆಜ್ಜೆಯನ್ನಿಟ್ಟಿದ್ದರೆ ನಾವು ದೇವರು ಅವಕೃಪೆಗೆ ಒಳಗಾಗಿದ್ದೇವೆ ಎಂದು ಅರ್ಥ. ಶಿವ ಭಕ್ತನಾಗಿ ನಿತ್ಯ ದೇವರ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದ ಭಂಡಾಸುರನು, ವಿಷ್ಣು ಮಾಯೆಯಿಂದ ಮೋಹಿನಿಯ ಮೋಹಕ್ಕೆ ಒಳಗಾಗಿ ಅವುಗಳಿಂದ ವಿಮುಖನಾದ. ಆ ಮೂಲಕ ಅವನ ಅವನತಿ ಆರಂಭವಾಯಿತು ಎಂದು ಭಂಡಾಸುರನ ಕಥಾಭಾಗವನ್ನು ವಿವರಿಸಿದರು.


ಸೃಷ್ಟಿಯನ್ನು ನಾವು ಯಾವಾಗಲೂ ವ್ಯತ್ಯಾಸಗೊಳಿಸಲು ಹೋಗಬಾರದು. ಸೃಷ್ಟಿ ಎಂಬುದು ಶಂಕರವಾದರೆ, ಸೃಷ್ಟಿಯಲ್ಲಿ ನಮ್ಮ ಹಸ್ತಕ್ಷೇಪ ಸಂಕರವಾಗಿದೆ. ನೈಸರ್ಗಿಕ ಪ್ರಕ್ರಿಯೆ ಯಾವಾಗಲು ಸುಂದರವಾಗಿದ್ದು, ಅದರಲ್ಲಿ ನಾವು ಹಸ್ತಕ್ಷೇಪವನ್ನು ಮಾಡಬಾರದು. ತಾರಕಾಸುರನ ವಧೆಯು ಶಿವನ ಮಗನಿಂದ ಆಗಬೇಕಿತ್ತು. ಧ್ಯಾನದಲ್ಲಿದ್ದ ಶಿವನನ್ನು ಒಲಿಸಿಕೊಳ್ಳಲು ದೇವತೆಗಳು ತಪ್ಪಸ್ಸಿನ ಮಾರ್ಗವನ್ನು ಹಿಡಿಯಬಹುದಾಗಿತ್ತು. ಆದರೆ ಮನ್ಮಥನ ಬಾಣವನ್ನು ಶಿವನ ಮೇಲೆ ಪ್ರಯೋಗಿಸುವಂತೆ ಮಾಡಿದರು. ಹೂವನ್ನು ಬಾಣವಾಗಿ ಪ್ರಯೋಗ ಮಾಡುವ ಬದಲು, ಅದೇ ಹೂವನ್ನು ಪೂಜೆಗೆ ಬಳಸಿದ್ದರೆ ಶಿವ ಸಂಪ್ರೀತನಾಗುತ್ತಿದ್ದ. ತಾರಕಾಸುರನ ಸಂಹಾರವಾಗುತ್ತಿತ್ತು. ಆದರೆ ಮನ್ಮಥನ ಬಾಣ ಪ್ರಯೋಗವಾದ್ದರಿಂದ ತಾರಕಾಸುರನ ಪೀಡೆಯ ಜೊತೆಗೆ ಭಂಡಾಸುರನ ಕಾಟವನ್ನೂ ದೇವತೆಗಳು ಅನುಭವಿಸುವಂತಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಈ ಲಲಿತೋಪಾಖ್ಯಾನದ ಪ್ರವಚನದಲ್ಲಿ ದೇವಿಯನ್ನು ವರ್ಣಿಸುತ್ತಿರುವುದು ರಾಜರಾಜೇಶ್ವರಿಯ ದಿವ್ಯ ರೂಪ ನಮ್ಮ ಚಿತ್ತಭಿತ್ತಿಯಲ್ಲಿ ಮೂಡಿ ಧ್ಯಾನದಲ್ಲಿ ಆಕೆ ಮೂಡಲಿ ಎಂದಾದರೆ, ಈ ಪ್ರವಚನ ಮಾಲಿಕೆಯಲ್ಲಿನ ಕಥೆಗಳು ಅದರಲ್ಲಿನ ತತ್ತ್ವಗಳನ್ನು ನಾನು ನೆನಪಿಡಲು ಸಹಕಾರಿ. ಈ ಪ್ರವಚನ ಮಾಲಿಕೆಯು ಹಯಗ್ರೀಯನಿಂದ ಅಗಸ್ತ್ಯ ಮಹರ್ಷಿಗಳಿಗೆ ಉಪದೇಶಿಸಿದ ಲಲಿತೋಪಾಖ್ಯಾನದ ಯಥಾವತ್ ಪ್ರಸ್ತುತಿಯಾಗಿದ್ದು, ಜನಮನ ರಂಜನೆಯ ವಿಷಯಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿಲ್ಲಾ ಎಂದರು.


ಭಾಜಪದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಸವನಗುಡಿ ಶಾಸಕ ಎಲ್. ಎ. ರವಿ ಸುಬ್ರಮಣ್ಯ, ಖ್ಯಾತ ಶಿಲ್ಪಿ ಜಿ.ಎಲ್. ಭಟ್, ಉದ್ಯಮಿ ಅರವಿಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು. ಸರಸ್ವತೀ ಸೂಕ್ತ ಹವನ, ದುರ್ಗಾದೀಪ ನಮಸ್ಕಾರ, ಕುಂಕುಮಾರ್ಚನೆ, ರಾಜರಾಜೇಶ್ವರೀ ಪೂಜೆ ನಡೆಯಿತು. ಸುಬ್ರಾಯ ಹೆಗಡೆ ಹೊಸಕೋಟೆ, ಸಂದೀಪ್ ಮೂರ್ತಿ, ಪ್ರಕಾಶ್ ಮಳಲಗದ್ದೆ, ದಿನಪ್ರಧಾನರಾಗಿ ಸುಬ್ರಹ್ಮಣ್ಯ ಕೆರೆಮೂಲೆ ದಂಪತಿಗಳು ಉಪಸ್ಥಿತರಿದ್ದರು.

 

ನಾಳೆ (20.10.2026) ರಂದು ಸಂಜೆ ರಾಜರಾಜೇಶ್ವರೀ ಮೂರ್ತಿಯ ವಿಸರ್ಜನೆ ನಡೆಯಲಿದ್ದು, ಭವ್ಯ ಮೆರವಣಿಗೆ ನಡೆಯಲಿದೆ. ಬೆಳಗ್ಗೆ ಶತಚಂಡಿಕಾ ಮಹಾಯಾಗ ನಡೆಯಲಿದ್ದು, ವಿಜಯದಶಮಿಯ ಅಂಗವಾಗಿ ಬನ್ನಿ ಪೂಜೆ ನಡೆಯಲಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top