ನವದೆಹಲಿ: ಸಂತರ ಆಶೀರ್ವಾದ ಸಮಾಜಕ್ಕೆ ಸದಾ ಇರಬೇಕು ಎಂದು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ನಡೆಯುತ್ತಿರುವ ಶ್ರೀ ಪೇಜಾವರ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಬುಧವಾರದಂದು ಪತ್ನಿ ಸಮೇತರಾಗಿ ಗುರುಕುಲಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಿಂದ ಸಾಮೂಹಿಕ ಮಂತ್ರ ಘೋಷ, ರಾಮ ವಿಠಲ ದೇವರ ದರ್ಶನ ಹಾಗೂ ಮನಸ್ಸಿಗೆ ಮುದನೀಡುವ ಶ್ರೀ ವಿಶ್ವೇಶತೀರ್ಥರ ಸಂಸ್ಮರಣ ಧ್ಯಾನ ಕೇಂದ್ರದ ವೀಕ್ಷಣೆ ಅತ್ಯಂತ ಆನಂದ ತಂದಿದೆ ಎಂದರು. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಾಗೂ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದ ಪೇಜಾವರ ಸ್ವಾಮೀಜಿಯವರ ದರ್ಶನದಿಂದ ತಮಗೆೀವ ಅತೀವ ಸಂತೋಷವಾಗಿದೆ ಎಂದು ಅವರು ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹಂಚಿಕೊಂಡರು.
ಸಾಂಪ್ರದಾಯಿಕ ಸ್ವಾಗತ ಹಾಗೂ ಪರಸ್ಪರ ಸ್ಮರಣೆ:
ಗುರುಕುಲಕ್ಕೆ ಆಗಮಿಸಿದ ಮಾಜಿ ರಾಷ್ಟ್ರಪತಿ ದಂಪತಿಯನ್ನು ಸಾಂಪ್ರದಾಯಿಕ ಮಂತ್ರಘೋಷಗಳೊಂದಿಗೆ ಆದರದಿಂದ ಬರಮಾಡಿಕೊಳ್ಳಲಾಯಿತು. ಈ ವೇಳೆ ಪೇಜಾವರ ಶ್ರೀಗಳು, ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾಗಿದ್ದರೂ ಅವಧಿಯಲ್ಲಿ ಉಡುಪಿಗೆ ಭೇಟಿ ನೀಡಿದ್ದನ್ನು ಹಾಗೂ ಪದ್ಮವಿಭೂಷಣ ಪುರಸ್ಕೃತ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಂತ್ಯದಲ್ಲಿ ರಾಮ್ ನಾಥ್ ಕೋವಿಂದ್ ಅವರು ತಾವು ಇತ್ತೀಚೆಗೆ ಬಿಡುಗಡೆಗೊಳಿಸಿದ ತಮ್ಮ ಆತ್ಮಕಥನದ ಕೃತಿಯನ್ನು ಸ್ವಾಮೀಜಿಯವರಿಗೆ ಗೌರವಪೂರ್ವಕವಾಗಿ ಸಮರ್ಪಿಸಿದರು.
ಈ ವಿಶೇಷ ಸಮಾರಂಭದಲ್ಲಿ ಡಾ. ಶ್ರೀನಿವಾಸ ವರಖೇಡಿ, ಡಾ. ವಿಠೋಬಾಚಾರ್ಯ, ಕೃಷ್ಣ ಭಟ್, ಅಶ್ವಿನ್ ಕುಮಾರ್, ರಾಕೇಶ್ ಗೌರ್, ದೇವೇಂದರ್ ನೀರಜ್ ಟೆರ್ಹಾನ್ ಹಾಗೂ ಗುರುಕುಲದ ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.
