ನವದೆಹಲಿ: ಪ್ರಸಿದ್ಧ ವಾಗ್ಮಿ, ಲೇಖಕ ಹಾಗೂ ಅಂತರರಾಷ್ಟ್ರೀಯ ತರಬೇತುದಾರರಾದ ಡಾ. ವಿವೇಕ್ ಬಿಂದ್ರಾ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಶ್ರೀ ಪೇಜಾವರ ಶ್ರೀಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ವೇದವ್ಯಾಸ ಗುರುಕುಲಕ್ಕೆ ಭೇಟಿ ನೀಡಿ, ಪೂಜ್ಯ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಸಂಸ್ಕೃತ ಮತ್ತು ವೇದ ಶಾಸ್ತ್ರ ಶಿಕ್ಷಣವನ್ನು ನಿರಂತರವಾಗಿ ನೀಡುತ್ತಾ ಬರುತ್ತಿರುವ ಪೇಜಾವರ ಮಠದ ಸೇವಾ ಕಾರ್ಯಗಳು ಅತ್ಯಂತ ಶ್ಲಾಘನೀಯ ಎಂದು ಬಣ್ಣಿಸಿದರು. ಅಲ್ಲದೆ, ಯಾವುದೇ ಫಲಾಪೇಕ್ಷೆಯಿಲ್ಲದೆ ಮಠವು ಮುನ್ನಡೆಸುತ್ತಿರುವ ಗೋರಕ್ಷಣೆಯ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.
ಮಠದ ಈ ಎಲ್ಲಾ ಸತ್ಕಾರ್ಯಗಳಲ್ಲಿ ತಾವೂ ಕೂಡ ಕೈಜೋಡಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ ವಿವೇಕ್ ಬಿಂದ್ರಾ, ಸಮಾಜದ ಪ್ರತಿಯೊಬ್ಬರೂ ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ ಕೈಲಾದ ನೆರವು ನೀಡಬೇಕು ಎಂದು ಕರೆ ನೀಡಿದರು.
ಭೇಟಿಯ ವೇಳೆ ಅವರು ಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ದಿವ್ಯ ಪಾದುಕೆಯ ದರ್ಶನವನ್ನು ಪಡೆದು ಕೃತಾರ್ಥರಾದರು.
