ಮೂಡುಬಿದಿರೆ : ಆಳ್ವಾಸ್ ವೆಲ್‌ನೆಸ್ ತರಬೇತಿ ಕೇಂದ್ರ, ಆಳ್ವಾಸ್ ಕಾಲೇಜಿನ ಮನೋವಿಜ್ಞಾನ ವಿಭಾಗ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗಗಳ ಜಂಟಿ ಆಶ್ರಯದಲ್ಲಿ ‘ನೀನು ಒಂಟಿಯಲ್ಲ- ಆತ್ಮಹತ್ಯೆ ಕುರಿತ ಮನೋಭಾವ ಬದಲಾವಣೆಗೆ ಮುಕ್ತ ಸಂವಾದ’ ಕಾರ್ಯಕ್ರಮವು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಪಿಯು ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಲಿಝಿ ಸಾಜಿ, ಶಿಕ್ಷಕರ ಕರ್ತವ್ಯ ಕೇವಲ ಪಾಠ ಬೋಧಿಸುವುದಕ್ಕೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು, ಅವರ ಆತಂಕಗಳನ್ನು ಆಲಿಸುವುದು ಮತ್ತು ಅಗತ್ಯವಿದ್ದಾಗ ಬೆಂಬಲವಾಗಿ ನಿಲ್ಲುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಉತ್ತಮವಾಗಿ ಕಾಣಿಸಿಕೊಂಡರೂ ವೈಯಕ್ತಿಕ ಜೀವನದಲ್ಲಿ ಒತ್ತಡ, ಆತಂಕ ಹಾಗೂ ಭಯ ಎದುರಿಸುತ್ತಿರಬಹುದು. ಶಿಕ್ಷಕರು ವಿದ್ಯಾರ್ಥಿಗಳ ವರ್ತನೆಯ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಿ ಆತ್ಮೀಯವಾಗಿ ಮಾತನಾಡಬೇಕು. ವಿದ್ಯಾರ್ಥಿಗಳು ಕೂಡ ತಮ್ಮ ಸಮಸ್ಯೆಗಳನ್ನು ಶಿಕ್ಷಕರೊಂದಿಗೆ ಹಂಚಿಕೊಳ್ಳಲು ಹಿಂಜರಿಯಬಾರದು ಮತ್ತು ಮನಸ್ಸಿನಲ್ಲೇ ಇಟ್ಟುಕೊಂಡು ಒಂಟಿಯಾಗಿ ಹೋರಾಡುವುದಕ್ಕಿಂತ ವಿಶ್ವಾಸವಿರುವ ಶಿಕ್ಷಕರೊಂದಿಗೆ ಮಾತನಾಡುವುದು ಪರಿಹಾರದತ್ತ ಸಾಗುವ ಮೊದಲ ಹೆಜ್ಜೆಯಾಗಬಹುದು ಎಂದು ತಿಳಿಸಿದರು.
ಆಪ್ತ ಸಮಲೋಚಕಿ ರಾಧಿಕಾ ಅಡಪ್ಪಾ ಮಾತನಾಡಿ, ಜೀವನದ ಕಠಿಣ ಹಂತಗಳಲ್ಲಿ ಮೂಡುವ ಆತ್ಮಹತ್ಯೆಯಂತಹ ನಕಾರಾತ್ಮಕ ಆಲೋಚನೆಗಳನ್ನು ನಿರ್ಲಕ್ಷಿಸದೆ ಸೂಕ್ತ ಮತ್ತು ವೃತ್ತಿಪರ ನೆರವು ಪಡೆಯಬೇಕು ಎಂದರು.
ಈ ಮುಕ್ತ ಸಂವಾದದಲ್ಲಿ 'ಸಂಕಷ್ಟಗಳು ನಿಜ', 'ವಿಭಿನ್ನವಾಗಿ ಬದುಕುವುದು ಎಂದರೆ ಕಡಿಮೆಯಾಗಿ ಬದುಕುವುದಲ್ಲ' ಹಾಗೂ 'ಜೀವನ ಎಚ್ಚರಿಕೆಯಿಲ್ಲದೆ ಬದಲಾದಾಗ' ಎಂಬ ವಿಚಾರಗಳನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆ ನಡೆಸಲಾಯಿತು. ಸಂವಾದದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಆಕಾಶ್ ಎಂ., ಕಾಲೇಜಿನ ಸಿಎ ವಿದ್ಯಾರ್ಥಿ ಕವನಾ, ಬಿಬಿಎ ವಿಭಾಗದ ಹಿರಿಯ ವಿದ್ಯಾರ್ಥಿ ರಾಹುಲ್ ಪಿಳ್ಳೈ, ಸ್ನಾತಕೋತ್ತರ ಸಮಾಜಕಾರ್ಯ ವಿದ್ಯಾರ್ಥಿ ಕೌಶಿಕ್ ಹಾಗೂ ಕನ್ನಡ ವಿಭಾಗದ ಅಧ್ಯಾಪಕಿ ಡಾ. ಜ್ಯೋತಿ ರೈ ಭಾಗವಹಿಸಿ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ವೆಲ್‌ನೆಸ್ ತರಬೇತಿ ಕೇಂದ್ರದ ನಿರ್ದೇಶಕಿ ಡಾ. ದೀಪಾ ಕೊಠಾರಿ ಹಾಗೂ ಸಹಾಯಕ ಪ್ರಾಧ್ಯಾಪಕಿ ವೈದೇಹಿ ಉಪಸ್ಥಿತರಿದ್ದರು. ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಝಾನಾ ಕಾರ್ಯಕ್ರಮ ನಿರೂಪಿಸಿ, ಅಯೋನಾ ವಂದಿಸಿದರು.
