ಪುತ್ತೂರು: ಅಕ್ಷಯ ಕಾಲೇಜಿನ ಮಾನವ ಹಕ್ಕುಗಳ ಕ್ಲಬ್ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ‘ಗ್ರಾಹಕರ ಹಕ್ಕುಗಳ ರಕ್ಷಣೆ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರಾದ ಚಿದಾನಂದ ಬೈಲಾಡಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಗ್ರಾಹಕರ ಮೂಲಭೂತ ಹಕ್ಕುಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಪರಿಹಾರ ಪಡೆಯುವ ಹಕ್ಕು ಹಾಗೂ ಗ್ರಾಹಕ ಶಿಕ್ಷಣದ ಹಕ್ಕುಗಳ ಬಗ್ಗೆ ಅವರು ತಿಳಿಸಿದರು.
ಕಲಬೆರಕೆ ಹಾಗೂ ನಕಲಿ ವಸ್ತುಗಳಿಂದ ಗ್ರಾಹಕರು ಹೇಗೆ ರಕ್ಷಣೆ ಪಡೆಯಬಹುದು ಮತ್ತು ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸುವ ವಿಧಾನದ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ. ಪಕ್ಕಳ ಮಾತನಾಡಿ, ಗ್ರಾಹಕರು ದೈನಂದಿನ ಜೀವನದಲ್ಲಿ ವಿವಿಧ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ವಸ್ತುಗಳಿಂದ ಮೋಸ ಹೋಗುವ ಸಾಧ್ಯತೆ ಇದೆ. ಸಮರ್ಪಕ ಕಾನೂನು ಅರಿವಿನ ಕೊರತೆಯಿಂದ ನಷ್ಟ ಅನುಭವಿಸುವುದು ಸಾಮಾನ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆಯ ಕುರಿತು ಅರಿವು ಹೊಂದುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಲಾ ವಿಭಾಗದ ಮುಖ್ಯಸ್ಥ ಅಶೋಕ ರೈ, ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ., ಮಾನವ ಹಕ್ಕುಗಳ ಕ್ಲಬ್ ಸಂಯೋಜಕಿ ಹರ್ಷಿತ ಎನ್.ಎಂ. ಉಪಸ್ಥಿತರಿದ್ದರು.
ಅಂತಿಮ ಪದವಿ ವಿದ್ಯಾರ್ಥಿನಿ ಕುಮಾರಿ ಕೋಮಲಾಕ್ಷಿ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಗಂಧರ್ವ ವಂದಿಸಿದರು. ದ್ವಿತೀಯ ಪದವಿ ವಿದ್ಯಾರ್ಥಿನಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
