ಕಾಳಜಿ: ಸ್ಮಾರ್ಟ್ ಸಿಟಿಯ ಸಾರ್ವಜನಿಕ ಶೌಚಾಲಯಗಳು ಸ್ಮಾರ್ಟ್ ಆಗುವುದು ಯಾವಾಗ?

Shreya Hegde
0


ಸಾರ್ವಜನಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಸಾಮಾನ್ಯವಾಗಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ದೂರದ ಊರುಗಳಿಂದ ಪ್ರಯಾಣ ಮಾಡುವ ಹಾಗೂ ಸ್ಥಳೀಯ ಜನರ ಅನುಕೂಲಕ್ಕೆಂದೇ ನಿರ್ಮಿಸಲಾಗುವ ಶೌಚಾಲಯಗಳು ಇವು. ಅದೇ ರೀತಿ ಮಂಗಳೂರು ನಗರದಲ್ಲೂ ಇಂತಹ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಅವುಗಳ ನಿರ್ವಹಣೆ ಕುರಿತು ರಿಯಾಲಿಟಿ ಚೆಕ್ ಮಾಡಲಾಗಿದೆ. ಈ ಶೌಚಾಲಯಗಳ ವಾಸ್ತವ ಪರಿಸ್ಥಿತಿಯನ್ನು ಓದುಗರ ಮುಂದೆ ಪ್ರಸ್ತುತ ಪಡಿಸಲಾಗುತ್ತಿದೆ. 


ಅದೊಂದು ದಿನ ವಿಹಾರಕ್ಕೆಂದು ಕದ್ರಿ ಪಾರ್ಕ್‌ಗೆ ತೆರಳಿದ್ದೆ. ಬಹುತೇಕ ಸಂದರ್ಭಗಳಲ್ಲಿ ಸಾರ್ವಜನಿಕ ಶೌಚಾಲಯ ಬಳಸುವುದಿಲ್ಲ. ಆದರೆ, ಅಂದು ಶೌಚಾಲಯ ಬಳಸುವ ಅನಿವಾರ್ಯತೆ ಎದುರಾದದ್ದರಿಂದ ಪಾರ್ಕ್ ಬಳಿಯೇ ಇದ್ದ ಸಾರ್ವಜನಿಕ ಶೌಚಾಲಯ ಬಳಸಲು ಮುಂದಾದ ನನಗೆ ಬಹಳ ಆಶ್ಚರ್ಯವೇ ಕಾದಿತ್ತು. ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯೊಂದು ಚೆನ್ನಾಗಿತ್ತು. ಆದರೆ, ನಿರ್ವಹಣೆ ಮರೀಚಿಕೆಯೇ ಸರಿ. 


ಸ್ವಚ್ಛತೆಗೆ ಇಲ್ಲಿ ಜಾಗವೇ ಇರಲಿಲ್ಲ. ಶೌಚದ ವಾಸನೆಗೆ ತಲೆ ತಿರುಗಿ ಬೀಳುವುದೊಂದೇ ಬಾಕಿ. ಶೌಚಾಲಯದ ಬಕೆಟ್ ಇದೆ ಆದರೆ ಇಲ್ಲ ಎನ್ನುವಂತಿದೆ. ಹೆಣ್ಣು ಮಕ್ಕಳ ಶೌಚಾಲಯದಲ್ಲಿ ಎಲ್ಲೆಂದರಲ್ಲಿ ಸ್ಯಾನಿಟರಿ ಪ್ಯಾಡ್ ಅನಾಥವಾಗಿ ಬಿದ್ದಿದ್ದವು. ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಯಾವುದೇ ವ್ಯವಸ್ಥೆ ಅಲ್ಲಿರಲಿಲ್ಲ. ಅಂದರೆ, ವೆಂಡಿಂಗ್ ಮೆಷಿನ್‌ಗಳಾಗಲೀ ಅಥವಾ ಕೊನೆ ಪಕ್ಷ ಕಸದ ಬುಟ್ಟಿಯಾಗಲೀ ಇರಲಿಲ್ಲ. 


ಇಂತಹ ವ್ಯವಸ್ಥೆ ಮಂಗಳೂರಿನ ಕರ್ದಿ ಪಾರ್ಕ್ ಮಾತ್ರವಲ್ಲದೇ ನಗರದ ಬಹುತೇಕ ಶೌಚಾಲಯಗಳ ಪರಿಸ್ಥಿತಿ ಇದೇ ರೀತಿ ಇದೆ. ಮಂಗಳೂರು ಮಹಾನಗರ ಪಾಲಿಕೆ ಪ್ರಕಾರ, ಸ್ವಚ್ಛ ಭಾರತ ಸ್ವಚ್ಛತಾ ಶಿಷ್ಟಾಚಾರಗಳ ಅಡಿಯಲ್ಲಿ 36 ಸಾರ್ವಜನಿಕ ಶೌಚಾಲಯ ಮತ್ತು 1 ಸಮುದಾಯ ಶೌಚಾಲಯ ಸಂಕೀರ್ಣ ಕಾರ್ಯನಿರ್ವಹಿಸುತ್ತಿವೆ. ಅಷ್ಟೇ ಅಲ್ಲದೇ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಇ-ಶೌಚಾಲಯವನ್ನು ಲಾಲ್ಬಾಗ್, ಕದ್ರಿ ಪಾರ್ಕ್, ವೆಲೆಂಶಿಯಾ ಪಾರ್ಕ್ ಮತ್ತು ಪದವಿನಂಗಡಿಗಳಲ್ಲಿ ಸ್ಥಾಪಿಸಲಾಗಿದೆ. ಆದರೆ, ಎಲ್ಲಾ ಕಡೆಗಳಲ್ಲೂ ನಿರ್ವಹಣೆಯದ್ದೇ ದೊಡ್ಡ ಸಮಸ್ಯೆಯಾಗಿದೆ.


ನಗರದ ಪ್ರಮುಖ ಕೇಂದ್ರ ಹಂಪನಕಟ್ಟೆ ಆಟೋ ನಿಲ್ದಾಣದ ಬಳಿ ಈ ಮೊದಲು ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ, ಅದೂ ಕಣ್ಮರೆಯಾಗಿದೆ. ಸ್ಥಳೀಯರ ಪ್ರಕಾರ, ಈ ಮೊದಲು ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ, ಈಗ ಅದನ್ನು ಮುಚ್ಚಲಾಗಿದೆ. ಹಾಗಾಗಿ, ಹತ್ತಿರದ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯವನ್ನೇ ಬಳಸುವುದು ಅನಿವಾರ್ಯವಾಗಿದೆ ಎಂದು ದೂರುತ್ತಾರೆ. ಮಹಾ ನಗರ ಪಾಲಿಕೆ ವತಿಯಿಂದ ಮೇಲ್ವಿಚಾರಣೆಗೆ ಒಳಪಟ್ಟಿರುವ ಪ್ರಮುಖ ಶೌಚಾಲಯಗಳು ಕೆ. ಎಸ್. ರಾವ್ ರಸ್ತೆ, ಪಾಂಡೇಶ್ವರ, ಬಿಜೈ ಕಾಪಿಕಾಡ್, ಎಂ.ಜಿ. ರಸ್ತೆ, ಕದ್ರಿ ಮಾರುಕಟ್ಟೆ ಮತ್ತು ಉರ್ವ ಮಾರುಕಟ್ಟೆ ಬಳಿ ಇದೆ. 


ಇವುಗಳ ಪೈಕಿ ಕೆ. ಎಸ್. ರಾವ್ ರಸ್ತೆ ಬಳಿ ಇರುವ ಶೌಚಾಲಯಕ್ಕೆ ಭೇಟಿ ನೀಡಿದಾಗ, ಶೌಚಾಲಯವೇನೋ ಸುಸ್ಥಿತಿಯಲ್ಲಿದೆ. ನೀರಿನ ಸರಬರಾಜು ಉತ್ತಮವಾಗಿದೆ. ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಆದರೆ, ಇಲ್ಲಿಯೂ ಕೂಡ ಯಾವುದೇ ರೀತಿಯ ಉನ್ನತ ಸೌಕರ್ಯವನ್ನು ಇಲ್ಲಿ ಒದಗಿಸಿಕೊಡಲಾಗಿಲ್ಲ. ಅಂದರೆ, ಕಸದ ಬುಟ್ಟಿ, ಸ್ಯಾನಿಟರಿ ಪ್ಯಾಡ್ ವಿಲೇವಾರಿಗೆ ಬೇಕಾಗಿರುವ ವೆಂಡಿಂಗ್ ಮೆಷಿನ್ ಸೇರಿದಂತೆ ಇನ್ನಾವುದೇ ಸೌಕರ್ಯಗಳಿಲ್ಲದೇ ಇರುವುದನ್ನು ಗಮನಕ್ಕೆ ಬಂದಿದೆ. 


ಇದು ಮಹಿಳೆಯರ ಶೌಚಾಲಯದ ಪರಿಸ್ಥಿತಿಯಾದರೆ, ಇನ್ನು ಗಂಡಸರ ಶೌಚಾಲಯಗಳ ಬಳಿಯೂ ಸುಳಿಯಲು ಸಾಧ್ಯವಾಗದಷ್ಟು ಅಶುಚಿತ್ವದಿಂದ ಕೂಡಿರುತ್ತದೆ. ಇಂತಹ ಅಸ್ವಚ್ಛ ಪರಿಸ್ಥಿತಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ದೂರದ ಸ್ಥಳಗಳಿಂದ ಪ್ರಯಾಣ ಮಾಡುವ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕ ಶೌಚಾಲಯ ಬಳಸಬೇಕೆಂದರೆ ಹಣ ನೀಡಿ ಉಪಯೋಗಿಸಬೇಕಾದಂತಹ ಪರಿಸ್ಥಿತಿ ಇದೆ. ಕನಿಷ್ಠ ಹಣ ಪಾವತಿ ಮಾಡಿದರೂ ಯಾವುದೇ ಸೌಕರ್ಯ ನೀಡದೇ ಇರುವುದು ಶೋಚನೀಯ ಸಂಗತಿ. 


ಕೇವಲ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದರೆ ಸಾಲದು; ಬದಲಾಗಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಕನಿಷ್ಠ ಪಕ್ಷ ಖಾಸಗೀ ಸಂಸ್ಥೆಗಳ ಸಹಕಾರದಿಂದಲಾದರೂ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಮಾಡುವ ಅಗತ್ಯವಿದೆ.


ವಿದ್ಯಾರ್ಥಿ ವರದಿಗಾರರು:

- ಸಿಂಧು ಮತ್ತು ಸಂಗಮ್ಮ,

ಪ್ರಥಮ ಬಿ.ಎ., ಪತ್ರಿಕೋದ್ಯಮ ವಿಭಾಗ

ಯೂನಿವರ್ಸಿಟಿ ಕಾಲೇಜು, ಮಂಗಳೂರು




Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top