ಪುತ್ತೂರು : ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ ೧೩೩ನೇ ವರ್ಷಾಚರಣೆಯ ಪ್ರಯುಕ್ತ ʻವಿವೇಕ ವಿಜಯʼ ಶೀರ್ಷಿಕೆಯಡಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಾರ್ವಜನಿಕರಿಗಾಗಿ ಮೂರು ವಿಭಿನ್ನ ಶೀರ್ಷಿಕೆಗಳಡಿಯಲ್ಲಿ ಈ ಉಪನ್ಯಾಸ ಸರಣಿ ನಡೆಯಿತು.
ವಿಶೇಷ ಉಪನ್ಯಾಸದ ಮುಖ್ಯಾಂಶಗಳು: ಕಾರ್ಯಕ್ರಮದಲ್ಲಿ ‘ಭಾರತೀಯತೆ ಮತ್ತು ಯುವಜನತೆ’ ಎಂಬ ವಿಷಯದ ಕುರಿತು ಮೊದಲ ಅವಧಿಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಖ್ಯಾತ ಚಿಂತಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಪ್ರಪಂಚವನ್ನು ಗೆಲ್ಲಲು ಹಲವು ಹಿಂಸಾತ್ಮಕ ಮಾರ್ಗಗಳಿರಬಹುದು. ಆದರೆ ತನ್ನ ಜ್ಞಾನ ಪರಂಪರೆಯಿಂದ ಜಗತ್ತನ್ನು ಗೆದ್ದ ಏಕೈಕ ರಾಷ್ಟ್ರ ಭಾರತ. ಈ ಜ್ಞಾನ ಮತ್ತು ಆದ್ಯಾತ್ಮಿಕ ಶಕ್ತಿಯ ರೂವಾರಿ ಸ್ವಾಮಿ ವಿವೇಕಾನಂದರು. ಅವರಿಂದ ಪ್ರೇರಣೆ ಪಡೆದು ಇಂದಿನ ಯುವಕರು ಸ್ವಂತ ಬೆಳವಣಿಗೆಯ ಜೊತೆಗೆ ದೇಶದ ಅಭಿವೃದ್ಧಿಯನ್ನು ಗುರಿಯಾಗಿಸಿಕೊಳ್ಳಬೇಕು. ಭಾರತೀಯತೆಯನ್ನು ಪೋಷಿಸುವ ಯುವಜನತೆಯೇ ನವಭಾರತದ ನಿರ್ಮಾತೃಗಳು ಎಂದು ನುಡಿದರು.
ಉದ್ಘಾಟನೆ ಮತ್ತು ಅತಿಥಿಗಳ ನುಡಿ : ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ., ತರುಣ ಶಕ್ತಿ ಸಾಧನೆಯ ಬಲವಾದರೆ, ವೈಚಾರಿಕತೆ ಮತ್ತು ವಿವೇಕವೇ ವಿಜಯದ ಮಾರ್ಗ. ಯುವಕರು ತಮ್ಮ ಶಕ್ತಿಯನ್ನು ಆತ್ಮವಿಶ್ವಾಸ, ಶಿಸ್ತು ಹಾಗೂ ರಾಷ್ಟ್ರನಿರ್ಮಾಣದ ಕಾರ್ಯಗಳಲ್ಲಿ ಬಳಸಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಪುತ್ತೂರಿನ ಎಸ್.ಆರ್.ಕೆ ಲ್ಯಾಡರ್ಸ್ ಸಂಸ್ಥೆಯ ಮಾಲಕರಾದ ಕೇಶನ ಅಮೈ ಮಾತನಾಡಿ, ಹದಿಹರೆಯದಲ್ಲೇ ಮಕ್ಕಳ ಮನಸ್ಸಿನಲ್ಲಿ ಭಾರತೀಯತೆಯ ಬೀಜ ಬಿತ್ತಿ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ರಾಷ್ಟ್ರದ ಬಗ್ಗೆ ಹೆಮ್ಮೆಯ ಭಾವನೆ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಉಪಸ್ಥಿತಿ : ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರವೀಂದ್ರ ಪಿ., ಪ್ರಾಂಶುಪಾಲ ಎಂ. ದೇವಿಚರಣ್ ರೈ ಉಪಸ್ಥಿತರಿದ್ದರು. ಅಲ್ಲದೆ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೆ.ಎನ್ ಸುಬ್ರಹ್ಮಣ್ಯ, ಡಾ. ಕೃಷ್ಣಪ್ರಸನ್ನ ಕೆ., ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮ ನಿರೂಪಣೆ : ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರೇರಣಾ ಗೀತೆ ಹಾಗೂ ವಿವೇಕ ಗೀತಾ ನಮನವನ್ನು ಪ್ರಸ್ತುತಪಡಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಂಸಿನಿ ಪ್ರಾರ್ಥಿಸಿದರು. ರವೀಂದ್ರ ಪಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಡಾ. ಸ್ನೇಹಾ ಬಿ.ಎಸ್. ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
