ಮಂಗಳೂರಿನಲ್ಲಿ ಎಸ್.ಡಿ.ಎಂ ಬಿಯಾಂಡ್ ದಿ ಕ್ಲಾಸ್ ವಿಶೇಷ ಸಂವಾದ ಕಾರ್ಯಕ್ರಮ

Shreya Hegde
0

ಗಂಭೀರ ಗ್ರಹಿಕೆ-ಜನಪ್ರಿಯ ವಿಮರ್ಶಾತ್ಮಕತೆ 

ಜೋಗಿ ಬರಹದ ಗುಣಧರ್ಮ: ವಿರಾಟ್ ಪದ್ಮನಾಭ


ಮಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಸೇರಿದಂತೆ ಕನ್ನಡದ ಸಾಂಸ್ಕೃತಿಕ ಪರಂಪರೆಯಲ್ಲಿ ಬಹುಮುಖ್ಯ ಎನ್ನಿಸುವ ಬರಹಗಾರರು ಮೌಲಿಕ ಸಾಹಿತ್ಯಕ ಕಾಣ್ಕೆಗಳನ್ನು ನೀಡಿದ್ದಾರೆ. ಅವುಗಳನ್ನು ಗಂಭೀರವಾಗಿ ಗ್ರಹಿಸಿ ಹಿಂದಿನ ಮತ್ತು ಹೊಸ ತಲೆಮಾರಿನವರಿಗೆ ಮನವರಿಕೆಯಾಗುವ ಜನಪ್ರಿಯ ವಿಮರ್ಶಾತ್ಮಕ ಪರಿಭಾಷೆಯನ್ನು ರೂಪಿಸಿಕೊಂಡ ಹೆಗ್ಗಳಿಕೆ ಹಿರಿಯ ಪತ್ರಕರ್ತ, ಕನ್ನಡ ಪ್ರಭ ದಿನಪತ್ರಿಕೆ ಸಂಪಾದಕ ಜೋಗಿ ಅವರದ್ದು ಎಂದು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ ಅಭಿಪ್ರಾಯಪಟ್ಟರು.


ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ವೋಕ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗ, ಪದವಿ ಪತ್ರಿಕೋದ್ಯಮ ವಿಭಾಗ ಸಹಯೋಗದಲ್ಲಿ ಮಂಗಳೂರಿನ ಎಸ್.ಡಿ.ಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಎಸ್.ಡಿ.ಎಂ ಸಂವಾದ ಶೀರ್ಷಿಕೆಯಡಿ ಆಯೋಜಿತವಾದ ಬಿಯಾಂಡ್ ದಿ ಕ್ಲಾಸ್ ವಿಶೇಷ ಕಾರ್ಯಕ್ರಮದಲ್ಲಿ 'ಸಮೂಹ ಮಾಧ್ಯಮ ಪರಂಪರೆಯಲ್ಲಿ ಜೋಗಿ ಅಸ್ಮಿತೆ' ಕುರಿತು ವಿಚಾರಗಳನ್ನು ಮಂಡಿಸಿದರು.


ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಗಂಭೀರ ಬರಹಗಾರರನ್ನು ತಮ್ಮ ಕೃತಿಗಳ ಮೂಲಕ ಆಪ್ತ ವಿಮರ್ಶಾತ್ಮಕ ಪರಿಭಾಷೆಯಲ್ಲಿ ದಾಟಿಸಿದ ಲೇಖಕರಾಗಿ ಜೋಗಿ ಮುಖ್ಯವೆನ್ನಿಸುತ್ತಾರೆ. ಜನರಿಗೆ ಪ್ರಿಯವಾಗುವಂತಹ ಸರಳ ಭಾಷೆ ಮತ್ತು ನಿರೂಪಣಾ ವಿನ್ಯಾಸದ ಮೂಲಕ ಗಂಭೀರ ವಿಚಾರಗಳನ್ನು ಹೊಸ ತಲೆಮಾರಿಗೆ ತಲುಪಿಸಿ ಸಾಹಿತ್ಯಕ ಓದನ್ನು ಅವರು ಯಶಸ್ವಿಯಾಗಿ ಚಾಲ್ತಿಯಲ್ಲಿರಿಸಿದ್ದಾರೆ. ಸರಳವಾದ ವಿಮರ್ಶಾತ್ಮಕ ಪರಿಭಾಷೆಯ ಮೂಲಕ ಓದುವ ಮತ್ತು ಆ ಮೂಲಕ ಚಿಂತನೆಗೆ ತೊಡಗಿಕೊಳ್ಳುವ ಒತ್ತಾಸೆಯನ್ನು ಮೂಡಿಸುವಲ್ಲಿ ಅವರ ಬರಹಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.


ಸಾಹಿತ್ಯಕ ಕಾಣ್ಕೆಗಳನ್ನು ಹೊರತುಪಡಿಸಿ ಕನ್ನಡ ಪತ್ರಿಕಾರಂಗದ ನಿಜವಾದ ಅಸ್ಮಿತೆಯನ್ನು ಗ್ರಹಿಸುವುದಕ್ಕಾಗುವುದಿಲ್ಲ. ಸ್ವತಃ ಸಾಹಿತಿಗಳಾದವರೇ ಪತ್ರಿಕಾ ಮಾಧ್ಯಮದ ವೃತ್ತಿಪರತೆಯನ್ನು ವಿಸ್ತರಿಸುತ್ತಾ ಬಂದಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಪ್ರಮುಖ ವಾಗ್ವಾದಗಳನ್ನು ಕಟ್ಟುತ್ತಾ ಸ್ವತಃ ಸಾಹಿತ್ಯಕ ಕೃತಿಗಳನ್ನು ಬರೆದ ಮಹನೀಯರು ಆಯಾ ಕಾಲದ ಪೀಳಿಗೆಗಳಿಗೆ ಬೇಕಾದ ಮಾರ್ಗದರ್ಶಿ ತಾತ್ವಿಕತೆಯನ್ನು ಬಿಂಬಿಸಿದ್ದಾರೆ. ಈ ಬಗೆಯ ಸಾಂಸ್ಕೃತಿಕ ಘರಾನಾವನ್ನು ಪ್ರತಿನಿಧಿಸಿದ ವಿಮರ್ಶಾತ್ಮಕ ಪ್ರತಿಭೆಯಾಗಿ ಜೋಗಿ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯೊಂದಿಗೆ ತಮ್ಮ ವಿಮರ್ಶಾತ್ಮಕ ದೃಷ್ಟಿಕೋನಗಳ ಮೂಲಕ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೊಸ ಕಾಲದಲ್ಲಿ ಹೇಗೆ ಗ್ರಹಿಸಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.


ಕನ್ನಡ ಪತ್ರಿಕಾರಂಗವು ಕಳೆದ ಹಲವು ದಶಕಗಳಿಂದ ಸಾಹಿತ್ಯ ಮತ್ತು ಸಿನಿಮಾ ಎರಡನ್ನೂ ಕೇಂದ್ರವಾಗಿಸಿಕೊಂಡು ಸಕಾರಾತ್ಮಕ ಸಂವಾದದ ಪ್ರಯೋಗಗಳನ್ನು ನಡೆಸುತ್ತಾ ಬಂದಿದೆ. ಸಾಹಿತ್ಯ ಮತ್ತು ಸಿನಿಮಾ ಪುರವಣಿಗಳ ಮೂಲಕ ಕನ್ನಡದ್ದೇ ಆದ ಸಾಹಿತ್ಯಕ ಮತ್ತು ಸಿನಿಮಾತ್ಮಕ ಪರಂಪರೆಯ ವೈಶಿಷ್ಟತೆಯ ಕುರಿತ ಒಳನೋಟ ಓದುವ ಅವಕಾಶವನ್ನು ಸಂಪಾದಕರು ಒದಗಿಸಿಕೊಟ್ಟಿದ್ದಾರೆ. ಈ ಮೂಲಕ ಹೊಸ ಓದುಗರು ಮತ್ತು ಹೊಸ ಬರಹಗಾರರನ್ನು ರೂಪಿಸುವ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ಬಂದಿದ್ದಾರೆ. ಸಿನಿಮಾ ಮತ್ತು ಸಾಹಿತ್ಯಕ ಪುರವಣಿಗಳನ್ನು ಭಿನ್ನವಾಗಿ ನಿಭಾಯಿಸುತ್ತಾ ಕನ್ನಡಿಗರ ಗ್ರಹಿಕೆಗೆ ಹೊಸ ಆಯಾಮ ತಂದುಕೊಟ್ಟ ಜೋಗಿ ಅವರು ಸ್ವತಃ ಕಥೆ, ಕಾದಂಬರಿಗಳನ್ನು ಬರೆದು ಸೃಜನಶೀಲ ಪ್ರಕಾರಗಳಿಗೆ ಕಸುವು ತಂದುಕೊಟ್ಟಿದ್ದಾರೆ. ಸಿನಿಮಾಗಳ ಕುರಿತ ಅವರ ವಿಮರ್ಶೆಯು ಜನಪ್ರಿಯ ಸಂಸ್ಕೃತಿಯನ್ನು ಸದಭಿರುಚಿಗೆ ತಿರುಗಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ನುಡಿದರು.


ಸುದ್ದಿಮಾಧ್ಯಮಗಳನ್ನು ಪ್ರತಿನಿಧಿಸಿ ಜನಪ್ರಿಯರಾಗುವವರೆಲ್ಲಾ ಟೊಳ್ಳುಗಳನ್ನು ಕಟ್ಟುವವರಲ್ಲ. ಜನಪ್ರಿಯತೆಯ ಆವರಣದಲ್ಲಿ ನಿಂತುಕೊಂಡು ಗಂಭೀರ ದೃಷ್ಟಿಕೋನಗಳನ್ನೂ ನೆಲೆಗೊಳಿಸಬಹುದು ಎಂಬ ಭರವಸೆ ಮೂಡಿಸಿದ ಜನಪ್ರಿಯ ಬರಹಗಾರಲ್ಲಿ ಜೋಗಿ ಅವರಿಗೆ ವಿಶೇಷ ಸ್ಥಾನವಿದೆ. ಕನ್ನಡದ ಮಹತ್ವದ ಬರಹಗಾರರನ್ನೆಲ್ಲಾ ಆಳವಾಗಿ ಅಧ್ಯಯನಕ್ಕೊಳಪಡಿಸಿ ಗಂಭೀರ ಎನ್ನಿಸಬಲ್ಲ ವಿಚಾರಗಳನ್ನು ಅತ್ಯಂತ ಸರಳವಾಗಿ ಮನವರಿಕೆಯಾಗುವ ರೀತಿಯಲ್ಲಿ ಅವರು ಬಿಂಬಿಸಿದ್ದಾರೆ. ಈ ಮೂಲಕ ಜನಪ್ರಿಯ ಲೇಖಕರನ್ನು ಮಡಿವಂತಿಕೆಯಿಂದ ನೋಡಬೇಕಾಗಿಲ್ಲ ಎನ್ನುವುದನ್ನು ಅವರ ಮೌಲಿಕ ಕೃತಿಗಳು ದೃಢೀಕರಿಸುತ್ತಾ ಬಂದಿವೆ ಎಂದು ತಿಳಿಸಿದರು.


ಕನ್ನಡದ ವಿಮರ್ಶಾ ಪರಂಪರೆಯು ಮೂರು ಬಗೆಗಳಲ್ಲಿ ವಿಂಗಡಿತವಾಗಿದೆ. ಮೊದಲನೇಯದು ಅಪ್ಪಟ ಗಾಂಭೀರ್ಯತೆಯನ್ನು ಅಳವಡಿಸಿಕೊಂಡಂತಹ ಶಿಷ್ಠ ಭಾಷಿಕ ವಿಮರ್ಶೆ. ಎರಡನೇಯದ್ದು ಜನರಿಗೆ ಹತ್ತಿರವಾಗುವಂತಹ ಸರಳೀಕೃತ ಪರಿಭಾಷೆಯ ಜನಪದೀಯ, ಜನಪ್ರಿಯ ವಿಮರ್ಶೆ. ಮೂರನೇಯದ್ದು ಶಿಷ್ಠ ಮತ್ತು ದೇಶೀ ಎರಡನ್ನೂ ಸಂಯೋಜಿಸಿಕೊಂಡು ಓದುಗರನ್ನು ಒಳಗೊಳ್ಳುವಂತಹ ಆಪ್ತ ಭಾಷಿಕ ಮಾದರಿಯ ವಿಮರ್ಶೆ. ಜೋಗಿ ಅವರು ಈ ಮೂರನೇ ಬಗೆಯ ವಿಮರ್ಶಾ ಕ್ರಮವನ್ನು ರೂಪಿಸಿದ್ದಷ್ಟೇ ಅಲ್ಲ, ಅದರ ಗ್ರಹಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಕಥೆ, ಕಾದಂಬರಿ ಬರವಣಿಗೆಯ ಮೇಲೆ ಹಿಡಿತ ಸಾಧಿಸಿಕೊಂಡಿದ್ದಾರೆ. ಇದರೊಂದಿಗೆ ಸಾಹಿತ್ಯಕ-ಸಿನಿಮಾತ್ಮಕ ವಿಶ್ಲೇಷಣೆಯ ಹೊಸದಾದ ಮಾದರಿ ಸೃಷ್ಟಿಸಿಕೊಂಡಿದ್ದಾರೆ ಎಂದರು.


ಕುವೆಂಪು, ಶಿವರಾಮ ಕಾರಂತ, ದೇವನೂರು ಮಹಾದೇವ ಸೇರಿದಂತೆ ಕನ್ನಡದ ಲೇಖಕರನ್ನು ಭಿನ್ನವಾಗಿ ಗ್ರಹಿಸಿಕೊಂಡ ಕಾರಣಕ್ಕಾಗಿಯೇ ಅವರು ಸಿನಿಮಾದಂತಹ ಜನಪ್ರಿಯ ಮಾಧ್ಯಮವನ್ನು ಅಪ್ಪಟ ಸಾಹಿತ್ಯಕ ಸಂವೇದನೆಯ ನೆಲೆಗಟ್ಟಿನಲ್ಲಿ ವಿಮರ್ಶಿಸುವುದಕ್ಕೆ ಸಾಧ್ಯವಾಗಿದೆ. ಸಾಹಿತ್ಯದ ನೆಲೆಯಲ್ಲಿ ಸಿನಿಮಾ ಮಾಧ್ಯಮವನ್ನು ಸಂಸ್ಕರಿಸುವಂತಹ ವಿಮರ್ಶಾತ್ಮಕ ಧ್ವನಿ ಅವರಿಗೆ ದಕ್ಕಿದೆ. ಜನಪ್ರಿಯ ಮಾಧ್ಯಮಗಳು ಅತಿರಂಜಿತ ಗುಣವನ್ನು ಕಳಚಿಕೊಂಡೂ ವಾಣಿಜ್ಯಿಕವಾಗಿ ಗೆಲ್ಲಬಹುದು ಮತ್ತು ಮಾರುಕಟ್ಟೆ ಪ್ರಣೀತವಾದ ಅತಾರ್ಕಿಕ ವ್ಯಾವಹಾರಿಕ ಟೊಳ್ಳುತನಗಳನ್ನು ಒಡೆದುಹಾಕಬಹುದು ಎಂಬುದನ್ನು ಅವರು ಈ ಬಗೆಯ ಧ್ವನಿಯ ಮೂಲಕ ಸ್ಪಷ್ಟಪಡಿಸಿದ್ದಾರೆ ಎಂದು ವಿರಾಟ್ ಪದ್ಮನಾಭ ವಿಶ್ಲೇಷಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top