ಮುದ್ದೇನಹಳ್ಳಿ: 50 ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಿಳಿ ಕೋಟ್ ಪ್ರದಾನ, 29 ವಿದ್ಯಾರ್ಥಿನಿಯರು ಭಾಗಿ

Shreya Hegde
0

 ಉಚಿತ ವೈದ್ಯಕೀಯ ಶಿಕ್ಷಣ ಜಗತ್ತಿನ ಅದ್ಭುತ: ಆರ್. ಅಶೋಕ್




ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣಕ್ಕೆ ಕೋಟ್ಯಂತರ ರೂಪಾಯಿ ಶುಲ್ಕ ವಿಧಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡುತ್ತಿರುವುದು ಜಗತ್ತಿನ ಅದ್ಭುತವೇ ಸರಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬಣ್ಣಿಸಿದರು.


ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಈ ವರ್ಷ ಪ್ರವೇಶ ಪಡೆದ ನಾಲ್ಕನೇ ಬ್ಯಾಚ್‌ನ 29 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 50 ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಿಳಿ ಕೋಟ್ ಪ್ರದಾನ ಮಾಡುವ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು ವಿವಿಧ ಸಚಿವ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರೂ, ಒಬ್ಬರಿಗಾದರೂ ಉಚಿತವಾಗಿ ವೈದ್ಯಕೀಯ ಸೀಟು ಕೊಡಿಸಲು ಸಾಧ್ಯವಾಗಿಲ್ಲ. ಆದರೆ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವೈದ್ಯಕೀಯ ಶಿಕ್ಷಣ ಒದಗಿಸುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಅವರ ನಿಸ್ವಾರ್ಥ ಸೇವೆ ಇಡೀ ಜಗತ್ತಿಗೆ ಮಾದರಿ ಹಾಗೂ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಿಳಿ ಕೋಟ್ ಪ್ರದಾನ ಮಾಡುತ್ತಿರುವುದು ಸ್ಮರಣೀಯ ಕ್ಷಣ. ವೈದ್ಯಕೀಯ ಶಿಕ್ಷಣದ ಮೂಲಕ ಸಮಾಜಸೇವೆಗೆ ವಿದ್ಯಾರ್ಥಿಗಳು ಸಜ್ಜಾಗುತ್ತಿರುವುದು ಸಂತಸದ ಸಂಗತಿ ಎಂದರು.


ಸಮಾಜ ಸೇವೆಗೆ ಬದ್ಧ: 

ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮಾಡಿಕೊಡುತ್ತಿರುವುದು ಶ್ಲಾಘನೀಯ. ಒಂದೆಡೆ ವೇದ, ಉಪನಿಷತ್ತುಗಳಂತಹ ಸಾಂಪ್ರದಾಯಿಕ ಜ್ಞಾನವನ್ನು ಬೋಧಿಸುತ್ತಾ, ಮತ್ತೊಂದೆಡೆ ಆಧುನಿಕ ವೈದ್ಯಕೀಯ ಶಿಕ್ಷಣ ನೀಡುತ್ತಿರುವುದು ಅತ್ಯಂತ ಪ್ರಶಂಸನೀಯ ಎಂದರು. ನಾನು ಸಾಕಷ್ಟು ಸಂಪತ್ತನ್ನು ಗಳಿಸಿದ್ದೇನೆ. ಆದರೆ, ಅದಕ್ಕೆ ತಕ್ಕಂತೆ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ ಎಂಬ ಅರಿವು ಈಗ ಮೂಡಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ನನ್ನ ಕಣ್ಣು ತೆರೆಸಿದ್ದಾರೆ. ಇನ್ನು ಮುಂದೆ ಕುಟುಂಬದೊಂದಿಗೆ ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡಿ, ಬಡವರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.


ಸೇವೆಯೇ ಆಧ್ಯಾತ್ಮಿಕತೆಯ ಸರಳ ಹಾದಿ:

ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು, ಆಧ್ಯಾತ್ಮಿಕತೆಯ ಹಾದಿಯಲ್ಲಿ ಮುನ್ನಡೆಯಲು ಸೇವೆಯೇ ಅತ್ಯಂತ ಸರಳ ಮಾರ್ಗ. ಉಚಿತ ವೈದ್ಯಕೀಯ ಕಾಲೇಜು ಕೂಡ ಅಂತಹ ಸೇವಾ ಕಾರ್ಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು. ಅಹಂಕಾರದ ನಾಶವೇ ಆಧ್ಯಾತ್ಮಿಕತೆ. ಅಹಂಕಾರವನ್ನು ತೊಡೆದುಹಾಕಲು ಇತರರಿಗೆ ಸೇವೆ ಸಲ್ಲಿಸಬೇಕು. ದೇವರನ್ನು ಸಮೀಪಿಸಲು ಇದಕ್ಕಿಂತ ಉತ್ತಮ ಹಾಗೂ ಸರಳವಾದ ಮಾರ್ಗ ಮತ್ತೊಂದಿಲ್ಲ ಎಂದರು. ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ವೈದ್ಯರಾಗಿ ಹೊರಹೊಮ್ಮಿದರೆ, ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುವ ಅವಕಾಶ ದೊರೆಯುತ್ತದೆ. ಈ ಮೂಲಕ ಸಮಾಜದ ಸುಧಾರಣೆಗೆ ಕೊಡುಗೆ ನೀಡಬಹುದು ಎಂದು ಹೇಳಿದರು.


ಮೊಬೈಲ್ ಬಳಕೆಯಿಂದ ದೂರ; ಶೈಕ್ಷಣಿಕ ಸಾಧನೆಗೆ ಒತ್ತು

ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡದಿರುವ ಕಾಲೇಜಿನ ನಿರ್ಧಾರವನ್ನು ಸಮರ್ಥಿಸಿಕೊಂಡ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು, ಮೊಬೈಲ್‌ನಿಂದ ದೂರವಿರುವುದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿದೆ ಎಂದು ಹೇಳಿದರು. ಮೊಬೈಲ್ ಫೋನ್‌ಗಳು ಇಂದು ಮಕ್ಕಳ ಗಮನವನ್ನು ಬೇರೆಡೆಗೆ ಸೆಳೆಯುತ್ತಿವೆ. ಆದರೆ, ನಮ್ಮ ಕಾಲೇಜಿನಲ್ಲಿ ಮೊಬೈಲ್ ಬಳಕೆಗೆ ಅವಕಾಶವಿಲ್ಲದ ಕಾರಣ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದು, ಎಲ್ಲರೂ ಡಿಸ್ಟಿಂಕ್ಷನ್ ಅಥವಾ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಮೊಬೈಲ್ ನೀಡದಿರುವುದಕ್ಕೆ ಹಲವು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡುತ್ತಿರುವ ಸಂಸ್ಥೆಯಲ್ಲಿ ಮೊಬೈಲ್ ಬಳಕೆಗೆ ಅವಕಾಶ ನೀಡುವುದಕ್ಕಿಂತ ಶಿಕ್ಷಣಕ್ಕೆ ಆದ್ಯತೆ ನೀಡುವುದು ಮುಖ್ಯ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ಹೇಳಿದರು.


ನಿಸ್ವಾರ್ಥ ವೈದ್ಯಕೀಯ ಸೇವೆಗೆ ವಿದ್ಯಾರ್ಥಿಗಳ ಶಪಥ

ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಈ ವರ್ಷ ಪ್ರವೇಶ ಪಡೆದ 50 ವಿದ್ಯಾರ್ಥಿಗಳು, ಪ್ರತಿಫಲಾಪೇಕ್ಷೆಯಿಲ್ಲದೆ ವೈದ್ಯಕೀಯ ವೃತ್ತಿಯನ್ನು ಸಮಾಜಸೇವೆಗೆ ಮುಡಿಪಾಗಿಡುವ ಶಪಥ ಸ್ವೀಕರಿಸಿದರು. ವೈದ್ಯಕೀಯ ವೃತ್ತಿಯಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡದೆ, ತಮ್ಮ ಜ್ಞಾನ ಮತ್ತು ಪರಿಣತಿಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು. ವಿಶೇಷವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ನಿಸ್ವಾರ್ಥವಾಗಿ ವೈದ್ಯಕೀಯ ಸೇವೆ ಸಲ್ಲಿಸುವ ಸಂಕಲ್ಪವನ್ನು ಸಂಸ್ಕೃತದಲ್ಲಿ ವ್ಯಕ್ತಪಡಿಸಿದರು. ವೈದ್ಯಕೀಯ ಶಿಕ್ಷಣವನ್ನು ಕೇವಲ ಉದ್ಯೋಗ ಅಥವಾ ವೃತ್ತಿಯಾಗಿ ಪರಿಗಣಿಸದೆ, ಮಾನವೀಯತೆ ಮತ್ತು ಸೇವೆಯ ಮಾರ್ಗವಾಗಿ ಸ್ವೀಕರಿಸುವ ಸಂದೇಶವನ್ನು ವಿದ್ಯಾರ್ಥಿಗಳು ತಮ್ಮ ಶಪಥದ ಮೂಲಕ ಸಾರಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top