ಸುರತ್ಕಲ್: ಇಲ್ಲಿನ ಇನ್ನರ್ ವೀಲ್ ಕ್ಲಬ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಫಿಶರೀಶ್ ಚಿತ್ರಾಪುರದ ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿಸಂಘದ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಅಂಗವಾಗಿ ‘ಪ್ರತಿಭೆಗೆ ಪ್ರೋತ್ಸಾಹ’ ಹಾಗೂ ‘ಹಸಿರು ಶಾಲೆ’ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪರಿಮಳ ರಾವ್ ಅವರು, "ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಪರಿಸರ ಪ್ರಜ್ಞೆ ಹಾಗೂ ಜೀವನ ಮೌಲ್ಯಗಳನ್ನು ಬಾಲ್ಯದಲ್ಲೇ ಬಿತ್ತುವ ಕಾರ್ಯವಾಗಬೇಕಿದೆ. ವಿದ್ಯಾರ್ಥಿಗಳು ತಾವು ಕಲಿಯುವುದರ ಜೊತೆಗೆ ಸಮಾಜಕ್ಕೂ ಈ ಮೌಲ್ಯಗಳ ಅರಿವು ಮೂಡಿಸುವ ನಾಯಕರಾಗಬೇಕು" ಎಂದು ಕರೆ ನೀಡಿದರು.
ಕ್ಲಬ್‌ನ ಕಾರ್ಯದರ್ಶಿ ಲತಾ ಮಾತನಾಡಿ, "ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಹಾಗೂ ಸಾಮಾಜಿಕ ಸೇವಾ ಮನೋಭಾವನೆ ಅತ್ಯಗತ್ಯ" ಎಂದರು. ಪರಿಸರ ವೈವಿಧ್ಯತೆ ಮತ್ತು ಗಿಡಮರಗಳ ಸಂರಕ್ಷಣೆಯ ಮಹತ್ವದ ಕುರಿತು ಸುನೀತಾ ಗುರುರಾಜ್ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾತನಾಡಿ, "ಆಧುನಿಕ ಕಾಲಘಟ್ಟದಲ್ಲಿ ಸಾಕ್ಷರತೆಯ ವ್ಯಾಪ್ತಿ ವಿಸ್ತರಿಸಿದೆ. 'ಜನರು, ಭೂಮಿ ಮತ್ತು ಸಮೃದ್ಧಿಗಾಗಿ ಸಾಕ್ಷರತೆ' ಎಂಬ ಧ್ಯೇಯದೊಂದಿಗೆ ನಾವೆಲ್ಲರೂ ಶೈಕ್ಷಣಿಕ ಹಾಗೂ ಪರಿಸರದ ಏಳಿಗೆಗೆ ಶ್ರಮಿಸಬೇಕು" ಎಂದು ಹೇಳಿದರು.
ಪ್ರಶಸ್ತಿ ವಿತರಣೆ ಮತ್ತು ಸಾಮಗ್ರಿ ಕೊಡುಗೆ: ಸಭಾ ಕಾರ್ಯಕ್ರಮದಲ್ಲಿ ಭಾಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಇನ್ನರ್ ವೀಲ್ ಕ್ಲಬ್‌ನ ಕೋಶಾಧಿಕಾರಿ ಶುಭ ಜಗದೀಶ್, ಮಾಲತಿ ಸಚ್ಚಿದಾನಂದ ಹಾಗೂ ಭಾಗ್ಯಲಕ್ಷ್ಮಿ ಬಹುಮಾನಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ ಬಟ್ಟೆ ಚೀಲಗಳು, ಪುಸ್ತಕಗಳು ಹಾಗೂ ಕಲಿಕಾ ಪರಿಕರಗಳನ್ನು ಹಸ್ತಾಂತರಿಸಲಾಯಿತು.
ಪರಿಸರ ಜಾಗೃತಿಯ ಸಂಕೇತವಾಗಿ ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ಶಾಲಾ ವಿದ್ಯಾರ್ಥಿಗಳು ರಾಷ್ಟ್ರಪ್ರೇಮದ ಕುರಿತು ಭಾಷಣ ಮಾಡಿ, ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ತೇಜಪಾಲ್ ಕೂಳೂರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಎಲ್ಲರನ್ನೂ ಸ್ವಾಗತಿಸಿದರೆ, ಸುಕೇಶಿನಿ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

