ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರು ರಷ್ಯಾದ ಕರೇಲಿಯಾ ಗಣರಾಜ್ಯದ ಪೆಟ್ರೋಜಾವೊಡ್ಸ್ಕ್‌ನಲ್ಲಿ ಸೆಪ್ಟೆಂಬರ್ 15 ರಿಂದ 17ರವರೆಗೆ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಪ್ರಾದೇಶಿಕ ಸಹಕಾರದ ಮೂಲಕ ಪರಿಸರ ಮತ್ತು ಪ್ರಕೃತಿ ನಿರ್ವಹಣೆಯ ೩ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಅವರು ‘ಪಶ್ಚಿಮಘಟ್ಟಗಳ ಸಂರಕ್ಷಣೆ: ಜಾಗೃತಿಯಿಂದ ಸಮುದಾಯದ ಕಾರ್ಯದತ್ತ’ ಕುರಿತ ವಿಶೇಷ ಅಧಿವೇಶನದಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಸಮುದಾಯಗಳು ಹಾಗೂ ಯುವಜನರ ಪಾತ್ರವನ್ನು ವಿವರಿಸಲಿದ್ದಾರೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಆಳ್ವಾಸ್ ಶೈಕ್ಷಣಿಕ ಪ್ರತಿಷ್ಠಾನ ಕೈಗೊಂಡಿರುವ ವಿವಿಧ ಪರಿಸರ ಸಂರಕ್ಷಣಾ ಚಟುವಟಿಕೆಗಳನ್ನು ಪರಿಚಯಿಸಲಿರುವ ಅವರು, ಪರಿಸರ ಸಂರಕ್ಷಣೆ ಕೇವಲ ಜಾಗೃತಿಗೆ ಸೀಮಿತವಾಗದೆ ಸಮುದಾಯದ ನೇತೃತ್ವದಲ್ಲಿ ನೆರವೇರಬೇಕಾದ ಅಗತ್ಯವನ್ನು ಪ್ರತಿಪಾದಿಸಲಿದ್ದಾರೆ.
ರಷ್ಯನ್ ವಿಜ್ಞಾನ ಅಕಾಡೆಮಿಯ ಕರೇಲಿಯನ್ ಸಂಶೋಧನಾ ಕೇಂದ್ರವು ರಷ್ಯನ್ ಬ್ರಿಕ್ಸ್ ಸಂಶೋಧನಾ ರಾಷ್ಟ್ರೀಯ ಸಮಿತಿಯ ಸಹಯೋಗದಲ್ಲಿ ಈ ಸಮ್ಮೇಳನವನ್ನು ಆಯೋಜಿಸಿದೆ. ಹವಾಮಾನ ಬದಲಾವಣೆ, ಜೀವವೈವಿಧ್ಯ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಹಾಗೂ ಪ್ರಾದೇಶಿಕ ಪರಿಸರ ಸಹಕಾರದ ಕುರಿತು ಸಂಶೋಧಕರು ಮತ್ತು ತಜ್ಞರು ಸಮ್ಮೇಳನದಲ್ಲಿ ಚರ್ಚಿಸಲಿದ್ದಾರೆ.
ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಹಾಗೂ ಆಳ್ವಾಸ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ವಿನಯ್ ಶಿವಮೂರ್ತಿ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿದ್ದು, ‘ಮಧ್ಯ ಪಶ್ಚಿಮಘಟ್ಟಗಳ ಜಲಪರಿಸರಗಳಲ್ಲಿ ಪರಿಸರ ಹರಿವಿನ ಮೌಲ್ಯಮಾಪನದ ಮೂಲಕ ನದೀ ಪರಿಸರ ವ್ಯವಸ್ಥೆಗಳ ಸಂರಕ್ಷಣೆ’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಸಮ್ಮೇಳನದಲ್ಲಿ ಕರ್ನಾಟಕದ ಹಲವು ಶಿಕ್ಷಣ ತಜ್ಞರು ಹಾಗೂ ಸಂಶೋಧಕರು ಭಾಗವಹಿಸಲಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ.ವಿ. ರಾಮಚಂದ್ರ, ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ಡಾ. ಶ್ವೇತಾ ರಂಗಸ್ವಾಮಿ ಹಾಸನ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ನಾಗರಾಜ್ ಎಸ್. ಪಾಟೀಲ್, ಚಾಣಕ್ಯ ವಿಶ್ವವಿದ್ಯಾಲಯದ ಡಾ. ಭರತ್ ಸೆಟ್ಟೂರು, ಹಳಿಯಾಳದ ವಿಡಿಐಟಿಯ ಡಾ. ವೆಂಕಟರಾಮಣ ಹೆಗ್ಡೆ ಹಾಗೂ ಬೆಳಗಾವಿಯ ಅಂಗಡಿ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯ ಡಾ. ಆನಂದ್ ದೇಶಪಾಂಡೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
