ಕಥೆ:ವಿಧಿಯ ಹೊಸ್ತಿಲಲ್ಲಿ (ಭಾಗ 2)

Shreya Hegde
0

ಒಂದು ದಿನ ಅವರ ಪಟ್ಟಣದಲ್ಲಿ ದೊಡ್ಡ ಸಾಂಸ್ಕೃತಿಕ ಹಬ್ಬ ನಡೆಯುತ್ತಿತ್ತು.ಭೂಮಿಗೆ ಶಾಸ್ತ್ರೀಯ ನೃತ್ಯ ಪ್ರದರ್ಶನವಿತ್ತು.


ಅವಳು ವೇದಿಕೆಯ ಮೇಲೆ ಕಾಲಿಟ್ಟ ಕ್ಷಣ...ಅವಳು ಭೂಮಿಯಾಗಿರಲಿಲ್ಲ.ಅವಳು ನೃತ್ಯವಾಗಿದ್ದಳು.ಅವಳ ಕಣ್ಣುಗಳು ಕಥೆ ಹೇಳುತ್ತಿದ್ದವು.ಅವಳ ಕೈಗಳು ಭಾವನೆಗಳನ್ನು ಚಿತ್ರಿಸುತ್ತಿದ್ದವು.


ಅವಳ ಹೆಜ್ಜೆಗಳು ತಾಳದ ಜೊತೆ ಮಾತನಾಡುತ್ತಿದ್ದವು.

ಪ್ರೇಕ್ಷಕರ ನಡುವೆ ಒಬ್ಬ ಯುವಕ ಕುಳಿತಿದ್ದ.ಅವನ ಹೆಸರು ವಿಕ್ರಮ್.


ಅವನು ಭೂಮಿಯನ್ನು ಮೊದಲ ಬಾರಿ ನೋಡುತ್ತಿದ್ದ.ಅವಳ ನೃತ್ಯ ಮುಗಿದಾಗ ಇಡೀ ಸಭಾಂಗಣ ಚಪ್ಪಾಳೆಯಿಂದ ತುಂಬಿತು.

ಆದರೆ ವಿಕ್ರಮ್‌ನ ಮನಸ್ಸಿನಲ್ಲಿ ಮಾತ್ರ ಒಂದು ಬೇರೆ ಭಾವನೆ ಮೂಡಿತ್ತು.ಅವನಿಗೆ ಭೂಮಿ ಇಷ್ಟವಾಗಿತ್ತು.ಆಕರ್ಷಣೆ....


ಅವನಿಗೆ ಅದು ಮೊದಲ ನೋಟದ ಪ್ರೀತಿ ಎಂದು ಅನಿಸಿತು.

ಮನೆಗೆ ಹೋದ ಕೂಡಲೇ ಅವನು ತನ್ನ ತಂದೆ-ತಾಯಿಗೆ ವಿಷಯ ಹೇಳಿದ.


ಅದೃಷ್ಟವಶಾತ್...ವಿಕ್ರಮ್‌ನ ತಂದೆ ಮತ್ತು ಭೂಮಿಯ ತಂದೆ ಹಳೆಯ ಪರಿಚಯದವರು.ಮಾತುಕತೆ ನಡೆಯಿತು.ಎರಡೂ ಕುಟುಂಬಗಳಿಗೂ ಈ ಸಂಬಂಧ ಒಪ್ಪಿಗೆಯಾಯಿತು.ಭೂಮಿಯ ತಂದೆ-ತಾಯಿಗೂ ವಿಕ್ರಮ್ ಒಳ್ಳೆಯ ಕುಟುಂಬದ ಹುಡುಗನಂತೆ ಕಂಡ.ಆದರೆ...

ಒಂದು ವಿಷಯ ಮಾತ್ರ ಯಾರಿಗೂ ಗೊತ್ತಿರಲಿಲ್ಲ.ಭೂಮಿಯ ಹೃದಯದಲ್ಲಿ ಈಗಾಗಲೇ ಒಬ್ಬನಿಗೆ ಜಾಗವಿತ್ತು.

ಆದಿತ್ಯ.


ಮನೆಯಲ್ಲೊಂದು ಸಂಜೆ ಭೂಮಿಯ ತಂದೆ ಅವಳನ್ನು ಕರೆದು ಕುಳ್ಳಿರಿಸಿದರು.“ಭೂಮಿ... ನಿನ್ನ ಜೊತೆ ಒಂದು ವಿಷಯ ಮಾತನಾಡಬೇಕು.”ಅವಳಿಗೆ ಏನೋ ಅರ್ಥವಾಯಿತು.

“ಏನು ಅಪ್ಪ?” “ನಿನ್ನ ಮದುವೆಯ ಬಗ್ಗೆ ಒಂದು ಸಂಬಂಧ ಬಂದಿದೆ.”

ಭೂಮಿ ಮೌನವಾದಳು.“ಅವರು ಒಳ್ಳೆಯ ಕುಟುಂಬ. ಹುಡುಗನೂ ಒಳ್ಳೆಯವನು. ನಮಗೆ ಪರಿಚಯದ ಕುಟುಂಬ.”

ಭೂಮಿ ನಿಧಾನವಾಗಿ ಕೇಳಿದಳು,“ನನಗೆ ಏನು ಬೇಕು ಅಂತ ಯಾರಾದರೂ ಕೇಳಿದ್ರಾ?”ಅವಳ ತಂದೆ ಮೌನವಾಗಿದರು.“ನಿನಗೆ ಇಷ್ಟವಿಲ್ಲ ಅಂದ್ರೆ ನಾವು ಏನೂ ಒತ್ತಾಯ ಮಾಡುವುದಿಲ್ಲ.”ಆ ಮಾತು ಕೇಳಿ ಭೂಮಿಯ ಕಣ್ಣುಗಳಲ್ಲಿ ನೀರು ತುಂಬಿತು.ಅವಳಿಗೆ ಒಂದೇ ಪ್ರಶ್ನೆ.

“ನಾನು ಆದಿತ್ಯನ ಬಗ್ಗೆ ಹೇಳಬೇಕಾ?”


ಅದೇ ರಾತ್ರಿ ಅವಳು ಆದಿತ್ಯನನ್ನು ಭೇಟಿಯಾದಳು.ಎಂದಿನಂತೆ ಅವನು ಅವಳ ಮುಖ ನೋಡಿ,“ಏನಾಯ್ತು?”ಎಂದು ಕೇಳಿದ.ಭೂಮಿ ಏನೂ ಹೇಳಲಿಲ್ಲ.ಕೆಲವು ಕ್ಷಣಗಳ ನಂತರ,“ನನಗೆ ಒಂದು ಮದುವೆ ಸಂಬಂಧ ಬಂದಿದೆ,” ಎಂದಳು.ಆದಿತ್ಯನ ಮುಖದಲ್ಲಿ ನಗು ಮಾಯವಾಯಿತು.“ಓಹ್...”ಅವಳು ಅವನತ್ತ ನೋಡಿದಳು.“ನಿನಗೆ ಏನೂ ಅನಿಸಲ್ವಾ?”ಅವನು ತಲೆ ತಗ್ಗಿಸಿದ.“ನನಗೆ ಅನಿಸೋದು ಮುಖ್ಯನಾ?ನನ್ನ ಜೀವನದ ವಿಷಯದಲ್ಲಿ ನಿನ್ನ ಭಾವನೆ ಮುಖ್ಯ ಅಲ್ಲವಾ?”ಆದಿತ್ಯ ಮೌನವಾಗಿದ್ದ.ಅವಳ ಕಣ್ಣುಗಳಲ್ಲಿ ಕಣ್ಣೀರು ತುಂಬಿತು.“ನಾನು ನಿನ್ನನ್ನು ಕೇಳುತ್ತಿಲ್ಲ ಆದಿತ್ಯ... ನನ್ನನ್ನು ಮದುವೆಯಾಗು ಅಂತ.”

 “ಆಮೇಲೆ?” 

“ನನಗೆ ಒಂದೇ ಒಂದು ಸತ್ಯ ಹೇಳು.”

“ಏನು?”

“ನನ್ನನ್ನು ಕಳೆದುಕೊಳ್ಳುವ ಭಯ ನಿನಗಿದೆಯಾ?”

ಆದಿತ್ಯ ಅವಳತ್ತ ನೋಡಿದ.ಅವನ ಕಣ್ಣಲ್ಲಿ ಉತ್ತರ ಇತ್ತು.ಆದರೆ ಅವನ ತುಟಿಗಳಲ್ಲಿ ಮಾತಿರಲಿಲ್ಲ.



“ನಾನು ನಿನ್ನನ್ನು ಪ್ರೀತಿಸುತ್ತೇನೆ, ಭೂಮಿ.”ಆ ಮಾತು ಕೊನೆಗೂ ಹೊರಬಂತು.ಅವಳು ಕಣ್ಣು ಮುಚ್ಚಿಕೊಂಡಳು.ಬಹುಶಃ ಅವಳು ಬಹಳ ದಿನಗಳಿಂದ ಕೇಳಲು ಕಾಯುತ್ತಿದ್ದ ಮಾತು ಅದೇ.ಆದರೆ ಮುಂದಿನ ಮಾತು ಅವಳ ಹೃದಯವನ್ನು ಮತ್ತೆ ಒಡೆದಿತು.

“ಆದರೆ ನಾನು ನಿನ್ನನ್ನು ಮದುವೆಯಾಗುವಷ್ಟು ಸಿದ್ಧನಾಗಿಲ್ಲ.”

“ಏಕೆ?”

“ನಿನ್ನ ಕುಟುಂಬದ ಜೀವನಮಟ್ಟ ಬೇರೆ. ನನ್ನದು ಬೇರೆ. ನಿನ್ನ ಕನಸುಗಳು ದೊಡ್ಡವು. ನನ್ನ ಬಳಿ ಈಗ ಕೊಡುವುದಕ್ಕೆ ಇರುವುದೇನು?”

ಭೂಮಿ ಕಣ್ಣೀರಿನ ನಡುವೆ ನಕ್ಕಳು.“ನನಗೆ ನಿನ್ನ ಹಣ ಬೇಕಿಲ್ಲ ಆದಿತ್ಯ.”

“ಆದರೆ ನಿನ್ನ ತಂದೆ-ತಾಯಿಗೆ?”

“ಅವರ ಜೊತೆ ನಾನು ಮಾತನಾಡುತ್ತೇನೆ.”

“ನನ್ನ ತಂದೆ-ತಾಯಿಗೆ?”

“ಅವರನ್ನೂ ಮನವೊಲಿಸಬಹುದು.”

“ಆದರೆ ಸಮಾಜ?”

ಭೂಮಿ ಅವನತ್ತ ನೇರವಾಗಿ ನೋಡಿದಳು.

“ನಮ್ಮ ಜೀವನವನ್ನು ಸಮಾಜ ಬದುಕುವುದಿಲ್ಲ.”

ಆದಿತ್ಯ ಮೌನವಾಗಿದ್ದ.


ಅವಳು ಮುಂದುವರಿಸಿದಳು.“ನೀನು ನನ್ನನ್ನು ಪ್ರೀತಿಸುತ್ತೀಯಾ?”

“ಹೌದು.”

“ನನ್ನನ್ನು ನಂಬುತ್ತೀಯಾ?”

“ಹೌದು.”

“ಹಾಗಾದರೆ ನಮ್ಮ ಮುಂದೆ ಇರುವ ಸಮಸ್ಯೆ ಪ್ರೀತಿ ಅಲ್ಲ.”

“ಆಮೇಲೆ?”

“ವಿಧಿ.”


ಆದರೆ ವಿಧಿ ಇನ್ನೂ ತನ್ನ ಕೊನೆಯ ಆಟವನ್ನು ಆಡಿರಲಿಲ್ಲ.

ಕೆಲವು ದಿನಗಳ ನಂತರ ಭೂಮಿಯ ಕುಟುಂಬದಲ್ಲಿ ದೊಡ್ಡ ಸಮಸ್ಯೆ ಎದುರಾಯಿತು.ಅವಳ ತಂದೆಯ ವ್ಯವಹಾರದಲ್ಲಿ ಅನಿರೀಕ್ಷಿತ ನಷ್ಟವಾಯಿತು.ಕುಟುಂಬದ ಆರ್ಥಿಕ ಪರಿಸ್ಥಿತಿ ಬದಲಾಗತೊಡಗಿತು.

ವಿಕ್ರಮ್‌ನ ಕುಟುಂಬ ಈ ವಿಷಯ ತಿಳಿದುಕೊಂಡಿತು.ಅವರು ಮದುವೆಯ ಮಾತನ್ನು ಮುಂದುವರಿಸುವ ಬದಲು...“ಇಂತಹ ಪರಿಸ್ಥಿತಿಯಲ್ಲಿ ಸಂಬಂಧ ಮುಂದುವರಿಸುವುದು ಕಷ್ಟ,” ಎಂದು ಹಿಂದೆ ಸರಿದರು.ಭೂಮಿಗೆ ನೋವಾಯಿತು.ಆದರೆ ಆಶ್ಚರ್ಯವಾಗಲಿಲ್ಲ.

ಅವಳು ಜೀವನದಲ್ಲಿ ಮೊದಲ ಬಾರಿಗೆ ಅರಿತುಕೊಂಡಳು—ಕೆಲವು ಸಂಬಂಧಗಳು ನಮ್ಮನ್ನು ಪಡೆಯಲು ಬರುತ್ತವೆ.ಕೆಲವು ಸಂಬಂಧಗಳು ನಮ್ಮ ಸ್ಥಿತಿಯನ್ನು ನೋಡಿ ಬರುತ್ತವೆ.

ಆದರೆ ನಿಜವಾದ ಬಂಧ...ನಾವು ಕುಸಿದಾಗ ನಮ್ಮ ಕೈ ಹಿಡಿಯುತ್ತದೆ.


ಅದೇ ಸಮಯದಲ್ಲಿ ಆದಿತ್ಯ ತನ್ನ ತಂದೆಯೊಂದಿಗೆ ಮಾತನಾಡಿದ.

“ಅಪ್ಪ... ನಾನು ಭೂಮಿಯನ್ನು ಮದುವೆಯಾಗಲು ಬಯಸುತ್ತೇನೆ.”

ಅವನ ತಂದೆ ಸ್ವಲ್ಪ ಹೊತ್ತು ಮೌನವಾಗಿದ್ದರು.“ಅವಳ ಕುಟುಂಬದ ಪರಿಸ್ಥಿತಿ ಬದಲಾಗಿದೆ ಅಂತ ಗೊತ್ತಾ?”

“ಗೊತ್ತು.”

“ಅವಳ ಬಳಿ ಹಿಂದಿನಂತ ಹಣ ಇರದೇ ಇರಬಹುದು.”

“ನನಗೆ ಗೊತ್ತು.”

“ಹಾಗಾದರೆ?”

ಆದಿತ್ಯ ನಕ್ಕ.

“ನಾನು ಅವಳನ್ನು ಹಣಕ್ಕಾಗಿ ಪ್ರೀತಿಸಿಲ್ಲ ಅಪ್ಪ.”

ಅವನ ತಂದೆ ಅವನತ್ತ ನೋಡಿದರು.

“ನೀನು ಖಚಿತವಾ?”

“ಅವಳು ನನ್ನ ಜೊತೆ ಇದ್ದಾಗ ನಾನು ಯಾರೋ ಒಬ್ಬನಂತೆ ಭಾಸವಾಗುತ್ತೇನೆ. ಅವಳು ಇಲ್ಲದಿದ್ದಾಗ ನಾನು ನನ್ನನ್ನೇ ಹುಡುಕುತ್ತಿರುತ್ತೇನೆ.”

ಅವನ ತಂದೆ ಏನೂ ಹೇಳಲಿಲ್ಲ.

ಸ್ವಲ್ಪ ಹೊತ್ತಿನ ನಂತರ ಅವನ ಭುಜದ ಮೇಲೆ ಕೈ ಇಟ್ಟು,

“ಹಾಗಾದರೆ ಅವಳನ್ನು ಕಳೆದುಕೊಳ್ಳಬೇಡ.”


ಕೆಲವು ದಿನಗಳ ನಂತರ ಭೂಮಿ ತನ್ನ ಮನೆಯ ಹೊರಗೆ ನಿಂತಿದ್ದಳು.

ಅವಳ ಮುಂದೆ ಆದಿತ್ಯನ ಕುಟುಂಬ.ಆದಿತ್ಯ ಅವಳ ತಂದೆಯ ಮುಂದೆ ನಿಂತು,“ನಿಮ್ಮ ಮಗಳನ್ನು ನಾನು ಕೇವಲ ಮದುವೆಯಾಗಲು ಕೇಳುತ್ತಿಲ್ಲ. ಅವಳ ಕನಸುಗಳ ಜೊತೆ ಬದುಕಲು ಅವಕಾಶ ಕೇಳುತ್ತಿದ್ದೇನೆ.”ಭೂಮಿಯ ತಂದೆಯ ಕಣ್ಣುಗಳು ತೇವಗೊಂಡವು.

“ನೀನು ಅವಳನ್ನು ಸಂತೋಷವಾಗಿಡಬಲ್ಲೆಯಾ?”ಆದಿತ್ಯ ನಕ್ಕ.

“ನಾನು ಯಾವಾಗಲೂ ಅವಳನ್ನು ಸಂತೋಷವಾಗಿಡುತ್ತೇನೆ ಎಂದು ಮಾತು ಕೊಡಲಾರೆ. ಆದರೆ ಅವಳು ದುಃಖದಲ್ಲಿದ್ದಾಗ ಅವಳ ಜೊತೆ ಇರುತ್ತೇನೆ ಎಂದು ಮಾತು ಕೊಡಬಲ್ಲೆ.”ಆ ಮಾತು ಕೇಳಿದ ಭೂಮಿ ಕಣ್ಣೀರು ಒರೆಸಿಕೊಂಡಳು.ಅವಳ ತಂದೆ ನಿಧಾನವಾಗಿ ತಲೆ ಆಡಿಸಿದರು.


ಕೆಲವು ತಿಂಗಳುಗಳ ನಂತರ...ಅದೇ ಪಟ್ಟಣದ ಮತ್ತೊಂದು ವೇದಿಕೆ.

ಭೂಮಿ ಮತ್ತೆ ಶಾಸ್ತ್ರೀಯ ನೃತ್ಯ ಮಾಡುತ್ತಿದ್ದಳು.ಆದಿತ್ಯ ಪ್ರೇಕ್ಷಕರ ನಡುವೆ ಕುಳಿತಿದ್ದ.ನೃತ್ಯ ಮುಗಿದ ನಂತರ ಭೂಮಿ ವೇದಿಕೆಯಿಂದ ಕೆಳಗಿಳಿದಳು.ಆದಿತ್ಯ ಅವಳ ಬಳಿ ಬಂದು,“ಇವತ್ತು ‘ರ’ ಸರಿಯಾಗಿ ಹೇಳಿದೆ,” ಎಂದು ಕಿಚಾಯಿಸಿದ.ಭೂಮಿ ನಗುತ್ತಾ,“ನೀನು ಇನ್ನೂ ಅದನ್ನೇ ಗಮನಿಸ್ತೀಯಾ?”.

“ನಿನ್ನ ಬಗ್ಗೆ ನಾನು ಗಮನಿಸದಿರುವುದೇನಾದರೂ ಇದೆಯಾ?”

ಅವಳು ನಗುತ್ತಾ ತಲೆ ತಗ್ಗಿಸಿದಳು.

ಆದಿತ್ಯ ಅವಳ ಕೈಯಲ್ಲಿದ್ದ ಕವಿತೆಯ ಪುಸ್ತಕವನ್ನು ತೆಗೆದುಕೊಂಡ.

“ಹೊಸ ಕವಿತೆ ಬರೆದಿದ್ದೀಯಾ?”

“ಹೌದು.”

“ಏನು ಹೆಸರು?”

ಭೂಮಿ ಅವನತ್ತ ನೋಡಿ ಹೇಳಿದಳು.

“ವಿಧಿಯ ಹೊಸ್ತಿಲಲ್ಲಿ.”

“ಏನು ಬರೆದಿದ್ದೀಯ?”

ಅವಳು ಪುಸ್ತಕವನ್ನು ಮುಚ್ಚಿ ನಗಿದಳು.

“ಅದು ನಿನಗೆ ಈಗ ಹೇಳಲ್ಲ.”

“ಯಾಕೆ?”

“ನೀನು ಓದಿದ ಮೇಲೆ ಅರ್ಥವಾಗುತ್ತದೆ.”

ಅವನು ಪುಸ್ತಕ ತೆರೆದ.

ಮೊದಲ ಪುಟದಲ್ಲಿ ಒಂದೇ ಸಾಲು ಇತ್ತು.

“ನಾವು ಹುಡುಕಿದ ದಾರಿಯಲ್ಲಿ ಪ್ರೀತಿ ಸಿಗಲಿಲ್ಲ...

ಆದರೆ ವಿಧಿಯು ನಮ್ಮನ್ನು ಒಂದೇ ಹೊಸ್ತಿಲಿಗೆ ತಂದು ನಿಲ್ಲಿಸಿತು.”

ಆದಿತ್ಯ ಅವಳತ್ತ ನೋಡಿದ.

ಭೂಮಿ ಮೌನವಾಗಿ ನಿಂತಿದ್ದಳು.ಅವರಿಬ್ಬರಿಗೂ ಗೊತ್ತಿತ್ತು—

ಜೀವನ ಯಾವಾಗಲೂ ನಾವು ಬಯಸಿದಂತೆ ನಡೆಯುವುದಿಲ್ಲ.

ಕೆಲವೊಮ್ಮೆ ಅದು ನಮ್ಮನ್ನು ಮುರಿಯುತ್ತದೆ.ಕೆಲವೊಮ್ಮೆ ನಮ್ಮಿಂದ ಪ್ರೀತಿಯನ್ನು ಕಸಿದುಕೊಳ್ಳುತ್ತದೆ.


ಮತ್ತೆ...ನಾವು ಪ್ರೀತಿಸಲು ಹೆದರಿದಾಗಲೇ,ನಮ್ಮ ಕೈ ಹಿಡಿಯಲು ಸರಿಯಾದ ವ್ಯಕ್ತಿಯನ್ನು ಕಳುಹಿಸುತ್ತದೆ.ಭೂಮಿಯ ಜೀವನದಲ್ಲೂ ಅದೇ ಆಗಿತ್ತು.ಅವಳ ಹಳೆಯ ಕಥೆ ಮುಗಿದಾಗ ಅವಳು ಪ್ರೀತಿಯನ್ನೇ ಕಳೆದುಕೊಂಡೆ ಎಂದುಕೊಂಡಿದ್ದಳು.ಆದರೆ ಅದು ಪ್ರೀತಿಯ ಅಂತ್ಯವಾಗಿರಲಿಲ್ಲ.


ಅದು...

ವಿಧಿಯ ಹೊಸ್ತಿಲಲ್ಲಿ ನಿಂತಿದ್ದ ಹೊಸ ಕಥೆಯ ಆರಂಭವಾಗಿತ್ತು.


                                                                           — ಮುಕ್ತಾಯ —

  - ಈಶಕೃಷ್ಣ

ಡೇಟಾ ಸೈನ್ಸ್ ವಿಭಾಗ           

ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ





Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top