ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಗುಜರಾತಿನಿಂದ ಬಂಗಾಳದವರೆಗೆ ವಿಶಾಲ ಭಾರತದ ಭೂಮಿಯಲ್ಲಿ ನಾವು ನೂರಾರು ಆಹಾರಗಳನ್ನು, ಒಂದೇ ಆಹಾರದ ಬಗೆಬಗೆಯ ರುಚಿಗಳ್ನು ಸವಿಯುತ್ತಾ ಹೋಗಬಹುದು. ನಮ್ಮಲ್ಲಿ ಆಚಾರ-ವಿಚಾರ, ಉಡುಗೆ-ತೊಡುಗೆಗಳಿಗೆ ಸಿಕ್ಕ ವೈವಿಧ್ಯತೆಯು ಆಹಾರದ ವಿಷಯಕ್ಕೂ ಹೊರತಾಗಿಲ್ಲ.
ಭಾರತದಲ್ಲಿ ಹವಾಮಾನ, ಮಣ್ಣಿನ ಲಕ್ಷಣಗಳ ಆಧಾರದ ಮೇಲೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಆಯಾ ಪ್ರದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಬೆಳೆಗಳಿಂದ ಮುಖ್ಯ ಆಹಾರವನ್ನು ತಯಾರಿಸಲಾಗುತ್ತದೆ. ಆಯಾ ಪ್ರದೇಶದ ವಾತಾವರಣಕ್ಕೆ ದೇಹ ಹೊಂದಿಕೊಳ್ಳುವಂತೆ, ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಆಹಾರವನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ ನಮ್ಮದೇ ಕರಾವಳಿಯ ಧಗೆಗೆ ದೇಹವನ್ನು ತಂಪಿರಿಸಲು ಬಳಸುವ ಕುಚಲಕ್ಕಿ, ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ದೇಹವನ್ನು ಬೆಚ್ಚಗಿಡಲು ಬಳಸುವ ಮಸಾಲಾ ಮತ್ತು ಮಾಂಸದ ಪದಾರ್ಥಗಳು, ಹೀಗೆ ಬೇರೆಬೇರೆಯ ಹವಾಮಾನಕ್ಕೆ ತಕ್ಕಂತೆ ಬಗೆಬಗೆಯ ರುಚಿರುಚಿಯ ಆಹಾರಗಳು ಜೊತೆಯಾಗುತ್ತವೆ.
ಪ್ರತಿಯೊಂದು ರಾಜ್ಯವೂ ಒಂದೊಂದು ಆಹಾರದ ಬ್ರಾಂಡ್ ಅಂಬಾಸಿಡರ್‌ಗಳಂತೆ. ನಮ್ಮ ರಾಜ್ಯದ ಮುದ್ದೆ ಬಸ್ಸಾರು, ಬಿಸಿ ಬೆಳೆ ಬಾತ್, ಜೋಳದ ರೊಟ್ಟಿ-ಎಣ್ಣೆಗಾಯಿ,ಮೈಸೂರು ಪಾಕು, ಪಂಜಾಬಿನ ಮಕ್ಕೆ ಕಿ ರೊಟ್ಟಿ ಮತ್ತು ಸರಸೋನ್ ಕಾ ಸಾಂಗ್, ಛೋಲೆ ಭಟೂರೆ, ಮಹಾರಾಷ್ಟ್ರದ ವಡಾ ಪಾವ್, ಪುರನ್ ಪೋಳಿ, ಮಿಸಳ್ ಪಾವ್, ಪಶ್ಚಿಮ ಬಂಗಾಳದ ರಸಗುಲ್ಲಾ, ಕೊಶಾ ಮಾಂಶೋ, ಮಚೆರ್ ಝೋಲ್, ತಮಿಳುನಾಡಿನ ಪೊಂಗಲ್, ಚೆಟ್ಟಿನಾಡ್ ಚಿಕನ್, ಇಡ್ಲಿ-ದೋಸೆ, ಕೇರಳದ ಅಪ್ಪಮ್ ಜೊತೆ ಸ್ಟ್ಯೂ, ಪುಟ್ಟು, ರಾಜಸ್ಥಾನದ ದಾಲ್ ಬಾಟಿ ಚುರ್ಮಾ, ಗೇವರ್, ಗುಜರಾತಿನ ಧೋಕ್ಳಾ, ಖಾಂಡ್ವಿ, ಥೆಪ್ಲಾ, ಆಂಧ್ರಪ್ರದೇಶದ ಹೈದರಾಬಾದಿ ಬಿರಿಯಾನಿ, ಗುಂಟೂರು ಚಿಕನ್ ಕರಿ, ಪೆಸರಟ್ಟು, ಬಿಹಾರದ ಲಿಟ್ಟಿ ಚೋಖಾ, ಕಾಶ್ಮೀರದ ರೋಗನ್ ಜೋಶ್ ಕಾಶ್ಮೀರಿ ದಮಾ ಆಲೂ, ಗೋವಾದ ಗೋವನ್ ಫಿಶ್ ಕರಿ, ಬೆಬಿಂಕಾ.. ಹೀಗೆ ಪಟ್ಟಿ ಮುಂದುವರಿಯುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡ ಸಂಸ್ಕೃತಿಯ ಎಳೆಗಳ ಜೊತೆಯಲ್ಲಿ ವಿವಿಧ ಆಹಾರ ಪದ್ಧತಿಯೂ ಜೊತೆಯಾಗಿ ಸೊಗಸಾಗಿ ಬೆಸೆದುಕೊಂಡಿದೆ.
ಆದರೆ ಇಂದಿನ ದಿನಗಳಲ್ಲಿ ಆಯಾ ಪ್ರದೇಶದ ಆಹಾರ ಪದಾರ್ಥಗಳು ಅವರಿಗಷ್ಟೇ ಸೀಮಿತವಾಗಿರದೆ ದೇಶದ ಎಲ್ಲ ಭಾಗದವರಿಗೂ ಸವಿಯಲು ಸಿಗುತ್ತವೆ. ದಕ್ಷಿಣದ ಊಟ ಉತ್ತರದ ಹೋಟೆಲುಗಳಲ್ಲಿ ಮಿಂಚುತ್ತದೆ. ದಕ್ಷಿಣ ಭಾಗದವನೊಬ್ಬ ಊರಿನಲ್ಲೇ ಕುಳಿತು ಸೌತ್ ಇಂಡಿಯಾ ಸ್ಪೆಷಲ್ ಅನ್ನು ಚಪ್ಪರಿಸುತ್ತಾನೆ. ಮರಾಠಿ ಮುಲ್ಗಿ ತನ್ನ ಯುಟ್ಯೂಬ್ ಚಾನಲ್‌ನಲ್ಲಿ ಹೇಳಿಕೊಡುವ "ಪುರನ್ ಪೋಳಿ" ಯನ್ನು ಬೆಂಗಾಳಿಮೆಯೆ ನೋಡಿ, ಕಲಿತು, ಮಾಡಿ, ಮನೆಯವರಿಗೆ ಬಡಿಸಿ ಉಣಸಿ ಸೈ ಎನಿಸಿಕೊಳ್ಳುತ್ತಾಳೆ. ಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದ ಬೇರೆ ಬೇರೆ ಪ್ರದೇಶಗಳಿಗೆ ಹೋದಾಗ ಜನರು ಅಲ್ಲಿಯ ಆಹಾರವನ್ನೇ ಸವಿಯಲಿಚ್ಛಿಸುತ್ತಾರೆ. ಹೆಚ್ಚುತ್ತಿರುವ ಹೊಟೆಲ್‌ಗಳು ಮತ್ತು ಆಹಾರವನ್ನು ಕೈ ತಂದು ಮುಟ್ಟಿಸುವ ಜೊಮೆಟೊ, ಸ್ವಿಗ್ಗಿಗಳು ನಾಲಿಗೆಗೆ ಹೊಸಹೊಸ ರುಚಿಯನ್ನು ತಿನ್ನಿಸಲು ಸಹಕರಿಸುತ್ತವೆ. ಹಾಗಾಗಿ ಮತ್ತೊಂದು ಪ್ರದೇಶದ ಆಹಾರದ ರುಚಿಯನ್ನು ಆಸ್ವಾದಿಸಲು ಈಗ ಅಂತಹ ಕಷ್ಟವೇನಿಲ್ಲ.
ಇಂತಹ ವೈವಿಧ್ಯಮಯ ವಿಷಯಗಳೇ ಭಾರತವನ್ನು ಇನ್ನಷ್ಟು ಸುಂದರವಾಗಿ ರೂಪಿಸಿರುವುದು. ಮತ್ತೊಬ್ಬರ ಭಿನ್ನತೆಯನ್ನು ನಾವು ಗೌರವಿಸೋಣ. ಭಿನ್ನತೆಯೊಳಗಿನ ಭ್ರಾತೃತ್ವವನ್ನು ಸಂಭ್ರಮಿಸೋಣ. ಅವರ ಆಹಾರವನ್ನು ನಾವು ಸವಿದು, ನಮ್ಮದನ್ನು ಅವರಿಗೆ ಬಡಿಸೋಣ
ಹಾ, ಮತ್ತೊಂದು ಮುಖ್ಯ ವಿಷಯ. ಈ ಲೇಖನವನ್ನೋದಿ ಬಾಯಲ್ಲಿ ನೀರೂರಿ, ಮೇಲಿನದನ್ನು ತಿನ್ನುವ ಆಸೆಯಾದರೆ ನನ್ನ ತಪ್ಪಲ್ಲ ಮತ್ತೆ!
-ಮುಕ್ತಾ ಹೆಗಡೆ,
SDM College, ಉಜಿರೆ

