ಮೂಡುಬಿದಿರೆ : ಕೇರಳದ ಶ್ರೀಮಂತ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಅನಾವರಣಗೊಳಿಸುವ ‘ಆಳ್ವಾಸ್ ಕೇರಳೀಯಂ–2026’ ಕಾರ್ಯಕ್ರಮವು ಆಳ್ವಾಸ್ ವಿದ್ಯಾಸಂಸ್ಥೆಯ ಮುಂಡ್ರುದೆಗುತ್ತು ಕೆ. ಅಮರನಾಥ್ ಶೆಟ್ಟಿ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಭವ್ಯ ಮೆರವಣಿಗೆಯಲ್ಲಿ ಕಥಕಳಿ, ಮೋಹಿನಿಯಾಟ್ಟಂ, ಮಾವೇಲಿ ವೇಷಗಳು ಹಾಗೂ ಸಾಂಪ್ರದಾಯಿಕ ಪಂಚವಾದ್ಯ ಪ್ರದರ್ಶನಗೊಂಡವು. ಜೊತೆಗೆ ತಾಲಪೊಲಿ, ಪುಲಿಕಳಿ, ಚೆಂಡೆ ವಾದನ, ಕಾವಡಿ, ಒಪ್ಪನ, ಕೋಲ್ಕಳಿ, ಕಲರಿ, ತೆಯ್ಯಂ, ಥಾಬೋಲಂ, ಗರುಡನ್ ಹಾಗೂ ತಿರುವಾತಿರ ಸೇರಿದಂತೆ ವಿವಿಧ ಕಲಾಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಿದವು. ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಮೆಗಾ ತಿರುವಾತ್ತಿರ, ಕಾಯ್ಕೊಟ್ಟಿಕಲಿ ಹಾಗೂ ಕಲರಿ ಪ್ರದರ್ಶನಗಳು ಮೂಡಿಬಂದವು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಲಯಾಳಂ ಚಲನಚಿತ್ರ ನಟ ಹಾಗೂ ನಿರ್ದೇಶಕ ಬಿನು ಪಪ್ಪು, ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಶಿಕ್ಷಣದಲ್ಲಿ ಉನ್ನತ ಸ್ಥಾನಕ್ಕೇರಬೇಕು ಮತ್ತು ಮಾದಕ ವ್ಯಸನದಿಂದ ದೂರವಿದ್ದು ಜವಾಬ್ದಾರಿಯುತ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿ ಮೊಹಮ್ಮದ್ ಫಹಾದ್ ಮಾತನಾಡಿ, ತಾವು ಓದಿದ ಸಂಸ್ಥೆಯ ಬೆಳವಣಿಗೆಯನ್ನು ಕಂಡು ಹೆಮ್ಮೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕೇರಳದ ಸಾಮಾಜಿಕ ಸಾಮರಸ್ಯ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯು ದೇಶಕ್ಕೆ ಮಾದರಿಯಾಗಿದೆ. ಪಿ.ಟಿ. ಉಷಾ, ಡಾ. ವರ್ಗೀಸ್ ಕುರಿಯನ್ ಹಾಗೂ ಅರುಂಧತಿ ರಾಯ್ ಅವರಂತಹ ಗಣ್ಯರನ್ನು ನೀಡಿದ ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಯುವಜನರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಮುಸ್ತಾಫ, ಪ್ರಮುಖರಾದ ಅಕ್ಷಯ ಜೈನ್, ನೌಷಧ್, ಹಳೆ ವಿದ್ಯಾರ್ಥಿ ಫಾವಜ್ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಕೆಝಿಯಾ ಮೇರಿ ಜಾರ್ಜ್ ಸ್ವಾಗತಿಸಿ, ಆರಂಟಾ ವಂದಿಸಿದರು. ಫೆನಿಲ್ಡಾ ಕಾರ್ಯಕ್ರಮ ನಿರೂಪಿಸಿದರು.
