ತುಳುವಿಗೆ ರಾಜ್ಯದ ಎರಡನೇ ಭಾಷೆಯ ಮಾನ್ಯತೆ: "ಊಟಕ್ಕೆ ಇಲ್ಲದ ಉಪ್ಪಿನಕಾಯಿ" ಆಗಬಾರದು!

Shreya Hegde
0


ಮಂಗಳೂರಿನಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಬಹುನಿರೀಕ್ಷಿತ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ಇದು ತುಳುವಾಭಿಮಾನಿಗಳಿಗೆ ಅತ್ಯಂತ ಸಂತಸದ ವಿಚಾರವೇ ಆದರೂ, ಇದರ ಹಿಂದೆ ಹಲವು ಗಂಭೀರ ತಾಂತ್ರಿಕ ಸವಾಲುಗಳು ಉದ್ಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ.


ಕರ್ನಾಟಕ ಸರ್ಕಾರವು ಈಗಾಗಲೇ ತನ್ನ ಶಿಕ್ಷಣ ನೀತಿಯಲ್ಲಿ ದ್ವಿಭಾಷಾ ನೀತಿಯನ್ನು ಒಪ್ಪಿಕೊಂಡು ಜಾರಿಗೊಳಿಸಿದೆ. ರಾಜಕೀಯ ಕಾರಣಗಳಿಗಾಗಿ ಹಿಂದಿಯನ್ನು ದೂರವಿಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಸ್ಪಷ್ಟ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಕೂಡ ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆಯ ನಿರ್ದೇಶನ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.


ಇದೆಲ್ಲದರ ನಡುವೆ, ತುಳು ಭಾಷೆಗೆ ಎರಡನೇ ಅಧಿಕೃತ ಮಾನ್ಯತೆ ಸಿಕ್ಕರೆ, ನಮ್ಮ ಶಿಕ್ಷಣ ನೀತಿಯ ನಿಯಮಾವಳಿಗಳ ಪ್ರಕಾರ ಶಾಲೆಯಲ್ಲಿ ಪ್ರತಿಯೊಂದು ಮಗು ತನ್ನ ಕಲಿಕಾ ಪ್ರಕ್ರಿಯೆಯಲ್ಲಿ ತುಳುವನ್ನು ಎಷ್ಟನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬೇಕು? ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಮತ್ತು ಇಂಗ್ಲಿಷ್ ಅನ್ನು ಕಲಿಕಾ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವುದು ಸಹಜ. ಹಾಗಿದ್ದಾಗ, ಶಿಕ್ಷಣದಲ್ಲಿ ತುಳುವಿಗೆ ಎಲ್ಲಿ ಸ್ಥಾನ ಸಿಗುತ್ತದೆ? ತುಳು ಕೇವಲ ಆಡುಭಾಷೆಯಾಗಿ ಮಾತ್ರ ಮುಂದುವರಿಯಬೇಕೆ ಹೊರತು, ಶೈಕ್ಷಣಿಕವಾಗಿ ರಾಜ್ಯದ ಅಧಿಕೃತ ಭಾಷೆಯಾಗಿ ಯಾವ ರೀತಿಯಲ್ಲಿ ಮಾನ್ಯತೆ ಪಡೆಯಲು ಸಾಧ್ಯ? ಇದು ಅಕ್ಷರಶಃ "ಊಟಕ್ಕೆ ಇಲ್ಲದ ಉಪ್ಪಿನಕಾಯಿ" ಗಾದೆಯಂತಾಗಬಾರದಲ್ಲವೆ?


ಪ್ರತಿಯೊಂದು ಮಗುವಿಗೆ ತನ್ನಿಷ್ಟದ ಭಾಷೆಯನ್ನು ಕಲಿಯುವ ಸ್ವಾತಂತ್ರ್ಯವಿರಬೇಕು; ಭಾಷಾ ಕಲಿಕೆಯಲ್ಲಿ ಯಾವುದೇ ಕಟ್ಟುನಿಟ್ಟಿನ ಹೇರಿಕೆ ಇರಬಾರದು. ಇದು ಪ್ರತಿಯೊಬ್ಬ ಮಗುವಿನ ಮೂಲಭೂತ ಭಾಷಾ ಹಕ್ಕು.


ಒಂದಂತೂ ಸತ್ಯ; ದ್ವಿಭಾಷಾ ನೀತಿಯನ್ನು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ಕರಾವಳಿಗರನ್ನು ತೃಪ್ತಿಪಡಿಸುವ ದೃಷ್ಟಿಯಿಂದ ತುಳುವರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದು ಕೇವಲ ರಾಜಕೀಯ ಜಾಣ್ಮೆಯ ಹೆಜ್ಜೆಯಾಗಬಹುದು. ಆದರೆ, ತನ್ನದೇ ಶಿಕ್ಷಣ ನೀತಿಯ ಚೌಕಟ್ಟಿನಲ್ಲಿ ತುಳುವಿಗೆ ಯಾವ ರೀತಿಯಲ್ಲಿ ಪ್ರಾಯೋಗಿಕ ಮಾನ್ಯತೆ ನೀಡಬಹುದು ಎಂಬುದು ಸದ್ಯದ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top