ಸತ್ಯದ ದಾರಿ, ದೈವನಂಬಿಕೆ ಮತ್ತು ಜೀವನದ ನಿಜವಾದ ಯಶಸ್ಸು

Shreya Hegde
0


ಇಂದಿನ ಜಟಿಲ ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯ ಹೇಗೆ ಬದುಕಬೇಕು, ಸರಿ-ತಪ್ಪುಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗ್ರಹಿಸಬೇಕು ಮತ್ತು ಸವಾಲುಗಳನ್ನು ಎದುರಿಸಿ ಹೇಗೆ ಬೆಳೆಯಬೇಕು ಎಂಬುದನ್ನು ಪ್ರತಿಯೊಬ್ಬರೂ ಆಳವಾಗಿ ಆಲೋಚಿಸಬೇಕಾಗಿದೆ.


ನಾವು ಏನೇ ಮಾಡಿದರೂ, ಹೇಗೆ ಬದುಕಿದರೂ ನಮ್ಮ ಪ್ರತಿಯೊಂದು ಹೆಜ್ಜೆಯನ್ನೂ, ಉದ್ದೇಶವನ್ನೂ ಭಗವಂತ ಗಮನಿಸುತ್ತಿದ್ದಾನೆ ಎಂಬ ಸತ್ಯವನ್ನು ಎಂದಿಗೂ ಮರೆಯಬಾರದು. ಯಾವುದೇ ಕಾರ್ಯಕ್ಕೆ ಕೈಹಾಕುವ ಮುನ್ನ, ನಿರ್ಧಾರ ತಳೆಯುವ ಮುನ್ನ ಸಾವಿರ ಬಾರಿ ಯೋಚಿಸುವುದು ವಿವೇಕತನ. ಇತ್ತೀಚಿನ ದಿನಗಳಲ್ಲಿ ಒಬ್ಬ ವ್ಯಕ್ತಿ ಶ್ರಮಪಟ್ಟು ಬೆಳೆಯಲು ತೊಡಗಿದರೆ, ಆತನನ್ನು ಪ್ರೋತ್ಸಾಹಿಸುವ ಬದಲು ಕಾಲೆಳೆದು ಹಾಳು ಮಾಡಲು ಯತ್ನಿಸುವವರೇ ಹೆಚ್ಚು. ಆದರೆ, ಮನುಷ್ಯನ ಕಣ್ಣಿನಿಂದ ತಪ್ಪಿಸಿಕೊಂಡರೂ ದೈವದ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸರಿ-ತಪ್ಪುಗಳ ಅಂತಿಮ ತೀರ್ಮಾನ ಮನುಷ್ಯರದ್ದಲ್ಲ, ಅದು ಭಗವಂತನದ್ದು.


ಜಗತ್ತಿನಲ್ಲಿ ತಪ್ಪು ಮಾಡದ ಮನುಷ್ಯನೇ ಇಲ್ಲ. ಭಗವಂತ ಪ್ರತಿಯೊಂದು ತಪ್ಪಿಗೂ ತಕ್ಷಣವೇ ಶಿಕ್ಷೆ ವಿಧಿಸುತ್ತಾ ಹೋದರೆ ಈ ಭೂಮಿಯ ಮೇಲೆ ಯಾರೂ ಉಳಿಯುತ್ತಿರಲಿಲ್ಲ. ನಾವೇ ಪರಮ ಸತ್ಯವಂತರಂತೆ ನಟಿಸುತ್ತಾ ಇತರರಿಗೆ ಶಿಕ್ಷೆ ವಿಧಿಸಲು ಮುಂದಾಗುವುದು ಅಥವಾ ಅವರ ಹೆಸರು ಹಾಳು ಮಾಡುವುದು ಧರ್ಮವಲ್ಲ. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾಪುರುಷರ ಬೆಳವಣಿಗೆಯನ್ನು ತಡೆಯಲು ಅಂದಿನ ಕಾಲದಲ್ಲೂ ಹಲವರು ಯತ್ನಿಸಿದರು. ಆದರೆ ಸತ್ಯ, ತ್ಯಾಗ ಮತ್ತು ನಿಷ್ಠೆಯ ಹಾದಿಯಲ್ಲಿದ್ದ ಆ ಮಹಾನ್ ವ್ಯಕ್ತಿಗಳನ್ನು ತುಳಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಏಕೆಂದರೆ ಧರ್ಮದ ಹಾದಿಯಲ್ಲಿ ನಡೆಯುವವರ ಜೊತೆ ಭಗವಂತನ ಆಶೀರ್ವಾದ ಸದಾ ಇರುತ್ತದೆ.


ನಿಜವಾದ ಜೀವನ ಎಂದರೇನು?

ಮತ್ತೊಬ್ಬರಿಗೆ ತೊಂದರೆ ಕೊಡುವುದು, ಮೋಸ ಮಾಡುವುದು, ಹೆಸರು ಹಾಳು ಮಾಡುವುದು ಅಥವಾ ಹಿಂಸಿಸುವುದು ಜೀವನವಲ್ಲ. ಬದಲಿಗೆ, ಬೆಳೆಯುತ್ತಿರುವ ವ್ಯಕ್ತಿಗೆ ಆಸರೆಯಾಗಿ ನಿಂತು ಪ್ರೋತ್ಸಾಹ ನೀಡುವುದು ನಿಜವಾದ ಮನುಷ್ಯತ್ವ. ಕಷ್ಟ-ನಷ್ಟಗಳನ್ನು ಧೈರ್ಯದಿಂದ ಎದುರಿಸಿ, ದೈವಜ್ಞಾನದೊಂದಿಗೆ ಮುನ್ನಡೆಯುವುದೇ ನಿಜವಾದ ಯಶಸ್ಸು. ಇತರರ ಕುರಿತು ಬೆರಳು ತೋರಿಸುವ ಮುನ್ನ "ನಾನು ಯಾರು? ನಾನು ತಪ್ಪಿಲ್ಲದೆ ಬದುಕುತ್ತಿದ್ದೇನೆಯೇ?" ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯಗತ್ಯ.


ಬದುಕಿಗೆ ಬೆಳಕಾಗುವ ಅಮೂಲ್ಯ ಚಿಂತನೆಗಳು:

ರಸ್ತೆಯ ಮೇಲಿರುವ ದೊಡ್ಡ ಕಲ್ಲುಗಳಿಗಿಂತ, ಬೂಟಿನೊಳಗಿರುವ ಸಣ್ಣ ಹರಳು ನಡಿಗೆಯನ್ನು ತಡೆಯುತ್ತದೆ. ಅಂದರೆ, ಹೊರಗಿನ ಸವಾಲುಗಳಿಗಿಂತ ನಮ್ಮೊಳಗಿನ ದುರ್ಬಲತೆಯೇ ನಮ್ಮ ಸೋಲಿಗೆ ಹೆಚ್ಚು ಕಾರಣವಾಗುತ್ತದೆ. ಪ್ರಭಾವ, ಹಣ ಮತ್ತು ಅಧಿಕಾರ ನೋಡಿ ಬರುವವರಿಗಿಂತ ನಮ್ಮ ಒಳ್ಳೆಯ ಸ್ವಭಾವವನ್ನು ನೋಡಿ ಹತ್ತಿರವಾಗುವವರೇ ನಮ್ಮ ನಿಜವಾದ ಹಿತೈಷಿಗಳು. ಪ್ರಯತ್ನ ಎಂಬುದು ಬೀಜದಂತೆ; ಅದನ್ನು ಬಿತ್ತುತ್ತಾ ಹೋದರೆ ಎಂದಿಗೂ ವ್ಯರ್ಥವಾಗುವುದಿಲ್ಲ, ಕಾಲಕ್ರಮೇಣ ಅದು ಮರವಾಗಿ ಫಲ ನೀಡುತ್ತದೆ. ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು. ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು, ಆದರೆ ಸದ್ಗುಣಗಳನ್ನು ಹಾಗೆ ಪಡೆಯಲು ಸಾಧ್ಯವಿಲ್ಲ. ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ, ಅಲ್ಲಿಯವರೆಗೆ ನಾವು ಖಂಡಿತವಾಗಿ ನೆಮ್ಮದಿ ಹಾಗೂ ಸಂತೋಷದಿಂದಿರಬಹುದು.


ಜೀವನವನ್ನು ರೂಪಿಸುವ ಕೆಲವು ನುಡಿಮುತ್ತುಗಳು:

ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ; ಏಕೆಂದರೆ ಜೀವನ ನಮಗೆ ಪ್ರತಿದಿನ ಹೊಸ ಪಾಠಗಳನ್ನು ಕಲಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಸಮುದ್ರ ತಾನಾಗಿಯೇ ನೀರಿಗಾಗಿ ಎಲ್ಲಿಯೂ ಅಲೆಯುವುದಿಲ್ಲ, ನದಿಗಳೇ ಹರಿದು ಬರುತ್ತವೆ. ಹಾಗೆಯೇ, ನಾವು ಅದಕ್ಕೆ ಬೇಕಾದ ಯೋಗ್ಯತೆಯನ್ನು ಗಳಿಸಿದರೆ ಯಶಸ್ಸು ಮತ್ತು ಕೀರ್ತಿಗಳು ನಮ್ಮನ್ನು ಹಿಂಬಾಲಿಸಿ ಬರುತ್ತವೆ. ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು; ದುಃಖದ ಅನುಭವವಿಲ್ಲದೆ ಸುಖದ ಬೆಲೆ ತಿಳಿಯಲಾರದು. ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ, ನೀನು ಕೂಡ ಇಡೀ ಜಗತ್ತನ್ನು ನಿನ್ನದೇ ಮನೆ ಎಂದು ಭಾವಿಸಿ ವಿಶಾಲ ಮನಸ್ಸಿನಿಂದ ಬಾಳು. ವಂಚಕರಿಗೆ ಕಿರೀಟವಾಗುವುದಕ್ಕಿಂತ, ಉತ್ತಮ ವ್ಯಕ್ತಿಗಳಿಗೆ ಪಾದುಕೆಯಾಗುವುದು (ಸಹಾಯಕನಾಗುವುದು) ಸಾವಿರ ಪಟ್ಟು ಶ್ರೇಷ್ಠ.


ನಾವು ಪ್ರಾಮಾಣಿಕರಾಗಿ, ನಮ್ಮ ಮನಸ್ಸು ಮತ್ತು ಹೃದಯವನ್ನು ಸರಿಯಾದ ದಿಕ್ಕಿನಲ್ಲಿಟ್ಟುಕೊಂಡರೆ ಬದುಕು ತಾನಾಗಿಯೇ ಯಶಸ್ಸಿನತ್ತ ಸಾಗುತ್ತದೆ. ಇತರರನ್ನು ತುಳಿದು ಗೆಲ್ಲುವುದಕ್ಕಿಂತ, ಕೈಹಿಡಿದು ನಡೆಸುವ ನಿಜವಾದ ನಾಯಕನಾಗುವುದೇ ಶ್ರೇಷ್ಠ.


- ಮಹೇಶ್ ಶರ್ಮಾ, ಅಥಣಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top