ನಶೆಯಿಂದ ದೂರವಿರುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ; ಸಾಮಾಜಿಕ ಜವಾಬ್ದಾರಿ: ಡಾ.ಮಹಾಂತೇಶ ಕಡಪಟ್ಟಿ

Shreya Hegde
0


ವಿಜಯಪುರ/ಹುನಗುಂದ: ನಶೆಯಿಂದ ದೂರವಿರುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ, ಅದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ವಿ.ಎಂ.ಕೆ.ಎಸ್.ಆರ್. ವಸ್ತ್ರದ ಕಲಾ ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.


ಸ್ಥಳೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ನಶಾಮುಕ್ತ ಯುವ ಸಂಕಲ್ಪ’ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “ಮಾನವನ ವೈಯಕ್ತಿಕ ಜೀವನ, ಕುಟುಂಬ ಮತ್ತು ಸಮಾಜದ ಭವಿಷ್ಯವನ್ನು ಉತ್ತಮಗೊಳಿಸುವ ಮಹತ್ವದ ಸಂಕಲ್ಪಕ್ಕಾಗಿ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಯುವಜನತೆ ದೇಶದ ನಿಜವಾದ ಶಕ್ತಿ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ಆರಂಭವಾಗುವ ಮಾದಕ ವ್ಯಸನವು ವ್ಯಕ್ತಿಯ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಕುಟುಂಬ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ‘ನನಗೆ ಏನೂ ಆಗುವುದಿಲ್ಲ’ ಎಂಬ ನಿರ್ಲಕ್ಷ್ಯಕ್ಕಿಂತ ‘ನನ್ನ ಜೀವನ ಅಮೂಲ್ಯ’ ಎಂಬ ಅರಿವು ಯುವಕರಲ್ಲಿ ಮೂಡಬೇಕು” ಎಂದು ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಗಲಕೋಟೆ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಮನೋರೋಗ ತಜ್ಞ ಡಾ. ಭಾಸ್ಕರ್ ಮಾರಾ ಮಾತನಾಡಿ, “ಪ್ರತಿಯೊಬ್ಬ ಯುವಕ-ಯುವತಿಯೂ ಇಂದು ಒಂದು ಸಂಕಲ್ಪ ಮಾಡಬೇಕು—ನಾನು ಯಾವುದೇ ರೀತಿಯ ಮಾದಕ ವ್ಯಸನಕ್ಕೆ ಒಳಗಾಗುವುದಿಲ್ಲ; ನನ್ನ ಸ್ನೇಹಿತರನ್ನೂ ಅದರಿಂದ ದೂರವಿರಿಸುತ್ತೇನೆ; ನಶಾಮುಕ್ತ ಸಮಾಜ ನಿರ್ಮಾಣಕ್ಕೆ ನನ್ನಿಂದ ಸಾಧ್ಯವಾದ ಕೊಡುಗೆ ನೀಡುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು. ಯುವಕರ ಕೈಯಲ್ಲಿ ಮೊಬೈಲ್ ಇರಬಹುದು, ಆದರೆ ಮನಸ್ಸಿನಲ್ಲಿ ಗುರಿಯಿರಬೇಕು. ಮನರಂಜನೆಗಿಂತ ಶಿಸ್ತು ಮತ್ತು ಸಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು” ಎಂದರು.


ಮತ್ತೋರ್ವ ಮನೋರೋಗ ತಜ್ಞ ಡಾ. ವಿನೋದ್ ಅಕ್ಕಸಾಲಿ ಮಾತನಾಡಿ, “ನಶೆ ಕ್ಷಣಿಕ ಆನಂದವನ್ನು ನೀಡಬಹುದು, ಆದರೆ ಅದರ ಪರಿಣಾಮಗಳು ದೀರ್ಘಕಾಲದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಪರಿಶ್ರಮ, ಕ್ರೀಡೆ ಮತ್ತು ಸಾಧನೆಯಿಂದ ದೊರೆಯುವ ಸಂತೋಷ ಜೀವನಪೂರ್ತಿ ನಮ್ಮೊಂದಿಗೆ ಇರುತ್ತದೆ. ಆದ್ದರಿಂದ ಯುವ ಮಿತ್ರರೇ, ‘ನಶೆ ಬೇಡ, ಗುರಿ ಬೇಕು; ವ್ಯಸನ ಬೇಡ, ವ್ಯಾಯಾಮ ಬೇಕು; ನಿರಾಶೆ ಬೇಡ, ಸಾಧನೆಯ ಹಾದಿ ಬೇಕು’ ಎಂದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ” ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದ ಆರಂಭದಲ್ಲಿ ಲೆಫ್ಟಿನೆಂಟ್ ಎಸ್.ಬಿ. ಚಳಗೇರಿ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಿ.ಮ.ವಿ.ವ. ಸಂಘದ ನಿರ್ದೇಶಕರಾದ ಡಿ.ಎಸ್. ಕೆಂದೂರ ಹಾಗೂ ಎಂ.ಎಸ್. ಮಠ ಉಪಸ್ಥಿತರಿದ್ದರು. ಸೌಭಾಗ್ಯ ಅಂಗಡಿ ಪ್ರಾರ್ಥನೆ ಹಾಡಿದರು, ಪ್ರೊ. ಎಂ.ಆರ್. ಕಾಂಬಳೆ ಪ್ರತಿಜ್ಞಾ ವಿಧಿ ಬೋಧಿಸಿದರು, ಡಾ. ಎಸ್.ಆರ್. ನಾಗಣ್ಣವರ ಕಾರ್ಯಕ್ರಮ ನಿರೂಪಿಸಿದರು ಮತ್ತು ಪ್ರಾಚಾರ್ಯ ಎಸ್.ಆರ್. ಗೋಲಗೊಂಡ ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top